ಅದ್ಯಾಕೋ ಗೊತ್ತಿಲ್ಲ ಮೊದಲಿನಂತೆ ನಾವು ನಿರೀಕ್ಷೆ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ. ಎಲ್ಲೋ ಒಂದು ಕಡೆ ಸದ್ದಿಲ್ಲದಂತೆ ನಿಸರ್ಗದಲ್ಲಿ ಬದಲಾವಣೆ, ವಾತಾವರಣದಲ್ಲಿ ಏರುಪೇರಾಗುತ್ತಿದೆ. ಮಳೆಗಾಲದಲ್ಲಿ ಮಳೆಯಿಲ್ಲ.. ಚಳಿಗಾಲದಲ್ಲಿ ಚಳಿಗೂ ಬರ.. ಬೇಸಿಗೆಯಲ್ಲಂತು ಹೊರಗೆ ಕಾಲಿಡಲಾಗದಷ್ಟು ಧಗೆ..
ಹಿರಿಯರನ್ನು ಮಾತನಾಡಿಸಿದರೆ ಅಯ್ಯೋ ಮೊದಲು ಹೀಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಇಷ್ಟೊಂದು ಬಿಸಿಲಿನ ಧಗೆಯಿರಲಿಲ್ಲ. ಮೈಮರಗಟ್ಟುವ ಚಳಿಯಿದ್ದರೂ ಯಾರಿಗೂ ತೊಂದರೆಯಾಗುತ್ತಿರಲಿಲ್ಲ.. ಎಲ್ಲವೂ ಕಾಲಕ್ಕೆ ತಕ್ಕಂತೆ ಸರಿಯಾಗಿ ನಡೆಯುತ್ತಿತ್ತು. ಈಗ ಎಲ್ಲ ಹಾಳಾಗಿದೆ ಎಂದು ತಮ್ಮ ಗತವೈಭವವನ್ನು ತೆರೆದಿಡುತ್ತಾ ಇವತ್ತಿನ ದುಸ್ಥಿತಿಗೆ ಹಿಡಿಶಾಪ ಹಾಕುತ್ತಾರೆ.
ಭೌಗೋಳಿಕವಾಗಿ ನೋಡುವುದಾದರೆ ದಿನದಿಂದ ದಿನಕ್ಕೆ ನಾವು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅದನ್ನು ಅಭಿವೃದ್ಧಿ ಎಂದು ಕೂಡ ಕರೆಯುತ್ತಿದ್ದೇವೆ. ನಮಗೆ ಮೂಲಭೂತ ಸೌಲಭ್ಯಗಳು ಬೇಕು. ಆ ಸೌಲಭ್ಯ ಕಲ್ಪಿಸಬೇಕೆಂದರೆ ಅಲ್ಲಿ ಒಂದಷ್ಟು ಬದಲಾವಣೆ ಆಗಲೇ ಬೇಕು. ಒಂದು ಉತ್ತಮ ರಸ್ತೆ ಬೇಕೆಂದರೆ ಬೆಟ್ಟಗುಡ್ಡ ಅಗೆಯಬೇಕು, ಮರಗಳನ್ನು ಕಡಿಯಬೇಕು. ಅದಷ್ಟನ್ನು ಮಾಡಿಲ್ಲ ಅಂದರೆ ರಸ್ತೆ ನಿರ್ಮಾಣ ಆಗಲ್ಲ. ರಸ್ತೆಯೇ ಇಲ್ಲ ಅಂದ ಮೇಲೆ ಅಭಿವೃದ್ದಿ ಎನ್ನಲಾಗುವುದಿಲ್ಲ. ನಾವು ಅಭಿವೃದ್ಧಿಯ ಬಗ್ಗೆ ಮಾತನಾಡಿದಾಗಲೆಲ್ಲ. ಅದರ ಉಪಯೋಗವನ್ನು ಮನುಷ್ಯ ಅನುಭವಿಸಿದರೂ ಕೂಡ ದುಷ್ಪರಿಣಾಮ ಮಾತ್ರ ಪ್ರಕೃತಿ ಮೇಲೆಯೇ ಎಂಬುವುದರಲ್ಲಿ ಎರಡು ಮಾತಿಲ್ಲ.
