News Kannada
Thursday, December 08 2022

ನುಡಿಚಿತ್ರ

ಸ್ವಾತಂತ್ರ್ಯೋತ್ಸವದ ಸಂಭ್ರಮದ ಮೇಲೆ ಕೊರೋನಾ ಕರಿನೆರಳು

Photo Credit :

ಸ್ವಾತಂತ್ರ್ಯೋತ್ಸವದ ಸಂಭ್ರಮದ ಮೇಲೆ ಕೊರೋನಾ ಕರಿನೆರಳು

ಮತ್ತೆ ಸ್ವಾತಂತ್ರ್ಯೋತ್ಸವ ಬಂದಿದೆ… ಬಹುಶಃ ಬಾರಿಯ ಸ್ವಾತಂತ್ರ್ಯೋತ್ಸವದ ಸಂಭ್ರಮ ನಮ್ಮ ಮೊಗದಲ್ಲಿ ಕಾಣದಂತೆ ಕೊರೋನಾ ಎಂಬ ಮಹಾಮಾರಿ ಸೋಂಕು ಮಾಸ್ಕ್ ಹಾಕಿಸಿದೆ. ಅದರಾಚೆಗೆ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಾಗಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರ ಬದುಕು ಅತಂತ್ರವಾಗಿದೆ ಎಂಬುದಷ್ಟೇ ಸತ್ಯ.

ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಯಾವುದೇ ಸಂಭ್ರಮವಿಲ್ಲದೆ ಸರಳವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಂತಹ ಪರಿಸ್ಥಿತಿ ಬಂದೊದಗಿದೆ. ಇದು ಕೊರೋನಾ ಎಂಬ ಮಹಾಮಾರಿ ತಂದೊಡ್ಡಿದ ಸಂಕಷ್ಟವಾಗಿದೆ. ಕಳೆದ ಆರು ತಿಂಗಳಲ್ಲಿ ಇಡೀ ಜಗತ್ತು ಅದರಲ್ಲೂ ಭಾರತದ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದೆ. ಹಲವು ಉದ್ಯಮಗಳು ಮುಚ್ಚಿವೆ. ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ. ಸಹಸ್ರಾರು ಜನ ಈಗಾಗಲೇ ದೇಶದಲ್ಲಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಇದರ ನಡುವೆ ಮಹಾಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಆಸ್ತಿಪಾಸ್ತಿ ಕಳೆದು ಕೊಂಡು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅದರಾಚೆಗೆ ದಾಳಿ ದಳ್ಳುರಿಗೆ ಕೋಟ್ಯಂತರ ಆಸ್ತಿಗಳು ನಾಶವಾಗಿವೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇದ್ದು, ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಅದನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ. ಅದರಾಚೆಗೂ ಒಂದಷ್ಟು ಪಿಡುಗುಗಳಿಗೆ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ಕೆಲಸವೂ ಆಗಿಲ್ಲ ಎನ್ನಲಾಗದು. ದೇಶ ಆಧುನೀಕತೆಯತ್ತ ಮುನ್ನಡೆಯುತ್ತಿದ್ದು ಎಲ್ಲ ಕ್ಷೇತ್ರವೂ ಡಿಜಟಲೀಕರಣದತ್ತ ವಾಲುತ್ತಿದೆ. ಇದು ಸಂತಸದ ವಿಚಾರವೂ ಹೌದು. ಇನ್ನು ತ್ರಿವಳಿ ತಲಾಕ್ ರದ್ದು, ಜಮ್ಮು ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ರದ್ದು, ರಾಮಮಂದಿರ ವಿವಾದ ಇತ್ಯರ್ಥ ಹೀಗೆ ಹಲವಾರು ಐತಿಹಾಸಿಕ ವಿಚಾರಗಳಿಗೆ ಸಾಕ್ಷಿಯಾಗಿದ್ದೇವೆ.

ಇವತ್ತಿನ ರಾಜಕೀಯ ಹಗ್ಗ ಜಗ್ಗಾಟದಲ್ಲಿ ಭಾರತದ ಶ್ರೀಸಾಮಾನ್ಯ ಬಡವನಾಗುತ್ತಿದ್ದಾನೆ. ಅಧಿಕಾರಕ್ಕೆ ಬಂದ ಮತ್ತು ಅಧಿಕಾರ ಪಡೆಯಲು ಹವಣಿಸುತ್ತಿರುವ ನಾಯಕರು ದೇಶದ ಬಗ್ಗೆ ಚಿಂತಿಸುತ್ತಿದ್ದಾರಾ? ಚಳವಳಿ, ಸೆರೆವಾಸ, ಪ್ರಾಣ ತ್ಯಾಗ ಮಾಡಿ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರಾ? ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅನಿವಾರ್ಯತೆಗಳು ನಮ್ಮ ಮುಂದಿದೆ.

ಇವತ್ತಿನ ಕಾಲಘಟ್ಟದಲ್ಲಿ ನಿಂತು ನೋಡಿದರೆ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳಿಗೆ ಈ ಅಭಿವೃದ್ಧಿ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಹೀಗಾಗಿಯೇ ಅವು ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿವೆ. ಅಷ್ಟೇ ಅಲ್ಲದೆ ದೇಶವನ್ನು ಬುಡಮೇಲು ಮಾಡುವ ಭಯೋತ್ಪಾದನೆಯನ್ನು ದೇಶದಲ್ಲಿ ಹರಡುತ್ತಿದೆ. ಅವತ್ತು ಸ್ವಾತಂತ್ರ್ಯಕ್ಕಾಗಿ ಬರೀ ಬ್ರಿಟೀಷರ ವಿರುದ್ಧ ಹೋರಾಡಿದ ನಾವು ಇವತ್ತು ಸ್ವಾತಂತ್ರ್ಯವಾಗಿ ಬದುಕಲು ಹತ್ತುಹಲವು ಪಟ್ಟಭದ್ರ ಹಿತಾಸಕ್ತಿಗಳ, ಮತಾಂಧರ, ಭ್ರಷ್ಟಾಚಾರಿಗಳ, ಜಾತಿಯ ಹೆಸರಲ್ಲಿ ಬೇಳೆ ಬೇಯಿಸುಕೊಳ್ಳುವವರ ವಿರುದ್ಧ, ಅನಕ್ಷರತೆ ವಿರುದ್ಧ ಹೀಗೆ ಹಲವು ರೀತಿಯ ಹೋರಾಟಗಳನ್ನು ಮಾಡುವುದು ಅನಿವಾರ್ಯವಾಗಿದೆ.

ಇವತ್ತು ಸ್ವಾತಂತ್ರ್ಯ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ ಎಲ್ಲವೂ ಅಭಿವೃದ್ಧಿ ದಿಕ್ಕಿನೆಡೆಗೆ ಸಾಗಿದೆಯಾ? ಸಾಗಿಲ್ಲವಾದರೆ ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆಯೂ ಚಿಂತೆ ಮಾಡಬೇಕಾದ ಕಾಲ ಬಂದಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಾದರೂ ಅಧಿಕಾರರೂಢರು ಸ್ವಹಿತ, ಸ್ವಾರ್ಥ ಮರೆತು, ದೇಶದ ಮತ್ತು ದೇಶದ ಜನತೆ ಬಗ್ಗೆ ಚಿಂತಿಸುವ ಅವರ ಅಭಿವೃದ್ಧಿಗೆ ಸಹಕಾರಿಯಾಗುವ ಯೋಜನೆಯನ್ನು ರೂಪಿಸಲಿ ಆಗ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ. 

See also  ರೋಮಾಂಚನಗೊಳಿಸಿದ ಜೋಡಿ ಎತ್ತಿನಗಾಡಿ ಓಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು