News Kannada
Friday, March 01 2024
ಸಂಪಾದಕೀಯ

ಸಿಲಿಕಾನ್‌ ಸಿಟಿಗೆ ಎಂಟ್ರಿ ಕೊಟ್ಟ ಕರಾವಳಿ ಪ್ರತಿಷ್ಠೆಯ ಕಂಬಳ ಕಲೆ: ಈಗ ಮನೋರಂಜನೆಯ ಕ್ರೀಡೆ

Photo Credit : Facebook

ಕಂಬಳ. . . ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಕ ಆಚರಣೆ. ಪ್ರತಿಷ್ಠೆಗಾಗಿ ನಡೆಯುವ ಈ ಕಂಬಳ ಕರಾವಳಿ ಭಾಗದಲ್ಲಿ ಅತ್ಯಂತ ವಿಶೇಷ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕೇರಳ ರಾಜ್ಯದ ಕಾಸರಗೋಡು ಭಾಗದಲ್ಲಿ ಕಂಬಳ ಕಾಮನ್. ವರ್ಷದಲ್ಲಿ ಕಂಬಳ ಋತುವಿನಲ್ಲಿ ಕರಾವಳಿಯಲ್ಲಿ ಸಾಲು ಸಾಲು ಕಂಬಳಗಳು ನಡೆಯುತ್ತವೆ. ಆದರೆ ಈ ವರ್ಷ ಇದೆಲ್ಲದಕ್ಕೂ ಮೊದಲು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಬಳ ನಡೆದಿದೆ.

ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪುತ್ತೂರು ಶಾಸಕ ಕಂಬಳ ಸಮಿತಿ ಅಧ್ಯಕ್ಷ ಅಶೋಕ್‌ಕುಮಾರ್‌ ರೈ ಸಾರಥ್ಯದಲ್ಲಿ ಕಂಬಳ ನಡೆಯುತ್ತಿದೆ. ನವೆಂಬರ್ 24 ರಿಂದ ಮೂರು ದಿನಗಳ ಕಾಲ ಅದ್ದೂರಿ ಕಂಬಳ ನಡೆಯಲಿದೆ. 125 ರಿಂದ 150 ಜೊತೆ ಕೋಣಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಕಂಬಳ ಮಾಡಲಾಗುತ್ತೆ. ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ.

ಹಿಂದಿನ ಕಾಲದಲ್ಲಿ ರಾಜ ಮನೆತನಗಳು ತಮ್ಮ ಪ್ರತಿಷ್ಠೆಯ ಸಂಕೇತವಾಗಿ ಈ ಕಂಬಳವನ್ನು ಏರ್ಪಡಿಸುತ್ತಿದ್ದರಂತೆ. ಕಂಬಳ ಎಂದರೆ ಎರಡು ಕೋಣಗಳ ನಡುವಿನ ಓಟ, ಸುಮಾರು 200 ಮೀಟರ್ ಗಳಷ್ಟು ಉದ್ದದ ಕೆಸರು ನೀರಿನಿಂದ ತುಂಬಿದ ಗದ್ದೆಯಲ್ಲಿ ಕೋಣಗಳ ಹೆಗಳಿಗೆ ನೊಗ ಇಟ್ಟು ಅದರ ನಿರ್ವಾಹಕ ಅವುಗಳನ್ನು ನಿಭಾಯಿಸಿದಾಗ ಯಜಮಾನನ ಘನತೆ, ಗೌರವ, ಪ್ರತಿಷ್ಠೆಯ ಉಳಿವಿಗಾಗಿ ಗೆಲುವಿನ ಬೆನ್ನು ಹಿಡಿದು ಓಟಕ್ಕಿಳಿಯುತ್ತದೆ. ಅದರ ಹಿಂದೆ ನಿರ್ವಾಹಕನು ಓಡುತ್ತಾನೆ. ಕಂಬಳದ ಕೋಣದ ಹಿಂದೆ ಓಡುವಾತನಿಗೆ ಧರ‍್ಯದ ಜೊತೆ ಚಾಣಾಕ್ಷತನವಿರಬೇಕು.

