ಮೇ.1ನ್ನು ಎಲ್ಲೆಡೆ ಕಾರ್ಮಿಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಕಾರ್ಮಿಕರ ನಡುವೆಯೂ ಸಂಘಟಿತ ಮತ್ತು ಅಸಂಘಟಿತ ಎಂಬ ಎರಡು ವರ್ಗಗಳು ಕಂಡು ಬರುತ್ತಿದ್ದು, ಒಂದನೇ ವರ್ಗದ ಸಂಘಟಿತ ವಲಯವು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಒಂದಷ್ಟು ಸಫಲತೆ ಕಂಡಿದ್ದರೂ ಅಸಂಘಟಿತ ವಲಯ ಮಾತ್ರ ಕಾರ್ಮಿಕರಾಗಿ ದುಡಿಯುತ್ತಿದ್ದರೂ ಇನ್ನೂ ಕೂಡ ಅವರ ಬದುಕು ಮಾತ್ರ ಸುಧಾರಿಸಿಲ್ಲ.
ಇದೆಲ್ಲದರ ನಡುವೆ ಹೊಲ, ಗದ್ದೆ, ತೋಟ, ಇನ್ನಿತರ ಕೆಲಸ ಕಾರ್ಯಗಳನ್ನು ನೆರವೇರಿಸುವ ಕಾರ್ಮಿಕರ ಬದುಕು ಮಾತ್ರ ಇನ್ನೂ ಕೂಡ ಹೀನಾಯವಾಗಿಯೇ ಇದೆ. ಇನ್ನು ಕೂಲಿ ಕಾರ್ಮಿಕರ ಬದುಕಂತೂ ನಿಕೃಷ್ಠವಾಗಿಯೇ ಇದೆ. ಹಿಂದಿನಿಂದಲೂ ಈ ವರ್ಗ ಶ್ರೀಮಂತರ ತುಳಿತಕ್ಕೊಳಗಾಗುತ್ತಾ ಬಂದಿದೆ. ತೋಟ, ಜಮೀನುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹೆಚ್ಚಾಗಿ ಅವಿದ್ಯಾವಂತರಾಗಿರುವ ಕಾರಣದಿಂದಾಗಿ ಮತ್ತು ಅಸಂಘಟಿತರಾಗಿರುವುದರಿಂದ ಇನ್ನೂ ಕೂಡ ತಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯಲಾಗದೆ ದಿನಕಳೆಯುತ್ತಿದ್ದಾರೆ.
ಮಹಿಳಾ ಕಾರ್ಮಿಕರ ಕೊಡುಗೆ:
ಇದರ ನಡುವೆ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಇವರು ಮಲೆನಾಡಿನ ಕಾಫಿ, ಟೀ, ಅಡಿಕೆ, ತೆಂಗು ತೋಟಗಳಲ್ಲಿ, ಬಯಲುಸೀಮೆಯ ಹೊಲ, ಗದ್ದೆಗಳಲ್ಲಿ ಗಂಡಿಗೆ ಸಮಾನವಾಗಿ ದುಡಿಯುತ್ತಾ ಮನೆ ಮತ್ತು ಹೊರಗೆ ತಮ್ಮ ಕಾರ್ಯವನ್ನು ನಿರ್ವಹಿಸುವ ಮೂಲಕ ಶ್ರಮಜೀವಿಗಳಾಗಿದ್ದಾರೆ. ಇವರು ಗಂಡಿಗೆ ಸಮಾನಾಗಿ ದುಡಿದರೂ ಕೂಲಿಯಲ್ಲಿ ತಾರತಮ್ಯವಿರುವುದನ್ನು ನಾವು ಕಾಣಬಹುದು. ಇವತ್ತು ಸಮಾಜಕ್ಕೆ ಒಂದಷ್ಟು ವಿದ್ಯಾವಂತರನ್ನು ನೀಡಿದ್ದರೆ ಅದರಲ್ಲಿ ಈ ಮಹಿಳೆಯರ ಪಾಲು ಇರುವುದನ್ನು ತಳ್ಳಿಹಾಕುವಂತಿಲ್ಲ. ತಾವು ಹೆಚ್ಚು ಓದಿಲ್ಲ. ಆದ್ದರಿಂದ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಹೋಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಶ್ರಮವಹಿಸಿ ದುಡಿದು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ.
ಇವತ್ತು ಮಲೆನಾಡು ಮತ್ತು ಬಯಲು ಸೀಮೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಿದರೆ ತಲೆ ಮೇಲೆ ಸೌದೆ ಹೊರೆ ಹೊತ್ತು ಸಾಗುವ ಮಹಿಳಾ ಕಾರ್ಮಿಕರು ಅಲ್ಲಲ್ಲಿ ಕಣ್ಣಿಗೆ ಬೀಳುತ್ತಾರೆ. ಬೆಳಿಗ್ಗೆ 6ಕ್ಕೆ ಎದ್ದು ಅಡುಗೆ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ತೋಟ ಗದ್ದೆಗಳಿಗೆ ತೆರಳಿ ದುಡಿಯೋದು ಸುಲಭದ ಕೆಲಸವಲ್ಲ. ಆದರೂ ಅದಕ್ಕೆ ಅಂಜದೆ ಕಷ್ಟಪಟ್ಟು ದುಡಿದು ಕುಟುಂಬಕ್ಕೆ ಆಧಾರವಾಗಿದ್ದಾರೆ.
ಅವರು ಸಮಾಜಕ್ಕೆ ಹಲವು ರೀತಿಯ ಕೊಡುಗೆಗಳನ್ನು ನೀಡಿದ್ದರೂ ಅದನ್ನು ಯಾರೂ ಗುರುತಿಸದ ಕಾರಣದಿಂದಾಗಿ ಎಲೆಯ ಮರೆಯ ಕಾಯಿಯಂತೆ ಬದುಕುತ್ತಿದ್ದಾರೆ.
ಕೃಷಿ ಕಾರ್ಮಿಕರ ಸಮಸ್ಯೆ:
ಹಿಂದಿನಿಂದಲೂ ತೋಟ, ಗದ್ದೆ, ಇನ್ನಿತರ ಕೃಷಿಗೆ ಸಂಬಂಧಪಟ್ಟಂತೆ ಹೊಲ ಜಮೀನುಗಳಲ್ಲಿ ದುಡಿಯುವ ಕಾರ್ಮಿಕರನ್ನು ತುಚ್ಛವಾಗಿ ನೋಡುತ್ತಾ ಬಂದ ಕಾರಣದಿಂದಾಗಿ ಕಾರ್ಮಿಕರು ತಾವು ದುಡಿದಿದ್ದೇ ಸಾಕು ತಮ್ಮ ಮಕ್ಕಳು ಕಾರ್ಮಿಕರಾಗಿ ದುಡಿಯಬಾರದು ಎಂಬ ತೀರ್ಮಾನಕ್ಕೆ ಬಂದಿದ್ದು, ಬೇರೆ ಬೇರೆ ಉದ್ಯೋಗಕ್ಕೆ ಕಳುಹಿಸುತ್ತಿದ್ದಾರೆ.
ಇದರಿಂದಾಗಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೃಷಿ ಕ್ಷೇತ್ರದ ನಿರಾಸಕ್ತಿ ಮೂಡುತ್ತಿದೆ. ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಮಾಡಲಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸ್ಥಳೀಯವಾಗಿ ಕಾರ್ಮಿಕರು ಸಿಗದ ಕಾರಣದಿಂದ ಉತ್ತರ ಭಾರತದ ಕಾರ್ಮಿಕರನ್ನು ಅವಲಂಭಿಸುವಂತಾಗಿದೆ.
ಇವತ್ತು ಕೆಲವು ಕ್ಷೇತ್ರಗಳತ್ತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡರೂ ಅಲ್ಲಿ ಉದ್ಯೋಗದ ಸಮಸ್ಯೆ ಕಾಣಿಸಿಕೊಂಡರೆ, ಮತ್ತೊಂದಡೆ ದುಡಿಯುತ್ತಿದ್ದರೂ ಅವರಿಗೆ ಸಮರ್ಪಕವಾಗಿ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ ಒಟ್ಟಾರೆ ಕಾರ್ಮಿಕರ ಪರಿಸ್ಥಿತಿ ಸಂಕಷ್ಟದಲ್ಲಿರುವುದಂತು ಸತ್ಯ. ಎಲ್ಲ ಕಾರ್ಮಿಕರು ನೆಮ್ಮದಿಯಾಗಿ ಬದುಕುವಂತ ಸ್ಥಿತಿ ನಿರ್ಮಾಣವಾದಾಗ ಮಾತ್ರ ಕಾರ್ಮಿಕರ ದಿನಾಚರಣೆ ಅರ್ಥ ಬರಬಹುದೇನೋ?