ಸ್ಯಾಂಡಲ್ ವುಡ್: ನೀನಾಸಂ ಮಂಜು ಅವರ ಸಾರಥ್ಯ ದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 4ರಂದು ಬಿಡುಗಡೆಯಾಗಿ ಪ್ರೇಕ್ಷಕರೆದುರು ಬರಲು ತಯಾರಾಗಿದೆ. ಟ್ರೈಲರ್, ಸಾಂಗ್ಸ್ ಹೀಗೆ ಒಂದೊಂದೇ ಝಲಕ್ ಗಳನ್ನ ತೋರಿಸಿ ಸಿನೆಮಾ ಮೇಲಿನ ಕ್ಯೂರಿಯಾಸಿಟಿಯನ್ನ ಹೆಚ್ಚಿಸುತ್ತಲೇ ಇದ್ದ ಚಿತ್ರತಂಡದ ಪಯತ್ನ ಮಾರ್ಚ್ ೪ ರಂದು ತೆರೆಯ ಮೇಲೆ ಅನಾವರಣಗೊಳ್ಳಲಿದೆ.
ಕೊಡಗಿನಲ್ಲಿ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಚಿತ್ರದಲ್ಲಿ ಬಳಸಿಕೊಂಡು ಕಥೆ ಹೆಣೆಯಲಾಗಿದೆ. ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು. ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬುದೇ ಚಿತ್ರದ ಒನ್ ಲೈನ್ ಕಹಾನಿ.
ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರದ ಕಥೆಯ ಜವಾಬ್ದಾರಿ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ಸಾರಥ್ಯವನ್ನು ನೀಸಾಸಂ ಮಂಜು ವಹಿಸಿಕೊಂಡಿದ್ದಾರೆ. ಬದುಕು ಕಟ್ಟಿಕೊಳ್ಳುವ ಈ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ.ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತರು
ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ನೈಜತೆಗೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡ ಬುಡಕಟ್ಟು ಜನರನ್ನೂ ಕೂಡ ಚಿತ್ರದಲ್ಲಿ ತೊಡಗಿಸಿಕೊಂಡಿದೆ ಎನ್ನುವುದು ಕನ್ನೇರಿಯ ಮತ್ತೊಂದು ಹೈಲೈಟ್ . 'ಬುಡ್ಡಿ ದೀಪ' ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದು, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಸ್ಯಾಂಪಲ್ ಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ಕನ್ನೇರಿ ಸಿನಿಮಾ ಮಾರ್ಚ್ 4ರಂದು ರಾಜ್ಯಾದ್ಯಂತ ಎಲ್ಲರ ಮನಸೆಳೆಯಲು ಥಿಯೇಟರ್ ಗೆ ಎಂಟ್ರಿಕೊಡ್ತಿದೆ. ಸಿನೆಮಾ ರಿಲೀಸ್ ಆದ್ಮೇಲೆ ಪ್ರೇಕ್ಷಕ ಪ್ರಭುಗಳು ಒಪ್ಪಿ ಅಪ್ಪಕೊಳ್ಳೊದೊಂದೇ ಬಾಕಿ ಉಳಿದಿದೆ.