ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ರಾಕಾಸಮ್ಮ ಹಾಗೂ ಚಿಕ್ಕಲೂರು ಸಿದ್ದಪ್ಪಾಜಿ ಕಂಡಾಯ ಮತ್ತು ಬಸವ ಕೊಂಡೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮದೇವತೆ ರಾಕಾಸಮ್ಮ ಹಬ್ಬದ ಪ್ರಯುಕ್ತ ಬುಧವಾರ ಮುಂಜಾನೆ ಗ್ರಾಮದ ಹೊರವಲಯದಲ್ಲಿರುವ ಆಂಜನೇಯನಪುರದ ದೇವಾಲಯದ ಬಳಿ ಕಂಡಾಯಗಳಿಗೆ ಹೊಂಬಾಳೆ ಧರಿಸಿ ನೀಲಗಾರರು ಕಂಡಾಯವನ್ನು ಹೆಗಲ ಮೇಲೆ ಹೊತ್ತುಕೊಂಡು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಗ್ರಾ.ಪಂ. ಆವರಣದಲ್ಲಿ ಕೊಂಡಮಾಳದಲ್ಲಿ ಹಾಕಿದ್ದ ಕೊಂಡಕ್ಕೆ ಚಿಕ್ಕಲೂರು ಅರ್ಚಕ ಶಿವಮೂರ್ತಿ ಪೂಜೆ ಸಲ್ಲಿಸಿದರು. ಆ ನಂತರ ಹೂ ಹೊಂಬಾಳೆ ಪೂಜೆ ನಂತರ ಕಂಡಾಯಗಳನ್ನು ಹೊತ್ತ ಭಕ್ತರು ಹಾಗೂ ಗ್ರಾಮದ ಬಸವ ಅಗ್ನಿಕೊಂಡವನ್ನು ನಿರಾಯಾಸವಾಗಿ ಹಾಯುವ ಮೂಲಕ ಎಲ್ಲರ ಗಮನ ಸೆಳೆದರು.
ಕೊಂಡಹಾಯುವ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಜೀವವನ್ನು ಲೆಕ್ಕಿಸದೆ ಶಾಲೆಯ ಹಾಗೂ ಗ್ರಾಪಂ ಕಟ್ಟಡಗಳನ್ನೇರಿ ಕುಳಿತಿದ್ದ ದೃಶ್ಯ ಕಂಡು ಬಂತು.