ಇವತ್ತು ನಮಗೆಲ್ಲರಿಗೂ ಹಣದ ವ್ಯಾಮೋಹ.. ಪ್ರತಿಯೊಂದು ವಿಚಾರದಲ್ಲೂ ಲಾಭ ನಷ್ಟದ ಲೆಕ್ಕಚಾರ ಮಾಡುತ್ತೇವೆ. ಅಪ್ಪ ನೆಟ್ಟು ಬೆಳೆಸಿದ ಹಲಸಿನ ಮರದ ಹಣ್ಣನ್ನು ತಿಂದು ಬೆಳೆಯುವ ಮಗನಿಗೆ ಅದು ಕೊಡುವ ಹಣ್ಣಿಗಿಂತ ಅದನ್ನು ಕಡಿದು ಮಾರಿದರೆ ಸಿಗುವ ಹಣವೇ ಮುಖ್ಯವಾಗುತ್ತದೆ. ಇಲ್ಲಿ ಮರದ ಹಣ್ಣಿಗಿಂತ ಅದು ತಂದುಕೊಡುವ ಹಣವೇ ಕೆಲಸ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಪರಿಣಾಮ ಜೀವನಾಡಿಯಾಗಿದ್ದ ಕೆಆರ್ ಎಸ್ ಜಲಾಶಯ ಭರ್ತಿಯಾಗುತ್ತಿಲ್ಲ. ಇದನ್ನೇ ನಂಬಿ ಬದುಕುತ್ತಿದ್ದ ರೈತಾಪಿ ಮಕ್ಕಳ ಬದುಕು ಮೂರಾಬಟ್ಟೆಯಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಕಾವೇರಿ ಕಣಿವೆಯಲ್ಲಿ ಸಮರ್ಪಕ ಮಳೆಯಾಗುತ್ತಿಲ್ಲ ಎಂಬ ಕಾರಣ ನಮಗೆ ಗೋಚರಿಸುತ್ತದೆ. ಕಾವೇರಿಯ ತವರು ಕೊಡಗಿನಲ್ಲೇ ಸಮರ್ಪಕವಾಗಿ ಮಳೆಯಾಗುತ್ತಿಲ್ಲ ಎಂದ ಮೇಲೆ ಜಲಾಶಯ ಭರ್ತಿಯಾಗುವುದಾದರೂ ಹೇಗೆ? ಒಂದೆರಡು ದಶಕಗಳ ಹಿಂದೆ ಕೊಡಗಿಗೆ ಬಂದವರು ಈಗ ಮತ್ತೊಮ್ಮೆ ಬಂದರೆ ಇಲ್ಲಿನ ಬದಲಾವಣೆಗಳು ಎದ್ದು ಕಾಣುತ್ತದೆ. ಮೊದಲಿನಂತೆ ಕೊಡಗು ಇದೆಯಾ? ವಾತಾವರಣವೂ ಹಾಗೆಯೇ ಇದೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ಸಿಕ್ಕಿಬಿಡುತ್ತದೆ.
ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ. ಭತ್ತದ ಕೃಷಿಯಲ್ಲಿ ಲಾಭವಿಲ್ಲ ಎಂಬ ಕಾರಣಕ್ಕೆ ಕೆಲವು ಸದ್ದಿಲ್ಲದೆ ತೋಟಗಳಾಗಿದ್ದರೆ ಮತ್ತೆ ಕೆಲವು ಪಾಳುಬಿದ್ದಿವೆ. ದೊಡ್ಡ ಮರಗಳಿಂದ ಕೂಡಿದ ಕಾಡುಗಳ ನಡುವೆ ತಂಪಾದ ವಾತಾವರಣದಲ್ಲಿ ಕಂಡು ಬರುತ್ತಿದ್ದ ಏಲಕ್ಕಿ ನಾಶವಾಗಿ ಅವು ಕಾಫಿ ತೋಟವಾಗಿ ಮಾರ್ಪಟ್ಟಿವೆ. ಇದೆಲ್ಲದರ ನಡುವೆ ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋದ ಹೈಟನ್ಷನ್ ವಿದ್ಯುತ್ ಮಾರ್ಗ ಮರಕಾಡುಗಳನ್ನು ನುಂಗಿ ಹಾಕಿದೆ. ಪ್ರಾಣಿ ಪಕ್ಷಿಗಳ ಜೀವಕ್ಕೆ ಕಂಟಕವಾಗಿವೆ.
ಸುಡು ಬೇಸಿಗೆಯಲ್ಲೂ ತಣ್ಣಗಿದ್ದ ಕೊಡಗು ಇವತ್ತು ಬೇಸಿಗೆ ಬಂತೆಂದರೆ ಸುಡುತ್ತದೆ. ಕಳೆದ ಎರಡು ದಶಕಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿನ ಪರಿಸರದ ಮೇಲೆ ಭಾರೀ ಅತ್ಯಾಚಾರ ನಡೆದಿದೆ. ಆಧುನಿಕತೆಯ ಹೆಸರಿನಲ್ಲಿಯೂ ಇರಬಹುದು, ಟಿಂಬರ್ ಮಾಫಿಯಾದ ಮೂಲಕವೂ ಇರಬಹುದು. ಕಾವೇರಿ ಹುಟ್ಟಿ ಹರಿಯುವ ಕೊಡಗಿನಲ್ಲೇ ಇವತ್ತು ಕುಡಿಯುವ ನೀರಿಗೆ ಹಾಹಾಕಾರವಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ಕಾರಣ ವಾಡಿಕೆಯ ಮಳೆಯಾಗದ ಕಾರಣದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸಣ್ಣಪುಟ್ಟ ನದಿಗಳಲ್ಲಿ ನೀರು ಹರಿಯುತ್ತಿಲ್ಲ. ತೊರೆಗಳೇ ಇಲ್ಲಿನವರ ಜಲಮೂಲವಾಗಿದ್ದು, ಅವುಗಳೇ ಕ್ಷೀಣಿಸುತ್ತಿವೆ.
ನಾವೆಷ್ಟು ಲೆಕ್ಕಚಾರಿಗಳಾಗಿ ಸ್ವಾರ್ಥಿಗಳಾಗುತ್ತಿದ್ದೇವೆ ಎಂದರೆ ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ. ಜತೆಗೆ ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್ ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರುವ ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಲೇ ಇಲ್ಲ. ನೀಲಗಿರಿ ಮರದಡಿಯಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ. ಅವುಗಳಿಂದ ಪ್ರಾಣಿಪಕ್ಷಿ ಭೂಮಿಗೂ ಒಳಿತಾಗುವುದಿಲ್ಲ. ಅವು ಹಣ ತಂದು ಕೊಡುತ್ತವೆ ಎಂಬ ಉದ್ದೇಶಕ್ಕಷ್ಟೆ ನಾವು ಅವುಗಳನ್ನು ಬೆಳೆಯುತ್ತಿದ್ದೇವೆ. ನಮಗೆ ಪರಿಸರ ಸ್ನೇಹಿ ಅರಣ್ಯ ಬೇಕಾಗಿಲ್ಲ. ಇದರ ಪರಿಣಾಮವೇ ಇವತ್ತು ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಬರುವಂತಾಗಿದ್ದು.. ಪ್ರತಿವರ್ಷ ವನಮಹೋತ್ಸವ, ಪರಿಸರ ದಿನಾಚರಣೆಯನ್ನು ಗಿಡನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಸಾವಿರಾರು ಗಿಡಗಳನ್ನು ನೆಡುತ್ತಲೇ ಇದ್ದೇವೆ. ಅದು ಕೆಲವರಿಗೆ ಪ್ರಚಾರ ಪಡೆಯುವುದಕ್ಕಷ್ಟೆ ಸೀಮಿತವಾಗಿ ಹೋಗಿದೆ. ದುರಂತ ಏನೆಂದರೆ ಕಳೆದ ವರ್ಷ ನೆಟ್ಟ ಸ್ಥಳದಲ್ಲೇ ಈ ವರ್ಷವೂ ಗಿಡ ನೆಡುತ್ತೇವೆ. ಆದರೆ ನಾವ್ಯಾರೂ ಕಳೆದ ವರ್ಷ ನೆಟ್ಟ ಗಿಡ ಏನಾಯಿತು ಎಂದು ಯೋಚಿಸುವುದೇ ಇಲ್ಲ.
ಇವತ್ತಿನ ಪರಿಸ್ಥಿತಿಯಲ್ಲಿ ಗಿಡವನ್ನು ನೆಡುವವರಿಗಿಂತ ನೆಟ್ಟ ಗಿಡವನ್ನು ಸಂರಕ್ಷಿಸುವವರು ಬೇಕಾಗಿದ್ದಾರೆ. ಗಿಡವನ್ನು ಯಾರು ಬೇಕಾದರೂ ನೆಡಬಹುದು ಆದರೆ ಅವುಗಳನ್ನು ಪೋಷಿಸಿ ಬೆಳೆಸುವುದು ಎಲ್ಲರಿಂದ ಸಾಧ್ಯವಿಲ್ಲ. ಅದು ಸಾಲುಮರದ ತಿಮ್ಮಕ್ಕನಂತಹ ಕೆಲವೇ ಕೆಲವರಿಂದ ಸಾಧ್ಯ. ಇನ್ನು ಮುಂದೆಯಾದರೂ ಬರೀ ಗಿಡನೆಡದೆ ಅದನ್ನು ಪೋಷಿಸಿ ಬೆಳೆಸುವ ಕಾರ್ಯ ಮಾಡೋಣ.. ಸದ್ಯದ ಪರಿಸ್ಥಿತಿಯಲ್ಲಿ ನಾವು ಮಾಡಬೇಕಾಗಿರುವುದು ಗಿಡಮರಗಳನ್ನು ಕಾಪಾಡುವ ಕೆಲಸ.. ಗಿಡ ನೆಟ್ಟು ಕೈತೊಳೆದುಕೊಳ್ಳದೆ ಪೋಷಿಸಿ ಬೆಳೆಸಿ ಪರಿಸರದ ಉಳಿವಿಗೆ ಕೈಜೋಡಿಸೋಣ..