ಕಂಬಳದ ಓಟದ ಗೆಲುವು ನಿರ್ಧಾರವಾಗುವುದು ಕಡಿಮೆ ಅವಧಿಯಲ್ಲಿ ಯಾವ ಜೋಡಿ ಗುರಿ ಮುಟ್ಟುತ್ತದೆ ಎಂಬ ಆಧಾರದ ಮೇಲೆ. ಕಂಬಳವು ಮೂರು ಸುತ್ತಿನಲ್ಲಿ ನಡೆಯುತ್ತದೆ ಮೊದಲನೆಯ ಸುತ್ತು, ಎರಡೆಯ ಸುತ್ತು ಹಾಗೂ ಅಂತಿಮ ಸುತ್ತು. ಕಂಬಳದಲ್ಲಿ ಗೆದ್ದ ಕೋಣಗಳಿಗೆ ಚಿನ್ನದ ಪದಕ, ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಹಿಂದೆ ರಾಜರು ತಮ್ಮ ಅಧಿಪತ್ಯದ ಹಿರಿಮೆಗಾಗಿ ಕಂಬಳವನ್ನು ನಡೆಸುತ್ತಿದ್ದರು, ಒಳ್ಳೆ ತಳಿಯ ಕೋಣಗಳನ್ನು ಖರೀದಿಸುತ್ತಾರೆ, ಕಂಬಳದ ಕೋಣವನ್ನು ಸಾಕುವುದೆಂದರೆ ಸಾಮಾನ್ಯವಾದ ವಿಷಯವಲ್ಲ, ಅವುಗಳಿಗೆ ದಿನಂಪ್ರತಿ ಎಣ್ಣೆ ಸ್ನಾನ ಮಾಡಿಸಿ ಕಾಲ-ಕಾಲಕ್ಕೆ ದವಸ-ಧಾನ್ಯಗಳನ್ನು ಕೊಟ್ಟು, ಮುತುವರ್ಜಿಯಿಂದ ಕ್ರಮಬದ್ಧವಾಗಿ ದಷ್ಟ-ಪುಷ್ಟವಾಗಿ, ಬಹಳ ಪ್ರೀತಿಯಿಂದ ಸಾಕುತ್ತಾರೆ.

ಅನೇಕರು ಕಂಬಳಕ್ಕೆ ಬರುವುದೇ ಕೋಣದ ಗತ್ತು-ಗಾಂಭೀರ್ಯವನ್ನು ಕಣ್ತುಂಬಿಕೊಳ್ಳಲು. ಹೀಗೆ ಪ್ರತಿಷ್ಟೆಯ ಸಂಕೇತವಾದ ‘ಜನಪದ ಕಲೆ’ಯಾದ ಕಂಬಳವು ಈಗ ಮನೋರಂಜನೆಯ ಕ್ರೀಡೆಯಾಗಿ ರೂಪಾಂತಗೊಂಡಿದೆ.

ಕಂಬಳ ಕ್ರೀಡೆಯಿಂದ ಪ್ರಾಣಿ ಹಿಂಸೆಯಾಗುತ್ತೆ ಅಂತಾ ವಾದಿಸುವವರೂ ಇದ್ದಾರೆ. ಆದರೆ ಈ ಕೋಣಗಳಿಗೆ ಸಿಗುವ ರಾಜಮರ್ಯಾದೆ ಇನ್ಯಾರಿಗೂ ಸಿಗಲಿಕ್ಕಿಲ್ಲ. ಇವುಗಳು ಕೇವಲ ಕಂಬಳಕ್ಕೆ ಮಾತ್ರ ಬಳಕೆ ಮಾಡುವ ಕೋಣಗಳು. ಅಶುದ್ಧದಲ್ಲಿ ಇರುವವರು ಈ ಕೋಣಗಳನ್ನು ಮುಟ್ಟುವುದೂ ಸಹ ನಿಷಿದ್ಧ . ಎಸಿ ಕೊಟ್ಟಿಗೆಗಳಲ್ಲಿ ಇವುಗಳ ಪಾಲನೆ ಪೋಷಣೆ ನಡೆಯುತ್ತದೆ. ಕಂಬಳ ಕೋಣಗಳಿಗೆ ಎಣ್ಣೆ ಸ್ನಾನ ಪ್ರತಿನಿತ್ಯ ಆಗಬೇಕು. ಮೈ ತಂಪು ಮಾಡಲು ಕುಂಬಳಕಾಯಿ ಕೊಡಬೇಕು. ಇವುಗಳಿಗೆ ನಿತ್ಯ ಬೈಹುಲ್ಲಿನ ಮೇವನ್ನೇ ನೀಡಬೇಕು. ಈ ರೀತಿಯ ಅನೇಕ ನಿಯಮಗಳು ಇರುತ್ತದೆ,

ಕಾಲಚಕ್ರ ಬದಲಾದಂತೆಲ್ಲ ಕಂಬಳ ಕ್ರೀಡೆ ಕೂಡ ಆಧುನಿಕ ಸ್ಪರ್ಶವನ್ನ ಪಡೆದುಕೊಳ್ತಿದೆ. ಕರಾವಳಿಗೆ ಸೀಮಿತವಾಗಿದ್ದ ಕಂಬಳ ರಾಜಧಾನಿಗೂ ಕಾಲಿಟ್ಟಿದೆ. ಧಾರ್ಮಿಕ ಭಾವದಿಂದ ಮಾಡುತ್ತಿದ್ದ ಕಂಬಳ ಕ್ರೀಡೆ ಈಗ ಮನರಂಜನೆಯಾಗಿ ಬದಲಾಗಿದೆ. ಸೋಲು – ಗೆಲುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಇರಲಿ. . ಪ್ರಸ್ತುತ ಕರಾವಳಿಯ ಜಾನಪದ ಮತ್ತು ಸಾಂಪ್ರದಾಯಿಕ ಕ್ರೀಡೆಯನ್ನು ರಾಜಧಾನಿಯ ಮೂಲಕ ಇಡೀ ಜಗತ್ತಿಗೆ ತೋರಿಸುವ ಈ ಪ್ರಯತ್ನಕ್ಕೆ ಅದ್ಧೂರಿ ಮುನ್ನುಡಿ ಬರೆಯಲಾಗಿದೆ.

ಅಕ್ಟೋಬರ್‌ 11 ರಂದು ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ (ಭೂಮಿ ಪೂಜೆ) ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಂಬಳದ ಕರೆ ಪೂಜೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಡಾ ಸಿಎನ್ ಅಶ್ವತ್ ನಾರಾಯಣ್, ಶಾಸಕ ಹ್ಯಾರೀಸ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ನವೆಂಬರ್ 23ರಂದು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಿಂದ ಲಾರಿ ಮೂಲಕ ಕೋಣಗಳು ಬೆಂಗಳೂರಿನ ಕಡೆ ಹೊರಟು ಸಿಟಿ ತಲುಪಿವೆ. ಅದರ ಜೊತೆ ಪಶು ವೈದ್ಯರು ಮತ್ತು ಆಂಬುಲೆನ್ಸ್ ಕೂಡ ತೆರಳಿದ್ದಾರೆ. ಇಲ್ಲಿಂದ ಬೀಳ್ಕೊಡುಗೆ ಸಮಾರಂಭ ಮತ್ತು ಹಾಸನ ಸೇರಿದಂತೆ ವಿವಿಧ ಕಡೆ ವಿರಾಮದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಕೋಣದ ಮಾಲೀಕರ ಬೇಡಿಕೆಯಂತೆ ಬೆಂಗಳೂರಿನಲ್ಲಿ ಕೋಣಗಳಿಗೆ ಕುಡಿಯುವ ನೀರನ್ನು ಕರಾವಳಿಯಿಂದಲೇ ಟ್ಯಾಂಕರ್ ಮೂಲಕ ತೆಗೆದುಕೊಂಡು ಹೋಗಲಾಗಿದೆ.

ಈ ಕಂಬಳಕ್ಕೆ ಎಂಟು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಂಬಳ ಪ್ರತಿಷ್ಠೆಗೆ ಕೂಡ ನಡೆಯುವ ಕ್ರೀಡೆ. ಆದ್ದರಿಂದ ಕೋಣಗಳ ಮಾಲೀಕರಿಗೆ ಬಾರಿ ಗೌರವವಿರುತ್ತದೆ. ತಮ್ಮ ಹೆಸರಿನಲ್ಲಿ ಕೋಣಗಳನ್ನು ಓಡಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭಾಧ್ಯಕ್ಷ ಯು.ಟಿ ಖಾದರ್, ಸಚಿವ ಸುಧಾಕರ್ ಸೇರಿದಂತೆ ಸಾಕಷ್ಟು ಸಚಿವರು ಬೇಡಿಕೆ ಇಟ್ಟಿದ್ದಾರಂತೆ. ಆದರೆ ಕೋಣಗಳನ್ನು ಕೊಡಲು ಮಾಲೀಕರು ಮಾತ್ರ ಈವರೆಗೂ ಒಪ್ಪಿಲ್ಲ.

ಇನ್ನು ಅರಮನೆ ಮೈದಾನದಲ್ಲಿ 155 ಮೀಟರ್ ಉದ್ದದ ಕರೆ ನಿರ್ಮಾಣವಾಗಿದ್ದು, ಈ ಜೋಡಿ ಕರೆಗೆ ರಾಜ, ಮಹಾರಾಜ ಅಂತಾ ಹೆಸರಿಡಲಾಗಿದೆ. ನೂರಕ್ಕೂ ಅಧಿಕ ಸ್ಟಾಲ್ ಗಳು ತಲೆ ಎತ್ತಿದ್ದು, ಕರಾವಳಿಯ ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸೋಕೆ ಸಿದ್ಧತೆ ನಡೆದಿದೆ.

ಇನ್ನು ಕಂಬಳದ ಗ್ಯಾಲರಿಯಲ್ಲಿ ಸುಮಾರು 8 ಸಾವಿರ ವಿಐಪಿ ಆಸನಗಳ ವ್ಯವಸ್ಥೆ ಇದ್ದು, ಜನರಿಗೆ ಪ್ರತೇಕ ವ್ಯವಸ್ಥೆ ಮಾಡಲಾಗಿದೆ. ಸದ್ಯ ಕಂಬಳಕ್ಕೆ ಉಚಿತ ಪ್ರವೇಶ ನೀಡಲಾಗಿದೆ. ಕಂಬಳಕ್ಕಾಗಿ ಕೆ ಎಸ್‌ ಆರ್‌ ಟಿಸಿ ಯಿಂದ 150 ಹೆಚ್ಚುವರಿ ಬಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ. ರಾಜಧಾನಿಯಲ್ಲಿ ವಾಹನ ಸಂಚಾರವನ್ನೇ ಬದಲಾಯಿಸುವಷ್ಟು ದೊಡ್ಡ ಮಟ್ಟಿಗೆ ನಡೆಯುತ್ತಿರುವ ಕಂಬಳದಲ್ಲಿ ರಾಜಕಾರಣಿಗಳು, ಅತಿ ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಬಾಲಿವುಡ್‌-ಸ್ಯಾಂಡಲ್‌ವುಡ್‌ ನಟ ನಟಿಯರು ಮತ್ತು ಸಾರ್ವಜನಿಕರು ಸೇರಿದಂತೆ ಸುಮಾರು 6-8 ಲಕ್ಷ ಮಂದಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಕಂಬಳ ಆರು ವಿಭಾಗಗಳಲ್ಲಿ ನಡೆಯಲಿದೆ. ಹಗ್ಗದ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ಎಂಬ ಎರಡು ವರ್ಗಗಳಿವೆ. ನೇಗಿಲು ವಿಭಾಗದಲ್ಲೂ ಹಿರಿಯ ಮತ್ತು ಕಿರಿಯ ವರ್ಗಗಳಿವೆ. ಉಳಿದಂತೆ ಅಡ್ಡಹಲಗೆ ಮತ್ತು ಕನಹಲಗೆ ವಿಭಾಗಗಳಿವೆ.

