News Kannada
Friday, September 22 2023
ಸಂಪಾದಕೀಯ

ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿಯೊಂದಿಗೆ ಜೆಡಿಎಸ್‌ ಮರುಮೈತ್ರಿಯ ಉದ್ದೇಶದ ಒಳಹೊರಗು

editorial
Photo Credit : News Kannada

ರಾಜ್ಯ ಬಿಜೆಪಿ ಪ್ರಸ್ತುತ ನಾವಿಕನಿಲ್ಲದ ದೋಣಿಯಂತಾಗಿದೆ. ವಿಧಾನಸಭೆ ಚುನಾವಣೆಗೆ ಮೊದಲು ನಮ್ಮದು ಸಂಘಟನೆ ಆಧಾರಿತ ಪಕ್ಷ ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಪಕ್ಷದಲ್ಲೀಗ ನಾಯಕರ ನಡುವೆಯೇ ಸೋಲಿನ ವಿಮರ್ಶೆಯ ಫೈಟ್‌ ನಡೆಯುತ್ತಿದೆ. ಸಂಘಟನೆ ಸೂತ್ರ ಹರಿದ ಗಾಳಿಪಟದಂತಾಗಿದೆ. ಈ ಎಲ್ಲದರ ನಡುವೆ ಬಿಜೆಪಿ ಉನ್ನತ ನಾಯಕತ್ವ ಜೆಡಿಎಸ್‌ ನೊಂದಿಗೆ ಮರುಮೈತ್ರಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಒಳಬೇಗುದಿ, ಜೆಡಿಎಸ್‌ ನೊಂದಿಗೆ ನಂಟು ಕುದುರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದೇಕೆ ಎಂಬ ಅಂಶಗಳ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಬಿಜೆಪಿಯ ಹಿನ್ನಡೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಿದ ಬಳಿಕ ಆರಂಭವಾಗಿದೆ ಎಂಬುದು ಪಕ್ಷದ ಹಲವು ನಾಯಕರ, ಶಾಸಕರ ಮಾತು. ಇದರಲ್ಲಿ ಸತ್ಯಾಂಶವೂ ಇಲ್ಲದೇನಿಲ್ಲ. ಸಕಾರಣವಿಲ್ಲದೆ ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕೆಳಗಿಳಿಸಿ ಬೊಮ್ಮಾಯಿ ಅವರನ್ನು ಆ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಯಡಿಯೂರಪ್ಪ ವಿಧಾನಸಭೆಯಲ್ಲಿ ತನ್ನ ಹೋರಾಟದ ಹಾದಿ, ಹಠಾತ್‌ ಅಧಿಕಾರದಿಂದ ನಿರ್ಗಮನವನ್ನು ನೆನೆದು ಕಣ್ಣೀರಿಟ್ಟಿದ್ದರು. ಯಡಿಯೂರಪ್ಪ ಒಲ್ಲದ ಮನಸ್ಸಿನಿಂದ ಅಧಿಕಾರದಿಂದ ಕೆಳಗಿಳಿದಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಸೂಚ್ಯವಾಗಿ ಹೇಳಬೇಕಿರುವುದನ್ನೆಲ್ಲ ಜನತೆ ಮುಂದಿಟ್ಟಿದ್ದರು. ಬಳಿಕ ಬಂದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಸಹಿತ ಪ್ರಚಾರದಲ್ಲಿಯೂ ತೊಡಗಿಸಿಕೊಂಡರೂ ಯಡಿಯೂರಪ್ಪ ಸಂಘಟನೆ ವಿಚಾರದಲ್ಲಿ ದೂರವೇ ಉಳಿದುಬಿಟ್ಟಿದ್ದರು.

ಇದೇ ಕಾರಣದಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಮಿತ್‌ ಷಾ, ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರದ ಪ್ರಚಾರದ ಹೊರತಾಗಿಯೂ ಕರ್ನಾಟಕದಲ್ಲಿ ಅದರಲ್ಲಿಯೂ ಮಂಡ್ಯ ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಮಕಾಡೆ ಮಲಗಿತು. ಕಾಂಗ್ರೆಸ್‌ ಗೆಲುವಿನಲ್ಲಿ ಉಚಿತ ಕೊಡುಗೆಗಳ ಅಬ್ಬರ ಎಷ್ಟಿದೆಯೋ ಅದೇ ರೀತಿ ಬಿಜೆಪಿಯ ಸಂಘಟನೆ ಹುಳುಕು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸಿದೆ ಎಂಬುದು ಬಹಿರಂಗ ಸತ್ಯ.

ಅದೇ ರೀತಿ ಹಿರಿಯ ನಾಯಕ ಜಗದೀಶ್‌ ಶೆಟ್ಟರ್‌, ಸವದಿ, ಅವರನ್ನು ಮೂಲೆಗೆ ಸರಿಸಿ ಬಿಜೆಪಿ ಹೈಕಮಾಂಡ್‌ ನಡೆಸಿದ ಹೊಸ ಮುಖ ಪ್ರಯೋಗ ಕೂಡ ಸೋಲಿಗೆ ಕಾರಣವಾಗಿದ್ದನ್ನು ಇದೀಗ ಜಗದೀಶ್‌ ಶೆಟ್ಟರ್‌, ಬಿಜೆಪಿ ಮುಖಂಡ ರೇಣುಕಾಚಾರ್ಯ ಸೇರಿದಂತೆ ಹಲವರು ಸೋಲಿನ ವಿಮರ್ಷೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರ ಕರ್ನಾಟಕ ಪ್ರಯೋಗ ಸಂಪೂರ್ಣ ಯಶಸ್ಸು ಕಂಡಿದೆ ಎಂದು ಉರಿದುರಿದು ಹೇಳಿಕೆ ನೀಡಿದ್ದಾರೆ. ತಾನೇ ಮುಖ್ಯಮಂತ್ರಿ ಆಗಬೇಕೆಂದು ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿದರು. ಸಿಎಂ ಪಟ್ಟದ ಮೇಲೆ ಕಣ್ಣಿಟ್ಟು ಒಟ್ಟು 72 ಹೊಸ ಮುಖಗಳಿಗೆ ಟಿಕೆಟ್‌ ಕೊಟ್ಟಿದ್ದರು. ಎಲ್ಲ ಹಿರಿಯ ನಾಯಕರನ್ನು ಟಿಕೆಟ್ ಕೊಡದೆ ಬದಿಗೆ ಸರಿಸಿದರು ಎಂದು ಹೇಳಿದ್ದರು.

ಬಿ.ಎಸ್. ಯಡಿಯೂರಪ್ಪನವರನ್ನು ಕಡೆಗಣಿಸಿ ಇಡೀ ರಾಜ್ಯದಲ್ಲಿ ಪಕ್ಷವನ್ನು ತಲೆಯೆತ್ತದ ರೀತಿ ಮಾಡಿದರು. ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದೇ ಸಂತೋಷ್. ಜಗದೀಶ್‌ ಶೆಟ್ಟರ್ ಪಕ್ಷಕ್ಕಾಗಿ ಜೀವ ತೇಯ್ದುವರು. ಅವರ ತಂದೆ ಶಿವಪ್ಪ ಜನಸಂಘದ ಕಾಲದಿಂದಲೂ ಪಕ್ಷವನ್ನು ಕಟ್ಟಿ ಬಳಿಸಿದವರು. ಶೆಟ್ಟರ್ ಶಾಸಕನಾಗಿ, ಸಚಿವನಾಗಿ ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು, ಅಂಥವರಿಗೆ ಟಿಕೆಟ್ ನೀಡಲಿಲ್ಲ ಕುರುಬ ಜನಾಂಗದಿಂದ ಪಕ್ಷದ ಪ್ರತಿನಿಧಿಯಾಗಿದ್ದ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರನ್ನು ಟಿಕೆಟ್ ಕೊಡದೆ ಬದಿಗೆ ಸರಿಸಿದರು. ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೂ ಸಂತೋಷ್ ಟಿಕೆಟ್ ಸಿಗದಂತೆ ಮಾಡಿದರು. ಯಡಿಯೂರಪ್ಪನವರನ್ನು ದ್ವೇಷಿಸುತ್ತಿದ್ದವರಿಗೆ ಮಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಲಾಗುತಿತ್ತು ಎಂದು ವಾಗ್ದಾಳಿ ನಡೆಸಿದ್ದರು.

