ಮಡಿಕೇರಿ: ಕೊಡಗು ಜಿಲ್ಲೆ ಉದ್ಯೋಗ ಸೃಷ್ಟಿಯಲ್ಲಿ ಹಾಗೂ ಕೃಷಿಯಲ್ಲಿ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿರುವುದರಿಂದ ಒಂದಷ್ಟು ಯುವ ಸಮೂಹ ಪ್ರವಾಸೋದ್ಯಮದ ಮೂಲಕ ಉದ್ಯೋಗವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕೆ ಪೂರಕವಾದ ಅಭಿವೃದ್ಧಿ ಕಾರ್ಯಗಳು ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಆಗುತ್ತಿಲ್ಲ ಎನ್ನುವ ನೋವು ಸ್ಥಳೀಯರಲ್ಲಿದೆ.
ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿರುವ ರಾಜಾಸೀಟಿನ ದುಸ್ಥಿತಿಯನ್ನು ಗಮನಿಸಿದರೆ ಇದೊಂದು ಶಾಪಗ್ರಸ್ತ ಪ್ರವಾಸಿ ತಾಣವೆಂದು ಶಾಸನವನ್ನೇ ಬರೆದು ಬಿಡಬಹುದು. ಕಳೆದ 15 ವರ್ಷಗಳಿಂದ ಈ ಪ್ರವಾಸಿ ತಾಣದ ಅಭಿವೃದ್ಧಿಯ ಬಗ್ಗೆ ಚಿಂತನೆಗಳು ನಡೆಯುತ್ತಿದೆಯೇ ಹೊರತು ಯಾವುದು ಕೂಡ ಕಾರ್ಯಗತಗೊಳ್ಳುತ್ತಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಸುಭೋದ್ ಯಾದವ್ ಅವರ ಕಾಲದಲ್ಲಿ ರಾಜಾಸೀಟು ಅಭಿವೃದ್ಧಿಯ ದೊಡ್ಡ ಕನಸುಗಳಿತ್ತು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಕಾರ್ಯೋನ್ಮುಖರಾಗಿದ್ದರು. ಆದರೆ ಯೋಜನೆಯ ಪ್ರಸ್ತಾವನೆ ತಯಾರಾಗುವ ಹೊತ್ತಿಗಾಗಲೇ ಅಧಿಕಾರಿಗಳು ವರ್ಗಾವಣೆಯಾಗುತ್ತಾರೆ. ಪ್ರತೀ ಯೋಜನೆ ತಯಾರಾದಾಗಲೂ
ಇದೇ ರೀತಿಯಾಗಿದ್ದು, ಸುಭೋದ್ ಯಾದವ್ ಅವರು ವರ್ಗಾವಣೆಯಾದ ನಂತರ ಬಂದ ಕೆಲವು ಅಧಿಕಾರಿಗಳು ರಾಜಾಸೀಟು ಅಭಿವೃದ್ಧಿ ಬಗ್ಗೆ ಸಭೆಗಳನ್ನು ನಡೆಸಿದರೇ ಹೊರತು ಯಾವ ಯೋಜನೆಯೂ ಕಾರ್ಯಗತವಾಗಿಲ್ಲ. ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ಕೂಡ ರಾಜಾಸೀಟಿನ ವಿಸ್ತೀರ್ಣವನ್ನು ಹೆಚ್ಚಿಸಿ ಅಭಿವೃದ್ಧಿ ಪಡಿಸಬೇಕೆಂದು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು.
5 ಕೋಟಿ ನಿಷ್ಪ್ರಯೋಜಕ: ರಾಜ್ಯ ಕಾಂಗ್ರೆಸ್ ಸರಕಾರ ಕೂಡ ತನ್ನ ಬಜೆಟ್ ನಲ್ಲಿ ರಾಜಾಸೀಟಿನ ಅಭಿವೃದ್ಧಿಗಾಗಿ 5 ಕೋಟಿ ರೂ.ಗಳನ್ನು ಮೀಸಲಿಟ್ಟಿತು. ಆದರೆ ಸರಕಾರ ಹಾಗೂ ಅಧಿಕಾರಿಗಳು ತೋರಿದ ಕಾಳಜಿಯನ್ನು ಸ್ಥಳೀಯ ಶಾಸಕರು ತೋರಲಿಲ್ಲ. ಇದೇ ಕಾರಣಕ್ಕೆ ಇಂದಿಗೂ ರಾಜಾಸೀಟು ಹಿಂದೆ ಹೇಗಿತ್ತೋ ಹಾಗೆ ಇದೆ.
ರಾಜ್ಯ ಸರಕಾರ ಬಜೆಟ್ ನಲ್ಲಿ ಅನುದಾನ ಘೋಷಿಸಿದ ನಂತರ ರಾಜಾಸೀಟು ಉದ್ಯಾನವನದ ವಿಸ್ತರಣೆ ಮತ್ತು ಅಭಿವೃದ್ಧಿಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತೆ ಜೀವ ಬಂದಿತ್ತು. ಸುಮಾರು 1.50 ಕೋಟಿ ರೂ.ಗಳಲ್ಲಿ ರಾಜಾಸೀಟು ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಹಿಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಪ್ರಯತ್ನದ ಫಲವಾಗಿ ರಾಜಾಸೀಟಿನ ಸಮಗ್ರ ಅಭಿವೃದ್ಧಿಗಾಗಿ ಎರಡೂವರೆ ವರ್ಷಗಳ ಹಿಂದೆ ರೂ.2 ಕೋಟಿ ಬಿಡುಗಡೆಯಾಗಿತ್ತು. ಇಂದಿಗೂ ಈ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲೇ ಇದ್ದು, ಇದರ ವಿನಿಯೋಗಕ್ಕೆ ಕಾಲ ಕೂಡಿ ಬಂದಿತ್ತಾದರೂ ಇನ್ನೂ ಕೂಡ
ಯೋಜನೆಯ ಟೆಂಡರ್ ಪ್ರಕ್ರಿಯೆ ನಡೆದಿಲ್ಲ.
ರಾಜಾಸೀಟಿನ ಈಗಿರುವ ವಿಸ್ತೀರ್ಣ 5.72 ಎಕರೆಯಾಗಿದ್ದು, ಅಕ್ಕಪಕ್ಕದಲ್ಲಿರುವ ಸಿ ಮತ್ತು ಡಿ ಭೂಮಿಯನ್ನು ಸೇರಿಸಿಕೊಂಡು ಉದ್ಯಾನವನದ ವಿಸ್ತೀರ್ಣವನ್ನು 9 ಎಕರೆಗೆ ಹೆಚ್ಚಿಸಬೇಕೆನ್ನುವ ಯೋಜನೆಯಿತ್ತು. ಎರಡೂವರೆ ವರ್ಷಗಳ ಹಿಂದಿನ ಈ ಯೋಜನೆ ಬಗ್ಗೆ ವಕೀಲರ ಸ್ಪಂದನ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಉದ್ದೇಶಿತ ಕಾರ್ಯ ಪ್ರಗತಿಯಾಗಿರಲಿಲ್ಲ. ಪ್ರಕೃತಿ ದತ್ತವಾಗಿರುವ ರಾಜಾಸೀಟು ಕಾಂಕ್ರಿಟ್ಮಯವಾಗುತ್ತದೆ ಎನ್ನುವ ಆತಂಕವನ್ನು ವಕೀಲರ ಸ್ಪಂದನ ವ್ಯಕ್ತಪಡಿಸಿತ್ತು.
ಪರಿಸರ ಸ್ನೇಹಿ ಅಭಿವೃದ್ಧಿಗೂ ಮುಂದಾಗಿಲ್ಲ: ಆದರೆ ಕಳೆದ ವರ್ಷದ ಆರಂಭದಲ್ಲಿ ನ್ಯಾಯಾಲಯ ಪರಿಸರ ಸ್ನೇಹಿ ಉದ್ಯಾನವನ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದು, ಯೋಜನೆಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಲಾಗಿತ್ತು. ನ್ಯಾಯಾಲಯದಿಂದ ಒಪ್ಪಿಗೆ ದೊರೆತ್ತಿರುವ ಹಿನ್ನೆಲೆ ರಾಜಾಸೀಟು ಅಭಿವೃದ್ಧಿ ಬಗ್ಗೆ ವಿಶೇಷ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಯೋಜನೆಯ ರೂಪು ರೇಷೆಗಳನ್ನು ತೋಟಗಾರಿಕಾ ಇಲಾಖೆ ಇನ್ನೂ ಕೂಡ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿಲ್ಲ ಎನ್ನುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಉದ್ಯಾನವನದ ವಿಸ್ತರಣೆಗಾಗಿ ಈಗಾಗಲೇ ಜಾಗ ಮಂಜೂರಾತಿಯಾಗಿದ್ದು, ಅರಣ್ಯ ಇಲಾಖೆಯಿಂದಲೂ ಸಹಕಾರ ದೊರೆತಿದೆ. ಹೆಚ್ಚುವರಿ ಜಾಗದಲ್ಲಿರುವ ಯಾವುದೇ ಮರಗಳನ್ನು ಕಡಿಯದೆ ಇನ್ನಷ್ಟು ಸಸಿಗಳನ್ನು ನೆಡುವ ಮೂಲಕ ಹಸಿರಿನ ಪರಿಸರವನ್ನು ಮತ್ತಷ್ಟು ಹೆಚ್ಚಿಸುವುದು, ಪ್ರಕೃತಿ ಪ್ರಿಯರ ಓಡಾಟಕ್ಕೆ ಅನುಕೂಲವಾಗುವಂತೆ ಕಾಲುದಾರಿ ನಿರ್ಮಾಣ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ರೈನ್ ಶೆಲ್ಟರ್ ನಿರ್ಮಾಣ, ಕುಡಿಯುವ ನೀರು ಮತ್ತು ವಿದ್ಯುತ್ ದೀಪದ ವ್ಯವಸ್ಥೆಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲು ಯೋಜನೆ ರೂಪಿಸಲಾಗಿತ್ತು.
ನೆಹರು ಮಂಟಪ ಕೂಡ ವಿಸ್ತಾರಗೊಳ್ಳುವ ರಾಜಾಸೀಟು ವ್ಯಾಪ್ತಿಗೆ ಒಳಪಡಲಿದ್ದು, ಇದರ ಅಭಿವೃದ್ಧಿಗೂ ಕ್ರಮ ಕೈಗೊಳ್ಳುವುದು, ರಾಜಾಸೀಟು ಉದ್ಯಾನವನದ ಪ್ರವೇಶದ ಭಾಗದಲ್ಲಿ ಆಕರ್ಷಕ ಮಹಾದ್ವಾರ ನಿರ್ಮಾಣ ಮಾಡುವುದು, ಪುಟಾಣಿ ರೈಲು ಮಾರ್ಗವನ್ನು ಮತ್ತು ಸಂಗೀತ ಕಾರಂಜಿಯ ಧ್ವನಿ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪಗಳು ಕೂಡ ನೂತನ ಯೋಜನೆಯಲ್ಲಿತ್ತು. ನೆಹರು ಮಂಟಪದಿಂದ ರಾಜಾಸೀಟಿಗೆ ಸಾಗಲು ರೋಪ್ ವೇ ನಿರ್ಮಿಸುವ ಯೋಜನೆಯನ್ನು ಈ ಹಿಂದೆ ರೂಪಿಸಲಾಗಿತ್ತು. ಆದರೆ ಇದು ಪರಿಸರಕ್ಕೆ ಪೂರಕವಾಗಿರದ ಕಾರಣ ಕೈಬಿಡಲಾಗಿದೆ. ಐದು ಅಂತಸ್ತಿನ ವ್ಯೂಪಾಯಿಂಟ್ ಕಟ್ಟಡ ಕೂಡ ನಿರ್ಮಾಣಗೊಳ್ಳುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತಾದರೂ ಈ ಯೋಜನೆಯ ಕಡತವೇ ಇನ್ನೂ ಕೂಡ ಪ್ರವಾಸೋದ್ಯಮ ಇಲಾಖೆಯನ್ನು ತಲುಪಿಲ್ಲ.
