News Kannada
Wednesday, October 05 2022

ನುಡಿಚಿತ್ರ

ನಿಸರ್ಗ ಪ್ರೇಮಿಗಳ ಸುಂದರ ತಾಣ ಮುಡುಕುತೊರೆ - 1 min read

Photo Credit :

ನಿಸರ್ಗ ಪ್ರೇಮಿಗಳ ಸುಂದರ ತಾಣ ಮುಡುಕುತೊರೆ

ಈಗ ಮಳೆ ಸುರಿದಿದ್ದರಿಂದ ಎಲ್ಲೆಡೆಯೂ ಭೂಮಿ ತಾಯಿ ಹಸಿರ ಸೀರೆಯನ್ನಿಟ್ಟು ಕಂಗೊಳಿಸುತ್ತಿದ್ದರೆ, ಅದನ್ನು ನೋಡುವ ಕಣ್ಣುಗಳಿಗೆ ಹಬ್ಬವೋ ಹಬ್ಬ…

ಮೈಸೂರು ಜಿಲ್ಲೆಗೆ ಸೇರಿದ ಐತಿಹಾಸಿಕ ಕ್ಷೇತ್ರ ತಲಕಾಡು ಬಳಿಯಿರುವ ಮುಡುಕುತೊರೆ ಈಗ ನಿಸರ್ಗ ಸೌಂದರ್ಯವನ್ನೆಲ್ಲ ತನ್ನೊಡಲಲ್ಲಿರಿಸಿಕೊಂಡು ನೋಡ ಬರುವವರಿಗಾಗಿ ಕಾಯುತ್ತಿದೆ.

ವಿಶಾಲವಾಗಿ ಹರಿಯುವ ಕಾವೇರಿ ನದಿ… ಸುತ್ತ ಮುತ್ತ ಹಸಿರಿನಿಂದ ಕಂಗೊಳಿಸುವ ಪ್ರಾಕೃತಿಕ ಚೆಲುವು.. ಬೆಟ್ಟದ ಮೇಲೋಂದು ಭವ್ಯ ದೇಗುಲ. ನಿಸರ್ಗದ ಸುಂದರತೆ ಹೀಗೂ ಇರುತ್ತದೆ ಎಂಬುದಕ್ಕೊಂದು ಸಾಕ್ಷಿಯಾಗಿ ನಿಂತಿದೆ ಮುಡುಕುತೊರೆ.

ಮುಡುಕುತೊರೆ ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಹುಶಃ ಮುಡುಕುತೊರೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಇನ್ನು ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಆಧಿದೈವ ಮಲ್ಲಿಕಾರ್ಜುನ ಲಿಂಗವು ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಇಲ್ಲಿಗೆ ಇನ್ನೊಂದಷ್ಟು ದೈವ ಮಹತ್ವ ತಂದು ಕೊಡಲು ಕಾರಣವಾಗಿದೆ.

ಇಲ್ಲಿನ ಬೆಟ್ಟದ ಮೇಲಿರು ಮಲ್ಲಿಕಾರ್ಜುನ ದೇಗುಲ ಆಕರ್ಷಣೀಯವಾಗಿದೆ. ಈ ದೇಗುಲ ನೆಲೆ ನಿಂತ ಬೆಟ್ಟವು ಸುಮಾರು 300 ಅಡಿಯಷ್ಟು ಎತ್ತರದಲ್ಲಿದ್ದು, ಈ ಬೆಟ್ವನ್ನೇರಲು 101 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇವಾಲಯವು ಗಂಗರ ಕಾಲದ ರಚನೆಯನ್ನು ಹೊಂದಿದ್ದು, ಪುಟ್ಟದಾಗಿ ನಿರ್ಮಾಣಗೊಂಡ ದೇಗುಲ ಬಳಿಕ ವಿಸ್ತರಿಸುತ್ತಾ ಹೋಗಿರಬಹುದೆಂದು ಹೇಳಲಾಗುತ್ತದೆ. ಇದು ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಶುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಹೊಂದಿದೆ. ನವರಂಗದಲ್ಲಿ ವರ್ತುಲಾಕೃತಿಯ ಸ್ತಂಭಗಳನ್ನು ನಾವು ಕಾಣಬಹುದು. ಈ ಸ್ತಂಭಗಳಲ್ಲಿ ಗಂಗಶೈಲಿಯನ್ನು ಹೋಲುವಂತಹ ರಾಮ ಲಕ್ಷ್ಮಣ ಹನುಮಂತನ ಚಿತ್ರಗಳು ಕಂಡು ಬರುತ್ತವೆ.

ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬಾಗಿಲುಗಳಿದ್ದು, ನವರಂಗದ ಅಗ್ನೇಯ ಭಾಗದಲ್ಲಿ ಎರಡು ಶಿವಲಿಂಗವಿದ್ದರೆ, ಉತ್ತರಭಾಗದಲ್ಲಿ ಕುಮಾರಸ್ವಾಮಿಯ ಉತ್ಸವಮೂರ್ತಿ, ನಟರಾಜ, ವಿಘ್ನೇಶ್ವರ, ಶಿವಕಾಮೇಶ್ವರಿ ಅಮ್ಮನವರ ವಿಗ್ರಹಗಳಿವೆ. ಅಲ್ಲದೆ ಶುಕನಾಸಿಯಲ್ಲಿ ವೃಷಭ ಮೂರ್ತಿಯಿದೆ. ದೇಗುಲದ ಗರ್ಭಗುಡಿಯ ಮೇಲೆ ಕಲಶವಿರುವ ವಿಮಾನ, ಒಳಗೆ ಒಂದಡಿ ಚದರಳತೆಯ ಪೀಠದ ಮೇಲೆ ಐದು ಅಂಗುಲ ಪಾದಾಂಕಿತವಿರುವ ಮಲ್ಲಿಕಾರ್ಜುನನ ಶೋಭಾಯಮಾನ ಲಿಂಗವನ್ನು ನಾವು ಕಾಣಬಹುದು.

ದ್ವಾಪರಯುಗದಲ್ಲಿ ಕೌರವರ ಕುಟಿಲತೆಯಿಂದ ರಾಜ್ಯವನ್ನು ಕಳೆದುಕೊಂಡು ವನವಾಸ ಹೊರಟ ಪಾಂಡವರು ಸೋಮಗಿರಿ(ಮುಡುಕುತೊರೆ) ಬಂದಿದ್ದರಂತೆ. ಈ ಸಂದರ್ಭ ಸುತ್ತಲಿನ ಪ್ರಕೃತಿಯ ಸೊಬಗನ್ನು ಕಂಡು ಆಕರ್ಷಿತಗೊಂಡ ಅರ್ಜುನ ಲಿಂಗರೂಪಿಯಾಗಿದ್ದ ಈಶ್ವರನನ್ನು ಕಂಡು ಹರ್ಷಗೊಂಡನಲ್ಲದೆ, ಲಿಂಗಕ್ಕೆ ಮಲ್ಲಿಕಾಪುಷ್ಪಗಳಿಂದ ಪೂಜಿಸಿ ತನ್ನ ಇಷ್ಟಾರ್ಥವನ್ನು ಪಡೆದನಂತೆ ಹೀಗೆ ಮಲ್ಲಿಕಾಪುಷ್ಪದಿಂದ ಪೂಜಿಸಲ್ಪಟ್ಟಿದ್ದರಿಂದ ಈ ದೇಗುಲಕ್ಕೆ ಮಲಿಕಾರ್ಜುನಸ್ವಾಮಿ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತದೆ.

ಇನ್ನು ಮಲ್ಲಿಕಾರ್ಜುನ ದೇಗುಲದ ಬಳಿಯೇ ಪತ್ನಿ ಭ್ರಮರಾಂಬೆಯ ದೇವಾಲಯವಿದ್ದು, ವಿಜಯನಗರ ವಾಸ್ತುಶೈಲಿಯನ್ನು ದೇವಾಲಯ ಗರ್ಭಗೃಹ, ಶುಕನಾಸಿ, ನವರಂಗ, ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯ ಸಿಂಹ ಪೀಠದ ಮೇಲೆ ಐದಡಿ ಎತ್ತರದ ಭ್ರಮರಾಂಬ ವಿಗ್ರಹವಿದೆ. ಈ ಭ್ರಮರಾಂಬ ವಿಗ್ರಹವು ಚತುರ್ಭುಜವನ್ನು ಹೊಂದಿದ್ದು, ಎರಡು ಕೈಗಳು ವರದ ಮುದ್ರೆ ಕಮಲ ಕುಮುದ ಹಸ್ತಗಳಿಂದ ಕೂಡಿದೆ. ಅಲ್ಲದೆ, ಕಮಲಹಸ್ತ, ಅಭಯಹಸ್ತ, ಕರ್ಣಪತ್ರ, ಕಿರೀಟ, ಗೋರಂಭ, ಪಾದ, ಕಮಲಪೀಠ, ಸಿಂಹಪೀಠ, ಪ್ರಭಾವಳಿ, ಶ್ರೀಚಕ್ರ ಮೊದಲಾದ ಆಭರಣಗಳಿಂದ ದೇವಿ ಸಾಲಂಕೃತಳಾಗಿ ಶೋಭಿಸುತ್ತಿದ್ದಾಳೆ.

