ಭಾರತ ಹಳ್ಳಿಗಳ ದೇಶ, ದೇಶ ಪ್ರಗತಿಯಾಗಬೇಕೆಂದ್ರೆ ನಮ್ಮ ಹಳ್ಳಿಗಳು ಉದ್ದಾರವಾಗಬೇಕು, ಅದರಂತೆ ಇಲ್ಲೊಬ್ಬ ಉತ್ಸಾಹಿ ಹಳ್ಳಿ ಯುವಕ ತಾನು ಓದಿರೋದು ಕಮ್ಮಿಯಾದ್ರು ಕೂಡ ತನ್ನ ಸಮಾಜಮುಖಿ ಕೆಲಸದಿಂದಾಗಿ ಸುತ್ತಮುತ್ತ ಹಳ್ಳಿಯ ಯುವಕರಿಗೆ ಮಾದರಿಯಾಗಿದ್ದಾನೆ.
ಈತನ ಹೆಸರು ಮಹಾಂತೇಶ್. ವಯಸ್ಸಿನ್ನು 18. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜಿಗಣೆಹಳ್ಳಿ ನಿವಾಸಿ. ಎಸ್ಎಸ್ಎಲ್ ಸಿ ಗೆ ಶಾಲೆ ಬಿಟ್ಟ ಈ ಯುವಕ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಹಳ್ಳಿಗಳನ್ನು ಸುತ್ತಿ ಮೂರೇ ತಿಂಗಳಲ್ಲಿ 500 ಕ್ಕೂ ಹೆಚ್ಚು ಶೌಚಾಲಯ ಕಟ್ಟಿಸಿ ಕೊಟ್ಟಿದ್ದಾನೆ. ಮನೆಯ ಅಕ್ಕ-ತಂಗಿಯರು ಸೇರಿ, ಊರಿನ ಹೆಣ್ಮಕ್ಕಳು ಬಹಿರ್ದೆಸೆಗೆ ಹೋಗಬೇಕಂದ್ರೆ ಸೂರ್ಯ ಹುಟ್ಟೋಕು ಮೊದಲು ಅಥವಾ ಮುಳುಗೋದನ್ನೇ ಕಾಯ್ಬೇಕಿತ್ತು. ಪಕ್ಕದ ಮನೆಯ ತುಂಬು ಗರ್ಭೀಣಿ ಮಹಿಳೆಗೆ ಲೂಸ್ ಮೋಷನ್ ಆದಾಗ ಆಕೆ ಪಟ್ಟ ಪರಿಪಾಟಲಿನಿಂದ ಮನನೊಂದ ಈತ ತನ್ನೂರಿನ ಜೊತೆ ಏಳು ಹಳ್ಳಿಗಳನ್ನ ಬಯಲು ಶೌಚಮುಕ್ತ ಗ್ರಾಮವನ್ನಾಗಿಸಿದ್ದಾನೆ. ಇವ್ನ ಕೆಲಸಕ್ಕೆ ಮೊದಮೊದಲು ಈತನ ತಂದೆ ಬೈಯುತ್ತಿದ್ರು. ಆದ್ರೆ, ಊರಿನ ಜನ ನಿನ್ನ ಮಗ ಒಳ್ಳೆ ಕೆಲಸ ಮಾಡ್ತಿದ್ದಾನೆ ಎಂದ ಮೇಲೆ ಅಪ್ಪ ಕೂಡ ಬೈತಿಲ್ವಂತೆ. ತನ್ನ ಕೆಲಸದಲ್ಲಿ ಸಾರ್ಥಕತೆ ಕಂಡ ಈ ಯುವಕ ಮುಂದಕ್ಕೂ ನನ್ನ ಕೈಲಾದಷ್ಟು ಒಳ್ಳೆ ಕೆಲಸ ಮಾಡ್ತೇನೆಂದು ವಿಶ್ವಾಸ ವ್ಯಕ್ತಪಡಿಸ್ತಾನೆ. ಶೌಚಾಲಗಳನ್ನ ಇವನೇ ಕಟ್ಟಿಸಿಕೊಟ್ಟಿಲ್ಲ. ಪ್ರತಿಯೊಂದು ಮನೆಗೂ ಹೋಗಿ ಶೌಚಾಲಯದ ಉಪಯೋಗ ತಿಳಿಸಿ, ಅವರಿಂದ ದಾಖಲೆಗಳನ್ನ ಪಡೆದು, ಗ್ರಾಮ ಪಂಚಾಯಿತಿಗೆ ಅರ್ಜಿ ಬರೆದು, ಜಾಗದ ಫೋಟೋ ಹೊಡೆದು, ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನ ಸ್ಥಳಕ್ಕೆ ಕರೆತಂದು ಮುಂದೆ ನಿಂತು ಎಲ್ಲಾ ಕೆಲಸ ಮಾಡಿಸಿದ್ದಾನೆ. ನೀವು ಹಣ ನೀಡಬೇಡಿ ಸರ್ಕಾರವೇ ಹಣ ಕೊಡುತ್ತೆಂದು ಹಳ್ಳಿಗರ ಮನವೊಲಿಸಿ ಸರ್ಕಾರ ನೀಡೋ 12 ಸಾವಿರ ಹಣದಲ್ಲೇ ಶೌಚಾಲಯಕ್ಕೆ ಗುಂಡಿ ತೆಗೆಸಿ ರಿಂಗ್ ಹಾಕಿಸೋವರೆಗೂ ನಿಂತು ಕೆಲಸ ಮಾಡಿಸಿದ್ದಾನೆ.
ಶೌಚಾಲಯ ಬಳಕೆ ಮಾಡ್ಬಾರ್ದು ನಮ್ಮ ದೇವರಿಗೆ ಆಗೋದಿಲ್ಲ ಅದು ದೇವಸ್ಥಾನವಿದ್ದಂತೆ ಎಂದು ಹತ್ತಾರು ವರ್ಷಗಳಿಂದ ಶೌಚಾಲಯವನ್ನೇ ಕಟ್ಟಿಸದ ಗ್ರಾಮದಲ್ಲೂ ಈ ಹುಡುಗನ ಮಾತಿಗೆ ಬೆಲೆ ಸಿಕ್ಕಿದೆ. ಹೆಣ್ಮಕ್ಕಳ ಸ್ಥಿತಿ ಕಂಡು ಮನಕರಗಿ 18 ವರ್ಷದ ಯುವಕ ಮಾಡಿದ ಸಾಧನೆಗೆ ಸುತ್ತೇಳು ಹಳ್ಳಿಯ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ರಾಜ್ಯಾದ್ಯಂತ ಭೀಕರ ಬರ. ಅದ್ರಲ್ಲೂ ಕಡೂರು ತಾಲೂಕಿನಲ್ಲಂತೂ ನೀರು-ಮೇವಿಲ್ಲದ ದನಕರುಗಳನ್ನ ಕಾಡಿಗೆ ಹೊಡೆಯುತ್ತಿದ್ರೆ, ಕೆಲವರು ಖಸಾಯಿಖಾನೆಗೆ ಮಾರ್ತಿದ್ದಾರೆ. ಆದ್ರೆ ರೈತ ಕುಟುಂಬದ ಈ ಯುವಕ ಇಂತಹ ಬರದಲ್ಲೂ ದನಕರುಗಳು, ಬೆಳೆ ಉಳಿಸಿಕೊಳ್ಳೋ ಬದಲು ಏಳು ಹಳ್ಳಿಗಳನ್ನ ಶೌಚಮುಕ್ತವನ್ನಾಗಿಸಿರೋದು ನಿಜಕ್ಕೂ ದೊಡ್ಡ ಸಾಧನೆ. ಇವನ ಸಮಾಜಮುಖಿ ಕೆಲಸ ಅಧಿಕಾರಿಗಳು ಹಾಗೂ ಜನನಾಯಕರುಗಳಿಗೆ ಮಾದರಿ ಆಗಬೇಕಿದೆ.