ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಾಫಿ ಹೂ ಬಿಟ್ಟಿದ್ದು, ಕಾಫಿ ತೋಟದ ಪರಿಸರದಲ್ಲಿ ಪರಿಮಳ ಬೀರುತ್ತಿದೆ. ಮಲೆನಾಡು ಭಾಗದ ಎಲ್ಲಾ ಕಾಫಿ ತೋಟಗಳಲ್ಲಿ ಪ್ರಸ್ತುತ ಮೊಸರು ಚೆಲ್ಲಿದ ಅನುಭವ ಕಂಡು ಬರುತ್ತಿವೆ.
ಕಳೆದ ವಾರ ಮಲೆನಾಡು ಭಾಗದಲ್ಲಿ ಈ ವರ್ಷದ ಪ್ರಥಮ ಮಳೆ ಬಿದ್ದಿದೆ. ಅತೀ ಹೆಚ್ಚು ಭಾರತಿಬೈಲು ಕನ್ನಗೆರೆಯಲ್ಲಿ ಸುಮಾರು 5 ಇಂಚು ಮಳೆಯಾಗಿದ್ದರೆ, ತಳವಾರ, ಕುಂದೂರು ಭಾಗದಲ್ಲಿ 2.5 ಇಂಚು ಮಳೆ ಬಿದ್ದಿದೆ. ಗುತ್ತಿ ಹೆಸಗೂಡು ಭಾಗದಲ್ಲಿ 2 ಇಂಚು, ಪಟ್ಟದೂರು ಮತ್ತು ದಾರದಹಳ್ಳಿ ಭಾಗದಲ್ಲಿ 1 ಇಂಚು ಮಳೆ ಬಿದ್ದಿದ್ದು, ನೀರಿಲ್ಲದೆ ಬರಡಾಗಿದ್ದ ಭೂಮಿ ತಂಪೆರೆದಿದೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ಬಿದ್ದಿರುವ ಈ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂ ಅರಳಲು ಪ್ರಮುಖ ಕಾರಣವಾಗಿದೆ. ಕೊಪ್ಪ ಬಾಳೆಹೊನ್ನೂರು, ಮಾಗುಂಡಿ, ಜಯಪುರ, ಎನ್.ಆರ್.ಪುರ, ಶೃಂಗೇರಿ, ಕಿಗ್ಗ, ಚಿಕ್ಕಮಗಳೂರು, ಆಲ್ದೂರು, ವಸ್ತಾರೆ, ಕಡಬಗೆರೆ ಭಾಗಗಳಲ್ಲಿ 2 ರಿಂದ 3 ಇಂಚು ಮಳೆಯಾಗಿದೆ.
ಮಳೆ ಇಳೆ ಸೋಕುತ್ತಿದ್ದಂತೆ ಬೇಸಗೆಯ ಧಗೆ ಕೊಂಚ ಮಟ್ಟಿಗೆ ಕಡಿಮೆಯಾದಂತಾಗಿದೆ. ಕುಡಿಯುವ ನೀರಿಗೆ ಆಕ್ರಂದನ ಮುಗಿಲು ಮುಟ್ಟುತ್ತಿರುವ ಸಮಯದಲ್ಲಿ ಧರೆಗಿಳಿದ ಮಳೆ ಈ ಬಾರಿ ಬರಗಾಲದ ಛಾಯೆ ಆವರಿಸಿರುವ ಮಲೆನಾಡು ಭಾಗದಲ್ಲಿ ಮರುಭೂಮಿಯಲ್ಲಿ ಓಯಸಿಸ್ ಒಸರಿದ ಅನುಭವವನ್ನು ತಂದುಕೊಟ್ಟಿದೆ. ರೋಬಸ್ಟಾ ಕಾಫಿ ಗಿಡದಲ್ಲಿ ಹೂವು ಅರಳುತ್ತಿದ್ದು, ಅರೇಬಿಕಾ ತಳಿಯ ಕಾಫಿ ಗಿಡಗಳಲ್ಲಿನ ಮೊಗ್ಗುಗಳು ಅರಳಲಾರಂಭಿಸಿದೆ. ಸಣ್ಣ ಬೆಳೆಗಾರರು ಮತ್ತು ರೈತರು ಸ್ಪೀಕ್ಲರ್ ಮಾಡಬೇಕಾದ ಸಮಯದಲ್ಲಿ ಹೇಳಿಕೊಂಡಂತೆ ಬಂದಿರುವ ಈ ಮಳೆಯಿಂದಾಗಿ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಒಣಗುತ್ತಿದ್ದ ಕಾಫಿ ತೋಟಕ್ಕೆ ನೀರಾಯಿಸುತ್ತಿದ್ದರಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿತ್ತು. ಮೋಟಾರು, ಪಂಪ್ಗಳನ್ನು ತಾಲೂಕು ಆಟಳಿತ ಮಟ್ಟಗೋಲು ಹಾಕುತ್ತಿದ್ದು, ರೈತರಲ್ಲಿ ಆತಂಕಕ್ಕೆ ಕಾರಣವಾಗಿತ್ತು.