ಪಿಯುಸಿ ತನಕ ಲೆಕ್ಚರರ್ ಹೇಳಿದ ಸ್ಥಳದಲ್ಲೇ ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕಾಗಿತ್ತು. ಒಂದು ವೇಳೆ ಅವರು ಹೇಳಿದ್ದನ್ನು ಕೇಳದೇ ಹೋದರೇ ಪನಿಷ್‍ಮೆಂಟ್ ಸಿಗುವುದು ಖಚಿತವಾಗಿತ್ತು. ಆದರೆ ಡಿಗ್ರಿ ಮೆಟ್ಟಿಲೇರಿದಾಗ ನೀವು ಇಂತಹುದೇ ಸ್ಥಳದಲ್ಲಿ ಕುಳಿತುಕೊಳ್ಳಿ ಅನ್ನುವವರು ನಮಗೆ ಯಾರೂ ಸಿಗುವುದಿಲ್ಲ. ಏನಾದರೂ ತಕರಾರು ಮಾಡಿದಲ್ಲಿ ಮಾತ್ರ ಬೈಗುಳದ ಜೊತೆ ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳಲು ಕರೆದುಬಿಡುತ್ತಾರೆ. ಅಷ್ಟರವರೆಗೆ ಲಾಸ್ಟ್ ಬೆಂಚ್‍ನಲ್ಲಿ ಕುಳಿತಿರುವವರು ಸಪ್ಪೆ ಮೋರೆ ಹಾಕಿಕೊಂಡು ಮುಂದೆ ಬಂದು ಬಿಡುತ್ತಾರೆ. ಆ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಟೀಚರ್ ಹೋದ ಕೂಡಲೇ ವಾಪಾಸು ಬಂದು ತಮ್ಮ ಅದೇ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ. ಇದೇ ವಿಶೇಷತೆ ಲಾಸ್ಟ್ ಬೆಂಚಿದ್ದು.
ಇದೆಲ್ಲಾ ಕೇಳಿ ನಮಗೂ, ಲಾಸ್ಟ್‍ಬೆಂಚಿಗೂ ಅವಿನವಭಾವ ಸಂಬಂಧ ಬೆಳೆದಿತ್ತು. ಅದಕ್ಕಾಗಿಯೇ ಕಾಲೇಜು ಪ್ರಾರಂಭವಾದ ಮೊದಲ ದಿನ ತರಗತಿಯ ಬಾಗಿಲು ತೆರೆಯುವ ಮುನ್ನವೇ ಹೋಗಿ ತರಗತಿ ಮುಂದೆ ನಿಂತು ಬಿಟ್ಟಿದ್ದೆವು. ಹೋದದ್ದು ಸ್ವಲ್ಪ ತಡವಾದರೂ ಲಾಸ್ಟ್ ಬೆಂಚ್ ನಮಗಾಗಿಯೇ ಕಾದುಕುಳಿತಿತ್ತು. ಗೆಳತಿಯರೆಲ್ಲ ಬಂದು ನಾವು ಇಲ್ಲಿ ಕುಳಿತುಕೊಳ್ಳುವುದು ಎಂದು ನಿಗದಿ ಪಡಿಸಿಕೊಂಡೆವು. ಲಾಸ್ಟ್ ಬೆಂಚು ಅಂದ ಮೇಲೆ ಹೇಳಬೇಕೇ!!! ಮಾಸ್ತರರ ಕಣ್ಣು ಕೊನೆಯ ಬೆಂಚಿನತ್ತವೇ ಇರುತ್ತದೆ ಎಂದು ಮೊದಲ ದಿನದಲ್ಲೇ ಅರಿವಾಗಿತ್ತು. ಪರವಾಗಿಲ್ಲ ಏನಾದರೂ ಸ್ಥಳ ಬದಲಾವಣೆ ಅಂತು ಮಾಡುವುದಿಲ್ಲ ಅಂತ ನಿರ್ಧಾರ ತೆಗೆದುಕೊಂಡಾಗಿತ್ತು. ಲಾಸ್ಟ್ ಬೆಂಚಿಗೋಸ್ಕರ ಸೈಲೆಂಟ್ ಆಗಿರಲು ಸಿದ್ಧರಾಗಿದ್ದೆವು.
ಹೇಗೋ ಮೂರನೇ ವರ್ಷಕ್ಕೆ ತಲುಪಿದ್ದೇವೆ. ಮೂರು ವರ್ಷ ಕೂಡ ಲಾಸ್ಟ್ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ್ದು. ನಮಗೆಲ್ಲಾ ಖುಷಿಯ ವಿಚಾರ ಏನಪ್ಪಾ ಅಂದ್ರೆ ಮೂರು ವರ್ಷ ಕೂಡ ಲಾಸ್ಟ್ ನಮಗಾಗಿಯೇ ಕಾಯುತ್ತಿತ್ತು. ಈ ಲಾಸ್ಟ್ ಬೆಂಚು ಅಂತ ಬಂದಾಗ ತಂಟೆ ತಕರಾರು ಮಾಡದೇ ಇರೋದಕ್ಕೆ ಆಗುತ್ತದೆಯೇ!! ಇಲ್ಲಾ ಅಲ್ವಾ? ಪಾಠ ಆಗುವಾಗ ಅನೇಕ ಬಾರಿ ಮಾತನಾಡಿ ಸಿಕ್ಕಿ ಬಿದ್ದದ್ದೂ ಇದೆ. ಅದಕ್ಕಾಗಿ ಮುಂದಿನ ಬೆಂಚಿಗೆ ಬರಲು ಹೇಳಿದ್ದು ಕೂಡ ನಡೆದಿದೆ. ಆದರೆ ಇಲ್ಲಿಯವರೆಗೆ ಹೋಗಿ ಕುಳಿತಿಲ್ಲ. ತರಗತಿ ಟೀಚರ್ ಬರುವವರೆಗೆ ಇಲ್ಲದ ಮಾತುಗಳು ಅವರುಗಳು ಬಂದ ನಂತರ ಪುರಾಣಗಳಂತೆ ಒಂದರ ಹಿಂದೆ ಒಂದು ಕತೆಗಳ ಗುಚ್ಚವೇ ಬಂದು ಬಿಡುತ್ತದೆ. ಕೆಲವೊಂದು ಸಲ ಅನ್ನಿಸುವುದಕ್ಕುಂಟು. ಇಷ್ಟೆಲ್ಲಾ ಕತೆಗಳು ಎಲ್ಲಿತ್ತು ಅಂತ. ಮಾತೂ ಏನಿಲ್ಲಾ ಅಕ್ಕ ಪಕ್ಕದ ಕ್ಲಾಸಿನಲ್ಲಿ ನಡಿಯುವ ವಿಚಾರಗಳಷ್ಟೆ.
ಕೆಲವೊಂದು ಬಾರಿ ಹಸಿವಾಗುತ್ತದೆ, ನಿದ್ದೆ ಬರುತ್ತದೆ ಎನ್ನುವ ಕಾರಣಕೊಸ್ಕರ ಒಂದು ಕ್ಲಾಸು ಮುಗಿದ ತಕ್ಷಣ ಕ್ಯಾಂಟೀನ್ ಕಡೆಗೆ ಓಡಿದ್ದೂ ಇದೆ. ಬರಬೇಕಾದರೆ ಒಂದಷ್ಟು ಚಾಕಲೇಟ್ ಮತ್ತೆ ಕುರುಕಲು ತಿಂಡಿಗಳನ್ನು ತರುವುದು ಒಂದು ಅಭ್ಯಾಸವಾಗಿತ್ತು. ಹಾಗೇ ಪೂರ್ತಿ ತರಗತಿ ಹಂಚಿ ತಿನ್ನುವುದು ಉಂಟು. ಅದು ಎಷ್ಟು ಜಾಗ್ರತೆಯಾಗಿ ಅಂದರೇ ನಾವು ತಿಂದದ್ದು ಪಾಠ ಮಾಡುತ್ತದ್ದವರಿಗೆ ಗೊತ್ತೇ ಆಗುತ್ತಿರಲಿಲ್ಲ. ಟೀಚರಿಗೆ ಗೊತ್ತಾಗ ಬಾರದೆಂದು ಮುಂದೆ ಕುಳಿತವರನ್ನು ನಾವು ಕಾಣದ ಹಾಗೆ ಕುಳಿತುಕೊಳ್ಳಲು ಹೇಳಿ ನಿದ್ದೆ ಮಾಡುವುದು. ಇಷ್ಟೆಲ್ಲಾ ಹರಸಾಹಸ ಮಾಡಿದ್ರು ಕೆಲವೊಮ್ಮೆ ಚಾಕ್ ಪೀಸ್‍ಗಳು ತಲೆಗೆ ಬಂದು ಬೀಳುತ್ತಿತ್ತು. ಈ ಚಾಕ್ ಪೀಸ್‍ಗಳು ನಮ್ಮ ನಿದ್ದೆಯನ್ನು ಭಂಗ ಮಾಡಲು ಸಾಕಾಗುತ್ತಿತ್ತು. ಆದರೂ ಇದೊಂದು ವಿಚಿತ್ರ ಅನುಭವ.
ಕೊರೋನ ಬಂದದ್ದರಿಂದ ಡಿಗ್ರಿಯ ಕೊನೆಯ ದಿನಗಳನ್ನು ಮನೆಯಲ್ಲಿಯೇ ಕಳಿಯಬೇಕಾಯಿತು. ಲಾಸ್ಟ್ ಬೆಂಚಿನಲ್ಲಿ ಕಳೆದ ನೆನಪುಗಳು ಕನಸಿನಂತೆ ಕಣ್ಣ ಮುಂದೆ ಕಾಣುತ್ತಿತ್ತು. ಅನೇಕ ಬಾರಿ ಅತ್ತಾಗ ಹೆಗಲು ಕೊಟ್ಟಿದ್ದು ಗೆಳತಿಯರು. ಅದರೆ ಯಾರಿಗೂ ತಿಳಿಯದಂತೆ ಮಾಡಿದ್ದು ಲಾಸ್ಟ್ ಬೆಂಚ್. ಅನೇಕ ಗಾಸಿಪ್‍ಗಳಿಗೆ, ಸಮಸ್ಯೆಗಳಿಗೆ, ಲವ್‍ಸ್ಟೋರಿಗಳಿಗೆ ಮತ್ತು ನಮ್ಮ ಗೋಳಿಗೆ ಕಿವಿಯಾಗಿದ್ದು ಲಾಸ್ಟ್‍ಬೆಂಚ್. ಕಾಲೇಜು ಮುಗಿದ ನಂತರ ನಾವು ಕಾಲೇಜನ್ನು ಮಿಸ್ ಮಾಡುತ್ತಿದ್ದೇವೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಲಾಸ್ಟ್ ಬೆಂಚನ್ನು ಮಾತ್ರ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಪದವಿ ಮುಗಿದು ಗೆಳತಿಯರೆಲ್ಲ ಬೇರೆ ಬೇರೆಯಾಗಿ ಹೋದರೂ ನಾವುಗಳು ಕಳೆದ ದಿನಗಳು ಲಾಸ್ಟ್‍ಬೆಂಚಿನಲ್ಲಿ ಶಾಶ್ವತವಾಗಿತ್ತು. ‘ವಿ ಮಿಸ್ ಯು ಲಾಸ್ಟ್ ಬೆಂಚ್’…