“ಕಾಡು ಮಲ್ಲಿಗೆಯೊಂದು ಕಾಡಿನಲ್ಲಿ ಅರಳಿಹುದು..
ಬಾಡಿ ಹೋಗುವ ಮುನ್ನ ಕೇಳುವವರಾರಿಲ್ಲ..”
ಕಾಡು ಎಂದಾಕ್ಷಣ ಎಲ್ಲರ ಮನಸ್ಸಿಗೆ ಬರುವುದು ದಟ್ಟವಾದ ಅರಣ್ಯ, ಕ್ರೂರ ಮೃಗಗಳ ಕೂಗಾಟ, ಸಾಧು ಪ್ರಾಣಿಗಳ ಚೀರಾಟ ಎಲ್ಲೋ ಕಳೆದ ಹೋದ ಹಕ್ಕಿಗಳ ಚಿಲಿಪಿಲಿ ನಾದ. ಆದರೆ ಈ ಕಾಡಿಗಿಂತಲೂ ಭಯಂಕರವಾದ ಕಾಡು ಮತ್ತೊಂದಿದೆ ಅದು ಯಾವುದು ಗೋತ್ತೇ ನಿಮಗೆ?..ಒತ್ತೋತ್ತಾಗಿರುವ ಗಗನ ಚುಂಬಿ ಕಟ್ಟಡಗಳು ,ಅವುಗಳ ಬುಡದಲ್ಲಿ ಸೂರ್ಯನ ಬೆಳಕನ್ನೇ ಕಾಣದ ಕುರುಚಲು ಮನೆಗಳು ಹೆಬ್ಬಾವಿನಂತಹ ಹೆದ್ದಾರಿಗರಿಳು ಅಲ್ಲಲ್ಲಿ ಭಯ ಹುಟ್ಟಿಸುವ ಅಪಘಾತಗಳು ವಾಹನಗಳ ಕಿರುಚಾಟ ಕಾರ್ಖಾನೆಗಳ ಸದ್ದು ಎಲ್ಲೋ ಮರೆಯಾಗಿರುವ ನಮ್ಮ ಸಂಸ್ಕ್ರತಿ ಇವೆಲ್ಲವುದರೊಂದಿಗೆ ಮುಂಜಾನೆ ಕೆಲಸಕ್ಕೆಂದು ಹೋದರೆ ರಾತ್ರಿ ಬರುವ ತಂದೆ ತಾಯಿ ಎಲ್ಲಾ ಇದ್ದು ಏನು ಇಲ್ಲದಂತ ಮಕ್ಕಳು…
ಆ ಮಕ್ಕಳಲ್ಲಿ ನಾನು ಒಬ್ಬಳು.ಮನೆಯಿಂದ ಹೊರ ಹೋಗಿ ಆಡುವ ಕುಣಿಯುವ ನಲಿದಾಡುವ ಆಸೆ ನನ್ನದು ಆದರೆ ಅದು ಆಗದು ಹಕ್ಕಿಯಂತೆ ಹಾರಾಡುವ ಬಯಕೆ ನನಗೆ ಆದರೆ ಸುಂದರ ಮನೆಯೆಂಬ ಬಂಗಾರದ ಪಂಜರದ ಬಂಧಿಯಾಗಿದ್ದೆ.
ಅಪ್ಪನ ಹೆಗಲೇರಿ ಆಡುವ ಕನಸು ಅಮ್ಮನ ಮಡಿಲಲ್ಲಿ ಮಲಗುವ ಮನಸ್ಸು ನಿಲುಕದ ಕಿಟಕಿಯ ಜಿಗಿದು ಜಿಗಿದು ಇಣುಕುತ್ತಾ ಅಪ್ಪ ಅಮ್ಮನ ಹುಡುಕುವ ಕಂಗಳು ಅಮ್ಮ ಬೇಕೆಂದು ಅತ್ತರೆ ಬೇರೆ ಯಾರೋ ಬಂದು ಆಟೋಟಿಕೆಗಳನ್ನು ಕೊಟ್ಟು ಹೋಗುತ್ತಿದ್ದರು ಅಪ್ಪ ಅಮ್ಮನೊಂದಿಗೆ ಸಮಯ ಕಳೆಯಬೇಕೆಂದು ಎಷ್ಟೋ ಬಾರಿ ಕಾದು ಕಾದು ಸುಸ್ತಾಗಿ ಮಲಗಿದ್ದು ಇದೆ. ಅವರೊಂದಿಗೆ ಮಾತಾಡಬೇಕೆಂದು ಬೇಗ ಎದ್ದು ಹುಡುಕಿದರೆ ಏಳುವ ಮುನ್ನವೇ ಅವರು ಕೆಲಸಕ್ಕಾಗಿ ಹೋಗಿ ಆಗುತ್ತಿತ್ತು. ಒಮ್ಮೊಮ್ಮೆ ಮನೆಯಲ್ಲಿ ಇರುತ್ತಿದ್ದ ಅವರಿಗೆ ನನ್ನ ಜೊತೆ ಆಡಲು ಬನ್ನಿ ಎಂದರೆ ಈಗ ಸ್ವಲ್ಪ ಕೆಲಸ ಇದೆ ಆ ಮೇಲೆ ಬರುತ್ತೇನೆ ಎನ್ನುತ್ತಿದ್ದರು ಬಹುಶಃ ಆಮೇಲೆ ಅವರಿಗೆ ನನ್ನ ನೆನಪೇ ಬರುತ್ತಿರಲಿಲ್ಲವೇನೂ? ಅದು ಆಮೇಲೆಯೇ ಆಗಿ ಉಳಿಯುತ್ತಿತ್ತೇ ಹೊರತು ಅವರು ಎಂದೂ ಆಡಲು ಬರುತ್ತಿರಲಿಲ್ಲ. ಬೆರಳಲ್ಲಿ ತೋರಿಸಿ ಬಾಯಿ ಬಿಟ್ಟು ಹೇಳುವ ಮುನ್ನವೇ ಎಲ್ಲಾ ವಸ್ತುಗಳು ನನ್ನ ಮುಂದೆ ಇರುತ್ತಿತ್ತು. ಆದರೆ ನಾನು ಅದೆಷ್ಟೋ ಬಾರಿ ನೀವು ಬೇಕು ನಿಮ್ಮ ಜೊತೆ ಆಡಬೇಕು ಎಂದರೂ ಅದು ಮಾತ್ರ ಆಗುತ್ತಿರಲಿಲ್ಲ. ಆ ಸಮಯದಲ್ಲಿ ನನಗೆ ಅನಿಸುತ್ತಿದ್ದದು ನಾನು ಬಂದು ಆ ಕಾಡಿನಲ್ಲಿಯೋ, ಹಳ್ಳಿಯಲ್ಲಿಯೋ ಜನಿಸಿದರೆ ಆಗ ಎಲ್ಲರೊಂದಿಗೆ ಕುಣಿದು ಕುಪ್ಪಳಿಸಬಹುದಿತ್ತು. ಈ ಒಬ್ಬಂಟಿತನಕ್ಕಿಂತ ಕಾಡಿನ ಪ್ರಾಣಿಗಳ ಒಡನಾಟವೇ ಲೇಸು ಎನಿಸುತ್ತಿತ್ತು…ಇದು ಕಥೆಯಲ್ಲ ಜೀವನ…
ಇಲ್ಲಿ ನಾನು ಎಂದರೆ ನಾನಲ್ಲ. ಪ್ರತಿಯೊಂದು ಮನೆಯ ಮಗಳು. ನಾನು ಎಂದು ಹೇಳುವ ಎಲ್ಲ ಮಾತುಗಳು ಯಾರೆಲ್ಲ ತಂದೆ ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದವರ ಮಾತು. ಎಂತಹ ಬೆಲೆ ಬಾಳುವ ವಸ್ತುವನ್ನು ತಂದು ಕೊಟ್ಟರೂ , ತಂದೆ ತಾಯಿಯ ಪ್ರೀತಿಗಿಂತ ಅವು ಯಾವುದು ಮಿಗಿಲಿಲ್ಲ ಎಂಬ ಸಣ್ನ ಸತ್ಯವ ಎಲ್ಲರೂ ಅರಿತರೆ ಇಂತಹ ಹಲವಾರು ಮುಗ್ದ ಮನಸ್ಸಿನ ಮನದಾಳದ ನೋವನ್ನು ಅರಿಯಬಹುದು ಅಳಿಸಬಹುದು..