News Kannada
Monday, October 02 2023
ವಿಶೇಷ

ಬೆಳ್ತಂಗಡಿ: ವಿಪತ್ತು ನಿರ್ವಹಣೆಗೆ ಶೌರ್ಯ ತಂಡ ಸಕ್ರೀಯ, ರಾಜ್ಯದಲ್ಲಿದೆ 70 ತಂಡ

Belthangady: Shaurya team active for disaster management, 70 teams in the state
Photo Credit : News Kannada

ಬೆಳ್ತಂಗಡಿ: ರಾಜ್ಯದ ಬಹುತೇಕ ಕಡೆಗಳಲ್ಲಿ ಕಾಡ್ಗಿಚ್ಚು, ರಸ್ತೆ ಅಪಘಾತದಂತಹ ವಿಪತ್ತುಗಳು ಸಂಭವಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಸಹ ಅಲ್ಲಲ್ಲಿ ಕಾಡುತ್ತಿವೆ. ಇಂತಹ ವಿಪತ್ತುಗಳನ್ನು ಎದುರಿಸಲು ಅಗ್ನಿಶಾಮಕ ಪೊಲೀಸ್ ಇಲಾಖೆಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಪ್ರಾಯೋಜಿತ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡವು ಸಕ್ರೀಯವಾಗಿ ತೊಡಗಿಕೊಂಡಿದೆ.

ವಿಪತ್ತುಗಳ ನಿರ್ವಹಣೆಗೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮೂಡಿಬಂದ ಕಾರ್ಯಕ್ರಮವೇ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ. ವಿಪತ್ತಿನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸ್ವಯಂಸೇವಕರು ಶೌರ್ಯ, ಪರಾಕ್ರಮದಿಂದ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ವಯಂಸೇವಕರ ಸೇವಾ ಚಟುವಟಿಕೆಗಳನ್ನು ಗಮನಿಸಿದ ಡಾ| ಹೇಮಾವತಿ ವಿ. ಹೆಗ್ಗಡೆಯವರು ಈ ಕಾರ್ಯಕ್ರಮಕ್ಕೆ “ಶೌರ್ಯ” ಎನ್ನುವ ಹೆಸರನ್ನು ನೀಡಿರುತ್ತಾರೆ. ವಿಪತ್ತು ತಡೆಗೆಂದೇ ರಚಿಸಲಾದ ಅನುಭವಿ ಸ್ವಯಂಸೇವಕರನ್ನು ಒಳಗೊಂಡಿರುವ ತಂಡಗಳು ಸಂಭವನೀಯ ವಿಪತ್ತುಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಇಲಾಖೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ವಿಪತ್ತು ತಡೆಯಲ್ಲಿ ತೊಡಗಿಕೊಂಡಿವೆ.

ರಾಜ್ಯದಲ್ಲಿ 70 ತಂಡಗಳಿವೆ:
2022-23 ನೇ ಸಾಲಿನಲ್ಲಿ 16 ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದ್ದು, ಇದೀಗ ರಾಜ್ಯದಲ್ಲಿ 70 ವಿಪತ್ತು ನಿರ್ವಹಣಾ ಸಮಿತಿಗಳು ವಿಪತ್ತು ನಿರ್ವಹಣೆಗೆ ಸಜ್ಜುಗೊಂಡಿವೆ. ವಿಪತ್ತು ಸಂಭವಿಸುವ
ಜಿಲ್ಲೆಗಳಾದ ದ.ಕ, ಉ.ಕ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಬಾಗಲಕೋಟೆ, ಕಲ್ಬುರ್ಗಿ, ಬೆಂಗಳೂರು ಗ್ರಾಮಾಂತರ ಹೀಗೆ 11 ಜಿಲ್ಲೆಗಳ 70 ತಾಲ್ಲೂಕುಗಳಲ್ಲಿ ಶೌರ್ಯ ತಂಡಗಳನ್ನು ರಚಿಸಲಾಗಿದೆ.

ಪ್ರತೀ ತಾಲ್ಲೂಕು ತಂಡಗಳು 100 ರಿಂದ 200 ಸ್ವಯಂಸೇವಕರನ್ನು ಒಳಗೊಂಡಿದ್ದು ರಾಜ್ಯದಲ್ಲಿ ಒಟ್ಟು 9240 ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು

ನಿರ್ವಹಣಾ ತಂಡದಿಂದ ತರಬೇತಿ:
ಮಳೆಗಾಲದಲ್ಲಿ ಎದುರಾಗುವ ವಿವಿಧ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ತಜ್ಞತೆ ರೂಢಿಸುವ ನಿಟ್ಟಿನಲ್ಲಿ ಸ್ವಯಂಸೇವಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್)ಯಿಂದ ತರಬೇತಿಯನ್ನು ನೀಡಲಾಗಿದೆ. ಅಲ್ಲದೇ ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಪೊಲೀಸ್ ಇಲಾಖೆಗಳಿಂದ ಸಹ ವೈಜ್ಞಾನಿಕ ತರಬೇತಿ ನೀಡಲಾಗಿದೆ.

ಸ್ವಯಂಸೇವಕರಿಗೆ ವಿಶೇಷ ತಜ್ಞತೆ ಮೂಡಿಸುವ ನಿಟ್ಟಿನಲ್ಲಿ ಚೆನ್ನೈ ಮೂಲದ ಉಷಾ ಫೈರ್ ಸೇಫ್ಟಿ ಕಂಪೆನಿಯಿಂದ ಜೀವ ರಕ್ಷಣಾ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ.

ವರ್ಷದ ಚಟುವಟಿಕೆಗಳು:
ಕಳೆದ ಮಳೆಗಾಲದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅತಿಯಾದ ಮಳೆಯಾಗಿದ್ದು ಗುಡ್ಡ ಜರಿತ, ಪ್ರವಾಹದಂತಹ ಸಮಸ್ಯೆಗಳು ತಲೆದೋರಿದ್ದು ಕಾರ್ಯಾಚರಣೆಗಳನ್ನು ನಡೆಸಿ ವಿಪತ್ತು ಸ್ಪಂದನೆ ನೀಡಿದೆ.
ಕೊಡಗು ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ತಲೆದೋರಿದ ಪ್ರವಾಹ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರದಲ್ಲಿ ಉಂಟಾದ ಪ್ರವಾಹ, ಸುಳ್ಯ ತಾಲ್ಲೂಕಿನ ಹರಿಹರ ಪಲ್ಲತಡ್ಕ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಉಂಟಾದ ವಿಪತ್ತು ಸಮಯದಲ್ಲಿ ತಾಲ್ಲೂಕು
ತಹಶೀಲ್ದಾರರ ವಿನಂತಿಯ ಮೇರೆಗೆ ‘ಶೌರ್ಯ’ ವಿಪತ್ತು ನಿರ್ವಹಣಾ ಸ್ವಯಂಸೇವಕರು ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವುದು, ವಸ್ತುಗಳ ಸಾಗಾಟ, ನಿರಾಶ್ರಿತರಿಗೆ ಊಟ
ಉಪಾಹಾರ ತಲುಪಿಸುವ ವ್ಯವಸ್ಥೆಯಂತಹ ಚಟುವಟಿಕೆಗಳನ್ನು ನಡೆಸಿರುತ್ತಾರೆ.

See also  ಆರ್.ಧ್ರುವನಾರಾಯಣ್ ವಿಧಿವಶ ಹಿನ್ನೆಲೆ, ಹುಲ್ಲಹಳ್ಳಿಯಲ್ಲಿ ಸ್ವಯಂ ಪ್ರೇರಿತ ಬಂದ್

ರಸ್ತೆಗಳು ಕೊಚ್ಚಿಹೋಗಿ ಕಂದಕಗಳಾಗಿದ್ದು ಸರಿಪಡಿಸಿ ತಾತ್ಕಾಲಿಕ ಓಡಾಟಕ್ಕೆ ಅನುಕೂಲ ಮಾಡಿಕೊಡುವುದು, ಮನೆಯೊಳಗೆ ನೀರು ನುಗ್ಗಿ ಕೆಸರು ತುಂಬಿರುವುದನ್ನು ಸ್ವಚ್ಚಗೊಳಿಸುವುದು, ಮನೆಯೊಳಗೆ ನೀರು ನುಗ್ಗದಂತೆ ನೀರಿನ ಹರಿವಿನ ದಿಕ್ಕು ಬದಲಿಸಿ ಹಾನಿ ತಪ್ಪಿಸುವುದು, ರಸ್ತೆಯಲ್ಲಿ ಬಿದ್ದ ಮರಗಳ ತೆರವು, ಸಂತ್ರಸ್ಥರಿಗೆ ಕಾಳಜಿ ಕೇಂದ್ರಗಳಿಗೆ ಕಳುಹಿಸುವುದು, ತೋಟಗಳಿಗೆ ನೀರು
ನುಗ್ಗಿದಾಗ ಸರಾಗ ಹರಿವಿಗೆ ವ್ಯವಸ್ಥೆ, ತಾತ್ಕಾಲಿಕ ಮನೆ ನಿರ್ಮಾಣ, ಮನೆ ರಿಪೇರಿಯಂತಹ ಕೆಲಸಗಳನ್ನು ಶೌರ್ಯ ಸ್ವಯಂಸೇವಕರು ನಡೆಸಿರುತ್ತಾರೆ.

ಇತ್ತೀಚೆಗೆ ಚಿಕ್ಕಮಗಳೂರು, ಕಳಸ, ಶಿಶಿಲ, ಅಳದಂಗಡಿ, ಬ್ರಹ್ಮಾವರ, ಕಡಬ ಮುಂತಾದ ಭಾಗಗಳಲ್ಲಿ ಸಂಭವಿಸಿದ ಕಾಡ್ಗಿಚ್ಚಿನ ಸಮಯದಲ್ಲಿ ಅಗ್ನಿಶಾಮಕ ಇಲಾಖೆಯೊಂದಿಗೆ, ಸ್ಥಳೀಯರನ್ನು ಒಟ್ಟಿಗೆ ಸೇರಿಸಿಕೊಂಡು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿರುತ್ತಾರೆ. 2022-23 ಸಾಲಿನಲ್ಲಿ 11,680 ವಿಪತ್ತು ನಿರ್ವಹಣೆ ಚಟುವಟಿಕೆಗಳು ಹಾಗೂ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಗಿಡ ನಾಟಿ ಕಾರ್ಯಕ್ರಮಗಳು, ಅರಣ್ಯದಲ್ಲಿ ಹಣ್ಣು ಹಂಪಲುಗಳ ಬೀಜ ಬಿತ್ತನೆ, ರಸ್ತೆ ರಿಪೇರಿ, ಬಸ್ ತಂಗುದಾಣ ಸ್ವಚ್ಚತೆ, ಮತ್ಸ್ಯ ಗುಂಡಿಗಳಲ್ಲಿ ನೀರು ಕಡಿಮೆ ಆಗದಂತೆ ಕಟ್ಟ ಕಟ್ಟುವುದು ಮುಂತಾದ 16,750 ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ಸ್ವಯಂಸೇವಕರು ನಿರ್ವಹಿಸಿರುತ್ತಾರೆ.

ಮನೆ ನಿರ್ಮಾಣದಲ್ಲಿ ಸ್ವಯಂಸೇವಕರು:
ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಶ್ರಮದಾನದಂತಹ ಚಟುವಟಿಕೆಗಳಲ್ಲಿ ಸ್ವಯಂಸೇವಕರು ಸಕ್ರೀಯವಾಗಿದ್ದಾರೆ. ಮಳೆಗಾಲದಲ್ಲಿ ಕುಸಿಯುವ ಸಾಧ್ಯತೆ ಇರುವ ಬಡ ಕುಟುಂಬಗಳ ಮನೆಗಳಿಗೆ ತೆರಳಿ ಮನೆ ಮಂದಿಗೆ ಮನವರಿಕೆ ಮಾಡಿ ಮನೆ ರಿಪೇರಿಗೆ ಸಹಕಾರ ನೀಡುತ್ತಿದ್ದಾರೆ. ಗ್ರಾಮ ಪಂಚಾಯತಿ ವತಿಯಿಂದ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಪಡೆದುಕೊಳ್ಳಲು ಸಹಕಾರ ನೀಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ| ಹೇಮಾವತಿ ವಿ. ಹೆಗ್ಗಡೆಯವರು ಅನಾಥರಿಗೆ, ನಿರ್ಗತಿಕರಿಗೆ ವಾತ್ಸಲ್ಯ ಮನೆ ರಚನೆ ಮಾಡಿಕೊಡುತ್ತಿದ್ದು ಈ ಮನೆಗಳ ರಚನೆಯ ಕೆಲಸಗಳಲ್ಲಿ ಸಹ ಸ್ವಯಂಸೇವಕರು ಶ್ರಮ ಸೇವೆ ನೀಡುತ್ತಿದ್ದಾರೆ. ಪ್ರಸ್ತುತ ಸಾಲಿನಲ್ಲಿ 163 ಹೊಸ ಮನೆ ರಚನೆ ಹಾಗೂ 384 ಮನೆ ರಿಪೇರಿಗೆ ಸ್ವಯಂಸೇವಕರು ಶ್ರಮದಾನ ಮಾಡಿರುತ್ತಾರೆ.

ರಕ್ಷಣಾ ಪರಿಕರಗಳ ಒದಗಣೆ:
ವಿಪತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ ಪ್ರತಿ ತಾಲ್ಲೂಕು ಸಮಿತಿಗೆ ತಲಾ 2 ಲಕ್ಷ ರೂಪಾಯಿಗಳಂತೆ ಒಟ್ಟು 70 ತಾಲ್ಲೂಕು ವಿಪತ್ತು ನಿರ್ವಹಣಾ ಸಮಿತಿಗಳಿಗೆ ವಿಪತ್ತು ನಿರ್ವಹಣಾ ಪರಿಕರಗಳನ್ನು ಒದಗಿಸಲಾಗಿದೆ. ಲೈಫ್ ಜಾಕೆಟ್, ಲೈಫ್ ಬಾಯ್, ರೋಪ್, ಹೆಲ್ಮೆಟ್, ಬೂಟ್ಸ್, ಸ್ಟ್ರೆಚರ್ಸ್, ಚೈನ್ ಸಾ, ಬುಟ್ಟಿಗಳು, ಸಲಿಕೆ ಮುಂತಾದ ಪರಿಕರಗಳನ್ನು ನೀಡಲಾಗಿದೆ. ಅಲ್ಲದೇ ಇವುಗಳ ಬಳಕೆಯ ಬಗ್ಗೆ ತರಬೇತಿಯನ್ನು ನೀಡಲಾಗಿದೆ.

ವಿಶೇಷ ಕಾರ್ಯಾಚರಣೆಗಳು:
ಶೌರ್ಯ ತಂಡದಲ್ಲಿ ಈಜು ತಜ್ಞರು, ಮುಳುಗು ತಜ್ಞರು, ಉರಗ ಪ್ರೇಮಿಗಳು ಮುಂತಾದ ಕೌಶಲ್ಯ ಹೊಂದಿರುವ ಸ್ವಯಂಸೇವಕರು ಇದ್ದಾರೆ. ನದಿಯಲ್ಲಿ, ಕೆರೆಯಲ್ಲಿ ಮುಳುಗಿದ ವ್ಯಕ್ತಿಗಳ ಶವವನ್ನು
ತೆಗೆಯುವ ಕಾರ್ಯಾಚರಣೆಯನ್ನು ವಿಪತ್ತು ನಿರ್ವಹಣಾ ಸ್ವಯಂಸೇವಕರು ಯಶಸ್ವೀಯಾಗಿ ನಡೆಸಿದ್ದಾರೆ. ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ಹಸುವನ್ನು ತೆಗೆಯುವುದು, ಮನೆಯೊಳಗೆ ಬಂದು ಮನೆ ಮಂದಿಗೆ ಆತಂಕ ಉಂಟುಮಾಡಿದ ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಅರಣ್ಯಕ್ಕೆ ಬಿಡುವುದು, ಮನೆ, ಅಂಗಡಿ, ಕೃಷಿ ಬೆಳೆಗಳು ಮುಂತಾದ ಕಡೆಗಳಲ್ಲಿ ಬೆಂಕಿ ಅಪಘಾತಗಳಾದರೆ ತುರ್ತಾಗಿ ಸ್ಪಂದನೆ
ನೀಡುವ ಕೆಲಸವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಎನ್.ಡಿ.ಆರ್.ಎಫ್, ಎಸ್.ಡಿ,ಆರ್,ಎಫ್, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯೊಂದಿಗೆ ಸೇರಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 164 ವಿಶೇಷ ಕಾರ್ಯಾಚರಣೆಗಳನ್ನು ಸ್ವಯಂಸೇವಕರ ತಂಡಗಳು ನಡೆಸಿವೆ.

See also  ಮೊಡವೆಯನ್ನು ಚಿವುಟುವ ಅಭ್ಯಾಸ ಒಳ್ಳೆಯದಲ್ಲ!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಳೆದ ಮೂರು ವರ್ಷಗಳ ಹಿಂದೆ ವಿಪತ್ತು ನಿರ್ವಹಣೆಗೆಂದು ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ಆಯ್ಕೆ ಮಾಡಲಾದ ಸ್ವಯಂಸೇವಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ತರಬೇತಿಯನ್ನು ನೀಡಲಾಗಿದೆ. ಶೌರ್ಯ ತಂಡಕ್ಕೆ ನೋಂದಣಿ ಮಾಡಿಕೊಂಡ ಎಲ್ಲಾ ಸ್ವಯಂಸೇವಕರು ಸಕ್ರೀಯವಾಗಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಮೂರು ವರ್ಷಗಳಲ್ಲಿ 31,600 ವಿಪತ್ತು ನಿರ್ವಹಣಾ ಚಟುವಟಿಕೆಗಳು ಹಾಗೂ 23,300 ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅಗತ್ಯತೆ ಇರುವ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸುವ ಮತ್ತು 20,000 ಸ್ವಯಂಸೇವಕರನ್ನು ಗುರುತಿಸಿ ವೈಜ್ಞಾನಿಕವಾದ ತರಬೇತಿಯನ್ನು ನೀಡುವ ಆಶಯ ಹೊಂದಲಾಗಿದೆ.- ಡಾ| ಎಲ್.ಎಚ್.ಮಂಜುನಾಥ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.)

ಸ್ಥಳೀಯರ ಸಹಭಾಗಿತ್ವದಲ್ಲಿ ವಿಪತ್ತುಗಳನ್ನು ಎದುರಿಸಲು ಕೇಂದ್ರ ಸರ್ಕಾರ ‘ಆಪದ್ ಮಿತ್ರ’ ಯೋಜನೆ ಜಾರಿಗೊಳಿಸಿದೆ. ಇದೇ ಮಾದರಿಯ ವಿಪತ್ತು ನಿರ್ವಹಣೆಯ ಉದ್ದೇಶ ಹೊಂದಿರುವ ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂರು ವರ್ಷಗಳ ಹಿಂದೆಯೇ ಜಾರಿಗೊಳಿಸಿದೆ.

ಸ್ಥಳೀಯರ ಸಹಭಾಗಿತ್ವದಲ್ಲಿ ವಿಪತ್ತು ನಿಯಂತ್ರಣೆಗೆ ಸುಸಜ್ಜಿತ ತಂಡವನ್ನು ಕಟ್ಟಿ ರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ತರಬೇತಿ ನೀಡಲಾಗಿದ್ದು ಸ್ಥಳೀಯವಾಗಿ ಎದುರಾದ ವಿಪತ್ತುಗಳಿಗೆ ತಕ್ಷಣ ಧಾವಿಸಿ ನೆರವು ನೀಡುವ ಮತ್ತು ಸಂಭವನೀಯ ವಿಪತ್ತುಗಳನ್ನು ತಗ್ಗಿಸುವ ಮಹತ್ ಕಾರ್ಯವನ್ನು ಶೌರ್ಯ ತಂಡದ ಸ್ವಯಂಸೇವಕರು ಮಾಡುತ್ತಿದ್ದಾರೆ. ವಿಪತ್ತು ನಿರ್ವಹಣಾ ಸ್ವಯಂಸೇವಕರು ವಿಪತ್ತಿನ ಸಮಯದಲ್ಲಿ ತಮ್ಮ ಶೌರ್ಯ ಮೆರೆಯುತ್ತಿರುವುದು ಆಪತ್ತಿನಲ್ಲಿರುವವರಿಗೆ ವರದಾನವಾಗಿದೆ.-ವಿವೇಕ್ ವಿ. ಪಾೈಸ್, ಪ್ರಾದೇಶಿಕ ನಿರ್ದೇಶಕರು, ಜನಜಾಗೃತಿ ಪ್ರಾದೇಶಿಕ ವಿಭಾಗ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು