ಮಡಿಕೇರಿ: ಕೊಡವರ ಸಾಂಪ್ರದಾಯಿಕ ಉಡುಗೆ ಕುಪ್ಪೆಚ್ಯಾಲೆ ತೊಟ್ಟ ಪುರುಷರು ಜಿಂಕೆ ಕೊಂಬು ಹಿಡಿದು ಓಹೋ.. ವಯ್ಯ ಓಹೋ.., ಹೋ.. ವಯ್ಯ ಹೋ… ಎಂದು ದೇವರ ನಾಮಸ್ಮರಣೆ ಮಾಡುತ್ತಾ ಸಾಗಿ ದೇವಾಲಯದ ಮುಂದೆ ಹದಿನೆಂಟು ನೃತ್ಯ ಮಾಡುವ ಮೂಲಕ ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ದೇವಾಲಯದ ನೆಲೆಯಿಂದ ಎರಡೆರಡು ಜಿಂಕೆ ಕೊಂಬು ಹಿಡಿದು ಮೇದರ ಡೋಲಿನ ಶಬ್ದಕ್ಕೆ ತಕ್ಕಂತೆ ದೇವಾಲಯ ಹಾಗೂ ದೀಪ ಸ್ಥಂಬದ ಸುತ್ತಲೂ ದೇವತಕ್ಕರು ಮತ್ತು ಊರು ತಕ್ಕರು ಕುಣಿಯುತ್ತಾ ಸಾಗಿದರೆ ಅವರ ಹಿಂದೆ ಇತರ ಊರಿನ ಪ್ರಮುಖರು ಸಾಲಾಗಿ ಹೆಜ್ಜೆ ಹಾಕುತ್ತಾ ಸುಮಾರು 18 ರೀತಿಯ ಕೊಂಬಿನ ನೃತ್ಯ ಮಾಡುವ ಮೂಲಕ ಗಮನಸೆಳೆದರು.
ಕಳೆದ ಫೆಬ್ರವರಿ 28ಕ್ಕೆ ದೇವಾಲಯದ ಹಬ್ಬದ ಕಟ್ಟು ಬಿದ್ದಿತ್ತು. ಮಾರ್ಚ್ 3ಕ್ಕೆ ಪಟ್ಟಣಿ ಹಬ್ಬ, ಮಾ.4ಕ್ಕೆ ಅಯ್ಯಪ್ಪದೇವರ ಬನದ ಹಬ್ಬ ನಡೆದಿತ್ತು. ಮಾ.5ರಂದು ಭಾನುವಾರ ದೊಡ್ಡ ಹಬ್ಬ ನಡೆಯುವುದರೊಂದಿಗೆ ಹಬ್ಬಕ್ಕೆ ತೆರೆಬಿದ್ದಿತು.
ಹಬ್ಬದ ಕೊನೆಯ ದಿನವಾದ ಭಾನುವಾರ ದೇವರ ಹಬ್ಬಕ್ಕೆ ಬಂದ ಊರಿನವರು, ನೆಂಟರಿಷ್ಟರು, ಮದುವೆಯಾಗಿ ಹೋದ ಊರಿನ ಹೆಣ್ಣುಮಕ್ಕಳು, ಭಕ್ತರು, ಹರಕೆ ಹೊತ್ತವರು ಭಂಡಾರವನ್ನು ಹಾಕಿ ದೇವರ ದರ್ಶನ ಮಾಡಿ ಪ್ರಸಾದವನ್ನು ಸ್ವೀಕರಿಸಿದರು. ಬೆಳಿಗ್ಗೆ ದೇವ ಭಂಡಾರವನ್ನು ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವಾಲಯಕ್ಕೆ ತಂದು ಭಕ್ತರು ಹರಕೆ, ಕಾಣಿಕೆ ಒಪ್ಪಿಸಿದ ಬಳಿಕ ಹಬ್ಬ ಕೊನೆಗೊಳ್ಳುತ್ತಿದ್ದಂತೆಯೇ ಮತ್ತೆ ಊರಿನವರು ದೇವಭಂಡಾರವನ್ನು ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದರವರ ಮನೆಗೆ ತೆರಳಿ ದೇವಭಂಡಾರವನ್ನು ಒಪ್ಪಿಸುವುದರೊಂದಿಗೆ ಹಬ್ಬ ಕೊನೆಗೊಂಡಿತು.