News Kannada
Monday, December 05 2022

ನುಡಿಚಿತ್ರ

ಗಮನಸೆಳೆಯುವ ವನಭದ್ರಕಾಳಿ ದೇವರಕಾಡು ಹಬ್ಬ!

Photo Credit :

ಗಮನಸೆಳೆಯುವ ವನಭದ್ರಕಾಳಿ ದೇವರಕಾಡು ಹಬ್ಬ!

ಮಡಿಕೇರಿ: ಕೊಡಗಿನ ಮಟ್ಟಿಗೆ ಹೇಳುವುದಾದರೆ ಇಲ್ಲಿನ ಮುಖ್ಯ ರಸ್ತೆಗಳಲ್ಲಿ ಕೆಲವು ದೇವಾಲಯಗಳಿದ್ದು ಅವುಗಳೆಲ್ಲವೂ ಜೀವರಕ್ಷಕ ದೇವರುಗಳಾಗಿವೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ಹೀಗಾಗಿಯೇ ಈ ದೇವಾಲಯಗಳ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿ ಪ್ರಾರ್ಥನೆ ಸಲ್ಲಿಸಿಯೋ, ಕಾಣಿಕೆ ಹಾಕಿ ಮುಂದಕ್ಕೆ ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇಂತಹ ದೇವಾಲಯಗಳ ಪೈಕಿ ವೀರಾಜಪೇಟೆ ಮತ್ತು ಗೋಣಿಕೊಪ್ಪ ರಸ್ತೆ ನಡುವೆ ಸಿಗುವ ಹಾತೂರು ಬಳಿಯಿರುವ ವನಭದ್ರಕಾಳೇಶ್ವರಿ ದೇವಾಲಯವೂ ಒಂದಾಗಿದೆ. ಪ್ರತಿ ದಿನವೂ ಈ ರಸ್ತೆಯಲ್ಲಿ ಸಾಗುವವರು ವನಭದ್ರಕಾಳೇಶ್ವರಿ ದೇವಿಗೆ ನಮಿಸಿ ಮುಂದೆ ಸಾಗುತ್ತಾರೆ. ಇಲ್ಲಿ ಎರಡು ವರ್ಷಗಳಿಗೊಮ್ಮೆ ಸುತ್ತಲಿನ ದೇವಾಲಯ ವ್ಯಾಪ್ತಿಗೊಳಪಡುವ ಕುಟುಂಬಗಳ ನೇತೃತ್ವದಲ್ಲಿ ವನಭದ್ರಕಾಳಿ ದೇವರಕಾಡು ಹಬ್ಬವನ್ನು ಆಚರಿಸಲಾಗುತ್ತದೆ.

ಅದರಂತೆ ಈ ಬಾರಿಯೂ ಹಬ್ಬವನ್ನು ಎರಡು ದಿನಗಳ ಕಾಲ ಸಡಗರ, ಸಂಭ್ರಮ, ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರು ನೆರೆದು ಹೂವು, ಹಣ್ಣು, ಕಾಯಿಗಳನ್ನು ಅರ್ಪಿಸಿ ಮಳೆಬೆಳೆಯಾಗಿ ಜನಜಾನುವಾರುಗಳನ್ನು ರಕ್ಷಿಸುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಹಿಂದೆ ಕಾಡಿನಿಂದ ಆವೃತ್ತವಾಗಿದ್ದ ಹಾತೂರು ಗ್ರಾಮದ ಜನರನ್ನು ವನಭದ್ರಕಾಳಿ ರಕ್ಷಿಸುತ್ತಿದ್ದಳಂತೆ. ಗ್ರಾಮದಲ್ಲಿ ಕಷ್ಟನಷ್ಟಗಳು ಸಂಭವಿಸಿದಾಗ ದೇವಿಗೆ ಮೊರೆಹೋದರೆ ಎಲ್ಲವನ್ನು ಪರಿಹಾರ ಮಾಡಿ ಕಾಪಾಡುತ್ತಿದ್ದಳಂತೆ. ಹೀಗಾಗಿ ಎರಡು ವರ್ಷಕ್ಕೊಮ್ಮೆ ಆಕೆಯ ಸನ್ನಿಧಿಯಲ್ಲಿ ಕೊಕ್ಕಂಡ, ಕೊಂಗೇಪಂಡ ಮತ್ತು ಕೇಳಪಂಡ ಕುಟುಂಬದವರು ಸೇರಿ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸುತ್ತಿದ್ದರು. ದಿನ ಕಳೆದಂತೆ ದೇವಿಗೆ ಭಕ್ತರು ಹೆಚ್ಚಾಗಿ, ಇಡೀ ಊರು ಜನ ಸೇರಿ ಹಬ್ಬವನ್ನು ಆಚರಿಸುವ ಮಟ್ಟಕ್ಕೆ ಬೆಳೆಯಿತು. ಇವತ್ತು ವನಭದ್ರಕಾಳೇಶ್ವರಿ ಇಡೀ ಊರಿನ ಆದಿ ದೇವತೆ ಮಾತ್ರವಲ್ಲದೆ, ಈ ರಸ್ತೆ ಮೂಲಕ ಸಾಗುವ ಎಲ್ಲ ಜನರ ರಕ್ಷಿಸುವ ದೇವತೆಯಾಗಿದ್ದಾಳೆ.

ವನಭದ್ರಕಾಳಿ ದೇವರಕಾಡು ಹಬ್ಬದ ಆಚರಣೆಯಲ್ಲಿ ಒಂದಷ್ಟು ವಿಭಿನ್ನತೆ ಮತ್ತು ವಿಶೇಷತೆಯನ್ನು ನಾವು ಕಾಣಬಹುದಾಗಿದೆ. ಹಬ್ಬದ ದಿನದಂದು ಇಡೀ ಊರಲ್ಲಿ ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ ಎಂಬ ಘೋಷ ಮುಗಿಲು ಮುಟ್ಟುತ್ತದೆ. ದೇವರು ತಿರುವಳಗಾರನ ಮೇಲೆ ಅವಾಹನೆಗೊಳ್ಳುತ್ತದೆ. ಇನ್ನು ಹಬ್ಬದ ಸಂಪ್ರದಾಯದಂತೆ ಕೊಕ್ಕಂಡ ಕುಟುಂಬದ ಐನ್ಮನೆಯಿಂದ ಭದ್ರಕಾಳಿ ದೇವತೆಯ ಮೊಗವನ್ನು ಹಿಡಿದು ದೈವ ನೃತ್ಯದ ತೆರೆಯ ಮೂಲಕ ಕೊಳತ್ತೋಡು ಗ್ರಾಮ ತಲುಪಿ, ಅಲ್ಲಿ ದೈವ ನೃತ್ಯದ ನಂತರ ಭಕ್ತಾಧಿಗಳಿಂದ ಹರಕೆ ಒಪ್ಪಿಸುವ ಕಾರ್ಯ ನೆರವೇರುತ್ತದೆ.

ಇದಾದ ಬಳಿಕ ಕೊಂಗೇಪಂಡ ಐನ್ಮನೆಯಿಂದ ತೆರೆ ಹೊರಟು, ಭತ್ತದ ಪೈರಿನ ಮಧ್ಯೆ ನಡೆದು ಬಂದ ದೇವಿ, ಹಾತೂರಿನ ಮಹಾದೇವ ದೇವಸ್ಥಾನದ ಬಳಿ ಇರುವ ಅರಳಿ ಮರದ ಬಳಿ ಆಸೀನಳಾಗುತ್ತಾಳೆ. ದೇವಿಯ ಆಯುಧವನ್ನು ಪುಟ್ಟಮಕ್ಕಳು ಕೈಯಲ್ಲಿ ಹಿಡಿದು ದೇವಿ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ಇದೆಲ್ಲದರ ನಡುವೆ ಅಯ್ಯಪ್ಪ ಸ್ವಾಮಿಯ ತೆರೆ ಕೇಳಪಂಡ ಐನ್ಮನೆಯಿಂದ ಪೈರಿನ ಮಧ್ಯೆ ನಲಿಯುತ್ತಾ, ಗದ್ದೆಯಲ್ಲಿ ಮೇಯುತ್ತಿದ್ದ ಹಸುಗಳನ್ನು ದಿಗಿಲು ಬೀಳಿಸುತ್ತಾ ಓಡಿಬಂದು ಭದ್ರಕಾಳಿಯ ಸಮೀಪ ನೆರೆಯುತ್ತದೆ. ಬಳಿಕ ಈ ಅರಳಿ ಮರದ ಸುತ್ತಲೂ ದೈವಗಳ ನೃತ್ಯ ನಡೆಯುತ್ತದೆ.

See also  ಈಗ ಮಂಜಿನ ಆಟ ಬಲು ಸುಂದರ ನೋಟ..

ದೇವಾಲಯದ ಸನ್ನಿಧಿಗೆ ತೆರಳಿ ಎತ್ತರದ ದೇವರ ಕಲ್ಲಿನ ಮೇಲೆ ಹತ್ತಿ, ಗರ್ಭಗುಡಿಗೆ ಮೂರು ಸುತ್ತು ಬಂದು ನೆರೆದಿದ್ದ ಭಕ್ತಾಧಿಗಳ ಹರಕೆಯನ್ನು ಬನದೇವಿ ಸ್ವೀಕರಿಸಿದಳು. ಆ ನಂತರ ಭಂಡಾರ ಅರ್ಪಣೆ ಕಾರ್ಯ ನೆರವೇರಿತು. ಮಹಾಪೂಜೆಯೊಂದಿಗೆ ವನಭದ್ರಕಾಳಿ ದೇವರಕಾಡು ಹಬ್ಬಕ್ಕೆ ತೆರೆ ಬಿದ್ದಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು