ಹೈಪರ್ ಟೆನ್ಷನ್ ನಿಯಂತ್ರಣಕ್ಕೊಂದಿಷ್ಟು ಸಲಹೆ...!

ಹೈಪರ್ ