ಬೆಂಗಳೂರು: ಇಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜನ್ಮದಿನದ ಸಂಭ್ರಮ. ಆದರೆ ಈ ವರ್ಷವೂ ಹುಟ್ಟುಹಬ್ಬದ ಸಂಭ್ರಮಾಚರಣೆ ಇರುವುದಿಲ್ಲ …’ ಎಂದು ಗಣೇಶ್ ಐದು ದಿನಗಳ ಹಿಂದೆಯೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಂದೇಶ ಮುಟ್ಟಿಸಿದ್ದರು. ಅದರಂತೆ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೇ ಮನೆಯಲ್ಲೂ ಇರುವುದಿಲ್ಲ. ಪ್ರವಾಸಕ್ಕೆ ಹೊರಟಿದ್ದಾರೆ. ‘ಮತ್ತೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸುದ್ದಿಗಳು ಬರುತ್ತಿವೆ. ಅಭಿಮಾನಿಗಳಿಗೆ ನನ್ನಿಂದ ಸಮಸ್ಯೆ ಆಗುವುದು ಇಷ್ಟವಿಲ್ಲ. ಹಾಗಾಗಿ, ಇದ್ದಲ್ಲೇ ಒಳ್ಳೆಯ ಕೆಲಸ ಮಾಡಿ, ನಾಲ್ಕು ಜನರಿಗೆ ಸಹಾಯ ಮಾಡಿ ಎಂದು ಹೇಳಿದ್ದೇನೆ’ ಎನ್ನುತ್ತಾರೆ ಗಣೇಶ್.
ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನಕ್ಕೆ ಗಾಳಿಪಟ 2 ಚಿತ್ರ ತಂಡ ರೊಮ್ಯಾಂಟಿಕ್ ಹಾಡೊಂದನ್ನು ಉಡುಗೊರೆಯಾಗಿ ನೀಡುತ್ತಿದೆ. ಈ ಹಾಡಿಗೆ ಫೇವರಿಟ್ ಕಾಂಬಿನೇಷನ್ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರೆ ಸೋನು ನಿಗಂ ಹಾಡಿದ್ದಾರೆ.
ಗಣೇಶ್ ಕೈಯಲ್ಲಿ ಈಗ ಕೆಲವು ಸಿನಿಮಾಗಳಿದ್ದು ಅವುಗಳ ಪೈಕಿ ಗಾಳಿಪಟ 2, ತ್ರಿಬಲ್ ರೈಡಿಂಗ್ ಬಿಡುಗಡೆಗೆ ಸಿದ್ಧವಿದೆ. ಇದಲ್ಲದೆ, ಬಾನದಾರಿಯಲ್ಲಿ, ಸಿಂಪಲ್ ಸುನಿ ಜೊತೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಫ್ಯಾಮಿಲಿ ವರ್ಗ ಕೂತು ವೀಕ್ಷಿಸಬಹುದಾದ ರೊಮ್ಯಾಂಟಿಕ್ ಕತೆಗಳೊಂದಿಗೆ ಗಣೇಶ್ ಈ ವರ್ಷವೂ ನಿಮ್ಮನ್ನು ರಂಜಿಸಲಿದ್ದಾರೆ.