News Kannada
Tuesday, June 06 2023
ನುಡಿಚಿತ್ರ

ಹುಮನಾಬಾದ್: ನೋಡುಗರ ಕಣ್ಮನ ಸೆಳೆಯುವ ವೀರಭದ್ರೇಶ್ವರ ದೇವಸ್ಥಾನ

Humanabad: Veerabhadreswara Temple
Photo Credit : By Author

ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ದೇವಾಲಯವು ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ವೀರಭದ್ರೇಶ್ವರ ದೇವಾಲಯ ಅತ್ಯಂತ ಪುರಾತನವಾಗಿದ್ದು, ಆಕರ್ಷಕ ಶಿಲ್ಪಕಲೆಗೂ ಹೆಸರುವಾಸಿಯಾಗಿದೆ.

ದೇವಸ್ಥಾನದ ಹಲವು ರಚನೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸಲಾಗಿದ್ದು, ನೋಡಲು ಅತ್ಯಾಕರ್ಷಕವಾಗಿ ಕಾಣುತ್ತವೆ. ಹಲವು ಪೌರಾಣಿಕ ಕಥೆ-ಪಾತ್ರ ಗಳನ್ನು ಗೋಡೆಗಳ ಮೇಲೆ, ದೇವಸ್ಥಾನದ ಶಿಖರದ ಮೇಲೆ ಸೂಕ್ಷ್ಮವಾಗಿ ಹಾಗೂ ಅಷ್ಟೇ ಸುಂದರವಾಗಿ ಬಿಡಿಸ ಲಾಗಿದೆ. ಯಾವುದೇ ಆಧುನಿಕ ಉಪಕರಣಗಳಿಲ್ಲದ ಆ ಕಾಲದಲ್ಲೇ ಅಂದಿನ ಶಿಲ್ಪಿಗಳು ತಮ್ಮ ಬಳಿಯಿದ್ದ ಪಾರಂಪರಿಕ ಉಪಕರಣಗಳಿಂದ ಕೆತ್ತಿದ್ದಾರೆ.

ವೀರಭದ್ರೇಶ್ವರ ದೇವಸ್ಥಾನವು ಉತ್ತರ ನಾಗರಶೈಲಿ ಹಾಗೂ ದಕ್ಷಿಣದ ದ್ರಾವಿಡ ಪದ್ಧತಿಗಳ ಸಂಗಮದಂತಿದೆ. ಗರ್ಭ ಗೋಪುರ ಹಿಮಾಲಯ ಕೇದಾರ, ಓರಿಸ್ಸಾದ ಭುವನೇಶ್ವರಿ ದೇವಾಲಯ ಗಳನ್ನು ನೆನಪಿಗೆ ತಂದರೆ, ಮುಖ್ಯ ದ್ವಾರದ ಮೇಲ್ಭಾಗದ ವಿನ್ಯಾಸ ದಕ್ಷಿಣದ ಮಧುರೈ, ಕಂಚಿ ದೇವಾಲಯಗಳನ್ನು ನೆನಪಿಸುತ್ತವೆ. ಪೂರ್ವದ್ವಾರದ ಮೇಲೆ ಆದಿಕೇಶವನ ಕೆಳಗೆ ದೇವರ ಮೂರ್ತಿ ಇದೆ. ನಾಲ್ಕು ದಿಕ್ಕುಗಳಲ್ಲಿ ನಂದಿಗಳಿವೆ. ಮೊದಲನೇ ಸಾಲಿನ ಮಧ್ಯದಲ್ಲಿ ಪಾಂಡುರಂಗ ವಿಠ್ಠಲ ಸೊಂಟದ ಮೇಲೆ ಕೈಯಿಟ್ಟು ಭಕ್ತರ ಅಭಿಲಾಷೆಗಳನ್ನು ಪೂರ್ಣಗೊಳಿಸಲು ನಿಂತಂತಿದೆ. ಎರಡೂ ಕೊನೆಗಳಲ್ಲಿ ಗರುಡ ಹಾಗೂ ಹನುಮಂತ ಕೈ ಜೋಡಿಸಿ ನಿಂತಿದ್ದಾರೆ. ಹಾಗೆಯೇ ಕೆಳಗಿನ ಸಾಲುಗಳಲ್ಲಿ ಪುರಾಣಗಳ ಘಟನೆಗಳನ್ನು, ನಾನಾ ದೇವತೆಗಳನ್ನು ಕೆತ್ತಲಾಗಿದೆ. ದೊಡ್ಡಗಚ್ಚು-ಗಾರೆಯ ಕಿಟಕಿಗಳಲ್ಲಿ ಹೂ ಕುಂಡಗಳನ್ನು ರಚಿಸಲಾಗಿದೆ.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಅಲ್ಲಿನ ವಿಶೇಷತೆ ಕುರಿತು ತಿಳಿದುಕೊಂಡು ಕುತೂಹಲದಿಂದ ದೇವಾಲಯ ವೀಕ್ಷಿಸುತ್ತಾರಲ್ಲದೆ ಇಲ್ಲಿನ ಶಿಲ್ಪಕಲೆಯನ್ನು ಬೆರಗುಗಣ್ಣಿನಿಂದ ನೋಡಿ ಸಂತಸಪಡುತ್ತಾರೆ.

ರಹಸ್ಯದ ಬೃಹತ್ ಸ್ತಂಭ: ಪ್ರವೇಶ ದ್ವಾರದ ಎಡ ಮತ್ತು ಬಲ ಬದಿಗೆ ಎರಡು ದೊಡ್ಡ ಕಂಬಗಳಿವೆ. ಈ ಪೈಕಿ ಎಡಕ್ಕಿರುವುದೇ ಉಯ್ಯಾಲೆ ದೀಪ ಸ್ತಂಭ. ಮಹಡಿಯ ಮೇಲೆ ಹೋಗಿ ಇದರ ಮೇಲ್ತುದಿಯನ್ನು ಸಣ್ಣ ಮಕ್ಕಳೂ ಕೂಡ ಅಲ್ಲಾಡಿಸಿದರೆ ಸಿಂಗ್‌ನ ಗೊಂಬೆಯಂತೆ ಅಲ್ಲಾಡುವ ಉಯ್ಯಾಲೆ ಕಂಬ ಇದಾಗಿದೆ. ಸುಮಾರು 5 ಟನ್‌ಗಳಿಗೂ ಹೆಚ್ಚಿನ ಭಾರ ಇರುವ ಈ ಬೃಹತ್ ಸ್ತಂಭ ಅಲ್ಲಾಡುವುದರ ರಹಸ್ಯವೇನೆಂದು ಈ ವರೆಗೆ ಅನೇಕ ಎಂಜಿನಿಯರ್‌ಗಳು, ಕಟ್ಟಡ ತಂತ್ರಜ್ಞರಿಗೂ ತಿಳಿದಿಲ್ಲ. ಹೀಗಿರಬಹುದು ಎಂದು ಊಹೇ ಮಾಡಲಾಗುತ್ತದೆ ವಿನಃ ಖಚಿತವಾಗಿ ಹೇಳುವುದಿಲ್ಲ. ಇಂದಿನ ವೈಜ್ಞಾನಿಕ ಯುಗದಲ್ಲಿ ಈ ಕಂಬದ ರಹಸ್ಯ ನಿಜಕ್ಕೂ ಸವಾಲಾಗಿದೆ. ಜಗತ್ತಿನ ಆಶ್ಚರ್ಯಕರ ವಸ್ತುಗಳ ಪಟ್ಟಿಗೆ ಇದನ್ನು ಸೇರಿಸಬಹುದಾಗಿದೆ ಎಂದು ಪ್ರಜ್ಞಾವಂತರು ಹೇಳುತ್ತಾರೆ.

ದುಷ್ಟರ ಸಂಹಾರಕ

ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ದುಷ್ಟರ ಸಂಹಾರಕ, ಶಿಷ್ಟರ ಪರಿಪಾಲಕನಾದ ವೀರಭದ್ರೇಶ್ವರ ದೇವರು ನೆಲೆ ನಿಂತು ಈ ಸ್ಥಳ ಪುಣ್ಯಕ್ಷೇತ್ರವಾಗಿ ರೂಪುಗೊಂಡಿದೆ.

ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವೀರಶೈವ ಲಿಂಗಾಯತ ಸಮುದಾಯದ ಬಹುಪಾಲು ಜನ ವೀರಭದ್ರೇಶ್ವರ ದೇವರನ್ನು ನೆನೆಯುತ್ತಾರೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಆದರೆ ವೀರಭದ್ರೇಶ್ವರ ಜಾತ್ರೆ ಎಂದರೆ ಎಲ್ಲರಿಗೂ ನೆನಪಾಗುವುದು ಹುಮನಾಬಾದ್ ಪಟ್ಟಣ ಮಾತ್ರ.

See also  ಕೋಲ್ಕತಾ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಗೆ ಕೋವಿಡ್-19 ದೃಢ

ವಿಜಯನಗರ ಅರಸರ ಕಾಲದಲ್ಲೂ ಸಹ ವೀರಭದ್ರೇಶ್ವರರನ್ನು ಯುದ್ಧದ ಆದಿ ದೇವತೆಯನ್ನಾಗಿ ಪೂಜಿಸಲಾಗುತ್ತಿತ್ತು ಎಂಬುದಕ್ಕೆ ಇತಿಹಾಸದ ಉಲ್ಲೇಖವಿದೆ. ಈಗಲೂ ಹಂಪಿಯಲ್ಲಿ ಉದ್ದಾನ ವೀರಭದ್ರ ಎಂಬ ಪ್ರಸಿದ್ಧ ದೇವಾಲಯವಿದೆ.

ಅನಾದಿ ಕಾಲದಿಂದಲೂ ವೀರಭದ್ರ ಕೋಟಿ ಕೋಟಿ ಭಕ್ತರ ಪಾಲಿಗೆ ಆರಾಧ್ಯ ದೇವನಾಗಿ ಭಕ್ತರ ಇಷ್ಟಾರ್ಥ ನೆರವೇರಿಸುವ ಕಲ್ಪವೃಕ್ಷನಾಗಿದ್ದಾನೆ. 108 ಮಠಗಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಅಂದಿನ ಜಯಸಿಂಹ ನಗರವೇ ಇಂದಿನ ಹುಮನಾಬಾದ್ ಪಟ್ಟಣ. ಹೊನ್ನಪ್ಪ ರಾಜ್ಯದಲ್ಲಿಯೇ 108 ಮಠ ಹೊಂದಿದ ಏಕೈಕ ಪಟ್ಟಣ ಎಂದು ಅನೇಕ ಇತಿಹಾಸಕಾರರು ಹೇಳುತ್ತಾರೆ.

ಚಿಟಗುಪ್ಪ : ವೀರಭದ್ರೇಶ್ವರ ದೇವರ ವಿಶಿಷ್ಟ ಅಗ್ನಿಕುಂಡ

ಚಿಟಗುಪ್ಪ: ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇಗುಲದ ಅಗ್ನಿಕುಂಡವನ್ನು ಕಳೆದ ಮೂರು ವರ್ಷಗಳ ಹಿಂದೆ ಧಾರ್ಮಿಕ ದೇಗುಲಗಳ ವೈದೀಕ ವಿಧಾನದ ಪದ್ಧತಿಯಂತೆ ಆಧುನಿಕ ಶೈಲಿಯಲ್ಲೂ ಮರು ನಿರ್ಮಾಣ ಮಾಡಲಾಗಿದೆ.

ದೇವಸ್ಥಾನ ಆಡಳಿತ ಮಂಡಳಿ ₹ 50 ಲಕ್ಷ ಮೊತ್ತದಲ್ಲಿ ನೂತನ ಅಗ್ನಿಕುಂಡ ನಿರ್ಮಿಸಿದೆ.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಇರುವ ಅಗ್ನಿ ಕುಂಡಗಳಿಗೆ ಇದು ಮಾದರಿಯಾಗಿದೆ. ಪ್ರತಿ ವರ್ಷದ ಜಾತ್ರೆಗೆ ಬರುವ ಭಕ್ತರು ಅಗ್ನಿ ತುಳಿಯಲು ನೂಕುನುಗ್ಗಲಿನಲ್ಲಿ ಚಡಪಡಿಸಬೇಕಾಗಿತ್ತು. ಮೂರು ವರ್ಷಗಳಿಂದ ಸುಲಭವಾಗಿ ಅಗ್ನಿ ತುಳಿದು ಬರುವ ವ್ಯವಸ್ಥೆ ಮಾಡಲಾಗಿದೆ.

‘106 ಅಡಿ ವಿಸ್ತೀರ್ಣದ 50 ಅಡಿ ಸುತ್ತಳತೆಯಲ್ಲಿ ದುಂಡಾಗಿ ಅಗ್ನಿಕುಂಡ ನಿರ್ಮಿಸಿರುವುದೇ ಇದರ ಪ್ರಮುಖ ವೈಶಿಷ್ಟ್ಯವಾಗಿದೆ’ ಎಂದು ವೀರಭದ್ರೇಶ್ವರ ದೇವಾಲಯದ ಸ್ಥಳೀಯ ಸಮಿತಿಯ ಅಧ್ಯಕ್ಷ ವೀರಣ್ಣ ಪಾಟೀಲ ಹೇಳುತ್ತಾರೆ.

ಅಗ್ನಿಕುಂಡದ ಒಳಗಡೆ ಭಕ್ತರು ಬರಲು ಒಂದು ದ್ವಾರ, ಅಗ್ನಿ ತುಳಿದು ಹೊರಹೋಗಲು ಇನ್ನೊಂದು ದ್ವಾರ ನಿರ್ಮಿಸಿರುವ ಕಾರಣ ಎಲ್ಲರಿಗೂ ಕಡಿಮೆ ಅವಧಿಯಲ್ಲಿ ದರ್ಶನ ಭಾಗ್ಯ ಕಲ್ಪಿಸಿದಂತಾಗಿದೆ.

‘ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಾಲಯದ ಹಣದಲ್ಲಿ ಶಾಸಕ ರಾಜಶೇಖರ ಪಾಟೀಲ ಅವರ ಇಚ್ಛಾಶಕ್ತಿಯಿಂದ ಅಗ್ನಿಕುಂಡ ನಿರ್ಮಿಸಲಾಗಿದೆ. ರಾಜಸ್ಥಾನದಿಂದ ಖರೀದಿಸಿದ ಮಾರ್ಬಲ್‌ನಿಂದ ಅಗ್ನಿಕುಂಡದ ಸುತ್ತಲು ಕೆಳಹಾಸು ಹಾಕಲಾಗಿದೆ. ಕುಂಡದ ಮುಖ್ಯ ದ್ವಾರದಿಂದ ಈ ಬಾರಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ನೇರವಾಗಿ ವಿಶೇಷ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಜಾತ್ರಾ ಸಮಿತಿಯ ಪ್ರಮುಖ ಮಾಶೆಟ್ಟಿ ತಿಳಿಸಿದರು.

ವರದಿ: ಯೋಹಾನ್ ಪಿ ಹೊನ್ನಡ್ಡಿ 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು