ಚಾಮರಾಜನಗರ: ಶ್ವೇತಗಿರಿ ಎಂದೇ ಇತಿಹಾಸ ಪ್ರಸಿದ್ದ ಹಾಗೂ ಸೋಲಿಗರ ಆರಾದ್ಯ ದೈವ ಬಿಳಿಗಿರಿರಂಗನಾಥನ ದರ್ಶನ ಭಕ್ತರಿಗೆ ಇನ್ನು 20 ತಿಂಗಳು ಬಂದ್ ಆಗಲಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನನಾಥ ಬೆಟ್ಟದಲ್ಲಿ ಮಾ. 17 ರಿಂದ 20 ತಿಂಗಳು ದೇವರ ದರ್ಶನ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಲಭ್ಯವಿರುವುದಿಲ್ಲ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಬಿಳಿಗಿರಿರಂಗನಾಥ ದೇವಾಲಯದಲ್ಲಿ ಜೀರ್ಣೋದ್ದಾರಕ್ಕಾಗಿ ರಾಜ್ಯ ಸರ್ಕಾರವು 2.40 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ದೇವಾಲಯದಲ್ಲಿ ನವೀಕರಣ ಹಾಗೂ ಅಭಿವೃದ್ದಿ ಕೆಲಸ ನಿಮಿತ್ತ ಮಾರ್ಚ್ 17 ರಿಂದ 20 ತಿಂಗಳು ದೇವಾಲಯ ಬಂದ್ ಆಗಲಿದೆ ಎಂದು ಹೇಳಿರುವ ಅವರು ಭಕ್ತರಿಗೆ ಬಿಳಿಗಿರಿರಂಗನಾಥ ಸ್ವಾಮಿ ಮೂಲ ಮೂರ್ತಿಯಂತೆ ಪ್ರತಿರೂಪದ ದರ್ಶನವನ್ನು ವ್ಯವಸ್ಥೆಮಾಡಲಾಗಿದೆ ಎಂದು ಹೇಳಿದ್ದಾರೆ.
ದೇವಾಲಯದ ಅಭಿವೃದ್ದಿ ಕೆಲಸ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಮಾರ್ಚ್ 15 ರಿಂದ 17 ರವರೆಗೆ ಜೀರ್ಣೋದ್ದಾರಕ್ಕಾಗಿ ಹೋಮ, ಹವನ ಮತ್ತು ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು, ಬಳಿಕ ದೇವಾಲಯದ ಗರ್ಭಗುಡಿಯನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಿಳಿಗಿರಿರಂಗನ ಬೆಟ್ಟಕ್ಕೆ ಬಂದು ಪೂಜೆ ಕೈಂಕಾರ್ಯ ಮಾಡಿಸುತ್ತಿದ್ದರು. ದೇವಾಲಯ ಬಂದ್ ಆಗುವುದರಿಂದ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುವ ಸಾಧ್ಯತೆ ಇದೆ.
ಈಗಾಗಲೇ ದೇವಾಲಯದ ಆವರಣದಲ್ಲಿ ಪ್ರಾಣಿ ಬಲಿ ನಿಷೇಧ ಹಾಗೂ ರಾತ್ರಿ ವೇಳೆ ಸಾರ್ವಜನಿಕರ ಮತ್ತು ವಾಹನ ಸಂಚಾರ ಸ್ಥಗಿತದಿಂದಾಗಿ ಭಕ್ತರ ಆಗಮನ ಕಡಿಮೆಯಾಗಿತ್ತು. ಇದೀಗ ದೇವಾಲಯದ ನವೀಕರಣ ಮತ್ತು ಜೀರ್ಣೋದ್ದಾರ ಹಿನ್ನಲೆಯಲ್ಲಿ 20 ತಿಂಗಳು ಬಂದ್ ಆಗುತ್ತಿರುವುದರಿಂದ ಭಕ್ತರ ಸಂಖ್ಯೆ ಹೇಳ ತೀರದಷ್ಟು ಕಡಿಮೆಯಾಗಲಿದೆ.