See also  ಚಾರಣಿಗರಿಗೆ ಮುದನೀಡುವ ಶಿಡ್ಲಮಲ್ಲಿಕಾರ್ಜುನ ಬೆಟ್ಟ!

ದೇಗುಲದ ಹೊರಭಾಗದ ಗೋಪುರ ಮೂರನೆಯ ಕೃಷ್ಣರಾಜ ಒಡೆಯರ ಕಾಲದಲ್ಲಿ ರೂಪುತಳೆದಿದ್ದು, ಗೋಪುರ ದ್ವಾರದ ಎರಡೂ ಬದಿಯಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ರಚಿಸಿದ ಎರಡು ಬಸವನ ವಿಗ್ರಹಗಳಿವೆ. ಗೋಪುರದ ಮೇಲೆ ಕಲಶವಿದೆ. ಪ್ರವೇಶ ದ್ವಾರದ ಬಳಿ ಸುಮಾರು ನಲವತ್ತು ಅಡಿ ಎತ್ತರದ ದೀಪಸ್ತಂಭವಿದ್ದು, ದೇಗುಲದ ವಾಯುವ್ಯ ಮೂಲೆಯಲ್ಲಿ ಚಿತ್ರಮಂಟಪವಿದೆ. ಈ ಮಂಟಪದ ಮುಂಭಾಗದಲ್ಲಿ ಪಾಕಶಾಲೆ, ಯಾಗಶಾಲೆ ಅಡುಗೆ ಮನೆಗಳಿವೆ. ಇನ್ನು ಈಶಾನ್ಯ ಭಾಗದಲ್ಲಿ ಗಣಪತಿ ಮತ್ತು ನವಗ್ರಹ ದೇವಸ್ಥಾನವಿದೆ. ಪೂರ್ವದಲ್ಲಿ ದುರ್ಗಾದೇವಿ, ಬಸವೇಶ್ವರ, ಕಾಶಿವಿಶ್ವನಾಥ ಮತ್ತು ಪಂಚಲಿಂಗಗಳ ಎಂಟು ಪುಟ್ಟ ಗುಡಿಗಳಿವೆ. ಆಗ್ನೇಯದಲ್ಲಿ ವೃಷಭಮೂರ್ತಿ ನಾಗಮೂರ್ತಿಗಳಿವೆ.

ದಕ್ಷಿಣ ದ್ವಾರದ ಹೊರಗೆ ಮಾದೇಶ್ವರನ ಪಾದಪೀಠದ ಗುಡಿಯಿದೆ. ದೇವಾಲಯದ ಧ್ವಜಸ್ತಂಭವನ್ನು ತಗಡಿನಿಂದ ಮಾಡಲಾಗಿದ್ದು ಇದು ಹನ್ನೆರಡು ಅಡಿ ಎತ್ತರವಿದೆ. ಇದರ ಮುಂದೆ ವೃಷಭೇಶ್ವರ ಮೂರ್ತಿಯ ಕಲ್ಲುಕಂಬವನ್ನು ಕಾಣಬಹುದು. ಅರುಣ ಎಂಬ ದುಷ್ಟರಾಕ್ಷಸನನ್ನು ಶಿವನ ಪತ್ನಿ ಪಾರ್ವತಿದೇವಿ ಭ್ರಮರ(ದುಂಬಿ)ರೂಪ ತಳೆದು ಬಂದು ಸಂಹರಿಸುವುದರ ಮೂಲಕ ಭ್ರಮರಾಂಭೆಯಾಗಿ ನೆಲೆಸಿದಳೆಂದು ಹೇಳಲಾಗುತ್ತಿದೆ.

ಬೆಟ್ಟದ ತಳಭಾಗದಲ್ಲಿ ಬೆಟ್ಟಹಳ್ಳಿ ಮಾರಮ್ಮ ಎಂಬ ಗ್ರಾಮ ದೇವತೆಯ ದೇವಸ್ಥಾನವೂ ಇದೆ. ಸುತ್ತಮುತ್ತ ಕಣ್ಣೀರ್ಕಟ್ಟೆ, ಹಾಲುಗಟ್ಟೆ, ಕಪಿಲಗೋಮಾಳ ಮುಂತಾದ ಸ್ಥಳಗಳಿದ್ದು ಇವುಗಳಿಗೂ ತನ್ನದೇ ಐಹಿತ್ಯವಿರುವುದನ್ನು ಕಾಣಬಹುದು.

ಒಟ್ಟಾರೆ ಹೇಳಬೇಕೆಂದರೆ ಮುಡುಕುತೊರೆ ನಿಸರ್ಗ ಸುಂದರತಾಣ. ಹೀಗಾಗಿಯೇ ಇಲ್ಲಿಗೆ ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರೂ ಭೇಟಿ ನೀಡುತ್ತಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು