ಇನ್‍ಸೋಮ್ನಿಯಾ(ಅನಿದ್ದೆ) ಏಕೆ ಬರುತ್ತದೆ?

ಇನ್‍ಸೋಮ್ನಿಯಾ(ಅನಿದ್ದೆ) ಏಕೆ ಬರುತ್ತದೆ?

LK   ¦    Mar 02, 2021 08:38:07 AM (IST)
ಇನ್‍ಸೋಮ್ನಿಯಾ(ಅನಿದ್ದೆ) ಏಕೆ ಬರುತ್ತದೆ?

ನಮಗೆಲ್ಲರಿಗೂ ನಿದ್ದೆ ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಕೆಲವೊಮ್ಮೆ ಎಷ್ಟೇ ಪ್ರಯತ್ನ ಮಾಡಿದರೂ ನಿದ್ದೆ ಬಾರದಿರುವುದು, ರಾತ್ರಿಯೆಲ್ಲಾ ಎಚ್ಚರವಾಗಿರುವುದು ಅಥವಾ ರಾತ್ರಿಯೆಲ್ಲಾ ನಿದ್ದೆಬಾರದೆ ಬೆಳಗಿನ ಜಾವ ತಡವಾಗಿ ನಿದ್ದೆ ಬರುವ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಆ ಬಗ್ಗೆ ನಿರ್ಲಕ್ಷ್ಯ ವಹಿಸ ಬೇಡಿ ಏಕೆಂದರೆ ಅದೊಂದು ರೋಗವಾಗಿರಲೂ ಬಹುದು.

ಇದನ್ನು ಇನ್‍ಸೋಮ್ನಿಯಾ(ಅನಿದ್ದೆ) ಎಂದು ಕರೆಯಲಾಗುತ್ತದೆ. ಈ ರೋಗ ಏಕೆ ಬರುತ್ತದೆ ಎಂಬುದನ್ನು ನೋಡಿದರೆ ಈ ರೋಗ ಹಲವು ಕಾರಣಗಳಿಂದ ಬರುತ್ತದೆ.  ಶರೀರದಲ್ಲಿ ಅತಿಯಾದ ವೇದನೆ, ಹಳೆಯ ಕೆಮ್ಮು, ಮಾನಸಿಕ ವಿಕೃತಿ, ಡಿಪ್ರೆಷನ್ ನಿಂದ ಬರುತ್ತದೆಯಂತೆ. ಅನಿದ್ದೆಯನ್ನು ನಿವಾರಿಸಲು ಉತ್ತಮ ನಿದ್ದೆಯನ್ನು ಪಡೆಯಲು ಯೋಗದಲ್ಲಿ ಕೆಲವು ಕ್ರಮಗಳನ್ನು ವಿವರಿಸಲಾಗಿದೆ. ನಿದ್ದೆ ಬಾರದಿದ್ದಾಗ ಔಷಧಿಗೆ ಶರಣಾಗದೆ ಯೋಗ ವಿಜ್ಞಾನದಲ್ಲಿ ಹೇಳಲಾಗಿರುವ  ಕೆಲವು ವಿಶೇಷ ರೀತಿಯ ಆಸನಗಳನ್ನು ಮಾಡುವುದರ ಮೂಲಕ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಶವಾಸನವನ್ನು ಮಾಡುವ ಮೂಲಕ ಅನಿದ್ದೆಯನ್ನು ದೂರ ಮಾಡಬಹುದಾಗಿದ್ದು, ಶವಾಸನ ಮಾಡುವಾಗ ಬೆನ್ನನ್ನು ನೆಲಕ್ಕೆ ಮಾಡಿ ನೀಳವಾಗಿ ಮಲಗಬೇಕು. ಅಂಗೈಗಳನ್ನು ಮೇಲಕ್ಕೆ ಕಾಣುವಂತೆ ಹಿಡಿದಿರಬೇಕು. ಎರಡು ಕಾಲುಗಳ ಮಧ್ಯೆ ಸುಮಾರು ಎರಡು ಅಡಿಗಳ ಅಂತರವಿರಬೇಕು. ಕಣ್ಣುಗಳನ್ನು ಮುಚ್ಚಿಕೊಂಡು ಶರೀರವನ್ನು ಸಂಪೂರ್ಣವಾಗಿ ಸಡಿಲಗೊಳಿಸಬೇಕು. ಶವಾಸನ ಮಾಡುವಾಗ ಶರೀರದ ಯಾವ ಭಾಗದಲ್ಲಿಯೂ ಕೂಡ ಬಿಗಿತವನ್ನು ಸಾಧಿಸಬಾರದು. ಆ ನಂತರ ಧ್ಯಾನವನ್ನು ಉಸಿರಾಟದತ್ತ ಹರಿಸಬೇಕು.

ಶ್ವಾಸ-ಉಚ್ಛಾಸವನ್ನು ಒಂದೇ ಎಂದು ಪರಿಗಣಿಸಿ ಒಂದು... ಎರಡು... ಹೀಗೆ ಎಣಿಸುತ್ತಾ ಹೋಗಬೇಕು. ಎಷ್ಟು ಸಾಧ್ಯವೋ ಅಷ್ಟು ಎಣಿಸುತ್ತಿರಬೇಕು. ಎಣಿಸುವ ಸಂಖ್ಯೆಯನ್ನು ಮರೆಯಬಾರದು. ಒಂದು ವೇಳೆ ಎಣಿಸುವ ಸಂಖ್ಯೆಯನ್ನು ಮರೆತರೂ ಶರೀರವನ್ನು ಕದಲಿಸಬಾರದು. ಹೀಗೆ ಮಾಡುವುದರಿಂದ ಮನಸ್ಸು ಹಾಗೂ ಶರೀರ ಹಗುರವಾಗುತ್ತದೆ. ಅನಿದ್ದೆಯಿಂದ ಬಳಲುವವರಿಗೆ ಶವಾಸನವು ತುಂಬಾ ಉಪಯುಕ್ತವಾಗಿದ್ದು ಭಯ ಚಿಂತೆ, ಶೋಕ, ಕಾಮ ಮುಂತಾದವುಗಳಿಂದ ಬಳಲುವವರು ಶವಾಸನ ಮಾಡುವುದರಿಂದ ಖಂಡಿತವಾಗಿಯೂ  ಪರಿಹಾರ ದೊರೆಯುತ್ತದೆ ಎಂಬುದು ಶವಾಸನ ಮಾಡಿ ಪರಿಹಾರ ಕಂಡುಕೊಂಡವರ ಅಭಿಪ್ರಾಯವಾಗಿದೆ.

ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗುವುದರಿಂದ, ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ. ಇನ್ನು ಮಲಗುವ ಹಾಸಿಗೆಯು ಅತಿಗಟ್ಟಿಯಾಗಿಯೂ, ಮೆತ್ತಗಾಗಿಯೂ ಇರಬಾರದು. ಮಲಗುವ ಕೋಣೆ ಶಾಂತವಾಗಿದ್ದು, ಗಾಳಿ ಬೆಳಕಾಡುವಂತಿರಬೇಕು. ಮಲಗುವ ಮುನ್ನ ಸ್ನಾನ ಅಥವಾ ಕೈಕಾಲು ತೊಳೆದು ಮಲಗಬೇಕು.

ತಜ್ಞರ ಅಭಿಪ್ರಾಯದಂತೆ ಆರೋಗ್ಯವಂತ ಮನುಷ್ಯನಿಗೆ  6ರಿಂದ 8ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ. ನಿದ್ದೆಯಿಂದ ಆರೋಗ್ಯ ದೊರೆಯುತ್ತದೆ ಎಂಬುದು ನಿಜ. ಹಾಗೆಂದು ಸದಾ ನಿದ್ದೆಯಲ್ಲೇ ತೊಡಗುವುದು ಆಲಸ್ಯ, ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಇದು ಆರೋಗ್ಯಕ್ಕೆ ಅಹಿತಕರವಾಗಿ ಪರಿಣಮಿಸುತ್ತದೆ ಎಂಬುದನ್ನು ಮರೆಯಬಾರದು.