ಚಾಮರಾಜನಗರ ಜಿಲ್ಲೆಯು ಕರ್ನಾಟಕ ಮತ್ತು ಕೇರಳ, ತಮಿಳುನಾಡಿಗೆ ಹೊಂದಿಕೊಂಡಂತಿದ್ದು, ಒಂದಷ್ಟು ಬೆಟ್ಟಗುಡ್ಡ, ಅರಣ್ಯಗಳನ್ನು ಹೊಂದಿ ಸುಂದರ ನೈಸರ್ಗಿಕ ತಾಣವಾಗಿ ಗಮನ ಸೆಳೆಯುತ್ತದೆ. ಇಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ನಾಗಮಲೆ, ಬಿಳಿಗಿರಿರಂಗನ ಬೆಟ್ಟ ಮೊದಲಾದವು ಪ್ರಸಿದ್ಧ ತಾಣಗಳಾಗಿವೆ. ಇವುಗಳ ನಡುವೆ ಕೊಂಗಳ್ಳಿ ಬೆಟ್ಟವೂ ಒಂದಾಗಿದ್ದು, ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯವು ಭಕ್ತರು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ತಾಳವಾಡಿ ಸಮೀಪದ ಶ್ರೀ ಕೊಂಗಳ್ಳಿ ಬೆಟ್ಟವು ಅರಣ್ಯದ ನಡುವೆಯಿದ್ದು ಇಲ್ಲಿನ ಮಲ್ಲಿಕಾರ್ಜುನ ಆದಿದೈವನಾಗಿದ್ದಾನೆ. ಪ್ರತಿದಿನವೂ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಅಮಾವಾಸ್ಯೆಯಂದು ವಿಶೇಷ ಪೂಜಾ ಕಾರ್ಯಗಳು ನೆರವೇರುತ್ತವೆ.
ಕೊಂಗಳ್ಳಿ ಬೆಟ್ಟವು ಗುಂಡ್ಲುಪೇಟೆಯಿಂದ ಸುಮಾರು 32 ಕಿಮೀ ದೂರದಲ್ಲಿ ತಮಿಳುನಾಡಿನ ತಾಳವಾಡಿ ಪಿರ್ಕಾದಲ್ಲಿದ್ದು, ತಾಣವು ನಿಸರ್ಗ ಸೌಂದರ್ಯದಿಂದ ಕೂಡಿದೆ, ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ಸ್ವಾಮಿ ಸುತ್ತಮುತ್ತಲ ಜನರ ಆರಾಧ್ಯ ಧೈವನಾಗಿದ್ದಾನೆ.
ಇನ್ನು ಪೌರಾಣಿಕ ಇತಿಹಾಸವನ್ನು ನೋಡುವುದಾದರೆ ಮುಡುಕುತೊರೆಯಿಂದ ಬಂದ ಮಲ್ಲಿಕಾರ್ಜುನ ಸ್ವಾಮಿಯನ್ನು ಕೊಂಗಳ್ಳಿಯ ದಟ್ಟಕಾಡು, ಪ್ರಶಾಂತ ವಾತಾವರಣ ಸೆಳೆಯಿತಂತೆ. ಹೀಗಾಗಿ ಜಪತಪ ಮಾಡಲು ಇದೇ ಸೂಕ್ತ ಜಾಗವೆಂದು ತೀರ್ಮಾನಿಸಿ ನೆಲೆ ನಿಂತರು ಎಂದು ಹೇಳಲಾಗುತ್ತದೆ. ಆದರೆ ಈ ದೇಗುಲಕ್ಕೆ ಮಹಿಳಾ ಭಕ್ತರಿಗೆ ಪ್ರವೇಶ ನಿಷಿದ್ಧವಾಗಿದೆ. ಇಲ್ಲಿಗೆ ತೆರಳಿದರೆ ತೊಂದರೆಯಾಗುತ್ತದೆ ಎಂಬ ಮಾತುಗಳಿವೆ. ಹೀಗಾಗಿ ಯಾರೂ ಕೂಡ ತೆರಳುವುದಿಲ್ಲ.
ಜಾತ್ರೆ ಸಮಯದಲ್ಲಿ ಹೊರ ಊರುಗಳಿಂದ ಆಗಮಿಸುವ ಭಕ್ತರು ಹರಕೆ ಸಲ್ಲಿಸಿ ದೇವರ ದರ್ಶನ ಪಡೆದರೆ, ಇನ್ನು ಕೆಲವರು ಹುಲಿವಾಹನ ಸೇವೆ ಹಾಗೂ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಹರಕೆ ಹೊತ್ತವರು ಮಾತ್ರವಲ್ಲದೆ ಕೆಲವು ಗ್ರಾಮಗಳ ಜನರು ಸಾಮೂಹಿಕವಾಗಿ ತೆರಳಿ ಪೂಜೆ ಸಲ್ಲಿಸಿ, ಸಾಮೂಹಿಕ ಬೋಜನ ಮಾಡಿ ಬರುತ್ತಾರೆ.
ತಮಿಳುನಾಡಿನ ಸರ್ಕಾರವು ಬೆಟ್ಟದಲ್ಲಿ ವಸತಿ ಗೃಹ, ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ, ಭಕ್ತರಿಗೆ ಅಡುಗೆ ಮಾಡಲು ಬೇಕಾದ ಪಾತ್ರೆಗಳನ್ನು ವ್ಯವಸ್ಥೆ ಮಾಡಿದೆ. ಈ ಹಿಂದೆ ಬೆಟ್ಟಕ್ಕೆ ತೆರಳಿದವರು ಅಲ್ಲಿಯೇ ಉಳಿದುಕೊಳ್ಳಲು ಅವಕಾಶವಿತ್ತು. ಆದರೆ ಈ ಅರಣ್ಯವಲಯ ಹುಲಿಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಕಾರಣದಿಂದ ಭಕ್ತರಿಗೆ ಈಗ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಮಾತ್ರ ಭೇಟಿ ಹಿಂತಿರುಗಬೇಕಾಗಿದೆ.
ಕೊಂಗಳ್ಳಿ ಬೆಟ್ಟ ಪ್ರದೇಶವು ತಮಿಳುನಾಡು ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿದ್ದು, ಕಳೆದ ಫೆಬ್ರವರಿ ತಿಂಗಳಿಂದ ಇಲ್ಲಿ ರಾತ್ರಿ ತಂಗುವುದಾಗಲೀ, ರಾತ್ರಿ 6 ಗಂಟೆಯ ನಂತರ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ.
ಹುಲಿಸಂರಕ್ಷಣಾ ಪ್ರದೇಶವಾಗಿರುವ ಇಲ್ಲಿ ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ ನಿಗಧಿತ ಅವಧಿಯಲ್ಲಿ ಮಾತ್ರ ದೇಗುಲಕ್ಕೆ ತೆರಳಬೇಕಾಗಿದೆ. ಸುತ್ತಲೂ ಹಸಿರ ಹಚ್ಚಡದ ಬೆಟ್ಟಗುಡ್ಡಗಳಿಂದ ಆವೃತವಾದ ಈ ಪ್ರದೇಶ ಪ್ರಶಾಂತವಾಗಿದ್ದು, ಆಸ್ತಿಕರು ನಾಸ್ತಿಕರು ಎನ್ನದೆ ಎಲ್ಲರನ್ನು ಸೆಳೆಯುತ್ತಿದೆ. ಹೀಗಾಗಿ ಇಲ್ಲಿಗೆ ತೆರಳುವವರ ಸಂಖ್ಯೆ ಜಾಸ್ತಿಯಾಗಿಯೇ ಇರುತ್ತದೆ.
ಸದಾ ಪೇಟೆ ಪಟ್ಟಣಗಳ ಗೌಜು ಗದ್ದಲಗಳಲ್ಲಿಯೇ ತಮ್ಮನ್ನು ತೊಡಗಿಸಿಕೊಂಡವರು. ಒಂದಷ್ಟು ಸಮಯವನ್ನು ನಿಸರ್ಗದ ಪ್ರಶಾಂತ ಮಡಿಲಲ್ಲಿ ಕಳೆದುಕೊಂಡು ಬರುತ್ತೇನೆ ಎನ್ನುವವರು ಇಲ್ಲಿಗೆ ಭೇಟಿ ನೀಡಿದ್ದೇ ಆದರೆ ಒಂದಷ್ಟು ಮನಸ್ಸಾಂತಿ ಪಡೆದು ಬರಬಹುದಾಗಿದೆ.