See also  ಬೆಳಗಾವಿ: ಕಲುಷಿತ ನೀರು ಕುಡಿದು ವ್ಯಕ್ತಿಯೋರ್ವ ಸಾವು, 94 ಜನ ಅಸ್ವಸ್ಥ

ಈಗ ಮರುಮೈತ್ರಿಯೇಕೆ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಏಕಾಂಗಿಯೇ ಗೆಲುವು ಸಾಧಿಸುವುದು ಕಷ್ಟ ಎಂಬ ಸತ್ಯವನ್ನು ಬಿಜೆಪಿ ರಾಷ್ಟ್ರನಾಯಕರು ಮನಗಂಡಿದ್ದಾರೆ. ಅದೇ ಕಾರಣಕ್ಕೆ ಕರ್ನಾಟಕದ ಬಿಜೆಪಿ ಕುರಿತು ಅವರಿಗೆ ನಿರಾಶೆಯ ಅಭಿಪ್ರಾಯವಿದೆ. ಇದರಿಂದಾಗಿಯೇ ರಾಜ್ಯಧ್ಯಕ್ಷ, ಪ್ರತಿಪಕ್ಷ ನಾಯಕನ ನೇಮಕಕ್ಕೂ ಮುಂದಾಗದೇ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಪಕ್ಷದೊಳಗಿನ ಆಂತರಿಕ ಮಾತು. ಇದೇ ಕಾರಣಕ್ಕೆ ಬಿಜೆಪಿ ಜೆಡಿಎಸ್‌ ನೊಂದಿಗೆ ಮೈತ್ರಿಗೆ ಮುಂದಾಗಿದೆ.

ನಮಗೆ ಬಿಜೆಪಿ ಸಹವಾಸ ಬೇಡ ಎಂದವರು ಏಕೆ ಕೈಜೋಡಿಸಿದರು: ಬಿಜೆಪಿ ಜೆಡಿಎಸ್‌ ನೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತು ಹಲವು ದಿನಗಳಿಂದ ಕೇಳಿಬರುತ್ತಿತ್ತು. ಎಚ್‌ಡಿಕೆ ಮೈತ್ರಿಗೆ ಮುಂದಾಗಿದ್ದರೂ ಅತೀವ ಆಸಕ್ತಿ ತೋರಿದ್ದರೂ ದೊಡ್ಡ ಗೌಡರೂ ಈ ವಿಚಾರದಲ್ಲಿ ದೊಡ್ಡ ಅಂತರ ಕಾಯ್ದುಕೊಂಡಿದ್ದರು. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪಕ್ಷದ ಸಭೆ ನಡೆಸಿದ್ದ ದೇವೇಗೌಡರು ಕಾಂಗ್ರೆಸ್‌ , ಬಿಜೆಪಿ ಸಹವಾಸ ನಮಗೆ ಬೇಡ. ನಮ್ಮ ಪಕ್ಷವನ್ನೇ ನಾವು ಗಟ್ಟಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಆದರೆ ಎಚ್‌ ಡಿಕೆ ಅವರ ಒತ್ತಡ, ಒಮ್ಮತದ ಪ್ರಯತ್ನದಿಂದ ಇದೀಗ ಮೈತ್ರಿ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತಿದೆ. ಬಿಜೆಪಿ ಹೈ ನಾಯಕರು ಹಳೇ ಮೈಸೂರು ಭಾಗದ ಲೋಕಮತಗಳ ಮೇಲೆ ಕಣ್ಣಿರಿಸಿ ಜೆಡಿಎಸ್‌ ನೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಅದೇ ರೀತಿ ಜೆಡಿಎಸ್‌ ಕೂಡ ದೇವೇಗೌಡರು ಕೇಂದ್ರದಲ್ಲಿ ಬಿಜೆಪಿಯೇ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂಬ ದೂರದೃಷ್ಟಿಯನ್ನು ಇರಿಸಿಕೊಂಡೇ ಮರುಮೈತ್ರಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಹಾಸನದಲ್ಲಿ ಹೇಳಿಕೆ ನೀಡಿದ್ದ ದೇವೇಗೌಡರು ಸಮರ್ಥ ನಾಯಕತ್ವವಿಲ್ಲದ ಕಾರಣ ಮೋದಿಯನ್ನು ಇಂಡಿಯಾ ಪರಿವಾರ ಎದುರಿಸುವುದು ಕಷ್ಟ ಎಂದು ಹೇಳಿಕೆ ನೀಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮಗೆ ಒದಗಿಬರಬಹುದಾದ ಪ್ರಯೋಜನಗಳ ಮುಂದಾಲೋಚನೆಯಿಂದಲೇ ರಾಜಕೀಯ ಚಾಣಾಕ್ಷ್ಯ ದೇವೇಗೌಡ ಈ ಮರುಮದುವೆಗೆ ಮುಂಡಿಯಿಟ್ಟಿದ್ದಾರೆ ಎಂಬುದು ನಿತ್ಯಸತ್ಯ.

ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಬಿಎಸ್‌ ವೈ ಏನಂದ್ರು: ಜೆಡಿಎಸ್‌ ಜೊತೆಗಿನ ಮೈತ್ರಿ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅಮಿತ್​ ರವಾನಿಸಿದ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. \ಜೆಡಿಎಸ್​ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದ್ದು, ಮೈತ್ರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿದ್ದು, ಜೆಡಿಎಸ್‌ ಜೊತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಈ ಮೈತ್ರಿ ಮಾತುಕತೆ ಬಹಳ ಅವಶ್ಯಕ, ಮಹತ್ವದ್ದಾಗಿದೆ. ಈ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವುದು ಮುಖ್ಯವಾಗಿತ್ತು. ಹೀಗಾಗಿ ನಾವು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಮೈತ್ರಿ ಸ್ಥಾನಗಳ ಹಂಚಿಕೆ ಬಗ್ಗೆ ಮುಂದೆ ತೀರ್ಮಾನ ಆಗಲಿದೆ. ನಮ್ಮ ಹೈಕಮಾಂಡ್ ಇದರ ತೀರ್ಮಾನ ಮಾಡಲಿದೆ ಎಂದು ಹೇಳಿದರು.

See also  ನವದೆಹಲಿ: ಒಬಿಸಿ ಮೋರ್ಚಾ ಸಂಸದರಿಗೆ ಔತಣಕೂಟ

6 ಕ್ಕೇ ಬೇಡಿಕೆ, ನಾಲ್ಕಕ್ಕೆ ಒಪ್ಪಿಗೆ ನೀಡಿದ ಚಾಣಾಕ್ಯ: ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ತಮಗೆ ಕೊಡಿ ಎಂದು ದೇವೇಗೌಡ್ರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ, ಇದಕ್ಕೆ ಅಮಿತ್‌ ಶಾ ಸದ್ಯಕ್ಕೆ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಂಡ್ಯವನ್ನು ಬಿಟ್ಟು ಇನ್ನುಳಿದ ನಾಲ್ಕು ಕ್ಷೇತ್ರಗಳನ್ನು ನೀಡಲು ಶಾ ಗ್ರೀನ್​ ಸಿಗ್ನಲ್​ ನೀಡಿದ್ದು, ಇನ್ನೊಂದು ಸೀಟಿನ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸೋಣ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಕೊನೆ ಮಾತು: ಜೆಡಿಎಸ್‌, ಬಿಜೆಪಿ ಕಾಂಗ್ರೆಸ್‌ ನ್ನು ಸೋಲಿಸಲೇ ಬೇಕೆಂಬ ಉದ್ದೇಶದಿಂದ ಪಣತೊಟ್ಟು ಮೈತ್ರಿಗೆ ಮುಂದಾಗಿವೆ. ಸೈದ್ಧಾಂತಿಕ ವಿರೋಧಿ ಬಿಜೆಪಿಯೊಂದಿಗೆ ಜೆಡಿಎಸ್‌ ಹೊಂದಾಣಿಕೆ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಒಂದು ಪ್ರಶ್ನೆಯಾದರೇ ಈ ಮೈತ್ರಿಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಲಾಭ ತರಬಹುದೇ ಎಂಬುದನ್ನು ಕಾದುನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

39339
ಉಮೇ‌ಶ ಎಚ್‌.ಎಸ್‌.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು