ಚಾಮರಾಜನಗರ: ಯಳಂದೂರು ತಾಲೂಕಿನಲ್ಲಿರುವ ಬಿಳಿಗಿರಿರಂಗನಬೆಟ್ಟದತ್ತ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಪ್ರವೇಶ ನಿಷೇಧಿಸಿರುವುದು ಕಾರಣ ಎನ್ನಲಾಗುತ್ತಿದೆ.
ಮಾರ್ಚ್ 18ರಿಂದ ಎರಡು ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಪೂಜೆ ಸಲ್ಲಿಸಲು ದೇವರ ಪ್ರತಿರೂಪವನ್ನು ದೇವಾಲಯದ ಬಳಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಇಲ್ಲಿ ಪೂಜೆಯನ್ನು ಮಾಡಿಸಿಕೊಂಡು ಹೋಗಬಹುದಾಗಿದೆ. ಆದರೆ ಸಮರ್ಪಕವಾದ ಮಾಹಿತಿ ಭಕ್ತರಿಗೆ ದೊರೆಯದ ಕಾರಣ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಮಾಹಿತಿ ಹೊರಬಂದಲ್ಲಿಂದಲೇ ಭಕ್ತರು ಅತ್ತ ತೆರಳುತ್ತಿಲ್ಲ. ಇದರಿಂದಾಗಿ ಬಿಳಿಗಿರಿರಂಗನಬೆಟ್ಟದಲ್ಲಿ ಪ್ರವಾಸಿಗರ ನೂಕುನುಗ್ಗಲು ಕಂಡು ಬರುತ್ತಿಲ್ಲ.
ಇದಕ್ಕೂ ಮೊದಲು ಸದಾ ಭಕ್ತರ ದಂಡು ಇಲ್ಲಿ ನೆರೆಯುತ್ತಿತ್ತು. ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಕೆಲವು ದಿನಗಳಿಂದ ಇಲ್ಲಿಗೆ ಆಗಮಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ರಾಜ್ಯ ಪ್ರಾಚ್ಯವಸ್ತು ಇಲಾಖೆಯ ವತಿಯಿಂದ 2.40 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಜೀರ್ಣೋದ್ಧಾರ ಕಾರ್ಯ ಮುಗಿಯ ಬೇಕಾದರೆ ಸುಮಾರು 24 ತಿಂಗಳು ಬೇಕಾಗಬಹುದು. ಹೀಗಾಗಿ ದೇವಾಲಯವನ್ನು ಮುಚ್ಚಿ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ದೇವಾಲಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿರುವ ಕಾರಣ ಇಲ್ಲಿ ವ್ಯಾಪಾರ ವಹಿವಾಟುಗಳು ಸಂಪೂರ್ಣ ಇಳಿಮುಖವಾಗಿದೆ. ಇದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.
ಇನ್ನು ಕೆಲವರ ಪ್ರಕಾರ ಮಕ್ಕಳಿಗೆ ಪರೀಕ್ಷಾ ಸಮಯವಾಗಿರುವುದರಿಂದ ಪ್ರವಾಸಿಗರು ಬರುತ್ತಿಲ್ಲ. ಪರೀಕ್ಷೆ ಮುಗಿದ ಬಳಿಕ ಪ್ರವಾಸ ಬರುವವರ ಸಂಖ್ಯೆ ಹೆಚ್ಚಳವಾಗಲಿದೆ. ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವವರು ಒಂದೆಡೆಯಾದರೆ ಮತ್ತೊಂದೆಡೆ ಬಿಳಿಗಿರಿರಂಗನಬೆಟ್ಟದ ಸೌಂದರ್ಯವನ್ನು ಸವಿಯಲು ಬರುವವರೂ ಇರುವುದರಿಂದಾಗಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ಇಲ್ಲಿನವರು ಮಾಡುತ್ತಿದ್ದಾರೆ. ದೇವಾಲಯದ ಜೀರ್ಣೋದ್ದಾರದ ಹಿನ್ನಲೆಯಲ್ಲಿ ಮೂಲದೇವರ ಬಾಗಿಲು ಮುಚ್ಚಲಾಗಿದೆ ಅಷ್ಟೆ. ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವವರಿಗೇನು ತೊಂದರೆಯಿಲ್ಲ. ಜತೆಗೆ ಪೂಜೆ ಮಾಡಿಸುವ ಭಕ್ತರಿಗಾಗಲೀ, ಪ್ರಾರ್ಥನೆಗಾಗಲೀ ಯಾವುದೇ ತೊಂದರೆಯಾಗದಂತೆ ಮಾದರಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದು ಹೆಚ್ಚಿನವರಿಗೆ ತಿಳಿಯದ ಕಾರಣ ದೇವಾಲಯ ಮುಚ್ಚಿದೆ ಎಂಬ ತಪ್ಪು ಕಲ್ಪನೆಯಿಂದ ಇಲ್ಲಿಗೆ ಬರುತ್ತಿಲ್ಲ.
ಮೊದಲೆಲ್ಲ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಬಸ್ ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವಾದರೂ ಇದೀಗ ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿವೆ. ಮುಂದಿನ ದಿನಗಳಲ್ಲಿ ಪ್ರವಾಸಿಗರು ಮತ್ತೆ ಇತ್ತ ಎಂದಿನಂತೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.