ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯ ಬಳಿ ಪ್ರತಿ ವರ್ಷವೂ ನಡೆಯುವ ರೊಟ್ಟಿಹಬ್ಬ ಇತರೆ ಹಬ್ಬಗಳಿಗೆ ಹೋಲಿಸಿದರೆ ವಿಭಿನ್ನ ಮತ್ತು ವಿಶಿಷ್ಟ.
ಆದಿವಾಸಿ ಜನರು ಆಚರಿಸುವ ಈ ಹಬ್ಬದಲ್ಲಿ ಕಾಡಿನಲ್ಲಿ ರೊಟ್ಟಿ ಸುಟ್ಟು ಸಾಮೂಹಿಕ ಬೋಜನ ಮಾಡುವುದು, ಅಷ್ಟೇ ಅಲ್ಲ ಎಲ್ಲರೂ ಕುಟುಂಬ ಸಹಿತ ಆಗಮಿಸುವುದರಿಂದ ಹುಡುಗರು ಹುಡುಗಿಯರನ್ನು ನೋಡಿಕೊಂಡು ತಮಗೆ ಮೆಚ್ಚುಗೆಯಾದವರೊಂದಿಗೆ ಬದುಕು ಕಟ್ಟಿಕೊಳ್ಳುವುದು ಮತ್ತೊಂದು ವಿಶೇಷವಾಗಿದೆ. ಜಡೇಸ್ವಾಮಿಯ ಆರಾಧಕರಾದ ಆದಿವಾಸಿಗಳು ಹಬ್ಬದ ದಿನದಂದು ಹೋಬಳಿಯ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯದ ನೆರೆಯುತ್ತಾರೆ. ದೇವರ ಧ್ಯಾನ, ಭಜನೆ ಹೀಗೆ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಾರೆ.
ಹೆಣ್ಣು ಮಕ್ಕಳು ಹೆತ್ತವರೊಂದಿಗೆ ಆಗಮಿಸಿ ಒಂದೆಡೆ ಕುಳಿತುಕೊಂಡರೆ ಮತ್ತೊಂದೆಡೆ ಓಡಾಡುವ ಗಂಡು ಮಕ್ಕಳು ತಮಗಿಷ್ಟವಾದ ಹುಡುಗಿಯ ಒಪ್ಪಿಗೆ ಕೇಳುತ್ತಾರೆ. ಆಕೆ ಒಪ್ಪಿದರೆ ಅಲ್ಲಿಯೇ ಮಾತನಾಡಿ ಬಳಿಕ ಹೆತ್ತವರಿಗೆ ವಿಷಯ ತಿಳಿಸಿ ಗ್ರಾಮದ ಯಜಮಾನರ ಸಮ್ಮುಖದಲ್ಲಿ ವಿವಾಹದ ಮಾತುಕತೆ ನಡೆದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದು ಹಬ್ಬದ ಒಂದು ವಿಶೇಷತೆಯಾದರೆ ಮತ್ತೊಂದೆಡೆ ಹಬ್ಬವನ್ನು ತುಂಬಾ ಕಟ್ಟುನಿಟ್ಟಾಗಿ ಮಡಿಯಿಂದ ಆಚರಿಸಿ ದೇವರಿಗೆ ನೈವೇದ್ಯ ಅರ್ಪಿಸುವುದು ಕಂಡುಬರುತ್ತದೆ.
ಸಾಮಾನ್ಯವಾಗಿ ಈ ಹಬ್ಬ ಆಚರಿಸುವ ಆದಿವಾಸಿಗಳೆಲ್ಲರೂ ಕೃಷಿಕರೇ ಇವರಿಗೆ ಕೃಷಿಯೇ ಜೀವನ ಹೀಗಾಗಿ ಸುಗ್ಗಿಕಾಲ ಆರಂಭವಾಗಿ ಧಾನ್ಯ ಮನೆಗೆ ಬರುತ್ತಿದ್ದಂತೆಯೇ ಅದರಲ್ಲಿ ಒಂದಷ್ಟನ್ನು ಉಪಯೋಗಿಸದೆ ಮಡಿಯಿಂದ ಜೋಪಾನವಾಗಿ ತೆಗೆದಿಟ್ಟು, ಬೀಸುವ ಕಲ್ಲಿನಿಂದ ಬೀಸಿ ಹಿಟ್ಟು ತಯಾರಿಸಿ ನಿಗದಿತ ದಿನದಂದು ಊರವರೆಲ್ಲ ಸೇರಿ ರೊಟ್ಟಿ ಮಾಡಿ ಕುಲದೇವರಿಗೆ ನೈವೇದ್ಯ ಅರ್ಪಿಸಿ ಕುಟುಂಬಕ್ಕೂ, ಬೆಳೆಯುವ ಬೆಳೆಗೂ ಯಾವುದೇ ತೊಂದರೆಯಾಗದಿರಲಿ ಎಂದು ಬೇಡಿಕೊಳ್ಳುವುದು ಹಬ್ಬದಲ್ಲಿ ಕಂಡುಬರುವ ಪದ್ಧತಿಯಾಗಿದೆ.
ಕಾಡಂಚಿನಲ್ಲಿ ನೆಲೆನಿಂತಿರುವ ಈ ಆದಿವಾಸಿಗಳು ಕಾಡುಪ್ರಾಣಿಗಳ ಹಾವಳಿ ನಡುವೆಯೂ ಬೆಳೆಬೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ತಮ್ಮ ಬೆಳೆಯನ್ನು ಕುಲದೇವರಾದ ಜಡೇಸ್ವಾಮಿಯೇ ರಕ್ಷಿಸುತ್ತಾನೆ ಎಂಬುದು ಅವರ ನಂಬಿಕೆ. ಹೀಗಾಗಿ ದೇವರಲ್ಲಿ ಪ್ರಾರ್ಥಿಸಿ ಹರಕೆ ಕಟ್ಟುತ್ತಾರೆ. ಬೆಳೆ ಬಂದಾಗ ತಮ್ಮ ಹರಕೆ ತೀರಿಸುತ್ತಾರೆ. ಹಬ್ಬದ ದಿನ ತಾವು ತೆಗೆದಿಟ್ಟ ಧಾನ್ಯವನ್ನು ಮಡಿಯಿಂದ ಬೀಸುಕಲ್ಲಿನಿಂದ ಬೀಸಿ ಹಿಟ್ಟು ತಯಾರಿಸಿಕೊಂಡು ಹಬ್ಬ ನಡೆಯುವ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯದ ಬಳಿಗೆ ಬರುತ್ತಾರೆ. ಒಂದೆಡೆ ಬೆಳಗ್ಗಿನಿಂದಲೇ ಸೌದೆ ಸಂಗ್ರಹಿಸುವ ಗಂಡಸರು ಎಲ್ಲವನ್ನೂ ರಾಶಿ ಹಾಕಿ ಉರಿಸಿ ಕೆಂಡ ತಯಾರಿಸುತ್ತಾರೆ. ಬಳಿಕ ಹಿಟ್ಟನ್ನು ಮುತ್ತುಗದ ಎಲೆ ಬಳಸಿ ತಟ್ಟಿ ರೊಟ್ಟಿ ಮಾಡಿ ನಂತರ ಕೆಂಡದ ಮೇಲಿಟ್ಟು ಬೇಯಿಸುತ್ತಾರೆ.
ಬೇಯಿಸಿದ ರೊಟ್ಟಿಯನ್ನೆಲ್ಲೇ ಗುಡ್ಡೆ ಹಾಕಿ ಅದರ ಜತೆಗೆ ಅವರೇಕಾಯಿ, ಕುಂಬಳಕಾಯಿಂದ ತಯಾರಿಸಿದ ಪಲ್ಯ ಮತ್ತು ಅನ್ನ ಸಾರು ಮಾಡಿ ಕುಲದೇವರಿಗೆ ನೈವೇದ್ಯವನ್ನು ಅರ್ಪಿಸಿ ಆ ನಂತರ ಎಲ್ಲರೂ ಒಂದೆಡೆ ಕುಳಿತು ಸಾಮೂಹಿಕ ಬೋಜನ ಮಾಡುತ್ತಾರೆ. ಆ ನಂತರ ತಮ್ಮ ಮನೆಯ ಹಾದಿ ಹಿಡಿಯುತ್ತಾರೆ. ಆದರೆ ತಾವು ಇಷ್ಟಪಟ್ಟ ಹುಡುಗ-ಹುಡುಗಿಯರು ಮಾತ್ರ ಮನೆಯವರ ಒಪ್ಪಿಗೆಯೊಂದಿಗೆ ಮದುವೆ ಮಾಡಿಕೊಳ್ಳುವ ಸಿದ್ಧತೆಯಲ್ಲಿ ತಲ್ಲೀನರಾಗಿ ಬಿಡುತ್ತಾರೆ.