ಮಹಿಳಾ ದಿನಾಚರಣೆ ಬಂದಾಗಲೆಲ್ಲಾ ಸಾಧಕರ ಬಗ್ಗೆಯಷ್ಟೆ ಹೆಚ್ಚಾಗಿ ಮಾತನಾಡುತ್ತೇವೆ. ಆದರೆ ಸಂಸಾರ ನಿರ್ವಹಣೆಗಾಗಿ ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಾ ಸಂಸಾರ ನಿರ್ವಹಣೆ ಮಾಡುವ ಮಹಿಳೆಯರು ಕಾಣಿಸುವುದೇ ಇಲ್ಲ.
ಹಳ್ಳಿಗಳ ಹೊಲಗದ್ದೆಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರಿರಲಿ, ಪುರುಷರಂತೆ ಆಟೋ, ಟ್ಯಾಕ್ಸಿ ಓಡಿಸುವ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಹೀಗೆ ಪುರುಷರಷ್ಟೆ ಮಾಡುತ್ತಿದ್ದ ಕಾರ್ಯವನ್ನೆಲ್ಲ ತಾನು ಆತನಿಗೆ ಸಮಾನವಾಗಿ ಮಾಡುತ್ತಾ ಸಂಸಾರದ ನೌಕೆಯನ್ನು ಸಾಗಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾಳೆ.
ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲಿಗೆ ಹಳ್ಳಿಗಳು ಉದ್ಧಾರವಾಗಬೇಕು. ಹಳ್ಳಿಗಳು ಉದ್ಧಾರವಾಗಬೇಕಾದರೆ ಅಲ್ಲಿನ ಮಹಿಳೆಯರು ಸುಶಿಕ್ಷಿತರಾಗಬೇಕು, ಆರ್ಥಿಕವಾಗಿ ಸದೃಢರಾಗಬೇಕು. ಅಷ್ಟೇ ಅಲ್ಲದೆ ಉದ್ಯೋಗ ರಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಲಿಂಗಸಮಾನತೆ ಕಲ್ಪಿಸುವುದು ಅಗತ್ಯವಾಗಿದೆ. ಜತೆಗೆ ಮಹಿಳೆಯರಿಗೆ ಹೆಚ್ಚಿನ ಸುರಕ್ಷಿತೆಯನ್ನು ಒದಗಿಸುವ ಅಗತ್ಯವಿದೆ. ಇದರಿಂದ ಆಕೆ ಧೈರ್ಯವಾಗಿ ಎಲ್ಲ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.
ಹಿಂದಿನ ಕಾಲದಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಸೇರಿಸಿ ಹೊಟ್ಟೆಪಾಡು ಕಳೆಯುತ್ತಿದ್ದರು. ಈಗ ಹಾಗಿಲ್ಲ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಅವರಿಗೊಂದು ಬದುಕು ನೀಡಬೇಕು ಎಂಬ ಕಲ್ಪನೆ ಬಂದಿದೆ. ಹೆಣ್ಣು ಹೆತ್ತವರು ಈಗ ತಮ್ಮ ಮಗಳನ್ನು ಮಗನಂತೆ ಸಾಕಿ ಆಕೆಗೆ ಆಕೆಯ ಇಷ್ಟದಂತೆ ಬದುಕಲು ಮತ್ತು ಆಕೆಯ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಹೆಣ್ಮಕ್ಕಳು ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿದೆ.
ಅಡುಗೆ ಮನೆಗಷ್ಟೇ ಸೀಮಿತರಾಗಿದ್ದ ಮಹಿಳೆಯರು ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು ಅಸ್ಥಿತ್ವಕ್ಕೆ ಬಂದ ನಂತರ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲದೆ, ಬ್ಯಾಂಕ್ ವ್ಯವಹಾರ ಸೇರಿದಂತೆ ರಾಜಕೀಯವಾಗಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಮೊದಲೆಲ್ಲಾ ಗಂಡ ದುಡಿದು ತಂದಿದ್ದನ್ನು ಬೇಯಿಸಿ ಹಾಕುತ್ತಾ ಮಕ್ಕಳನ್ನು ನೋಡಿಕೊಂಡಿದ್ದರಾಯಿತು ಎಂಬ ಮನೋಭಾವ ಮಹಿಳೆಯರದ್ದಾಗಿತ್ತು. ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮನೆಯಲ್ಲಿ ಕುಳಿತು ಟೈಲರಿಂಗ್‍ನಂತಹ ಕೈಗಾರಿಕೆಗಳನ್ನು ಕೆಲವರು ಮಾಡಿದರೆ, ಇನ್ನು ಕೆಲವರು ಬ್ಯೂಟಿಪಾರ್ಲರ್, ವ್ಯಾಪಾರ, ಹೈನುಗಾರಿಕೆ, ಇನ್ನಿತರ ಉದ್ಯಮಗಳತ್ತ ಆಸಕ್ತಿ ವಹಿಸಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜವಬ್ದಾರಿಯೊಂದಿಗೆ ತನ್ನ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಛಾಪು ಮೂಡಿಸಿದ್ದರೂ ಎಲ್ಲರೂ ಸುಖಿಗಳಾಗಿದ್ದಾರೆ ಎನ್ನಲಾಗುತ್ತಿಲ್ಲ. ಅಲ್ಲಲ್ಲಿ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳದಂತಹ ಅಮಾನವೀಯ ಕೃತ್ಯಗಳು ಮಹಿಳೆಯರ ಮೇಲೆ ನಡೆಯುತ್ತಲೇ ಇದೆ. ಕೆಲವು ಕ್ಷೇತ್ರಗಳಲ್ಲಿ ದುಡಿಯುವ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಶೋಷಣೆಗಳು ನಡೆಯುತ್ತಿವೆ. ಇದನ್ನು ವಿರೋಧಿಸಿ, ಎದುರಿಸಿ ಬದುಕುವ ಧೈರ್ಯ ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲಿ ಬರಬೇಕಿದೆ.
ಮಹಿಳಾ ದಿನಾಚರಣೆಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ ನೊಂದ ಮಹಿಳೆಯರಿಗೆ ಧೈರ್ಯ ತುಂಬುವ, ಅಬಲೆಯರನ್ನು ಸಬಲೆಯರನ್ನಾಗಿಸುವ ಕೆಲಸಗಳಿಗೆ ವೇದಿಕೆಯಾಗಬೇಕು. ಆಗ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತದೆ.