ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿರುವ ಮನೆಗಳಲ್ಲಿ ಕಸಸಂಗ್ರಹಣೆ ಮಾಡುವ ಕೆಲಸ ಪ್ರಾರಂಭವಾಗಿದ್ದು, ವಾಹನ ಚಾಲಕಿಯಾಗಿ ಮಹಿಳೆಯೊಬ್ಬರು ಗಮನಸೆಳೆಯುತ್ತಿದ್ದಾರೆ.
ಫೆಬ್ರವರಿ 1ರಂದು ಕಡಂದಲೆ ಹಾಗೂ ಪಾಲಡ್ಕ ಗ್ರಾಮಗಳನ್ನು ಹೊಂದಿರುವ ಪಾಲಡ್ಕ ಗ್ರಾಪಂಗೆ ಪೂಪಾಡಿಕಲ್ಲು ಎಂಬಲ್ಲಿ ಸುಸಜ್ಜಿತ ಸ್ವಚ್ಛತಾ ಸಂಕೀರ್ಣ ಉದ್ಘಾಟನೆಗೊಂಡಿದೆ. ಪ್ರಾರಂಭಿಕ ಹಂತದಲ್ಲಿ ಇಲ್ಲಿ ಒಣ ಕಸಗಳ ಸಂಗ್ರಹಣೆ ಮಾಡಲಾಗುತ್ತಿದ್ದು, ಕಸ ಸಂಗ್ರಹಣೆ, ನಿರ್ವಹಣೆಗೆ ಮಹಿಳೆಯೊಬ್ಬರು ಚಾಲಕಿಯಾದರೆ, ಅವರೊಂದಿಗೆ ಸಹಾಯಕಿಯಾಗಿ ಇನ್ನೊಬ್ಬ ಮಹಿಳೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಡಂದಲೆ ಗ್ರಾಮದ ನಿವಾಸಿ ಭಾರತಿ ಎಂಬವರು ಕಸಸಂಗ್ರಹಣೆಯ ಹೊಸ ಪಿಕ್‌ಅಪ್ ವಾಹನ ಚಾಲಕಿಯಾಗಿದ್ದಾರೆ. ಟಿಪ್ಪರ್ ಚಾಲಕ ವಾಸು ಅವರ ಪತ್ನಿಯಾಗಿರುವ ಭಾರತಿ ಅವರು, ಸಂಜೀವಿನಿ ಸ್ತ್ರೀ ಶಕ್ತಿ ತಂಡದಲ್ಲಿದ್ದಾರೆ. ಕಸ ಸಂಗ್ರಹಣೆಗೆ ಚಾಲಕರು, ಸಹಾಯಕಿಯರು ಬೇಕಾಗಿರುವುದರ ಕುರಿತು ಪ್ರಸ್ತಾಪ ಬಂದಾಗ ಈಕೆ ತಾನು ವಾಹನ ಚಲಾಯಿಸುವುದಾಗಿ ತಿಳಿಸಿದ್ದಾರೆ.
ವಾಹನ ಚಾಲನೆಯ ಪರವಾನಿಗೆ ಹೊಂದಿರುವ ಈಕೆಯನ್ನು ಪಂಚಾಯಿತಿಯವರು ಸ್ವಚ್ಛತೆಯ ವಾಹನಕ್ಕೆ ಚಾಲಕಿಯಾಗಿ ಆಯ್ಕೆ ಮಾಡಿದ್ದಾರೆ. ಇವರಿಗೆ ಕಸ ಸಂಗ್ರಹಣೆ ಹಾಗೂ ಘಟಕ ನಿರ್ವಹಣೆಗೆ ಪಾಲಡ್ಕ ಬಿ.ಟಿ ರೋಡ್‌ನ ವಿಮಲ ಸಾಥ್ ನೀಡುತ್ತಿದ್ದಾರೆ. ಇವರಿಬ್ಬರು ಗುರುವಾರ ಹಾಗೂ ಶನಿವಾರ ಸ್ವಚ್ಛ ಸಂಕೀರ್ಣದಲ್ಲಿ ಕೆಲಸ ಕಸ ವಿಂಗಡನೆಯಲ್ಲಿ ನಿರ್ವಹಿಸುತ್ತಿದ್ದು, ಉಳಿದ ನಾಲ್ಕು ದಿನ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಅಧಿಕ ಮನೆಗಳಿಗೆ ತೆರಳಿ ಕಸಸಂಗ್ರಹಣೆ, ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಕಾಯಕ. ಪಂಚಾಯಿತಿ ಸಿಬ್ಬಂದಿ ಅಶ್ವಥ್ ಅವರು ಸ್ವಚ್ಛತಾ ಸಂಕೀರ್ಣದ ಮೇಲ್ವಿಚಾರಕರಾಗಿದ್ದು, ಅವರ ಮುತುವರ್ಜಿಯಲ್ಲಿ ಕಸಸಂಗ್ರಹಣೆಯ ಕೆಲಸ ನಡೆಯುತ್ತಿದೆ. ಪಂಚಾಯಿತಿ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ.
ತಾಲೂಕಿನಲ್ಲೇ ಮೊದಲು:
ಮೂಡುಬಿದಿರೆ ತಾಲೂಕಿನಲ್ಲಿ ಇಬ್ಬರು ಆಟೋ ಚಾಲಕರಿದ್ದು, ಕೆಲವು ಮಹಿಳೆಯರು ಬುಲೆಟ್ ಸಹಿತ ಬೈಕ್‌ಗಳನ್ನು ಸವಾರರಾಗಿದ್ದಾರೆ. ಆದರೆ ಗ್ರಾಮ ಪಂಚಾಯಿತಿಯೊAದಕ್ಕೆ, ಅದೂ ಸ್ವಚ್ಛತಾ ಸಂಕೀರ್ಣದ ಕಸಸಂಗ್ರಹಣೆಯ ವಾಹನಕ್ಕೆ ಮೊದಲ ಚಾಲಕಿ ಎನ್ನುವ ಹೆಗ್ಗಳಿಕೆಗೆ ಭಾರತಿ ಪಾತ್ರರಾಗಿದ್ದಾರೆ.
ಗ್ರಾಮಗಳ ಸ್ವಚ್ಛತೆಯ ಕುರಿತು ಮಂಗಳೂರಿನಲ್ಲಿ ನಡೆದ ಸ್ತ್ರೀ ಶಕ್ತಿ ತರಬೇತಿ ಕಾರ್ಯಕ್ರಮದಿಂದ ಪ್ರೇರಣೆಗೊಂಡಿದ್ದೆ. ಬಳಿಕ ನಮ್ಮ ತಂಡದಲ್ಲಿ ವಾಹನ ಚಾಲಕರ ಪ್ರಸ್ತಾಪ ಬಂದಾಗ, ಮನೆಯವರ ಒಪ್ಪಿಗೆ ಪಡೆದು ವಾಹನ ಚಾಲಕಿಯಾಗಿದ್ದೇನೆ. ಪಂಚಾಯಿತಿಯ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿಗಳು, ಮುಖ್ಯವಾಗಿ ಗ್ರಾಮಸ್ಥರು ಸಹಕರಿಸುತ್ತಿರುವುದು ಖುಷಿ ನೀಡಿದೆ. -ಭಾರತಿ, ಸ್ವಚ್ಛತಾ ವಾಹನದ ಚಾಲಕಿ
ಗ್ರಾಮದ ಸಮಗ್ರ ಅಭಿವೃದ್ಧಿಗೆ 2022-23ನೇ ಸಾಲಿನ ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪಾಲಡ್ಕ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆಯ ವಾಹನಕ್ಕೆ ಮಹಿಳೆಯೊಬ್ಬರು ಚಾಲಕಿಯಾಗಿರುವುದು ಹೆಮ್ಮೆಯ ವಿಷಯ. ಗ್ರಾಮಸ್ಥರು ಗ್ರಾಮದ ಸ್ವಚ್ಛತೆಗೆ ಪಂಚಾಯಿತಿಯೊAದಿಗೆ ಕೈಜೋಡಿಸಬೇಕು. – ದಿನೇಶ್ ಕಾಂಗ್ಲಾಯಿ, ಅಧ್ಯಕ್ಷರು, ಪಾಲಡ್ಕ ಗ್ರಾಪಂ