ಮುಗ್ಧ ಮನಸ್ಸಿನ ನಲ್ಲೆ, ನೀನು ಎಂದು ಅಬಲೆಯಲ್ಲ. ಅರಿತೋ ಅರಿಯದೆಯೋ ನೀನು ಈ ಜಗತ್ತನ್ನು ಎದುರಿಸುವ ಗುಣವನ್ನು ಕಲಿತಿರುವೆ. ಕಾಣದ ಪ್ರಪಂಚದ ಕೊಂಕಿಗೆ ಕಣ್ತೆರೆಯುವ ಮುನ್ನವೇ ಗುರಿಯಾಗಿರುವೆ. ಬೆಳೆದು ಮತ್ತೆ ಮಣ್ಣಿಗೆ ಹೋಗುವವರೆಗೂ ಜಗತ್ತಿನೊಂದಿಗೆ ಹೋರಾಡುತ್ತಲೆ ಬಂದಿರುವೆ.
ಹೌದು, ಜಗತ್ತು ಹೇಳುತ್ತದೆ ಹೆಣ್ಣು ದುರ್ಬಲಳು ಎಂದು. ಆದರೆ ನಿಜಕ್ಕೂ ಆಕೆ ದುರ್ಬಲಳೇ ಎಂದು ಪ್ರಶ್ನೆ ಮೂಡುತ್ತಿದೆ ನನ್ನಲ್ಲಿ. ಕಾರಣ ಕೇಳುವಿರಾ? ಹೇಳುತ್ತೇನೆ ಕೇಳಿ. ಮಾತು ಮಾಲೆಯಂತೆ ಹೊರಡದ ಸಂದರ್ಭದಲ್ಲೇ ಆಕೆ ಸಂಬಂಧಗಳ ಸುಳಿಗೆ ತಿಳಿದು ಅದನ್ನು ನಿಭಾಯಿಸಲು ನಿಲ್ಲುತ್ತಾಳೆ. ನಡೆಯಲು ಕಷ್ಟಪಡುವ ವಯಸ್ಸಿನಲ್ಲೇ, ಕೆಲಸ ಮಾಡಲು ಮುಂದಾಗುತ್ತಾಳೆ.
ಆಕೆ ಆಡುವ ಆಟಗಳು ಇದಕ್ಕೆ ಸಾಕ್ಷಿ. ಗೊಂಬೆ ಹಿಡಿದು ತಾಯಿಯಂತೆ, ಅಪ್ಪ-ಅಮ್ಮನನ್ನು ಕೂರಿಸಿ ಅವರನ್ನು ಆಯ್ಕೆ ಮಾಡುವಂತೆ, ಆಟದ ಅಡಿಗೆ ಸಾಮಾನುಗಳನ್ನು ಹಿಡಿದು ತಾನೇ ಸ್ವತಹ ಅಡಿಗೆ ಮಾಡುವಂತೆ ಹೀಗೆ ಹೇಳುತ್ತ ಹೋದರೆ ಮುಗಿಯದಷ್ಟು. ಇದೇ ರೀತಿಯ ಜೀವನ ಪಾಠಗಳನ್ನು ಹಾಗೂ ಪ್ರಪಂಚದ ಜೊತೆಗೆ ಹೋರಾಡಲು ಬೇಕಾಗುವ ಕಲಿಕೆಯನ್ನು, ಏನು ಅರಿಯದ ಮುಗ್ಧ ವಯಸ್ಸಿನಲ್ಲಿಯೇ ಕಲಿಯಲು ಪ್ರಾರಂಭಿಸಿರುತ್ತಾಳೆ. ಅದನ್ನು ಬೆಳೆದು ನಿಂತಾಗ ಜೀವನದಲ್ಲಿ ಅಳವಡಿಸಲು ಪ್ರಾರಂಭಿಸುತ್ತಾಳೆ ಅಷ್ಟೇ.
ಇನ್ನು ಮಾನಸಿಕವಾಗಿ ಆಕೆಯನ್ನು ಮೀರಿಸಲು ಮತ್ತೊಬ್ಬರಿಂದ ಸಾಧ್ಯವಿಲ್ಲ. ಆಕೆ ಅಳುತ್ತಾಳೆ ಎಂಬುದು ನಿಜ. ಆದರೆ ಅದು ಆಕೆಯ ದುರ್ಬಲತೆಯ ಸಂಕೇತವಲ್ಲ. ಆ ಕ್ಷಣಕ್ಕೆ ತೋರ್ಪಡಿಸುವ ಭಾವವಷ್ಟೇ. ಮರುಕ್ಷಣ ಅದರಿಂದ ಹೊರಬಂದು ತನ್ನನ್ನು ಸಂಭಾಳಿಸಿಕೊಳ್ಳುವುದಲ್ಲದೆ, ಸುತ್ತಲಿನ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗುತ್ತಾಳೆ. ಮತ್ತೊಬ್ಬರ ಧೈರ್ಯವಾಗಿ ನಿಲ್ಲುತ್ತಾಳೆ.
ಎಲ್ಲದಕ್ಕಿಂತ ಹೆಚ್ಚಾಗಿ ಆಕೆಯ ಮಾನಸಿಕ ಸ್ಥಿತಿಗೆ ಬಹುದೊಡ್ಡ ಉದಾಹರಣೆ ಅಥವಾ ಕೈಗನ್ನಡಿ ಎಂದರೆ ಆಕೆ ಮತ್ತೊಂದು ಜೀವಕ್ಕೆ ಜೀವ ನೀಡುವುದು. ಜಗತ್ತು ಆಕೆಯನ್ನು ದುರ್ಬಲಳು ಎನ್ನುವ ಮೊದಲು ಆ ಒಂದು ಸ್ತ್ರೀಯ ಧೈರ್ಯದ ಪ್ರತಿರೂಪವೇ ನಾವು ಎಂಬುದನ್ನು ಮರೆಯಬಾರದು. ಜೀವ ನೀಡುವ ಧೈರ್ಯ ಹೊಂದಿರುವವಳು ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಆಗದವಳೇ? ಮಾನಸಿಕವಾಗಿ ಆತ್ಮಸ್ಥೈರ್ಯ ಹೊಂದಿರುವವಳು ಅಬಲೆಯೇ?