ಕೊಡಗಿನಲ್ಲಿರುವ ಬೆಟ್ಟಗಳು ತನ್ನದೇ ಆದ ನಿಸರ್ಗ ಸೌಂದರ್ಯ, ಪೌರಾಣಿಕ ಐತಿಹ್ಯ ಹೊಂದಿ ಗಮನಸೆಳೆಯುತ್ತಿದ್ದು ಆ ಪೈಕಿ ದಕ್ಷಿಣ ಕೊಡಗಿನ ಪೊನ್ನಂಪೇಟೆ ಬಳಿಯಿರುವ ಕುಂದಬೆಟ್ಟವೂ ಒಂದಾಗಿದೆ. ಹಾಗೆ ನೋಡಿದರೆ ಕೊಡಗಿನಲ್ಲಿರುವ ಅದೆಷ್ಟೋ ಬೆಟ್ಟಗಳು ಕೇವಲ ಬೆಟ್ಟಗಳಾಗಿಯೇನೂ ಉಳಿದಿಲ್ಲ. ಅವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ. ಕೆಲವು ಬೆಟ್ಟಗಳು ಚಾರಣ ಪ್ರಿಯರಿಗೆ ಮುದ ನೀಡಿದರೆ ಇನ್ನು ಕೆಲವು ಪವಿತ್ರ ತಾಣವಾಗಿಯೂ ಹೆಸರುವಾಸಿಯಾಗಿವೆ.
ಚಾರಣ ತಾಣವಾಗಿಯೂ ಪವಿತ್ರ ಕ್ಷೇತ್ರವಾಗಿಯೂ ಪ್ರವಾಸಿಗರನ್ನು ತನ್ನಡೆಗೆ ಸೆಳೆಯುವ ಕುಂದ ಬೆಟ್ಟವನ್ನೇರಿ ನಿಸರ್ಗ ಸೌಂದರ್ಯವನ್ನು ಸವಿಯುವ ಬಯಕೆಯಾದರೆ, ನೋಡುವ ತವಕವಾದರೆ, ಒಂದಷ್ಟು ಹೊತ್ತು ಪ್ರಕೃತಿಯ ಮಡಿಲಲ್ಲಿದ್ದು ಬರಬೇಕೆಂದು ಕೊಂಡರೆ ನೇರವಾಗಿ ಹೋಗಬಹುದಾಗಿದೆ. ಕುಂದಬೆಟ್ಟವು ಕೊಡಗಿನ ಪ್ರಮುಖ ಪಟ್ಟಣ ಮಡಿಕೇರಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಮೂರು ಸಾವಿರದ ಇನ್ನೂರು ಅಡಿ ಎತ್ತರವಿರುವ ಈ ತಾಣ ತನ್ನ ಸ್ನಿಗ್ಧ ಸೌಂದರ್ಯದಿಂದ ಜನರನ್ನು ಬೆರಗುಗೊಳಿಸುತ್ತದೆ. ಈ ತಾಣಕ್ಕೆ ಸಾಗುವುದೆಂದರೆ ಅದೊಂದು ಮರೆಯಲಾಗದ ಅನುಭವ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕೊಡವ ಭಾಷೆಯಲ್ಲಿ ‘ಕುಂದ್’ ಎಂಬ ಪದವು ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ. ಬೆಟ್ಟವೊಂದು ಗ್ರಾಮದ ಹೃದಯ ಭಾಗದಲ್ಲಿ ಮೈದಾಳಿ ನಿಂತಿದ್ದರಿಂದಲೋ ಏನೋ ಈ ಗ್ರಾಮವನ್ನು ಕುಂದವೆಂದೇ ಕರೆಯುತ್ತಾರೆ. ಗ್ರಾಮದ ಕಣ್ಮಣಿಯೇ ಕುಂದಬೆಟ್ಟ. ಕಲ್ಲು ಮುಳ್ಳು ಅಂಕುಡೊಂಕಿನ ಹಾದಿಯ ಮೂಲಕ ಈ ಬೆಟ್ಟವನ್ನೇರುವುದು ಅಷ್ಟು ಸಲೀಸೇನಲ್ಲ. ಸುತ್ತಲೂ ಹಸಿರನ್ನೊದ್ದು ಕುಳಿತ ಪರಿಸರ, ಬೀಸುವ ತಂಗಾಳಿ, ಬೆಟ್ಟವನ್ನೇರಲು ಹುರುಪು ನೀಡುತ್ತವೆ. ಬೆಟ್ಟದ ಮೇಲ್ಭಾಗವನ್ನು ತಲುಪಿ ಅಲ್ಲಿ ಒಂದು ಕ್ಷಣ ನಿಂತು ಸುತ್ತಲೂ ದೃಷ್ಟಿ ಹರಿಸಿದರೆ ಇಲ್ಲಿಂದ ಕಾಣಬರುವ ಸುಂದರ ನೋಟ ನೋಡುಗನ ಪಾಲಿಗೆ ರಸದೂಟವಾಗುತ್ತದೆ.
ದೂರದಲ್ಲಿ ಹರಡಿಕೊಂಡಿರುವ ಪರ್ವತ ಶ್ರೇಣಿಗಳು ಹಸಿರನ್ನೊಳಗೊಂಡು ಗುಂಪುಗುಂಪಾಗಿ ಕಂಡು ಬರುವ ಕಾನನಗಳು, ಗದ್ದೆ, ತೋಟಗಳನ್ನೊಳಗೊಂಡ ಪ್ರಕೃತಿಯ ವಿಹಂಗಮ ನೋಟ ಮನತಣಿಸುತ್ತದೆ. ಕುಂದಬೆಟ್ಟ ಚಾರಣಿಗರ ಮನತಣಿಸುವ ತಾಣ ಮಾತ್ರವಾಗಿರದೆ, ಪವಿತ್ರ ಕ್ಷೇತ್ರವೂ ಇದಾಗಿದೆ. ಇಲ್ಲಿ ಹಲವಾರು ವೀಕ್ಷಣಾ ತಾಣಗಳಿವೆ. ಬೊಟ್ಲಪ್ಪ ಈಶ್ವರ ದೇವಾಲಯ, ಭೀಮ ಕಲ್ಲು, ದೇರಟೆ ಕಲ್ಲು, ನರಿಗುಡ್ಡೆ ಮೊದಲಾದವುಗಳಾಗಿವೆ. ಇಲ್ಲಿರುವ ಬೊಟ್ಲಪ್ಪ ಈಶ್ವರ ದೇವಾಲಯ ಬಹಳ ಪುರಾತನವಾದುದಾಗಿದ್ದು, ಈ ದೇವಾಲಯ ಹೇಗೆ ನಿಮರ್ಮಿತವಾಯಿತೆಂಬುದಕ್ಕೊಂದು ದಂತ ಕಥೆಯಿದೆ. ವನವಾಸಕ್ಕೆ ತರಳಿದ ಪಾಂಡವರು ಕುಂದಬೆಟ್ಟಕ್ಕೆ ಬಂದಿದ್ದರಂತೆ. ಈ ಸಂದರ್ಭದಲ್ಲಿ ಒಂದೇ ರಾತ್ರಿಯಲ್ಲಿ ಭೀಮನು ಕಲ್ಲು ಹೊತ್ತು ತಂದು ದೇವಾಲಯವನ್ನು ಕಟ್ಟಿದನೆಂದೂ ಕೆಲಸ ಸಂಪೂರ್ಣ ಮುಗಿಯುವ ವೇಳೆಗೆ ಬೆಳಗಾದುದರಿಂದ ದೇವಾಲಯಕ್ಕೆ ಬಾಗಿಲು ನಿರ್ಮಿಸಲಿಕ್ಕಾಗಲಿಲ್ಲವಂತೆ ಆದರೆ ಕೆಲವರ ಅಭಿಪ್ರಾಯದ ಪ್ರಕಾರ ಈ ದೇವಾಲಯವು ಕೊಡಗು ರಾಜರ ಕಾಲದಲ್ಲಿ ನಿರ್ಮಿತವಾಗಿದೆಯೆಂದು, ಇದಕ್ಕೆ ಪೂರಕ ಎನ್ನುವಂತೆ ಶಿಲಾಸನದಲ್ಲಿ ಮನೆಯ ಪಂಡ ಸಂಬ್ರಾಯ ಎಂಬ ಹೆಸರಿರುವುದು ಕಂಡು ಬರುತ್ತದೆ. ಅದೇನೆ ಇರಲಿ ಈ ದೇವಾಲಯದ ಅಧಿದೇವತೆಯೂ ಆದ ಈಶ್ವರ ಮಾತ್ರ ಸುತ್ತಮುತ್ತಲ ಗ್ರಾಮದ ರಕ್ಷಕನಾಗಿದ್ದಾನೆ.
ದೇವಾಲಯದ ಮುಂದೆ ಬೃಹತ್ ಶಿಲಾ ಬಂಡೆಯೊಂದು ಹರಡಿಕೊಂಡಿದ್ದು, ಈ ಬಂಡೆಯ ತುದಿಯಲ್ಲಿ ಒಂದು ಉಬ್ಬು ಕಲ್ಲಿದ್ದು ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿಯಿದೆ. ಹಿಂದೆ ಸುಬ್ರಹ್ಮಣ್ಯ ಸ್ವಾಮಿಯ ನವಿಲು ಈ ಕಲ್ಲಿನ ಮೇಲೆ ನಾಟ್ಯವಾಡಿತ್ತೆಂದೂ ಆದುದರಿಂದಲೋ ಏನೋ ಈ ಕಲ್ಲನ್ನು ದೇರಟೆಕಲ್ಲು ಎಂದು ಕರೆಯುತ್ತಾರೆ. ದೇರಟೆ ಕಲ್ಲಿನ ವಿಶೇಷತೆ ಹಾಗಿದ್ದರೆ ದೇವಾಲಯದ ಹಿಂಭಾಗದಲ್ಲಿ ಮತ್ತೊಂದು ಬೃಹತ್ ಕಲ್ಲು ಕಂಡು ಬರುತ್ತದೆ. ಇದನ್ನು ಭೀಮನ ಕಲ್ಲು ಎಂದೇ ಕರೆಯುತ್ತಾರೆ. ಬೊಟ್ಲಪ್ಪ ಈಶ್ವರ ದೇವಾಲಯವನ್ನು ನಿರ್ಮಿಸುತ್ತಿದ್ದ ಸಂದರ್ಭ ಭೀಮನೇ ಆ ಬೃಹತ್ ಕಲ್ಲನ್ನು ಹೊತ್ತು ತಂದು ಅಲ್ಲಿಟ್ಟನಂತೆ. ಈ ಕಲ್ಲಿನಲ್ಲಿ ಕಾಲಿನ ಮಂಡಿಯ ಮತ್ತು ಕೈಬೆರಳುಗಳ ಗುರುತು ಕಂಡು ಬರುತ್ತದೆ. ಈ ಕಲ್ಲಿನ ಪಕ್ಕದಲ್ಲೇ ಚಿಕ್ಕ ಪೊಟರೆಯೊಂದಿದ್ದು ಹಿಂದೆ ಪಾಂಡವರು ಈ ಪೊಟರೆಯನ್ನು ಅಡುಗೆ ಸಾಮಾನುಗಳನ್ನು ಇಡಲು ಉಪಯೋಗಿಸುತ್ತಿದ್ದರೆಂದು ಕೆಲವರು ಹೇಳುತ್ತಾರೆ. ಈ ಕಲ್ಲನ್ನೇರಿ ಕುಳಿತು ಸೌಂದರ್ಯವನ್ನು ಆಸ್ವಾದಿಸುವುದು ಅದೊಂದು ರೀತಿಯ ಮಜಾ.
ದೇವಾಲಯದ ಮುಂಭಾಗಕ್ಕಾಗಿ ಹಾದು ಕಾಡು, ಮೇಡನ್ನೆಲ್ಲಾ ಕ್ರಮಿಸಿದರೆ, ಅಲ್ಲೊಂದು ಬಾಯಿ ತೆರೆದ ಗುಹೆಯೊಂದು ಗೋಚರವಾಗುತ್ತದೆ. ನೆಲಮಾಳಿಗೆಯಂತಿರುವ ಗುಹೆಯಲ್ಲಿ ಕತ್ತಲು ಆವರಿಸಿದ್ದು, ಈ ಗುಹೆಯೊಳಗೆ ನುಗ್ಗಿ ಮುನ್ನೆಡೆದರೆ ಅಲ್ಲೊಂದು ಕಿಂಡಿಯಿದ್ದು, ಇದರ ಮೂಲಕ ಇಲ್ಲಿಂದ ಕಾಣಬರುವ ಪ್ರಕೃತಿ ಸೊಬಗನ್ನು ನೋಡಬಹುದಾಗಿದೆ. ಒಟ್ಟಾರೆ ಚಾರಣಪ್ರಿಯರನ್ನೂ, ಆಸ್ತಿಕರನ್ನೂ ತನ್ನೆಡೆಗೆ ಸೆಳೆಯುವ ಕುಂದಬೆಟ್ಟಕ್ಕೊಮ್ಮೆ ಭೇಟಿ ನೀಡಿದರೆ ಅಲ್ಲಿನ ಸುಂದರ ನೋಟ ಸದಾ ಕಣ್ಮುಂದೆ ಬರುತ್ತಿರುತ್ತದೆ ಎನ್ನುದರಲ್ಲಿ ಎರಡು ಮಾತಿಲ್ಲ.