ಬನ್ನೂರು: ಒಂದೆಡೆ ಜನರ ಶಿಳ್ಳೆ.. ಮತ್ತೊಂದೆಡೆ ಭಕ್ತರು ಹಾದಿಯಲ್ಲಿ ಹಾಕಿದ್ದ ಬಣ್ಣ ಬಣ್ಣದ ರಂಗೋಲಿ.. ಮಧ್ಯ ಭಕ್ತರ ಪುಷ್ಪವೃಷ್ಠಿ .. ಇದೆಲ್ಲದರ ನಡುವೆ ರೋಮಾಂಚನಕಾರಿ ಬಂಡೀ ಓಟ.. ಇದು ಬನ್ನೂರು ಪಟ್ಟಣದ ಆದಿದೇವತೆ ಹೇಮಾದ್ರಂಭ ದೇವಿಯ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದ ಸುಂದರ ದೃಶ್ಯಗಳು.
ಶುಕ್ರವಾರ ಬಂಡೀ ಹಿನ್ನೆಲೆಯಲ್ಲಿ ದೇವಿಯನ್ನು ದೇವಿ ತೋಪಿಗೆ ಕರೆದುಕೊಂಡು ಹೋಗಿ ಅವಭೃತ ಸ್ನಾನ ಮಾಡಿಸುವುದು ವಾಡಿಕೆ. ಅದರಂತೆ ದೇವಿಯನ್ನು ದೇವಿ ತೋಪಿಗೆ ಕರೆದುಕೊಂಡು ಹೋಗುವ ಮುನ್ನ ದೇವಾಲಯದಲ್ಲಿ ದೇವಿಗೆ ಪೂಜೆಯನ್ನು ಸಲ್ಲಿಸಲಾಯಿತು. ಮುಂಜಾನೆಯಿಂದಲೇ ವಿವಿಧ ಕಡೆಗಳಿಂದ ಭಕ್ತರು ಜಮಾಯಿಸಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ದೇವಿಯನ್ನು ದೇವಿ ತೋಪಿಗೆ ಕರೆದುಕೊಂಡು ಹೋಗುವ ಮಾರ್ಗದ ಅಲ್ಲಲ್ಲಿ ದೇವಿಗೆ ಪುಷ್ಪವೃಷ್ಟಿ ಸುರಿಸಿ ತಮ್ಮ ಭಕ್ತಿಯನ್ನು ಮೆರೆದರು. ಹೆಬ್ಬರೆಗೆ ಪೂಜೆ ಸಲ್ಲಿಸಿ ಹೆಬ್ಬರೆಯ ಜೊತೆಯಲ್ಲಿ ದೇವಿಯನ್ನು ಮೆರವಣಿಗೆ ಮೂಲಕ ದೇವಿ ತೋಪಿನ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಹಿಂದಿನಿಂದ ಕೆಲ ಭಕ್ತ ವೃಂದದವರು ದೇವಿಗೆ ಸಮರ್ಪಿಸಿದ ಎಳೆನೀರನ್ನು ವಿತರಿಸುತ್ತಿದ್ದರು.
ದೇವಿ ತೋಪಿನಲ್ಲಿ ದೇವಿಯು ಬರುವ ಮುನ್ನವೇ ಕಾವೇರಿ ಮಡುವಿನ ಸಮೀಪದಲ್ಲಿ ಕಾದಿದ್ದ ಸಾವಿರಾರು ಜನರು ದೇವಿಯ ದರ್ಶನವಾಗುತ್ತಿದ್ದಂತೆ ದೇವಿಗೆ ಜೈಕಾರ ಹಾಕಿದರು. ದೇವಿ ತೋಪಿಗೆ ದೇವಿಯನ್ನು ಕರೆತಂದ ಸಂದರ್ಭದಲ್ಲಿ ಕಾಲುವೆಯ ಬಳಿಯಲ್ಲಿ ಪೂಜೆಯನ್ನು ಸಲ್ಲಿಸಿದ ನಂತರ ಕಾವೇರಿ ಮಡುವಿನಲ್ಲಿ ದೇವಿಗೆ ಅರ್ಪಿಸಲು ಸಿದ್ದಪಡಿಸಬೇಕಾದ ಪ್ರಸಾದವನ್ನು ಮಾಡಲು ದೊಡ್ಡಕಟ್ಟಿಗೆಗೆ ಅಗ್ಗಿಷ್ಟಿಕೆಯನ್ನು ಹೊತ್ತಿಸಿ, ನಂತರ ದೇವಿಯನ್ನು ಕಾವೇರಿ ಮಡುವಿನ ಕಡೆಗೆ ಕರೆದೊಯ್ಯಲಾಯಿತು.
ಕಾವೇರಿ ಮಡುವಿನಲ್ಲಿ ದೇವಿಯ ಮಂಟಪದಲ್ಲಿ ಭಕ್ತರಿಗೆ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟು, ನಂತರ ಹೇಮಾದ್ರಂಭ ದೇವಿಯನ್ನು ಕಾವೇರಿ ಮಡುವಿನಲ್ಲಿ ಅವಭೃತ ಸ್ನಾನವನ್ನು ಮಾಡಿಸಲಾಯಿತು. ನಂತರ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಕಾವೇರಿ ಮಡುವಿನಲ್ಲೇ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಇದೇ ವೇಳೆ ಬನ್ನೂರಿನ ಹೇಮಾದ್ರಿ ಚಿತ್ರಮಂದಿರದ ಸಮೀಪದಲ್ಲಿ ನಡೆದ ರೋಮಾಂಚನಕಾರಿ ಬಂಡೀ ಉತ್ಸವ ನೆರೆದ ಜನರ ಗಮನಸೆಳೆಯಿತು. ಶಿಳ್ಳೆ, ಚಪ್ಪಾಳೆಗಳೊಂದಿಗೆ ರಾಸುಗಳನ್ನು ಹುಚ್ಚೆಬ್ಬಿಸಿ ಓಡಿಸುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. ಬಂಡೀ ಓಟವನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಕೆಲವರು ರಸ್ತೆ ಬದಿ, ಮತ್ತೆ ಕೆಲವರು ಮನೆಗಳ ಮೇಲೆ, ಮರದ ಮೇಲೆ ನಿಂತು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.