ಬೆನ್ನು ನೋವನ್ನು ಹಗುರವಾಗಿ ಪರಿಗಣಿಸದಿರಿ..!

ಬೆನ್ನು ನೋವನ್ನು ಹಗುರವಾಗಿ ಪರಿಗಣಿಸದಿರಿ..!

LK   ¦    Apr 24, 2019 01:08:11 PM (IST)
ಬೆನ್ನು ನೋವನ್ನು ಹಗುರವಾಗಿ ಪರಿಗಣಿಸದಿರಿ..!

ಸಾಮಾನ್ಯವಾಗಿ ಹೊರಗೆ ಕಠಿಣ ಶ್ರಮದ ಕೆಲಸ ಮಾಡುವವರಿಗೆ ಆಫೀಸಿನಲ್ಲಿ ಕುಳಿತು ಕೆಲಸ ಮಾಡುವವರನ್ನು ನೋಡಿದಾಗ ತಮಗೂ ಅಂಥ ಕೆಲಸ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆಲೋಚನೆ ಬರುವುದು ಸಹಜ. ಆದರೆ ಒಂದೆಡೆ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರ ಕಷ್ಟಗಳು ಅವರಿಗಷ್ಟೇ ಗೊತ್ತು.

ಏಕೆಂದರೆ ಒಂದೇ ಕಡೆ ಕುಳಿತು ದೈಹಿಕ ಶ್ರಮವಿಲ್ಲದೆ ಮಾಡುವ ಕೆಲಸಗಳು ನಮಗೆ ಗೊತ್ತಿಲ್ಲದಂತೆ ಹಲವು ತೊಂದರೆಗಳನ್ನು ತಂದೊಡ್ಡುತ್ತದೆ ಎಂಬುದನ್ನು ನಾವು ಮರೆಯಬಾರದು. ಕುರ್ಚಿಗೆ ಅಂಟಿಕೊಂಡು ಕುಳಿತು ಕೆಲಸ ಮಾಡುವವರನ್ನು ಮೊದಲಿಗೆ ಅಪ್ಪಿ ಕೊಳ್ಳುವ ತೊಂದರೆ ಯಾವುದೆಂದರೆ ಅದು ಬೆನ್ನು ನೋವು.

ಬಹಳಷ್ಟು ಮಂದಿ ಬೆನ್ನು, ಕತ್ತು ನೋವಿನ ಬಗ್ಗೆ ಮಾತನಾಡುತ್ತಾರೆ. ಹಲವು ಸಲ ಈ ನೋವಿನ ತೀವ್ರತೆ ಹೇಗಿರುತ್ತದೆಯೆಂದರೆ ಅದು ಕೂರಲು, ನಿಲ್ಲಲು, ಮಲಗಲು ಬಿಡದೆ ಕಾಡುತ್ತದೆ. ಸದಾ ಕೆಲಸದ ಒತ್ತಡದಲ್ಲಿಯೇ ಕಳೆಯುವ ನಾವು ಕುಳಿತಲ್ಲೇ ಫ್ಯಾನ್ ಕೆಳಗೆ, ಎಸಿ ರೂಂನಲ್ಲಿ ಕೆಲಸ ಮಾಡಿದರೂ ದೈಹಿಕವಾಗಿ ಶ್ರಮವಿಲ್ಲದೆ ಆರಾಮ ಎನಿಸಿದರೂ ಮಾನಸಿಕವಾಗಿ ಮತ್ತು ಆರೋಗ್ಯದ ದೃಷ್ಠಿಯಿಂದ ಒಂದಷ್ಟು ಸಮಸ್ಯೆಗಳನ್ನು ನಾವು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.

ಅದರಲ್ಲೂ ಬೆನ್ನು ನೋವು ಆರಂಭವಾದರಂತು ಅದು ಬೆಂಬಿಡದೆ ಕಾಡುತ್ತದೆ. ಈ ಬೆನ್ನು ಮತ್ತು ಕತ್ತು ನೋವು ಏಕೆ ಬರುತ್ತದೆ ಎಂಬುದರ ಬಗ್ಗೆ ಹಲವು ಕಾರಣಗಳನ್ನು ನೀಡಬಹುದಾಗಿದೆ.

ನಾವು ಕುಳಿತು ಮಾಡುವ ಕೆಲಸದಲ್ಲಿನ ಭಂಗಿಯ ಬಗ್ಗೆ ನಿರ್ಲಕ್ಷ್ಯ, ಅಶಿಸ್ತು ಮತ್ತು ಕೆಲಸಕ್ಕೆ ತಕ್ಕಂತೆ ಪೀಠೋಪಕರಣಗಳನ್ನು ಬಳಸಿಕೊಳ್ಳದಿರುವುದು ಹೀಗೆ ಹಲವು ವಿಷಯಗಳು ನಮಗೆ ಬೆನ್ನು ನೋವನ್ನು ತರಬಹುದು. ಇನ್ನು ಕೆಲವೊಮ್ಮೆ ವಯಸ್ಸಿನ ಕಾರಣಗಳು, ಹೊಟ್ಟೆಯ ಮಾಂಸಖಂಡಗಳ ಶಕ್ತಿ ಕುಗ್ಗುವಿಕೆ ಮತ್ತು ಮೂಳೆಯ ಸವೆತವೂ ಕೂಡ ಬೆನ್ನು ನೋವಾಗಿ ಕಾಡಬಹುದು.

ಹೆಚ್ಚಿನ ಜನ ಬೆನ್ನು ನೋವು ಶಮನಕ್ಕಾಗಿ ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಬಿಗಿಪಟ್ಟಿಕಟ್ಟಿಕೊಳ್ಳುತ್ತಾರೆ. ತೈಲ, ನೋವು ನಿವಾರಕ ಕ್ರೀಮ್ ಹಚ್ಚಿಕೊಳ್ಳುವುದು, ನೋವು ಶಮನಕಾರಿ ಮಾತ್ರೆ ಸೇವಿಸುವುದು ಮೊದಲಾದ ಸ್ವಯಂ ಚಿಕಿತ್ಸೆಗಳನ್ನು ಹೆಚ್ಚಿನವರು ಮಾಡುತ್ತಾರೆ. ಆದರೆ ನಮಗೆ ಬೆನ್ನುನೋವು ಕಾಣಿಸಿಕೊಂಡಾಗ ಮೊದಲಿಗೆ ವೈದ್ಯರನ್ನು ಕಂಡು ಬೆನ್ನು ನೋವು ಏಕೆ ಬಂದಿದೆ ಎಂಬುದನ್ನು ಕಂಡು ಹಿಡಿದು ಬಳಿಕ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಅದು ಬಿಟ್ಟು ಕೇವಲ ನೋವು ಶಮನಕ್ಕಾಗಿ ಮಾತ್ರೆ, ಕ್ರೀಮ್, ಸ್ಪ್ರೇ ಮಾಡಿಕೊಳ್ಳುವುದು ಒಳ್ಳೆಯದಲ್ಲ.

ಇನ್ನು ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಆಗಾಗ್ಗೆ ಎದ್ದು ನಿಲ್ಲುವುದು, ನಡೆದಾಡುವುದು ಮಾಡಬೇಕು. ಜತೆಗೆ ಒಂದೇ ಭಂಗಿಯಲ್ಲಿ ಕೂರದೆ ಆಗಾಗ್ಗೆ ಬದಲಿಸುತ್ತಿರಬೇಕು ಇದರಿಂದ ಸ್ವಲ್ಪ ಮಟ್ಟಿಗಿನ ವ್ಯಾಯಾಮ ಮಾಡಿದಂತೆಯೂ ಆಗುತ್ತದೆ.

ಎತ್ತರಕ್ಕೆ ತಕ್ಕಂತೆ ತೂಕವನ್ನು ಸರಿದೂಗಿಸಿಕೊಳ್ಳಬೇಕು. ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಂಡರೆ ಉತ್ತಮವಾಗುತ್ತದೆ. ಒಂದೇ ಕೈನಿಂದ ಹೆಚ್ಚಿನ ಭಾರ ಎತ್ತುವುದನ್ನು ಮಾಡಬಾರದು. ದಿನ ನಿತ್ಯ ವ್ಯಾಯಾಮ ಯೋಗ ಮಾಡುದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಹೆಚ್ಚಿನ ಉಪಯೋಗವಿದೆ.

ಇನ್ನು ವಿಶ್ರಾಂತಿಗೆ ಹೆಚ್ಚು ಗಮನಕೊಡಬೇಕು. ಮಲಗುವಾಗಲೂ ಕೂಡ ಎಚ್ಚರಿಕೆ ವಹಿಸಬೇಕು. ತುಂಬಾ ಸಲ ಮಲಗುವಾಗ ಆಗುವ ಚಿಕ್ಕ ಎಡವಟ್ಟು ಬೆನ್ನು ಮತ್ತು ಕತ್ತು ನೋವನ್ನು ತರಿಸುವ ಸಾಧ್ಯತೆಯಿರುತ್ತದೆ. ಬೆನ್ನು ನೋವು ಕೇವಲ ಕುಳಿತು ಕೆಲಸ ಮಾಡುವವರನ್ನು ಮಾತ್ರ ಬಾಧಿಸಲ್ಲ. ಇತರೆ ಕೆಲಸ ಮಾಡುವವರನ್ನೂ ಕಾಡ ಬಹುದು. ಆದರೆ ಬೆನ್ನು ನೋವೆಂದು ಹಗುರವಾಗಿ ಪರಿಗಣಿಸದೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ನೋವನ್ನು ತಡೆಗಟ್ಟಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.