ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿ ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದೆ. ಇಲ್ಲಿನ ಸುಂದರ ಪರಿಸರದಲ್ಲಿ ಗ್ರಾಮವೊಂದು ನೆಲೆ ನಿಂತಿದೆ ಇದನ್ನು ಮುಡುಕುತೊರೆ ಎಂದು ಕರೆಯಲಾಗುತ್ತದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯುತ್ತದೆ. ಇದೀಗ ದೊಡ್ಡ ಜಾತ್ರೆ ಆರಂಭವಾಗಿದೆ. ಜಾತ್ರೆಗೆ ತೆರಳುವವರಿಗೆ ಮುಡುಕುತೊರೆಯ ನಿಸರ್ಗ ರಮಣೀಯ ದೃಶ್ಯ ಮನಸೆಳೆಯುತ್ತದೆ. ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿರುವ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಮಲ್ಲಿಕಾರ್ಜುನ ಲಿಂಗ ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.
ಈ ದೇವಾಲಯದ ಬಗ್ಗೆ ತಿಳಿಯುತ್ತಾ ಹೋದರೆ ದೇಗುಲದ ಹಿಂದೆ ಹತ್ತು ಹಲವು ವೈಶಿಷ್ಟ್ಯತೆ ಇರುವುದನ್ನು ನಾವು ಕಾಣಬಹುದಾಗಿದೆ. ಸೋಮನಬೆಟ್ಟದ ಮುನ್ನೂರು ಅಡಿ ಎತ್ತರದಲ್ಲಿರುವ ದೇವಾಲಯಕ್ಕೆ ತೆರಳಲು 101 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಈ ಮೆಟ್ಟಿಲುಗಳ ಮೇಲೆ ದಾನಿಗಳ ಹೆಸರು ಹಾಗೂ ಸೂಕ್ತಿಗಳನ್ನು ಬರೆದಿರುವುದು ಕಂಡುಬರುತ್ತದೆ. ದೇವಾಲಯವು ಗಂಗರ ಕಾಲದ ರಚನೆಯನ್ನು ಹೊಂದಿದ್ದು, ಪುಟ್ಟದಾಗಿ ನಿರ್ಮಾಣಗೊಂಡ ದೇಗುಲ ಬಳಿಕ ವಿಸ್ತರಿಸುತ್ತಾ ಹೋಗಿರಬಹುದೆಂದು ಹೇಳಲಾಗುತ್ತದೆ. ಇದು ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಶುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಹೊಂದಿದೆ. ನವರಂಗದಲ್ಲಿ ವರ್ತುಲಾಕೃತಿಯ ಸ್ತಂಭಗಳನ್ನು ನಾವು ಕಾಣಬಹುದು. ಈ ಸ್ತಂಭಗಳಲ್ಲಿ ಗಂಗಶೈಲಿಯನ್ನು ಹೋಲುವಂತಹ ರಾಮ ಲಕ್ಷ್ಮಣ ಹನುಮಂತನ ಚಿತ್ರಗಳು ಕಂಡು ಬರುತ್ತವೆ. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬಾಗಿಲುಗಳಿದ್ದು, ನವರಂಗದ ಅಗ್ನೇಯ ಭಾಗದಲ್ಲಿ ಎರಡು ಶಿವಲಿಂಗವಿದ್ದರೆ, ಉತ್ತರಭಾಗದಲ್ಲಿ ಕುಮಾರಸ್ವಾಮಿಯ ಉತ್ಸವಮೂರ್ತಿ, ನಟರಾಜ, ವಿಘ್ನೇಶ್ವರ, ಶಿವಕಾಮೇಶ್ವರಿ ಅಮ್ಮನವರ ವಿಗ್ರಹಗಳಿವೆ. ಅಲ್ಲದೆ ಶುಕನಾಸಿಯಲ್ಲಿ ವೃಷಭ ಮೂರ್ತಿಯಿದೆ. ದೇಗುಲದ ಗರ್ಭಗುಡಿಯ ಮೇಲೆ ಕಲಶವಿರುವ ವಿಮಾನ, ಒಳಗೆ ಒಂದಡಿ ಚದರಳತೆಯ ಪೀಠದ ಮೇಲೆ ಐದು ಅಂಗುಲ ಪಾದಾಂಕಿತವಿರುವ ಮಲ್ಲಿಕಾರ್ಜುನನ ಶೋಭಾಯಮಾನ ಲಿಂಗವನ್ನು ನಾವು ಕಾಣಬಹುದು. ದ್ವಾಪರಯುಗದಲ್ಲಿ ಕೌರವರ ಕುಟಿಲತೆಯಿಂದ ರಾಜ್ಯವನ್ನು ಕಳೆದುಕೊಂಡು ವನವಾಸ ಹೊರಟ ಪಾಂಡವರು ಸೋಮಗಿರಿ(ಮುಡುಕುತೊರೆ) ಬಂದಿದ್ದರಂತೆ ಈ ಸಂದರ್ಭ ಸುತ್ತಲಿನ ಪ್ರಕೃತಿಯ ಸೊಬಗನ್ನು ಕಂಡು ಆಕರ್ಷಿತಗೊಂಡ ಅರ್ಜುನ ಲಿಂಗರೂಪಿಯಾಗಿದ್ದ ಈಶ್ವರನನ್ನು ಕಂಡು ಹರ್ಷಗೊಂಡನಲ್ಲದೆ, ಲಿಂಗಕ್ಕೆ ಮಲ್ಲಿಕಾಪುಷ್ಪಗಳಿಂದ ಪೂಜಿಸಿ ತನ್ನ ಇಷ್ಟಾರ್ಥವನ್ನು ಪಡೆದನಂತೆ ಹೀಗೆ ಮಲ್ಲಿಕಾಪುಷ್ಪದಿಂದ ಪೂಜಿಸಲ್ಪಟ್ಟಿದ್ದರಿಂದ ಈ ದೇಗುಲಕ್ಕೆ ಮಲಿಕಾರ್ಜುನಸ್ವಾಮಿ ಎಂಬ ಹೆಸರು ಬಂದಿರಬಹುದೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಇನ್ನು ಮಲ್ಲಿಕಾರ್ಜುನ ದೇಗುಲದ ಬಳಿಯೇ ಪತ್ನಿ ಭ್ರಮರಾಂಬೆಯ ದೇವಾಲಯವಿದ್ದು, ವಿಜಯನಗರ ವಾಸ್ತುಶೈಲಿಯನ್ನು ದೇವಾಲಯ ಗರ್ಭಗೃಹ, ಶುಕನಾಸಿ, ನವರಂಗ, ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯ ಸಿಂಹ ಪೀಠದ ಮೇಲೆ ಐದಡಿ ಎತ್ತರದ ಭ್ರಮರಾಂಬ ವಿಗ್ರಹವಿದೆ. ಈ ಭ್ರಮರಾಂಬ ವಿಗ್ರಹವು ಚತುರ್ಭುಜವನ್ನು ಹೊಂದಿದ್ದು, ಎರಡು ಕೈಗಳು ವರದ ಮುದ್ರೆ ಕಮಲ ಕುಮುದ ಹಸ್ತಗಳಿಂದ ಕೂಡಿದೆ. ಅಲ್ಲದೆ, ಕಮಲಹಸ್ತ, ಅಭಯಹಸ್ತ, ಕರ್ಣಪತ್ರ, ಕಿರೀಟ, ಗೋರಂಭ, ಪಾದ, ಕಮಲಪೀಠ, ಸಿಂಹಪೀಠ, ಪ್ರಭಾವಳಿ, ಶ್ರೀಚಕ್ರ ಮೊದಲಾದ ಆಭರಣಗಳಿಂದ ದೇವಿ ಸಾಲಂಕೃತಳಾಗಿ ಶೋಭಿಸುತ್ತಿದ್ದಾಳೆ. ಈ ದೇವಾಲಯವೂ ವಿಮಾನವನ್ನು ಹೊಂದಿದೆ.
ದೇಗುಲದ ಹೊರಭಾಗದ ಗೋಪುರ ಮೂರನೆಯ ಕೃಷ್ಣರಾಜ ಒಡೆಯರ ಕಾಲದಲ್ಲಿ ರೂಪುತಳೆದಿದ್ದು, ಗೋಪುರ ದ್ವಾರದ ಎರಡೂ ಬದಿಯಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ರಚಿಸಿದ ಎರಡು ಬಸವನ ವಿಗ್ರಹಗಳಿವೆ. ಗೋಪುರದ ಮೇಲೆ ಕಲಶವಿದೆ. ಪ್ರವೇಶ ದ್ವಾರದ ಬಳಿ ಸುಮಾರು ನಲವತ್ತು ಅಡಿ ಎತ್ತರದ ದೀಪಸ್ತಂಭವಿದ್ದು, ದೇಗುಲದ ವಾಯುವ್ಯ ಮೂಲೆಯಲ್ಲಿ ಚಿತ್ರಮಂಟಪವಿದೆ. ಈ ಮಂಟಪದ ಮುಂಭಾಗದಲ್ಲಿ ಪಾಕಶಾಲೆ, ಯಾಗಶಾಲೆ ಅಡುಗೆ ಮನೆಗಳಿವೆ. ಇನ್ನು ಈಶಾನ್ಯ ಭಾಗದಲ್ಲಿ ಗಣಪತಿ ಮತ್ತು ನವಗ್ರಹ ದೇವಸ್ಥಾನವಿದೆ. ಪೂರ್ವದಲ್ಲಿ ದುರ್ಗಾದೇವಿ, ಬಸವೇಶ್ವರ, ಕಾಶಿವಿಶ್ವನಾಥ ಮತ್ತು ಪಂಚಲಿಂಗಗಳ ಎಂಟು ಪುಟ್ಟ ಗುಡಿಗಳಿವೆ. ಆಗ್ನೇಯದಲ್ಲಿ ವೃಷಭಮೂರ್ತಿ ನಾಗಮೂರ್ತಿಗಳಿವೆ. ದಕ್ಷಿಣ ದ್ವಾರದ ಹೊರಗೆ ಮಾದೇಶ್ವರನ ಪಾದಪೀಠದ ಗುಡಿಯಿದೆ. ದೇವಾಲಯದ ಧ್ವಜಸ್ತಂಭವನ್ನು ತಗಡಿನಿಂದ ಮಾಡಲಾಗಿದ್ದು ಇದು ಹನ್ನೆರಡು ಅಡಿ ಎತ್ತರವಿದೆ. ಇದರ ಮುಂದೆ ವೃಷಭೇಶ್ವರ ಮೂರ್ತಿಯ ಕಲ್ಲುಕಂಬವನ್ನು ಕಾಣಬಹುದು. ಅರುಣ ಎಂಬ ದುಷ್ಟರಾಕ್ಷಸನನ್ನು ಶಿವನ ಪತ್ನಿ ಪಾರ್ವತಿದೇವಿ ಭ್ರಮರ(ದುಂಬಿ)ರೂಪ ತಳೆದು ಬಂದು ಸಂಹರಿಸುವುದರ ಮೂಲಕ ಭ್ರಮರಾಂಭೆಯಾಗಿ ನೆಲೆಸಿದಳೆಂದು ಹೇಳಲಾಗುತ್ತಿದೆ. ಬೆಟ್ಟದ ತಳಭಾಗದಲ್ಲಿ ಬೆಟ್ಟಹಳ್ಳಿ ಮಾರಮ್ಮ ಎಂಬ ಗ್ರಾಮ ದೇವತೆಯ ದೇವಸ್ಥಾನವೂ ಇದೆ. ಸುತ್ತಮುತ್ತ ಕಣ್ಣೀರ್ಕಟ್ಟೆ, ಹಾಲುಗಟ್ಟೆ, ಕಪಿಲಗೋಮಾಳ ಮುಂತಾದ ಸ್ಥಳಗಳಿದ್ದು ಇವುಗಳಿಗೂ ತನ್ನದೇ ಐಹಿತ್ಯವಿದೆ. ಇದೀಗ ಜಾತ್ರೆ ಆರಂಭವಾಗಿದ್ದು ಜನ ಸಾಗರ ಹರದು ಬರುತ್ತಿದೆ. ಸುಮಾರು ಹದಿನೇಳು ದಿನಗಳ ಜಾತ್ರೆಯಲ್ಲಿ ಪ್ರತಿಯೊಂದು ದಿನವೂ ಪ್ರಾಮುಖ್ಯತೆಯನ್ನು ಪಡೆದಿದೆ.
ಇಲ್ಲಿ ದನಗಳ ಜಾತ್ರೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಾತ್ರೆಯ ಮುಖ್ಯ ಅಂಗವಾದ ಶ್ರೀ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಫೆ.6ರಂದು ಸೋಮವಾರ ನಡೆಯಲಿದೆ. ಫೆ.15ರಂದು ಬುಧವಾರ ಮಹಾಭಿಷೇಕ ಹಾಗೂ ಶೆಟ್ಟರ ಸೇವೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ. ಒಟ್ಟಾರೆಯಾಗಿ ಮುಡುಕುತೊರೆ ಕೇವಲ ಧಾರ್ಮಿಕ ಸ್ಥಳ ಮಾತ್ರವಾಗಿರದೆ ಸುಂದರ ಪ್ರವಾಸಿ ತಾಣವೂ ಆಗಿರುವುದರಿಂದ ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರೂ ಇಲ್ಲಿಗೆ ಆಗಮಿಸುವುದು ವಿಶೇಷವಾಗಿದೆ.