ಮೈಸೂರು: ನಟಿ ಚೈತ್ರಾ ಹಳ್ಳಿಕೇರಿ ತನ್ನ ಪತಿ ಮತ್ತು ಮಾವನ ವಿರುದ್ಧ ತನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡಿರುವ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಅನುಮತಿ ಇಲ್ಲದೆ ಗೋಲ್ಡ್ ಲೋನ್ ಪಡೆಯಲಾಗಿದೆ ಎಂದು ಪತಿ ಬಾಲಾಜಿ ಪೋತರಾಜ್ ಮತ್ತು ಮಾವ ಪೋತರಾಜ್ ವಿರುದ್ಧ ಚೈತ್ರಾ ದೂರು ನೀಡಿದ್ದಾರೆ. ಗೋಲ್ಡ್ ಲೋನ್ ಪಡೆಯುವಾಗ ತನ್ನ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದಾರೆ. ಈ ಅವ್ಯವಹಾರದಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ. ಈ ಪ್ರಕರಣ ಸಂಬಂಧ ತನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೂರು ದಿನಗಳ ಹಿಂದೆಯೇ ದೂರು ನೀಡಿದ್ದರು.
ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ದಾಖಲಾಗಿದೆ. ಜೀವ ಬೆದರಿಕೆ ಇದೆ ಸೂಕ್ತ ರಕ್ಷಣೆ ಕೊಡಿ ಎಂದು ಕೇಳಿದ್ದಾರೆ. ಗಂಡ, ಮಾವನ ಷಡ್ಯಂತರದ ವಹಿವಾಟಿಗೆ ಜಯಲಕ್ಷ್ಮೀಪುರಂನ ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಕೂಡ ನೆರವಾಗಿದ್ದಾರೆ ಎಂದಿದ್ದಾರೆ. ತನ್ನ ಖಾತೆ ಮೂಲಕ 13 ಮೌಲ್ಯದ ಚಿನ್ನ ಅಡವಿಟ್ಟು ವಂಚಿಸಲಾಗಿದೆ. ಪತಿ ವಿರುದ್ಧ ಈಗಾಗಲೇ ದೈಹಿಕ ಹಲ್ಲೆ ಆರೋಪಿಸಿ ಕೇಸ್ ಹಾಕಿದ್ದೇನೆ. ನನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿದ್ದು ಗೊತ್ತಾಗಿ ಈಗ ಮತ್ತೊಂದು ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದರು.
ನಟಿ ಚೈತ್ರಾ ಖುಷಿ, ಶಿಷ್ಯ, ಗುನ್ನ ಸೇರಿದಂತೆ ಇನ್ನು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಚೈತ್ರಾ ನಟನೆಯ ಅನೇಕ ಸಿನಿಮಾಗಳ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ. ಸಿನಿಮಾರಂಗದಲ್ಲಿ ಆಕ್ಟೀವ್ ಆಗಿರುವಾಗಲೇ ಚೈತ್ರಾ, ಬಾಲಾಜಿ ಪೋತರಾಜ್ ಎಂಬ ಉದ್ಯಮಿ ಜೊತೆ ಹಸೆಮಣೆ ಏರಿದರು. ಮದುವೆ ಬಳಿಕ ನಟನೆ ಬಿಡಬೇಕು ಎನ್ನುವ ಷರತ್ತು ಹಾಕಿದ್ದರು. ಅದನ್ನು ಒಪ್ಪಿಕೊಂಡೆ ಎಂದು ಹೇಳಿದರು.
ಮದುವೆ ಬಳಿಕ ತುಂಬಾ ಕಷ್ಟವಾಗುತ್ತಿತ್ತು. ಆದರೂ ಹೇಗೊ ಕಷ್ಟಪಟ್ಟು ಧಾರಾವಾಹಿ ನಿರ್ಮಿಸಿದೆ. ಅದರಲ್ಲಿ ಬಂದ ಸಂಪಾದನೆಯನ್ನು ಪತಿ ಕಿತ್ತುಕೊಂಡರು. ಅಷ್ಟೇ ಅಲ್ಲದೇ ನನ್ನನ್ನು ಥಳಿಸಿದರು ಎಂದು ಚೈತ್ರಾ 2018ರಲ್ಲಿ ಬಸವನಗುಡಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದರು.