ಮೈಸೂರು: ಇವತ್ತು ನಡೆಯುತ್ತಿರುವ ದಸರಾ ಜನೋತ್ಸವವಾಗಿದೆ. ಹೀಗಾಗಿ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಾರೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಖುಷಿಪಟ್ಟವರು ಕೊನೆಯ ದಿನವಾದ ವಿಜಯದಶಮಿಯಂದು ಜಂಬೂಸವಾರಿಯನ್ನು ವೀಕ್ಷಿಸಿ ಒಂದಷ್ಟು ನೆನಪುಗಳೊಂದಿಗೆ ಮನೆ ಹಾದಿ ಹಿಡಿಯುವುದು ಮಾಮೂಲಾಗಿದೆ.
ಈಗಿರುವ ಜಂಬೂಸವಾರಿಯಲ್ಲಿ ಸಂಪ್ರದಾಯದೊಂದಿಗೆ ಒಂದಷ್ಟು ಹೊಸತನಗಳಿಗೆ ಒತ್ತು ನೀಡಲಾಗಿದೆ.
ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಆಚರಣೆ ಮತ್ತು ಜಂಬೂಸವಾರಿ ಹೇಗಿತ್ತು ಎಂಬುದರ ಬಗ್ಗೆ ಇತಿಹಾಸದ ಪುಟಗಳನ್ನು ನೋಡಿದರೆ ಅವತ್ತಿನ ಆಚರಣೆ ಕುರಿತಂತೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಅವತ್ತಿನ ಕಾಲಮಾನಕ್ಕೆ ತಕ್ಕಂತೆ ಆಚರಣೆ ನಡೆಯುತ್ತಿತ್ತು.
ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್ ಸ್ವಾತಂತ್ರ್ಯಪೂರ್ವದಲ್ಲಿ ನಡೆಸುತ್ತಿದ್ದ ದಸರಾ ಆಚರಣೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅವರ ಕಾಲದಲ್ಲಿ ಹೇಗಿತ್ತು ಎಂಬುದನ್ನು ನೋಡುವುದಾದರೆ, ದಸರಾಕ್ಕೆಂದೇ ಮಹಾರಾಜರು ಚಿನ್ನದ ಜರಿಯ ಪಳಪಳನೆ ಹೊಳೆಯುವ ಪೋಷಾಕನ್ನು ಧರಿಸಿ ಸಿದ್ಧರಾಗುತ್ತಿದ್ದರು. ಆ ನಂತರ ಆನೆ ಮೇಲಿನ ಅಂಬಾರಿಯಲ್ಲಿ ಆಸೀನರಾಗುತ್ತಿದ್ದರು.
ಜಂಬೂಸವಾರಿಯು ಅರಮನೆ ಆವರಣದಿಂದ ಮಧ್ಯಾಹ್ನದ ನಂತರ ನಿಗದಿತ ಶುಭ ಮುಹೂರ್ತದಲ್ಲಿ ಆರಂಭವಾಗುತ್ತಿತ್ತು. ಈ ವೇಳೆ ಇಪ್ಪತ್ತೊಂದು ಕುಶಾಲತೋಪು ಹಾರಿಸಲಾಗುತ್ತಿತ್ತು. ತುತ್ತೂರಿ ಮತ್ತು ಕಹಳೆಯ ಶಬ್ದದೊಂದಿಗೆ ಮೆರವಣಿಗೆ ಆರಂಭವಾಗುತ್ತಿತ್ತು. ಇದೇ ವೇಳೆ ದೇಶಗೀತೆಯನ್ನು ಹಾಡಲಾಗುತ್ತಿತ್ತು. ಜಂಬೂ ಸವಾರಿ ಹೇಗಿರುತ್ತಿತ್ತೆಂದರೆ, ಮಹಾರಾಜರ ಸುತ್ತಲೂ ಅಂಗರಕ್ಷಕರು, ಅಶ್ವದಳ, ಅಧಿಕಾರಿಗಳು ನೆರೆಯುತ್ತಿದ್ದರು.
ಮಹಾರಾಜರ ಸಹಿತ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಗಜಪಡೆಯೂ ಸುಂದರವಾಗಿ ಕಂಗೊಳಿಸುತ್ತಿದ್ದು, ಅದಕ್ಕೆ ಚಿನ್ನದಿಂದ ನಕ್ಕಿ ಮಾಡಿದ ಪೋಷಾಕು, ಚಿನ್ನದ ಕಾಲುಕಡಗ, ಬೆಳ್ಳಿಯ ಗಂಟೆ, ಗೊಂಡೆಗಳ ಸಹಿತ ಪೋಣಿಸಿದ ಹಗ್ಗದ ಸಾಲು, ಅಂಗಾಂಗಗಳಲ್ಲಿ ಆಕರ್ಷಕವಾಗಿ ಬರೆಯಲಾದ ಚಿತ್ರಗಳಿಂದ ಶೋಭಿಸುತ್ತಿತ್ತಲ್ಲದೆ, ರಾಜಗಂಭೀರದ ನಡಿಗೆ ಜಂಬೂಸವಾರಿಗೆ ಕಳೆಕಟ್ಟುತ್ತಿತ್ತು.
ಇನ್ನು ಜಂಬೂಸವಾರಿಯು ಅರಮನೆ ಆವರಣದಿಂದ ಹೊರಟು ಉತ್ತರ ದ್ವಾರದ ಮೂಲಕ ಚಾಮರಾಜ ವೃತ್ತಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ಕಡೆಗೆ ಸಾಗಿ ಅಲ್ಲಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬನ್ನಿಮಂಟಪವನ್ನು ತಲುಪುತ್ತಿತ್ತು.
ಇದಕ್ಕೂ ಮುನ್ನ ಅರಮನೆಯ ಉತ್ತರ ಬಾಗಿಲು ದಾಟಿ ಬರುತ್ತಿದ್ದಂತೆಯೇ ಕಟ್ಟಲಾಗಿದ್ದ ಹಸಿರು ಮಂಟಪದಲ್ಲಿ ನಿಂತು ಮಹಾರಾಜರಿಗೆ ಹಾರ ತುರಾಯಿ ಹಾಕಿ ಗೌರವ ಸಲ್ಲಿಸಲಾಗುತ್ತಿತ್ತು. ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ಕುಳಿತು ಸಾಗುವ ಮಹಾರಾಜರನ್ನು ನೋಡಲು ಇಕ್ಕೆಡೆಗಳಲ್ಲಿ ಜನ ಕಿಕ್ಕಿರಿದು ನೆರೆಯುತ್ತಿದ್ದರು.
ಜಂಬೂಸವಾರಿ ಬನ್ನಿಮಂಟಪವನ್ನು ಸೇರಿದ ಬಳಿಕ ಅಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಆ ನಂತರ ಮಹಾರಾಜರು ಕುದುರೆ ಮೇಲೆ ಕುಳಿತು ಟಾರ್ಚ್ ಲೈಟ್ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದ ಅಶ್ವದಳ, ಪದಾತಿದಳ, ಸೇರಿದಂತೆ ಹಲವು ದಳಗಳಿಂದ ಗೌರವ ವಂದನೆ ಸ್ವೀಕರಿಸುತ್ತಿದ್ದರು. ಈ ವೇಳೆಗೆ ಇಡೀ ಮೈಸೂರು ವಿದ್ಯುದ್ದೀಪದಿಂದ ಬೆಳಗುತ್ತಿತ್ತು. ರಾತ್ರಿ ಒಂಬತ್ತೂವರೆ ಗಂಟೆಗೆಲ್ಲ ಕಾರ್ಯಕ್ರಮಗಳು ಮುಗಿದು ಮಹಾರಾಜರು ಅರಮನೆ ಸೇರುತ್ತಿದ್ದರು.
ಅವತ್ತಿನ ಕಾಲದಲ್ಲಿ ದಸರಾ ಆರಂಭದ ಹತ್ತು ದಿನಗಳ ಕಾಲವೂ ಮೈಸೂರು ಸಂಭ್ರಮದ ಅಲೆಯಲ್ಲಿ ತೇಲುತ್ತಿತ್ತು. ದೇಶ ವಿದೇಶಗಳಿಂದ ಜನ ಬರುತ್ತಿದ್ದರು, ನರ್ತಕರು, ಗಾಯಕರು, ಬಯಲಾಟದವರು, ದೊಂಬೀದಾಸರು, ತೊಗಲು ಬೊಂಬೆಯವರು, ಹಗಲು ವೇಷದವರು, ದೊಂಬರು, ಗೊರವಯ್ಯರು, ಕಣಿ ಹೇಳುವವರು, ಜ್ಯೋತಿಷಿಗಳು, ಸಾಮುದ್ರಿಕಶಾಸ್ತ್ರದವರು, ಕೊಂಬು ಕಹಳೆ ವಾಲಗ ಊದುವವರು, ಕೋಲೆ ಬಸವ ಆಡಿಸುವವರು, ಹಾವಾಡಿಗರು, ದೊಂಬರಾಟದವರು ಹೀಗೆ ಎಲ್ಲರೂ ಮೈಸೂರಿನಲ್ಲಿ ಬೀಡು ಬಿಡುತ್ತಿದ್ದರು. ದಸರಾ ಮುಗಿದ ಬಳಿಕ ತಮ್ಮ ಊರಿನ ಹಾದಿ ಹಿಡಿಯುತ್ತಿದ್ದರು.
ದೂರದಿಂದ ಬರುವವರು ನಗರದಲ್ಲಿ ಉಳಿದು ದಸರಾ ವೀಕ್ಷಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಛತ್ರಗಳನ್ನು ನಿರ್ಮಿಸಲಾಗುತ್ತಿತ್ತು. ಆ ಛತ್ರಗಳಲ್ಲಿ ಜನ ಉಳಿದುಕೊಳ್ಳುತ್ತಿದ್ದರು.