News Kannada
Sunday, January 29 2023

ನುಡಿಚಿತ್ರ

ಶತಮಾನ ಸವೆಸಿದ ಬಂಡೀಪುರದ ಬ್ರಿಟೀಷರ ಅತಿಥಿಗೃಹ..!

Photo Credit :

ಶತಮಾನ ಸವೆಸಿದ ಬಂಡೀಪುರದ ಬ್ರಿಟೀಷರ ಅತಿಥಿಗೃಹ..!

ಚಾಮರಾಜನಗರ: ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನು ಆಳಿದ ಬ್ರಿಟೀಷರು ತಮ್ಮ ಕಾಲದ ಹಲವು ಪಳೆಯುಳಿಕೆಯನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ಅದರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿರುವ ಬ್ರಿಟೀಷರ ಕಾಲದ ಅತಿಥಿ ಗೃಹವೂ ಒಂದಾಗಿದೆ.

ಬ್ರಿಟೀಷರ ಕಾಲದ ಈ ಅತಿಥಿಗೃಹದಲ್ಲಿ ವಿಶೇಷವೇನೂ ಇಲ್ಲದಿರಬಹುದು. ಆದರೆ ಈ ಅತಿಥಿಗೃಹ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಕಟ್ಟಡ ಎನ್ನುವುದೇ ಗಮನಾರ್ಹವಾಗಿದೆ. ಬಂಡೀಪುರದ ಮೂಲೆಹೊಳೆ ವಲಯದಲ್ಲಿನ ಚಮ್ಮನಹಳ್ಳ ಪ್ರದೇಶದಲ್ಲಿ 1917ರಲ್ಲಿ ಬ್ರಿಟೀಷರ ವಿಹಾರಕ್ಕೆ ಬಂದಾಗ ಉಳಿದುಕೊಳ್ಳಲೆಂದು ಅತಿಥಿಗೃಹ ನಿರ್ಮಿಸಿದ್ದು ಇವತ್ತಿಗೂ ಮಳೆ, ಗಾಳಿ, ಬಿಸಿಲೆಗೆ ಜಗ್ಗದೆ ಗಟ್ಟಿಯಾಗಿ ನಿಂತಿದೆ.

ಈ ಅತಿಥಿಗೃಹದಲ್ಲಿ ಬ್ರಿಟೀಷ್ ಅಧಿಕಾರಿಗಳಲ್ಲದೆ ಮೈಸೂರು ಅರಸರು ಕೂಡ ಪಕ್ಕದ ಊಟಿಗೆ ತೆರಳುವಾಗ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಕಲ್ಲು, ಇಟ್ಟಿಗೆ, ಗಾರೆಯಿಂದ ಗೋಡೆಯನ್ನು ನಿರ್ಮಿಸಲಾಗಿದ್ದು, ಮಂಗಳೂರು ಹೆಂಚಿನ ಛಾವಣಿ ಹೊಂದಿದೆ. ಬಂಡೀಪುರ ವ್ಯಾಪ್ತಿಯ ಮೂಲೆಹೊಳೆ ವಲಯದಲ್ಲಿನ ದಟ್ಟ ಅರಣ್ಯ ಪ್ರದೇಶದ ಚಮ್ಮನಹಳ್ಳದಲ್ಲಿನ ಈ ಅತಿಥಿ ಗೃಹ ಅಂದಿನ ಕಾಲದಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದಿತ್ತಲ್ಲದೆ, ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರು ಒಡೆಯರ್ ರಾತ್ರಿ ಇಲ್ಲಿ ತಂಗಿದ್ದು, ಮುಂಜಾನೆ ಈ ವ್ಯಾಪ್ತಿಯಲ್ಲಿ ಅಡ್ಡಾಡುವ ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಿದ್ದರು. ಸ್ವಾತಂತ್ರ್ಯಾ ನಂತರ ಅರಣ್ಯ ಇಲಾಖೆಯ ಅತಿಥಿಗೃಹವಾಗಿ ಮುಂದುವರೆಯಿತಲ್ಲದೆ, 2000ರಲ್ಲಿ ಈ ಅತಿಥಿಗೃಹದ ಮೇಲ್ಭಾಗದಲ್ಲಿ ವೀಕ್ಷಣಾಗೋಪುರವನ್ನು ನಿರ್ಮಿಸಲಾಯಿತು.

ಈ ಗೋಪುರ ನಿರ್ಮಾಣದ ಬಳಿಕ ಕಾಡು ಪ್ರಾಣಿಗಳ ಚಲನವಲನ ವೀಕ್ಷಣೆಗೆ ಅನುಕೂಲವಾಯಿತಲ್ಲದೆ, ಇಲ್ಲಿಂದ ನಿಂತು ನೋಡಿದರೆ ಕೇರಳ, ಗೋಪಾಲಸ್ವಾಮಿಬೆಟ್ಟ, ಮೂಲೆಹೊಳೆ, ಬಂಡೀಪುರ ವಲಯದ ಅರಣ್ಯ ಪ್ರದೇಶ ಕಾಣುವುದರಿಂದ ಬೇಸಿಗೆಯಲ್ಲಿ ಕಾಡ್ಗಿಚ್ಚು ಕಾಣಿಸಿದರೆ, ವಲಯ ಪತ್ತೆ ಹಚ್ಚಿ ಬೆಂಕಿ ನಂದಿಸಲು ಅನುಕೂಲವಾಗುತ್ತಿದೆ.

ಹಿಂದೆ ಬಂಡೀಪುರ ಹುಲಿಯೋಜನೆಗೆ ಸೇರಿರುವ ಈ ಅತಿಥಿಗೃಹದಲ್ಲಿ ತಂಗಲು ರಜಾದಿನಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಗಿಬೀಳುತ್ತಿದ್ದರು. ಇದಕ್ಕಾಗಿ ಮಂತ್ರಿಗಳಿಂದಲೂ ಪ್ರಭಾವ ಬೀರುತ್ತಿದ್ದರು. ಹೆಚ್ಚಿನವರು ಮೋಜು ಮಸ್ತಿ ಮಾಡುವ ಸಲುವಾಗಿ ಆಗಮಿಸುತ್ತಿದ್ದರು. ಇಂತಹವರನ್ನು ಸುರಕ್ಷಿತವಾಗಿ ಕರೆದೊಯ್ದು ವಾಪಸ್ ಕರೆತರುವುದು ಅರಣ್ಯ ಇಲಾಖೆಯ ಸಿಬ್ಬಂದಿಗೆ ದೊಡ್ಡತಲೆನೋವಾಗಿತ್ತು. ಜತೆಗೆ ಪರಿಸರ ಸೂಕ್ಷ್ಮ ವಲಯದಲ್ಲಿ ವಾಹನಗಳ ಸಂಚಾರ ಹಾಗೂ ಅತಿಥಿಗಳ ಗದ್ದಲದಿಂದ ವನ್ಯಜೀವಿಗಳು ತೊಂದರೆ ಎದುರಿಸುತ್ತಿದ್ದವು.

ಇಂತಹ ತೊಂದರೆಗಳನ್ನೆಲ್ಲ ಕಣ್ಣಾರೆ ಕಂಡ ಅರಣ್ಯಾಧಿಕಾರಿಗಳು ಅತಿಥಿಗೃಹಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಿದರು. ಹೀಗಾಗಿ ಜನರ ಗಲಾಟೆಯಿಲ್ಲದೆ ಅತಿಥಿಗೃಹ ಈಗ ಪ್ರಶಾಂತವಾಗಿದೆ. ಅರಣ್ಯಾಧಿಕಾರಿಗಳು, ಸಿಬ್ಬಂದಿ ಹೊರತು ಪಡಿಸಿದರೆ ಇದರತ್ತ ಯಾರೂ ಸುಳಿಯುತ್ತಿಲ್ಲ. ಕಟ್ಟಡಕ್ಕೆ ಬೆಳಕಿನ ವ್ಯವಸ್ಥೆಗೆ ಸೋಲಾರ್ ದೀಪವನ್ನು ಅಳವಡಿಸಲಾಗಿದೆ. ಸಮೀಪದ ಕೆರೆಯ ಬಳಿ ಕೊಳವೆಬಾವಿಯಿಂದ ನೀರು ಒದಗಿಸಲಾಗಿದೆ.

ಅರಣ್ಯದ ನಡುವೆ ಮಳೆಗಾಳಿ, ಚಳಿಯ ಹೊಡೆತವನ್ನು ಸಹಿಸುತ್ತಾ ಬಂದಿರುವ ಈ ಕಟ್ಟಡ ಈಗಲೂ ಶತಮಾನ ಪೂರೈಸಿದ ಸಂಭ್ರಮದಲ್ಲಿದ್ದು, ಇದನ್ನು ಮುಂದಿನ ತಲೆಮಾರಿಗೂ ಉಳಿಸಿಕೊಳ್ಳಬೇಕಾಗಿದೆ.

See also  ಹನಿಮಳೆಯ ನಡುವೆ ಗಮನ ಸೆಳೆದ 'ಪುತ್ತರಿ ಅರಮನೆ ಕೋಲ್'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು