ಶಾಶ್ವತ ಬರಗಾಲಕ್ಕೆ ತುತ್ತಾದ ಮಲೆನಾಡಿನ ಆ ಮೂರು ತಾಲೂಕಿನ ರೈತರಿಗೆ ಯಾವ ಬೆಳೆಯೂ ಅನಿವಾರ್ಯವಲ್ಲ. ಯಾವ ಬೆಳೆ ಬೆಳೆದ್ರು ನಷ್ಟ ಕಟ್ಟಿಟ್ಟ ಬುತ್ತಿ. ದಿನ ಕಳೆದಂತೆ ರೈತ ಸಾಲಗಾರನಾದೂದರಿಂದ ಸಾವಿರಾರು ಎಕರೆಯಲ್ಲಿ ಅಲ್ಪಮಳೆಯ ಅಡಿಕೆ ಹಾಗೂ ತೆಂಗಿಗೆ ಮೊರೆ ಹೋಗಿದ್ರು. ಆದ್ರೆ, ಈ ಬಾರಿಯ ಭೀಕರ ಬರದಿಂದ ಅಡಿಕೆ ಬೇಕಾದ ಮಳೆಯೂ ಬಾರದಿರೋದ್ರಿಂದ ಅಡಿಕೆ ಬೆಳೆಗಾರರು ದಿನದಿಂದ ದಿನಕ್ಕೆ ಮುಗಿಲೆತ್ತರದ ಮರಗಳನ್ನ ಕಡಿದು ನೆಲಕ್ಕುರುಳಿಸುತ್ತಿದ್ದು, ಕಡಿಯುತ್ತಿರೋದು ಮರವಾದ್ರೆ ನೆಲಕಾಣ್ತಿರೋದು ನಮ್ಮ ಬದುಕು ಎಂದು ಕಣ್ಣೀರಿಡ್ತಿದ್ದಾರೆ….ಈ ಕುರಿತು ಒಂದು ವರದಿ ಇಲ್ಲಿದೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಭಾಗದಲ್ಲಿ ಸಾವಿರಾರು ರೈತರು ನೂರಾರು ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ರು. ಆದ್ರೆ ಈಗ ಶಾಶ್ವತ ಬರಗಾಲಕ್ಕೆ ತುತ್ತಾದ ಈ ತಾಲೂಕಿನ ಜನ ಅಲ್ಪ ಮಳೆಯಾದ್ರು ಸಾಕೆಂದು ಅಡಿಕೆಯನ್ನೆ ಆಶ್ರಯಿಸಿದ್ರು. ಈಗಾಗಲೇ ಈ ತಾಲೂಕುಗಳಲ್ಲಿ ಸಣ್ಣ ರೈತರು ಬೀದಿಗೆ ಬಿದ್ದಿದ್ದು, ಮುಂದಕ್ಕೆ ಅಡಿಕೆ ಬೆಳೆಗಾರರ ಸರದಿ.
ಇಷ್ಟು ದಿನ ಬೋರ್ ವೆಲ್ ನಲ್ಲಿದ್ದ ಅಲ್ಪ ನೀರಿನಿಂದ ತೋಟವನ್ನ ಕಾಪಾಡಿಕೊಂಡಿದ್ದ ರೈತರು ಇದೀಗ ತಾವೇ ಮರಗಳನ್ನ ಕಡಿದು ನೆಲ ಉರುಳಿಸುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಅಡಿಕೆಗೆ ಹಳದಿರೋಗವಾದ್ರೆ, ಬಯಲುಸೀಮೆಯಲ್ಲಿ ಬಿಸಿಲ ಬೇಗೆಗೆ ಸುಳಿ ಸುಟ್ಟು ಬಾಡ್ತಿರೋದ್ರಿಂದ ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ. ರೋಗಕ್ಕೆ ಔಷಧಿ ಇಲ್ಲ, ನೆಲದಲ್ಲಿ ನೀರಿಲ್ಲ. ವರುಣನ ಆಗಮನವಿಲ್ಲ. ಸೂರ್ಯನ ತಾಪ ಮರಗಳ ಸುಳಿ ಸುಡ್ತಿದ್ರೆ, ಸರ್ಕಾರ ಮೌನ ನಮ್ಮ ಜೀವನವನ್ನೇ ಸುಡ್ತಿದೆ ಅಂತಾರೆ ಬೆಳೆಗಾರರು.
ಜಿಲ್ಲೆಯ ಕಡೂರು, ತರೀಕೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರದಲ್ಲಿ ಹೆಚ್ಚಾಗಿ ಅಡಿಕೆಯನ್ನ ಬೆಳೆಯುತ್ತಾರೆ. ಇನ್ನು ಜಿಲ್ಲೆಯ ಎಷ್ಟೋ ರೈತರು ಒಂದು ವರ್ಷ ಕೂಡ ಅಡಿಕೆಯ ದುಡ್ಡು ನೋಡಿಲ್ಲ. ಯಾಕಂದ್ರೆ, ಅಡಿಕೆ ದುಡ್ಡು ನೋಡ್ಬೇಕು ಅಂದ್ರೆ, ಐದಾರು ವರ್ಷ ಮಕ್ಕಳಂತೆ ಸಾಕ್ಬೇಕು. ಆದ್ರೆ, ಕಳೆದ ಐದಾರು ವರ್ಷಗಳಿಂದ ಮಳೆ ಕೊರತೆ ಉಂಟಾಗಿದ್ರೆ ಹಣವನ್ನೇ ನೋಡದೇ ರೈತರು ಮಕ್ಕಳಂತೆ ಸಾಕಿದ ಅಡಿಕೆಯ ತಲೆಕಡಿಯುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಅಡಿಕೆ ಮರಗಳನ್ನು ಸಾಲ ಸೂಲ ಮಾಡಿ ಹಣ ಸುರಿದು ಅಡಿಕೆ ಮರಗಳನ್ನು ಉಳಿಸಿಕೊಂಡಿದ್ವಿ, ಆದ್ರೆ, ಈ ಮಳೆರಾಯ ಕೈಕೊಟ್ಟಿದ್ರಿಂದ ಅಂತರ್ಜಲ ಮಟ್ಟ ಕುಸಿದು ಇರೋ ಬೋರ್ ವೆಲ್ ಗಳಲ್ಲಿ ನೀರಿಲ್ಲದೇ ಮುಗಿಲೆತ್ತರಕ್ಕೆ ಬೆಳೆದ ಅಡಿಕೆ ಮರಗಳು ನಾಶವಾಗ್ತಿವೆ ಅನ್ನೋದು ರೈತರ ಕೊರಗು.
ಒಟ್ಟಾರೆಯಾಗಿ ಮುಗಿಲೆತ್ತರದ ಮರಗಳು ನೆಲಕಾಣ್ತಿರೋದಕ್ಕೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ನೀರಿಲ್ಲದೆ ಅಡಿಕೆ ಮರಗಳ ಸುಳಿ ನೆಲಕಾಣ್ತಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗಾರರ ಸಹಾಯಕ್ಕೆ ಭಾರದಿದ್ರೆ, ರಾಜ್ಯ ಸರ್ಕಾರ ಮತ್ತೊಂದು ಅನಾಹುತವನ್ನ ಎದುರಿಸಬೇಕಾಗುತ್ತೆ ಅಂತಿದ್ದಾರೆ ಬೆಳೆಗಾರರು…….