ಮಡಿಕೇರಿ: ಕೊಡಗಿನಲ್ಲಿ ನಡೆಯುವ ಗ್ರಾಮದೇವತೆ ಹಬ್ಬಗಳಲ್ಲಿ ಒಂದಾದ ಚೆಟ್ಟಳ್ಳಿಯ ಈರಳೆ ಗ್ರಾಮದ ಪೊವ್ವೋದಿ(ಭಗವತಿ) ಉತ್ಸವವು ಸೋಮವಾರದಿಂದ(ಮಾ.27) ಆರಂಭಗೊಂಡಿದ್ದು ಬುಧವಾರ(ಮಾ.29)ರಂದು ಸಮಾರೋಪಗೊಳ್ಳಲಿದೆ.
ಈ ಹಬ್ಬವನ್ನು ಊರವರೆಲ್ಲ ಸೇರಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯದಂತೆ ಹಬ್ಬದ ದಿನದಂದು ದೇವತಕ್ಕ ಹಾಗೂ ಭಂಡಾರತಕ್ಕರಾದ ಪೊರಿಮಂಡ ನಾಣಯ್ಯನವರ ಮನೆಯಿಂದ ದುಡಿಕೊಟ್ಟ್ ಹಾಡಿನೊಂದಿಗೆ ಅದ್ಧೂರಿ ಮೆರವಣಿಗೆಯೊಂದಿಗೆ ದೇವರಭಂಡಾರ ಎತ್ತು ಪೋರಾಟದೊಂದಿಗೆ ದೇವಾಲಯಕ್ಕೆ ತರುತ್ತಾರೆ. ಬಳಿಕ ಮೇದರ ಪರೆಯ ಹೊಡೆತಕ್ಕೆ ಹಾಗೂ ದುಡಿಕೊಟ್ಟ್ ಹಾಡಿಗೆ ಸರಿಯಾಗಿ ಕೊಡಗಿನ ಸಂಪ್ರದಾಯದ ಬಿಳಿಯ ಕುಪ್ಯಚ್ಯಾಲೆಯನ್ನು ಧರಿಸಿದ ದೇವತಕ್ಕರು, ಊರುತಕ್ಕರು ಸರತಿ ಸಾಲಿನಲ್ಲಿ ದೇವಾಲಯ ಮತ್ತು ಬೊಳಕ್ ಮರದ ಸುತ್ತಲೂ ಬೊಳಕಾಟ್, ಚೌರಿಆಟ್ ನ ನೃತ್ಯ ಮಾಡಿ ದೇವರನ್ನು ಕೊಂಡಾಡುತ್ತಾರೆ.
ಇದಾದ ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರಿಗೆ ಭಂಡಾರ ಹಾಕಲಾಗುತ್ತದೆ. ಇದೇ ಸಂದರ್ಭ ಕೆಲವರು ತಾವು ಮಾಡಿಕೊಂಡಿದ್ದ ಹರಕೆಯನ್ನು ಅರ್ಪಿಸಿ ದೇವರ ಪ್ರಸಾದ ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲ ಹಬ್ಬದ ಅಂಗವಾಗಿ ದೇವರ ಕೋಲವೂ ನಡೆಯುತ್ತದೆ.
ಉತ್ಸವದ ವಿಶೇಷತೆಗಳು
ಈ ಬಾರಿ ಮಾರ್ಚ್ 23ರಂದು ಸಂಜೆ 8ಕ್ಕೆ ಊರಿನ ದೇವತಕ್ಕ, ಊರು ತಕ್ಕ ಹಾಗೂ ಊರಿನವರೆಲ್ಲ ಸೇರಿ ತಕ್ಕರ ದೇವರನಡೆಯಲ್ಲಿ ಬೇಡಿಕೊಂಡು ದೇವರಗರ್ಭ ಗುಡಿಯಿಂದ ಸಾಂಪ್ರದಾಯಿಕ ದುಡಿಕೊಟ್ಟ್ ಹಾಡಿನೊಂದಿಗೆ ದೇವರಜ್ಯೋತಿಯನ್ನು ತೆಗೆದು ಬೊಳಕ್ (ದೀಪ)ಸ್ಥಂಬದಲ್ಲಿಟ್ಟು, ದೇವಾಲಯದ ಹಬ್ಬದ ಕಟ್ಟನ್ನು ಹಾಕಲಾಯಿತು. ಹಬ್ಬದ ಕಟ್ಟು ಬಿದ್ದಲ್ಲಿಂದ ಹಬ್ಬ ಆರಂಭವಾಗುವರೆಗೆ ಪ್ರತಿದಿನ ಪ್ರಾತಃಕಾಲದಲ್ಲಿ ಎದ್ದು ದೇವರ ದೀಪದ ಮುಂದೆ ಊರಿನವರು ಬೊಳಕಾಟ್ ನೃತ್ಯವನ್ನು ಮಾಡಲಾಯಿತು. ಮಾ.27ರಂದು ಪ್ರಧಾನ ಉತ್ಸವವಾಗಿದ್ದರಿಂದ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಸಿಂಗಾರಗೊಳಿಸಿ ಊರವರೆಲ್ಲ ಸೇರಿ ಭಂಡಾರವನ್ನು ಭಂಡಾರ ತಕ್ಕರಾದ ಪೊರಿಮಂಡ ನಾಣಯ್ಯನವರ ಮನೆಯಿಂದ ದುಡಿಕೊಟ್ಟ್ ಹಾಡಿನೊಂದಿಗೆ ಮೆರವಣಿಗೆಯ ಮೂಲಕ ತರಲಾಯಿತು. ಸಂಜೆ4ಕ್ಕೆ ಪೊವ್ವೋದಿಗೆ ಎತ್ತು ಪೋರಾಟದ ಮೂಲಕ ಭಕ್ತಿಯನ್ನು ದೇವರಿಗೆ ಅರ್ಪಿಸಿದರೆ, ಭದ್ರಕಾಳಿಗೆ ಮೇದರ ಪರೆಯ ಹೊಡೆತಕ್ಕೆ ಸರಿಯಾಗಿ ಕೊಡಗಿನ ಸಂಪ್ರದಾಯದ ಬಿಳಿಯ ಕುಪ್ಯಚ್ಯಾಲೆಯನ್ನು ಧರಿಸಿದ ದೇವತಕ್ಕರು ಊರಿನತಕ್ಕರು ಹಾಗೂ ಊರಿನವರು ಸರತಿ ಸಾಲಿನಲ್ಲಿ ದೇವಾಲಯದ ಸುತ್ತಲೂ ಬೊಳಕಾಟ್ ಹಾಗೂ ಚೌರಿಆಟ್ ನೃತ್ಯ ಮಾಡಿ ದೇವರನ್ನು ಕೊಂಡಾಡಿದರು. ಮಾರ್ಚ್ 27ರ ರಾತ್ರಿ ಪರದೇವರ ದೇವನೆಲೆಯಲ್ಲಿ ಸಂಪ್ರದಾಯದಂತೆ ಪೂಜೆಸಲ್ಲಿಸಿ 28ರ ಬೆಳಗ್ಗೆ 10ಗಂಟೆಗೆ ದೇವಕೋಲದೊಂದಿಗೆ ದೇವನೆಲೆಗೆ ಬಂದು ಜನರಿಗೆ ಆಶೀರ್ವಾದ ನೀಡಿ ದೇವರಿಗೆ ಪೂಜೆ ಪುರಸ್ಕಾರ ಹಾಗೂ ಹಾರ ನೀಡಿ ದೇವರ ಪ್ರಸಾದವನ್ನೆಲ್ಲ ಸೇವಿಸಿದ ನಂತರ ಪಟ್ಟಣಿಯ ಕಟ್ಟುಪಾಡನ್ನು ಮುರಿಯಲಾಯಿತು.
ಹಬ್ಬದ ಸಮಾರೋಪ
ಮಾ.29ರಂದು ಸಂಜೆ ಬೊಳಕ್ ಮರ ತೆಗೆಯುವ ಸಂಪ್ರದಾಯದಂತೆ ದೀಪಸ್ತಂಬದಲ್ಲಿ ಇಟ್ಟಂತಹ ದೀಪವನ್ನು ದುಡಿಕೊಟ್ಟ್ ಹಾಡಿನೊಂದಿಗೆ ತೆಗೆದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಗುವುದು. ನಂತರ ಊರವರೆಲ್ಲ ಸೇರಿ ದುಡಿಕೊಟ್ಟ್ ಹಾಡಿನೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ದೇವರ ಭಂಡಾರವನ್ನು ದೇವತಕ್ಕ ಹಾಗೂ ಭಂಡಾರ ತಕ್ಕರಾದ ಪೊರಿಮಂಡ ನಾಣಯ್ಯನವರ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿಡಲಿದ್ದಾರೆ. ತಕ್ಕರ ಮರ್ಯಾದೆಯಂತೆ ಬಂದ ಊರಿನವರಿಗೆಲ್ಲ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಅಲ್ಲಿಗೆ ಹಬ್ಬವು ಮುಕ್ತಾಯಗೊಳ್ಳಲಿದೆ.
ಹಬ್ಬ ನಡೆಯುವ ದೇಗುಲದ ಇತಿಹಾಸ
ಚೆಟ್ಟಳ್ಳಿ ಎಂಬಲ್ಲಿಂದ 5 ಕಿಮೀ ದೂರದಲ್ಲಿರುವ ಈರಳೆ ಗ್ರಾಮದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಇದಕ್ಕೆ ಸುಮಾರು ಮೂರು ಶತಮಾನಗಳ ಇತಿಹಾಸವಿದೆ. ಕೊಡಗಿನ ಕುಲದೇವರಾದ ಇಗ್ಗುತಪ್ಪ ಹಾಗೂ ಕಾವೇರಿಗೆ ನಿಕಟ ಸಂಬಂಧವಿರುವುದನ್ನು ಕಾಣಬಹುದು. ಕಾವೇರಿ ತಾಯಿಯ ಮಾರ್ಗದರ್ಶನದಂತೆ ನೂರ್ಕೋಲ್ ಬೆಟ್ಟದ ಮೇಲಿಂದ ಮೂರು ಬಾಣಬಿಡಲಾಯಿತು. ಬಾಣಬಿದ್ದ ಜಾಗದಲ್ಲಿ ಮೂವರು ಸಹೋದರಿಯರು ನೆಲೆ ನಿಂತರು. ಈ ಪೈಕಿ ಮೊದನೆಯವಳು ಚೇರಳ ಗ್ರಾಮದಲ್ಲಿ, ಎರಡನೆಯವಳು ಶ್ರೀಮಂಗಲ ಗ್ರಾಮದಲ್ಲಿ, ಮೂರನೆಯವಳು ಈರಳೆ ಗ್ರಾಮದಲ್ಲಿ ನೆಲೆ ನಿಂತ ದೇವರೇ ಈರಳೆ ಪೊವ್ವೋದಿ(ಭಗವತಿ). ಈ ದೇವಾಲಯದಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಉತ್ಸವ ನಡೆಯುತ್ತದೆ.