ಪ್ರತಿ ವಾರದ ಕೊನೆ ದಿನಗಳಾದ ಶನಿವಾರ ಅಥವಾ ಭಾನುವಾರದಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಅನುಕೂಲವಾಗುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗಿತ್ತು. ಕಲಾವಿದರಿಗಾಗಿ ಶಾಶ್ವತ ವೇದಿಕೆ, ಧ್ವನಿವರ್ಧಕ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿಕೊಡಲು ಯೋಜನೆ ಸಿದ್ಧವಾಗಿತ್ತು. ಕಾರ್ಯಕ್ರಮ ನೀಡುವ ಕಲಾವಿದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೌರವ ಧನವನ್ನು ನೀಡಿ ಪ್ರೋತ್ಸಾಹಿಸುವ ಬಗ್ಗೆಯೂ ಚಿಂತನೆ ನಡೆದಿತ್ತು. ಆದರೆ ಇದ್ಯಾವುದೂ ಇಲ್ಲಿಯವರೆಗೆ ಸಾಕಾರಗೊಂಡಿಲ್ಲ.
ಪ್ರವಾಸಿಗರನ್ನು ಅತಿಯಾಗಿ ಆಕರ್ಷಿಸುತ್ತಿದ್ದ ಸಂಗೀತ ಕಾರಂಜಿ ಕೂಡ ದುರಸ್ತಿಗೊಂಡು ಕೆಲವು ತಿಂಗಳುಗಳೇ ಕಳೆದಿದೆ. ಆದರೆ ಯಾವುದೇ ಅಧಿಕಾರಿಗಳು ಈ ಬಗ್ಗೆ ಕಾಳಜಿ ತೋರಿಲ್ಲ.
ಶಾಸಕರ ನಿರ್ಲಕ್ಷ್ಯ: ಜಿಲ್ಲಾಧಿಕಾರಿಗಳು, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳು ಬದಲಾದಂತೆ ರಾಜಾಸೀಟಿನ ಯೋಜನೆಗಳು ಬದಲಾಗುತ್ತಿದೆಯೇ ಹೊರತು ಇಲ್ಲಿಯವರೆಗೆ ಅಭಿವೃದ್ಧಿಯ ಕಾಮಗಾರಿ ಆರಂಭಗೊಂಡಿಲ್ಲ. ಮಡಿಕೇರಿ ನಗರದವರೇ ಆಗಿರುವ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪಕ್ಕದ ಊರಿನವರೇ ಆದ ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇವರುಗಳಿಗೆಲ್ಲ ರಾಜಾಸೀಟು ಮಾತ್ರವಲ್ಲ ಮಡಿಕೇರಿ ನಗರದ ಅಭಿವೃದ್ಧಿಯ ಬಗ್ಗೆಯೇ ಕಾಳಜಿ ಇಲ್ಲದಾಗಿದೆ. ನೂತನ ಖಾಸಗಿ ಬಸ್ ನಿಲ್ದಾಣದ
ಕಾಮಗಾರಿಯನ್ನು ಹೇಗೆ ನಿರ್ಲಕ್ಷಿಸಿದ್ದಾರೋ ಹಾಗೇ ಶಾಪಗ್ರಸ್ತ ರಾಜಾಸೀಟನ್ನು ಕೂಡ ನಿರ್ಲಕ್ಷಿಸಲಾಗಿದೆ.