ಬದುಕ ದಾರಿಯಲ್ಲಿ ನಾವುಗಳು ಅನೇಕ ಜಾಗಗಳನ್ನು, ಪ್ರವಾಸಿ ತಾಣಗಳನ್ನು ನೋಡಿರುತ್ತೇವೆ. ಆದರೆ ಇದು ಅದ್ಯಾವ ಸ್ಥಳವನ್ನೂ ಹೋಲುವಂತದ್ದಲ್ಲ. ಅದು ಒಂದುಗೂಡಿಸಲು ರೀತಿ ಪುಣ್ಯ ದೇಗುಲ.
ಅಲ್ಲಿ ಪೂಜೆ ಮಾಡುವ ಭಟ್ಟರಿಲ್ಲ, ಪ್ರಸಾದ ತಿನ್ನುವ ಭಕ್ತರಿಲ್ಲ, ದೇವರ ಗರ್ಭಗುಡಿಯಿಲ್ಲ. ಅದುವೇ ಮಂಗಳೂರಿನ ಸಮೀಪದ ಕುತ್ತಾರು ಗ್ರಾಮದಲ್ಲಿರುವ ” ಬಾಲ ಸಂರಕ್ಷಣಾ ಕೇಂದ್ರ” ಎಂಬ ಆಶ್ರಮ.
ಅದು ನೂರಾರು ಮಕ್ಕಳನ್ನು ಪ್ರೀತಿಸಿ, ಭರವಸೆಯ ಹೆಜ್ಜೆಗೆ ಉತ್ತಮ ದಾರಿ ತೋರಿಸುವ ದಾರಿದೀಪ. ಸದಾ ಮಕ್ಕಳ ಬೊಬ್ಬೆಯಿಂದ ಅನುರಣಿಸುವ ನಂದಾಗೋಕುಲ. ಪುಟಾಣಿಗಳ ಸ್ನೇಹಸಂಗಮ.
ದಿವಂಗತ ಪಿ.ಎಮ್ ಶೆಣೈಯವರು ನೀಡಿದ ಒಂದೂವರೆ ಎಕರೆಯಲ್ಲಿ ಹೃದಯ ಶ್ರೀಮಂತರು ಕಟ್ಟಿದ ಈ ಭವ್ಯಧಾಮಕ್ಕೆ 35ವರ್ಷ ಕಳೆದ ಹರ್ಷೋದ್ಗಾರ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಹಾಕುವ ಉದ್ದೇಶವನ್ನಿಟ್ಟುಕೊಂಡಿರುವ ಈ ಸಂಸ್ಥೆ ಎಂದೆಂದೂ ಮಕ್ಕಳ ಪ್ರೀತಿಯ ತವರು. 2002 ರಲ್ಲಿ ಈ ಸಂಸ್ಥೆಗೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿದ್ದು ಇದರ ಹಿರಿಮೆ.
ಪ್ರತಿಭೆ ಎಂಬ ಹೂವು ಅರಳಲು ಶ್ರೀಮಂತರ ಮನೆಯೇ ಆಗಬೇಕೆಂದಿಲ್ಲ. ಅದು ಬಡವರ ಮನೆಯಲ್ಲೂ ಅರಳುತ್ತದೆ ಎಂಬುವುದಕ್ಕೆ ಇಲ್ಲಿಯ ವಿದ್ಯಾರ್ಥಿಗಳು ಸಾಕ್ಷಿಯಾಗಿ ನಿಲ್ಲುತ್ತಾರೆ. ” ಮಿನಿ ಭಾರತ” ವಾಗಿ ಕಾಣುವ ಈ ಮಕ್ಕಳ ಧಾಮದಲ್ಲಿ ಅರುಣಾಚಲ, ಮೇಘಾಲಯ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕದ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮೇಘಾಲಯದ ಮಕ್ಕಳು ಮೈಸೂರಿನ ಪ್ರಸಿದ್ಧ ಜಾನಪದ ಕುಣಿತ ಕಂಸಾಳೆ ಯಲ್ಲಿ ರಾಜ್ಯಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿಯ ಮಕ್ಕಳು ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.
ನಂದಾಗೋಕುಲದಂತಿರುವ ಈ ಆಶ್ರಮಕ್ಕೆ ಎಲ್ಲರೂ ಒಮ್ಮೆ ಭೇಟಿ ನೀಡಲೇಬೇಕು ಎಂಬ ಶುಭದೊಸಗೆ ನನ್ನದು.