ಬೆಳಗ್ಗೆ 10.30ರಿಂದಲೇ ಕೋಣಗಳ ಓಟ ಶುರುವಾಗಲಿದೆ. ಆರಂಭದಲ್ಲಿ ಹಗ್ಗ ಮತ್ತು ನೇಗಿಲಿನ ಕಿರಿಯ ವಿಭಾಗದ ಕೋಣಗಳ ಒಂಟಿ ಓಟವಿರುತ್ತದೆ. ಈ ಕೋಣಗಳು 155 ಮೀಟರ್‌ ಓಡಲು ತೆಗೆದುಕೊಳ್ಳುವ ಸಮಯವನ್ನು ನೋಟ್‌ ಮಾಡಲಾಗುತ್ತದೆ. ಇದು ಅವುಗಳ ನಡುವೆ ಓಟದ ಸ್ಪರ್ಧೆಯನ್ನು ಆಯೋಜಿಸಲು ಅನುಕೂಲವಾಗುತ್ತದೆ.

ಅದೇ ರೀತಿ ಹಗ್ಗ ಮತ್ತು ನೇಗಿಲಿನ ಹಿರಿಯ ವಿಭಾಗದ ಕೋಣಗಳ ಒಂಟಿ ಓಟ ನಡೆದು ಅಲ್ಲೂ ಸಾಲುಗಳ ನಿರ್ಣಯ ಮಾಡಲಾಗುತ್ತದೆ. ಅಡ್ಡಹಲಗೆಯಲ್ಲಿ ಕೂಡಾ ಇದೇ ರೀತಿಯಲ್ಲಿ ಸಾಲು ನಿರ್ಣಯವಾಗುತ್ತದೆ. ಕನಹಲಗೆಯ ಕೋಣಗಳಿಗೆ ಸ್ಪರ್ಧೆ ಇರುವುದಿಲ್ಲ. ಅವು ಒಂಟಿಯಾಗಿ ಓಡುತ್ತಲೇ ನಿಶಾನೆಗೆ ನೀರು ಹಾರಿಸುವ ಸ್ಪರ್ಧೆ.

ಸಾಮಾನ್ಯವಾಗಿ ಸಂಜೆಯವರೆಗೆ ಒಂಟಿ ಓಟವೇ ಹೆಚ್ಚಾಗಿದ್ದು, ಸಂಜೆ ಮತ್ತು ಕತ್ತಲಿನ ಹೊತ್ತಿಗೆ ಕನಹಲಗೆ ಓಟ ಗಮನ ಸೆಳೆಯಲಿದೆ. ಅದಾದ ಬಳಿಕ ಇತರ ವಿಭಾಗಗಳಲ್ಲಿ ಸ್ಪರ್ಧೆ ಆರಂಭವಾಗುತ್ತದೆ. ಶನಿವಾರ ಮಧ್ಯಾಹ್ನ ಆರಂಭವಾಗುವ ಕಂಬಳ ಮರುದಿನ ಸಂಜೆ ಐದು ಗಂಟೆಗೆ ಮುಕ್ತಾಯವಾಗಬಹುದು ಎಂಬ ನಿರೀಕ್ಷೆ ಇದೆ. ಕೋಣಗಳ ನಡುವಿನ ಓಟಗಳು ಹಂತ ಹಂತವಾಗಿ ನಡೆದು ಒಂದು ಹಂತದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಎಂಟು ಜೋಡಿ ಕೋಣಗಳು ಆಯ್ಕೆಯಾಗುತ್ತವೆ.

ಹಗ್ಗ ಹಿರಿಯ/ಕಿರಿಯ ಮತ್ತು ನೇಗಿಲಿನಲ್ಲಿ ಕ್ವಾರ್ಟರ್‌ ಫೈನಲ್‌ ನಡೆದು ಬಳಿಕ ಸೆಮಿಫೈನಲ್‌, ಆ ಬಳಿಕ ಫೈನಲ್‌ ನಡೆಯಲಿದೆ. ಮೊದಲನೇ ಬಹುಮಾನ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಇದ್ದರೆ, ಎರಡನೇ ಬಹುಮಾನ 8 ಗ್ರಾಂ ಚಿನ್ನ ಮತ್ತು 50 ಸಾವಿರ ರೂ. ನಗದು ಬಹುಮಾನವಿದೆ. ಮೂರನೇ ಬಹುಮಾನ ಪಡೆದವರಿಗೆ ನಾಲ್ಕು ಗ್ರಾಂ ಚಿನ್ನ ಮತ್ತು 25 ಸಾವಿರ ರೂ. ಬಹುಮಾನವಿದೆ. ಅದರ ಜತೆಗೆ ವಿಜೇತ ಕೋಣಗಳನ್ನು ಓಡಿಸಿದ ಜಾಕಿಗಳಿಗೆ ಕೂಡಾ ಚಿನ್ನ ಮತ್ತು ನಗದು ಬಹುಮಾನವಿದೆ.

ಬೆಂಗಳೂರು ಕಂಬಳಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ಸಿಗಲಿದೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಪ್ರತ್ಯೇಕ ಪ್ರವೇಶವಿರುತ್ತದೆ. ವಿವಿಐಪಿಗಳಳಿಗೆ ಫನ್ ವರ್ಲ್ಡ್‌ ಕಡೆಯಿಂದ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ.

ಕಂಬಳ ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಬೆಂಗಳೂರು ಕಂಬಳದ ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರು ಇಡಲಾಗಿದೆ. ಕಂಬಳದ ಟ್ರ್ಯಾಕ್‌ಗೆ ರಾಜ-ಮಹಾರಾಜ ಎಂದು ಹೆಸರು ಇಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ, ಹುಲಿ ಕುಣಿತವೂ ಇದೆ.ಕರಾವಳಿ ಮತ್ತು ನಾಡಿನ ನಾನಾ ಖಾದ್ಯ ವೈವಿಧ್ಯಗಳ ಆಹಾರ ಮೇಳವಿದೆ.

ಶನಿವಾರ (ನ.25) ಬೆಳಗ್ಗೆ ಬೆಂಗಳೂರು ಕಂಬಳಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಕರೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಕಂಬಳೋತ್ಸವವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದ್ದಾರೆ. ಸಂಜೆ ನಡೆದಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯುಟಿ ಖಾದರ್  ಮತ್ತು ಸಂಪುಟದ ಸಚಿವರು ಭಾಗಿಯಾಗಿದ್ದರು.

ಕಂಬಳಕ್ಕೆ ಮುಖ್ಯ ಅತಿಥಿಗಳಾಗಿ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷನ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ವಿರೋಧದ ಹಿನ್ನಲೆಯಲ್ಲಿ ಇದೀಗ ಅವರ ಹೆಸರನ್ನು ಅಧಿಕೃತವಾಗಿ ಕೈಬಿಡಲಾಗಿದೆ. ಜೊತೆಗೆ ಭೂಗತ ಪಾತಕಿ ಶಾಮ್ ಕಿಶೋಕ್ ಗರಿಕಪಟ್ಟಿ ಕೈಬಿಡಲಾಗಿದೆ ಎಂದು ತಿಳಿಸಿದರು.

ಇನ್ನು ಕಂಬಳವನ್ನು ರಾಷ್ಟ್ರ ಹಾಗೂ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಭವಿಷ್ಯದಲ್ಲಿ ಕಂಬಳ ಪ್ರೀಮಿಯರ್ ಲೀಗ್ (ಕೆಪಿಎಲ್) ಆಯೋಜಿಸುವ ಚಿಂತನೆಯನ್ನು ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಪ್ರಕಟಿಸಿದ್ದಾರೆ.  ಇತರ ಕ್ರೀಡೆಗಳ ಲೀಗ್ ಪಂದ್ಯಾವಳಿ ಮಾದರಿಯಲ್ಲೇ ಕಂಬಳ ಪ್ರೀಮಿಯರ್ ಲೀಗ್ ಸಂಘಟಿಸುವತ್ತ ಲಕ್ಷ್ಯ ಹರಿಸಲಾಗಿದೆ. ಇದಕ್ಕೆ ಎಲ್ಲ ವಲಯಗಳ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಸಾಕಾರ ಮಾಡುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44920
Aashitha S

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು