ಸುಳ್ಯ: ಪ್ರತಿ ವರ್ಷ ಎದುರಾಗುವ ನೀರಿನ ಬವಣೆಯನ್ನು ದೂರ ಮಾಡಿ ನಾಡನ್ನು ಬರದಿಂದ ಪಾರು ಮಾಡಲು ಹೊಳೆಗೆ ನಿರ್ಮಿಸಿದ ಕಟ್ಟವೊಂದು ಜಲಸಮೃದ್ಧಿಯನ್ನು ಹೆಚ್ಚಿಸಿದೆ. ಕಟ್ಟವು ನೀಡಿದ ಜಲ ಸಮೃದ್ಧಿಯ ಪ್ರೇರಣೆಯು ಒಂದು ಶಾಶ್ವತ ಕಿಂಡಿ ಅಣೆಕಟ್ಟನ್ನು ನಿರ್ಮಿಸುವತ್ತ ಜನರ ಚಿತ್ತ ಹರಿಸಿದೆ. ಇವರ ಪ್ರಯತ್ನಕ್ಕೆ ಶಾಸಕರೂ ಸಾಥ್ ನೀಡಿದಾಗ ಅದು ನಾಡಿಗೇ ಸಂತಸದ ಜಲಧಾರೆಯಾಗಿದೆ. ಜಲ ಸಂರಕ್ಷಣೆಯ ಈ ಭಗೀರಥ ಪ್ರಯತ್ನ ನಡೆದಿರುವುದು ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಪಂಜ ಸಮೀಪದ ಅಡ್ಕ ಎಂಬಲ್ಲಿ. ಕುಮಾರಧಾರಾ ನದಿಯ ಉಪ ಹೊಳೆಯಾದ ಪಂಜ ಹೊಳೆಗೆ ಸುಮಾರು ಒಂದೂವರೆ ತಿಂಗಳ ಹಿಂದೆ ನಿರ್ಮಿಸಲಾದ ಕಟ್ಟವು ಪ್ರದೇಶದಲ್ಲಿ ಜಲಧಾರೆಯನ್ನು ಹೆಚ್ಚಿಸಿ ನೀರಿನ ಬವಣೆಯನ್ನು ತಪ್ಪಿಸಲು ಸಹಕಾರಿಯಾಗಿದೆ.
ಜಲ ಸಂರಕ್ಷಣೆಯ ಯಶೋಗಾಥೆ:
ಸಾಮಾನ್ಯವಾಗಿ ಪಂಜ ಹೊಳೆಯಲ್ಲಿ ಮಾರ್ಚ್ ಕೊನೆಯವರೆಗೆ ನೀರಿನ ಹರಿವು ಇರುತ್ತದೆ. ಆದರೆ ಕಳೆದ ಕೆಲವು ವರ್ಷದಿಂದ ಫೆಬ್ರವರಿ ತಿಂಗಳಾಗುವಾಗಲೇ ಒಳ ಹರಿವು ನಿಂತು ಹೋಗಿ ಹೊಳೆ ಸಂಪೂರ್ಣ ಬತ್ತಿ ಹೋಗುತ್ತಿತ್ತು. ಇದರಿಂದ ಸಮೀಪ ಪ್ರದೇಶದಲ್ಲಿ ಕುಡಿಯಲು ಮತ್ತು ಕೃಷಿಗೆ ನೀರಿನ ತತ್ವಾರ ಉಂಟಾಗಿ ಬರಗಾಲ ಆವರಿಸಿಕೊಳ್ಳುತ್ತಿತ್ತು. ನೀರಿನ ಅಭಾವವನ್ನು ಪರಿಹರಿಸಲು ಕೆಲವರು ಕೊಳವೆ ಬಾವಿಯನ್ನು ಕೊರೆದರೂ ಅದರಲ್ಲಿಯೂ ನೀರಿನ ಲಭ್ಯತೆ ಅಷ್ಟಕ್ಕಷ್ಟೇ. ಹಲವು ಕಡೆ ಅದು ವಿಫಲವಾಗಿ ಹೋಗುತ್ತಿತ್ತು. ಈ ಹಿನ್ನಲೆಯಲ್ಲಿ ಯೋಚನೆ ನಡೆಸಿ ಅಡ್ಕ ಜಯರಾಮ ಭಟ್ ಅವರ ನೇತೃತ್ವದಲ್ಲಿ ಪಂಜ ಹೊಳೆಗೆ ಕಟ್ಟವನ್ನು ನಿರ್ಮಿಸಲಾಯಿತು. ಕಲ್ಲು ಮತ್ತು ಮರದ ದಿಮ್ಮಿಗಳನ್ನು ಅಡ್ಡ ಹಾಕಿ ಅಲ್ಲಿ ಮರಳು ತುಂಬಿ ಹಳೆಯ ಟಾರ್ಪಲ್ ಗಳನ್ನು ಹಾಕಿ ಸುಮಾರು ಏಳು ಅಡಿ ಎತ್ತರದಲ್ಲಿ ಕಟ್ಟವನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಲಾಯಿತು.
ಕಟ್ಟ ಕಟ್ಟಿದಾಗ ಆರಂಭದಲ್ಲಿ ಹೊಳೆಯಲ್ಲಿ ಸುಮಾರು ಒಂದೂವರೆ ಕಿ.ಮಿ.ದೂರಕ್ಕೆ ಐದು ಅಡಿಯಷ್ಟು ನೀರು ಶೇಖರಣೆಯಾಯಿತು. ಮಾರ್ಚ್ ಅರ್ಧದವರಿಗೂ ಅರ್ಧ ಕಿ.ಮಿ.ವರೆಗೂ ಐದು ಅಡಿಯಷ್ಟು ನೀರಿತ್ತು. ಇದೀಗ ಒಂದೆರಡು ಮಳೆ ಬಂದ ನಂತರವಂತೂ ನೀರಿನ ಶೇಖರಣೆ ಇನ್ನಷ್ಟು ಹೆಚ್ಚಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬತ್ತಿ ಬರಡಾಗುತ್ತಿದ್ದ ಹೊಳೆ, ಸಮೀಪದ ಕೆರೆ, ಬಾವಿ, ಮತ್ತಿತರ ನೀರಿನ ಮೂಲಗಳು ಕಟ್ಟ ಹಾಕಿದ ಕಾರಣ ಬತ್ತಿಲ್ಲ ಎಂದು ಕೃಷಿಕರು ಸಾಕ್ಷೀಕರಿಸುತ್ತಾರೆ. ಕೃಷಿಗೆ ನೀರುಣಿಸಲು, ಕುಡಿಯುವ ನೀರಿಗೆ ಈ ಬಾರಿ ಸಮಸ್ಯೆ ಬಂದಿಲ್ಲ ಎನ್ನುತ್ತಾರೆ ಅಡ್ಕ ಜಯರಾಮ ಭಟ್ ಅವರ ಪುತ್ರ ಉದಯಶಂಕರ ಎಂ. ಸುಮಾರು 20 ವರ್ಷಗಳ ಹಿಂದೆ ಇಲ್ಲಿ ಕಟ್ಟ ನಿರ್ಮಿಸಲಾಗುತ್ತಿತ್ತು. ಆದರೆ ಬಳಿಕ ಕಟ್ಟ ನಿರ್ಮಿಸುವ ಪರಿಪಾಠ ನಿಂತು ಹೋಗಿತ್ತು. ಇದೀಗ ಮತ್ತೆ ಕಟ್ಟದ ಮೂಲಕ ಜಲ ಸಮೃದ್ಧಿಯನ್ನು ಮರಳಿ ಪಡೆಯಲು ಸಾಧ್ಯವಾಗಿದೆ.
ಶಾಶ್ವತ ಕಿಂಡಿ ಅಣೆಕಟ್ಟಿಗೆ ಯೋಜನೆ: ಶಾಸಕರ ಸಾಥ್
ತಾತ್ಕಾಲಿಕ ಕಟ್ಟದ ಜಲ ಸಮೃದ್ಧಿಯಿಂದ ಪ್ರೇರೇಪಿತರಾಗಿ ಇಲ್ಲೊಂದು ಶಾಶ್ವತ ಕಿಂಡಿ ಅಣೆಕಟ್ಟು ನಿರ್ಮಿಸಿದರೆ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಕಲ್ಪನೆ ಉಂಟಾಗಿ ಅದಕ್ಕಾಗಿನ ಪ್ರಯತ್ನವನ್ನು ಆರಂಭಿಸಲಾಯಿತು. ಎಂ.ಉದಯಶಂಕರ ಅಡ್ಕ, ಪ್ರಕಾಶ್ ಜಾಕೆ ಮತ್ತಿತರರ ನೇತೃತ್ವದಲ್ಲಿ ಲಿಗೋಧರ ಆಚಾರ್ಯ, ಲೋಕೇಶ್ ಬರೆಮೇಲು ಮತ್ತಿತರರ ಸಹಕಾರದೊಂದಿಗೆ ಪ್ರದೇಶದ ಮನೆ ಮನೆಗೆ ತೆರಳಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ ಸರ್ಕಾರವನ್ನು ಒತ್ತಾಯಿಸಲು ಸಹಿ ಸಂಗ್ರಹ ಕಾರ್ಯ ನಡೆಸಿದರು. ಅರ್ಜಿಯನ್ನು ತಯಾರಿಸಿ ಸುಮಾರು 150ಕ್ಕೂ ಹೆಚ್ಚು ಮಂದಿಯ ಸಹಿಯನ್ನು ಹಾಕಿ ಶಾಸಕ ಎಸ್.ಅಂಗಾರರಿಗೆ ಸಲ್ಲಿಸಲಾಯಿತು. ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಂಗಾರ ಕಟ್ಟ ಮತ್ತು ಜಲ ಸಂರಕ್ಷಣೆಯ ಮಾದರಿಯನ್ನು ನೋಡಿ ಶ್ಲಾಘನೆ ವ್ಯಕ್ತಪಡಿಸಿದರು. ಬಳಿಕ ಇಲ್ಲಿ ಶಾಶ್ವತ ಕಿಂಡಿ ಅಣೆಕಟ್ಟು ನಿರ್ಮಿಸುವ ಭರವಸೆಯನ್ನು ನೀಡಿದ್ದಾರೆ. ಕಿಂಡಿ ಅಣೆಕಟ್ಟು ನಿರ್ಮಿಸಿ ಸಮೀಪದ ಪ್ರದೇಶಗಳಿಗೆ ಕುಡಿಯುವ ನೀರಿನ ಮತ್ತು ಕೃಷಿಗೆ ನೀರು ಒದಗಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕಟ್ಟಕ್ಕೆ ಕೇರಳ ಮಾದರಿ:
ಬೇಸಿಗೆಯಲ್ಲಿ ನದಿ, ತೊರೆ, ಝರಿಗಳಲ್ಲಿ ಹರಿದು ವ್ಯರ್ಥವಾಗುವ ನೀರನ್ನು ಸಂಗ್ರಹಿಸಲು ಕೇರಳ ರಾಜ್ಯದಲ್ಲಿ ನಡೆಸಿದ ಆಂದೋಲನ ಮಾದರಿಯಾಗಿದೆ. `ಹಸಿರು ಕೇರಳ’ ಯೋಜನೆಯನ್ನು ತಯಾರಿಸಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸೇರಿಸಿ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಲಾಗಿದೆ. ಕಲ್ಲು, ಮಣ್ಣು, ಮರಳು ಮತ್ತಿತರ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ಕೇರಳ ರಾಜ್ಯದಾದ್ಯಂತ ಎಲ್ಲೆಡೆ ಕಟ್ಟಗಳನ್ನು ನಿರ್ಮಿಸಿ ನೀರನ್ನು ತಡೆ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ಸುಳ್ಯ ತಾಲೂಕಿನ ಸರಹದ್ದಿನಲ್ಲಿರುವ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮ ಪಂಚಾಯಿತಿ ಒಂದರಲ್ಲಿಯೇ ಈ ರೀತಿ ಸುಮಾರು 250 ಕ್ಕೂ ಹೆಚ್ಚು ಕಟ್ಟಗಳನ್ನು ನಿರ್ಮಿಸಲಾಗಿದೆ.
ಕಟ್ಟಗಳೇ ಜೀವಾಳ:
ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ಕಟ್ಟಗಳನ್ನು ನಿರ್ಮಿಸಿ ಹರಿಯುವ ನೀರನ್ನು ಸಂಗ್ರಹಿಸಿ ಹಿರಿಯರು ಭೂಮಿಯನ್ನು ಜಲ ಸಮೃದ್ಧವಾಗಿರಿಸುತ್ತಿದ್ದರು. ಆದರೆ ಇದೀಗ ಕಟ್ಟಗಳು ಮಾಯವಾಗಿ ಎಲ್ಲೆಲ್ಲಿ ಕೊಳವೆ ಬಾವಿಗಳೇ ರಾರಾಜಿಸುತ್ತಿವೆ. ಇದರಿಂದ ಭೂಮಿ ಬರಡಾಗಿ ನೀರಿಗಾಗಿ ಆಹಾಕಾರ ಉಂಟಾಗಲು ಕಾರಣವಾಗುತ್ತಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ಹರಿಯುವ ನೀರಿಗೆ ಕಟ್ಟಗಳನ್ನು ನಿರ್ಮಿಸಿ ನೀರನ್ನು ಭೂಮಿಗೆ ಇಂಗಿಸಬೇಕು, ಬೇಸಿಗೆಯಲ್ಲಿ ಕಟ್ಟಗಳಲ್ಲಿ ನೀರನ್ನು ಶೇಖರಿಸಬೇಕು ಇದರಿಂದ ನೀರಿನ ಬವಣೆಯನ್ನು ಸಂಪೂರ್ಣವಾಗಿ ನೀಗಿಸಬಹುದು. ಭೂಮಿಗೆ ನೀರುಣಿಸಲು ಕಟ್ಟಗಳೇ ಜೀವಾಳ ಎಂಬುದು ತಜ್ಞರ ಅಭಿಪ್ರಾಯ.
`ಪಂಜ ಸಮೀಪದ ಅಡ್ಕ ಎಂಬಲ್ಲಿ ಹರಿಯುವ ನೀರಿಗೆ ಕಟ್ಟ ಹಾಕಿ ಜಲ ಸಂರಕ್ಷಣೆ ಮಾಡಿ ನೀರಿನ ಲಭ್ಯತೆಯನ್ನು ಹೆಚ್ಚುವಂತೆ ಮಾಡಿದ್ದು ಶ್ಲಾಘನೀಯ ಕಾರ್ಯ. ಇಲ್ಲಿ ಒಂದು ಶಾಶ್ವತ ಕಿಂಡಿ ಅಣೆಕಟ್ಟನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗುವುದು. ಎಲ್ಲಾ ಕಡೆಗಳಲ್ಲಿಯೂ ಬೇಸಿಗೆಯಲ್ಲಿ ಈ ರೀತಿ ಕಟ್ಟಗಳನ್ನು ನಿರ್ಮಿಸುವುದರಿಂದ ನೀರಿನ ಅಭಾವವನ್ನು ನೀಗಿಸಬಹುದು” -ಎಸ್.ಅಂಗಾರ, ಶಾಸಕರು ಸುಳ್ಯ.
`ಪಂಜ ಹೊಳೆಗೆ ಅಡ್ಕ ಎಂಬಲ್ಲಿ ಕಟ್ಟವನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಿದ ಕಾರಣ ಈ ಬಾರಿ ನಮಗೆ ಯಾವುದೇ ನೀರಿನ ಬವಣೆ ಎದುರಾಗಿಲ್ಲ. ಸಮೀಪದ ಬಾವಿ, ಕೆರೆ ಮತ್ತಿತರ ನೀರಿನ ಮೂಲಗಳೂ ಜಲ ಸಮೃದ್ಧವಾಗಿದೆ. ಕುಡಿಯಲು, ಕೃಷಿಗೆ ನೀರಿನ ಸಮಸ್ಯೆ ಎದುರಾಗಿಲ್ಲ.”-ಎಂ.ಉದಯಶಂಕರ ಅಡ್ಕ.