ಪುತ್ತೂರು: ಅಡಿಕೆ ಧಾರಣೆ ಏರಿಳಿತದ ಮಧ್ಯೆ ಕೇಂದ್ರ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕಳೆದ ಡಿಸೆಂಬರ್ ನಲ್ಲಿ ಹೊಸ ಚಾಲಿ ಅಡಿಕೆ ಖರೀದಿಗೆ ಬೆಂಬಲ ಬೆಲೆ ಘೋಷಿಸಿತ್ತು. ಆದರೆ ಈ ತನಕ ಬೆಳೆಗಾರನಿಗೆ ನಯಾ ಪೈಸೆ ಬೆಂಬಲ ಬೆಲೆ ಸಿಕ್ಕಿಲ್ಲ..!
2016 ಡಿ. 9 ಕ್ಕೆ ಕೇಂದ್ರ ಸರಕಾರ ಕೆಂಪಡಿಕೆ ಮತ್ತು ಚಾಲಿ ಅಡಿಕೆ ಸೇರಿ 40,000 ಟನ್ ಅಡಿಕೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ಪ್ರಕಟಿಸಿತ್ತು. ಅದಕ್ಕಾಗಿ 161 ಕೋ.ರೂ. ಬಿಡುಗಡೆಗೊಳಿಸಿರುವುದಾಗಿ ಹೇಳಿತ್ತು. ಪ್ರತಿ ಕೆ.ಜಿ. ಚಾಲಿ ಅಡಿಕೆಗೆ 251 ರೂ. ನೀಡಿ ಸಹಕಾರಿ ಸಂಸ್ಥೆಗಳ ಮೂಲಕ ಖರೀದಿಸುವ ಆಶ್ವಾಸನೆ ನೀಡಿತ್ತು. ಖರೀದಿಗೆ ಡಿಸೆಂಬರ್ 31 ಕೊನೆ ದಿನಾಂಕವೆಂದು ಹೇಳಿತ್ತು. ಆದರೆ ಅಂತಿಮ ದಿನದ ಗಡುವು ದಾಟಿದರೂ ಬೆಂಬಲ ಬೆಲೆ ಸಿಗಲಿಲ್ಲ. ಅನಂತರ ದಿನಾಂಕ ವಿಸ್ತರಿಸುವ ಭರವಸೆ ಸಿಕ್ಕಿದ್ದರೂ, ಅದು ಈಡೇರಲಿಲ್ಲ. ಅಂದರೆ ಬೆಂಬಲ ಬೆಲೆ ಘೋಷಣೆಗಷ್ಟೆ ಸೀಮಿತವೆಂಬ ಅನುಮಾನ ಮೂಡಿದೆ.
ನಂಬಿ ಕೆಟ್ಟ ಬೆಳೆಗಾರ
ಅಡಿಕೆ ಮಾರುಕಟ್ಟೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳ ಅಡಿಕೆ ಹೊಸ ಅಡಿಕೆ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತದೆ. ಜನವರಿ ಅನಂತರ ಹಳೆ ಅಡಿಕೆಯಾಗಿ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತದೆ. ಇನ್ನುಳಿದಂತೆ ಸಿಂಗಲ್ ಚೋಲ್, ಡಬ್ಬಲ್ ಚೋಲ್ ಅಡಿಕೆಗೆ ಮಾರುಕಟ್ಟೆಯಲ್ಲಿ ಪ್ರತ್ಯೇಕ ಧಾರಣೆ ಇರುತ್ತದೆ. ಈ ವರ್ಷ ಆರಂಭದಲ್ಲಿ ಹೊಸ ಅಡಿಕೆಗೆ 150-170 ರೂ. ಧಾರಣೆ ಇತ್ತು. ಆ ಸಂದರ್ಭ ಈ ಬೆಂಬಲ ಬೆಲೆ ನೀಡಿ ಅಡಿಕೆ ಖರೀದಿಸುತ್ತಿದ್ದರೆ ಬೆಲೆಗಾರರಿಗೆ ಅನುಕೂಲವಾಗುತಿತ್ತು. ಈಗ ಹೊಸ ಅಡಿಕೆ ಧಾರಣೆ 220 ರೂ.ನಲ್ಲಿದೆ. ಮಾರುಕಟ್ಟೆ ಮೂಲ ಪ್ರಕಾರ ಧಾರಣೆ ಇನ್ನೂ ಏರಿಕೆ ಕಾಣಲಿದೆ. ಇನ್ನು ಹೊಸ ಅಡಿಕೆ ಮಾರುಕಟ್ಟೆಗೆ ಬರುವುದು ಕಡಿಮೆ. ಅದು ಹಳೆ ಅಡಿಕೆಯಾಗಿಯೇ ಮಾರುಕಟ್ಟೆ ಪ್ರವೇಶಿಸುತ್ತದೆ. ಈಗಾಗಲೇ ಹಳೆ ಅಡಿಕೆ ಧಾರಣೆ 270 ಆಸುಪಾಸಿನಲ್ಲಿರುವ ಕಾರಣ, ಸರಕಾರ 251 ರೂ. ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿಸಿದರೆ ಬೆಳೆಗಾರನಿಗೆ ನಷ್ಟವಾಗುತ್ತದೆ. ಹಾಗಾಗಿ ಹೊಸ ಅಡಿಕೆಗೆ ಬೆಂಬಲ ಬೆಲೆ ಘೋಷಣೆ ಅನುಷ್ಠಾನಕ್ಕೆ ಬಂದರೂ ಪ್ರಯೋಜನವಿಲ್ಲ.
ಈಡೇರದ ಭರವಸೆ..!
ಕೇಂದ್ರ ಸರಕಾರ ಘೋಷಿಸಿದ ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿ ಪ್ರಕ್ರಿಯೆ ಕೊನೆ ದಿನಾಂಕ ಕಳೆದರೂ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಂದ್ರ ಸರಕಾರವು ರಾಜ್ಯ ಸರಕಾರದ ವೈಫಲ್ಯ ಅಂದರೆ, ರಾಜ್ಯ ಸರಕಾರ ಕೇಂದ್ರ ಸರಕಾರ ಬೆಂಬಲ ಬೆಲೆ ಹಣವನ್ನೇ ಬಿಡುಗಡೆ ಮಾಡಿಲ್ಲ ಅನ್ನುವ ಆರೋಪ-ಪ್ರತ್ಯಾರೋಪ ಮಾಡಿತ್ತು. ಕೇಂದ್ರ ವಾಣಿಜ್ಯ ಸಚಿವರು, ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿಯ ಅಂತಿಮ ದಿನ ವಿಸ್ತರಣೆಗೆ ಸಂಬಂಧಿಸಿ ರಾಜ್ಯ ಸರಕಾರಕ್ಕೆ ಸೂಚನೆ ನೀಡುವ ಭರವಸೆ ನೀಡಿದ್ದರು. ಅದು ಏನಾಯಿತು ಅನ್ನುವ ಮಾಹಿತಿ ಬೆಳೆಗಾರರಿಗೂ ಇಲ್ಲ, ಸಹಕಾರಿ ಸಂಸ್ಥೆಗಳಿಗೂ ತಿಳಿದಿಲ್ಲ.
ಹಳೆ ಅಡಿಕೆಗೆ ನೀಡಿ
ಅಡಿಕೆ ಬೆಳೆಗಾರನಿಗೆ ಸ್ಪಂದಿಸಬೇಕೆಂಬ ಪ್ರಾಮಾಣಿಕ ಕಾಳಜಿ ಇದ್ದರೆ, ಸರಕಾರಕ್ಕೆ ಈಗಲೂ ಕಾಲ ಮಿಂಚಿಲ್ಲ. ಬೆಳೆಗಾರರ ಬೇಡಿಕೆಯಂತೆ ಹಳೆ ಅಡಿಕೆಗೆ ಕೆ.ಜಿ.ಗೆ 316 ರೂ.ಬೆಂಬಲ ಬೆಲೆ ನೀಡಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಆಗ ಬೆಳೆಗಾರನಿಗೂ ತಕ್ಕ ಮಟ್ಟಿನ ನ್ಯಾಯ ಸಿಗಬಹುದು. ಅದು ಬಿಟ್ಟು ಬೆಂಬಲ ಬೆಲೆ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ರಾಜಕೀಯ ಸಮರದಿಂದ ಬೆಳೆಗಾರನಿಗೆ ಕಿಂಚಿತ್ತು ಲಾಭ ದೊರೆಯುವುದಿಲ್ಲ.
ಬೆಳೆಗಾರನ ಅಳಲು..!
ಕೇರಳದ ಅಡಿಕೆ ಮತ್ತು ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಡಿಕೆ ಉತ್ಪಾದನ ವೆಚ್ಚ ಕೆ.ಜಿ.ಗೆ 182 ರೂ. ಎಂದು ನಮೂದಿಸಿತ್ತು. ಬೆಳೆಗಾರನ ಲೆಕ್ಕದಲ್ಲಿ ಕನಿಷ್ಟ ಅಂದರೂ, ಈಗ ಒಂದು ಕೆ.ಜಿ. ಅಡಿಕೆಗೆ 350 ರೂ. ಉತ್ಪಾದನ ವೆಚ್ಚ ಇದೆ. ಎರಡು ವರ್ಷದ ಹಿಂದೆ ರೈತ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ 1 ಕೆ.ಜಿ. ಅಡಿಕೆಗೆ 316.15 ರೂ. ಉತ್ಪಾದನ ವೆಚ್ಚವಿತ್ತು. ಹೀಗಿದ್ದರೂ ತಳಮಟ್ಟದಲ್ಲಿ ಅಧ್ಯಯನ ಮಾಡದೆ ಸಲ್ಲಿಸಿದ ವರದಿ ಆಧರಿಸಿ ಕೇವಲ 182 ರೂ. ಉತ್ಪಾದನ ವೆಚ್ಚ ನಿರ್ಧರಿಸಲಾಗಿದೆ ಎಂಬ ಆರೋಪ ಬೆಳೆಗಾರನದ್ದು. ಅಡಿಕೆಗೆ ಸ್ಥಿರ ಧಾರಣೆ ಇಲ್ಲ. ಅದರ ಉತ್ಪಾದನೆಗೆ ಬೇಕಾದ ಎಲ್ಲಾ ಕಚ್ಛಾವಸ್ತುಗಳ ಧಾರಣೆ ದುಬಾರಿಯಾಗಿದೆ. ತೋಟಕ್ಕೆ ಬಳಸುವ ಔಷಧ ಪದಾರ್ಥಗಳ ಧಾರಣೆ ಗಗನಕ್ಕೇರುತ್ತಿದೆ. ಕೊಳೆರೋಗ, ಹಳದಿರೋಗದಂತಹ ಸಾಲು-ಸಾಲು ರೋಗಗಳಿಗೆ ನ್ಯಾಯಯುತ ಪರಿಹಾರ ಸಿಕ್ಕಿಲ್ಲ. ಅಡಿಕೆ ಮಂಡಳಿ ಸ್ಥಾಪನೆಗೂ ಪ್ರಯತ್ನ ಆಗಿಲ್ಲ. 2007 ರಲ್ಲಿ ಸ್ವಾಮಿನಾಥನ್ ಆಯೋಗ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಪ್ರತಿ ಬೆಳೆಯ ಉತ್ಪಾದನ ವೆಚ್ಚಕ್ಕಿಂತ ಒಂದುವರೆ ಪಟ್ಟು ಅಕ ಮಾರುಕಟ್ಟೆ ಬೆಲೆ ನಿಗದಿ ಆಗಬೇಕು ಎಂದಿತ್ತು. ಹಾಗಾಗಿ ಇಲ್ಲಿ 350 ರೂ. ನಿಜವಾದ ಉತ್ಪಾದನ ವೆಚ್ಚವನ್ನು ಸರಕಾರಕ್ಕೆ ಸಲ್ಲಿಸಿದರೆ, ಮಾರುಕಟ್ಟೆಯಲ್ಲಿ ಅದರ ಒಂದುವರೆ ಪಟ್ಟು ಧಾರಣೆ ಕೊಟ್ಟು ಅಡಿಕೆ ಖರೀದಿಸಬೇಕು. ಹಾಗಾಗಿ ಸರಕಾರ ಕಡಿಮೆ ಉತ್ಪಾದನ ವೆಚ್ಚವನ್ನೇ ಒಪ್ಪಿಕೊಂಡು ತಂತ್ರಗಾರಿಕೆ ಮಾಡಿದೆ..!
ಎಲ್ಲಿ ಹೋಯಿತು ಹಣ
ಚಾಲಿ ಅಡಿಕೆ ಮತ್ತು ಕೆಂಪಡಿಕೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರಕಾರ 161 ಕೋ.ರೂ. ಹಣ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆ ಹಣ ಎಲ್ಲಿ ಹೋಯಿತು., ಹೊಸ ಅಡಿಕೆಗೆ 251 ರೂ. ಧಾರಣೆ ನೀಡಿ ಖರೀದಿಸುವ ಭರವಸೆ ಏನಾಗಿದೆ..? ಇಲ್ಲಿಯ ತನಕ ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿಸಿಲ್ಲ. ಇಲ್ಲಿ ಸರಕಾರಗಳು ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ.
-ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ರಾಜ್ಯ ಕಾರ್ಯದರ್ಶಿ, ರೈತಸಂಘ ಮತ್ತು ಹಸಿರುಸೇನೆ