ನವೆಂಬರ್ 26ರಂದು ಬಿಡುಗಡೆಯಾಗುತ್ತಿರುವ ಸಿಂಪಲ್ ಸುನಿ ನಿರ್ದೇಶಿಸಿ, ತಾವು ನಾಯಕರಾಗಿ ನಟಿಸಿರುವ ‘ಸಖತ್’ ಸಿನಿಮಾ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಭರವಸೆಯ ಮಾತುಗಳನ್ನಾಡಿದ್ದಾರೆ.ಈ ಹಿಂದೆ ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಚಮಕ್ ಸಿನಿಮಾ ತೆರೆಕಂಡಿತ್ತು.
ಲವಲವಿಕೆಯಿಂದ ಕೂಡಿದ್ದ ನ್ಯೂ ಏಜ್ ಕಾಮಿಡಿ ಸಿನಿಮಾ ಚಮಕ್ ಪ್ರೇಕ್ಷಕರನ್ನು ನಗಿಸುವುವುದರ ಜೊತೆಗೆ ಸಾಮಾಜಿಕ ಸಂದೇಶವನ್ನೂ ಹೊಂದಿತ್ತು. ಇದೀಗ ಮತ್ತೆ ಗಣೇಶ್ ಮತ್ತು ಸುನಿ ‘ಸಖತ್’ ಗಾಗಿ ಒಂದಾಗಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಸಖತ್ ಸಿನಿಮಾದಲ್ಲಿ ತಾವು ಈವರೆಗೆ ಟ್ರೈ ಮಾಡದ ಹೊಸ ಹೊಸ ಪ್ರಯೋಗಕ್ಕೆ ಒಳಗಾಗಿರುವುದಾಗಿ ಗಣೇಶ್ ಹೇಳಿದ್ದಾರೆ. ಈ ಸಿನಿಮಾ ಮೇಲ್ನೋಟಕ್ಕೆ ಕೋರ್ಟ್ ರೂಮ್ ಡ್ರಾಮಾ ಸಿನಿಮಾದಂತೆ ತೋರಿದರೂ ಇದೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕೂಡಾ ಆಗಿರಲಿದೆ.
ನ್ಯಾಯಾಲಯ ವಿಚಾರಣೆ ವೇಳೆ ಒಬ್ಬ ಅಂಧ ಸಾಕ್ಷಿಯಾಗಬೇಕಾದ ಪರಿಸ್ಥಿತಿ ಬಂದರೆ ಏನಾಗುತ್ತದೆ ಎನ್ನುವುದೇ ಸಿನಿಮಾದ ಕಥಾವಸ್ತು. ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು, ಸುರ್ಭಿ ನಟಿಸಿದ್ದಾರೆ. ಅಲ್ಲದೆ 12 ಮಂದಿ ಕಾಮಿಡಿ ನಟರು ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.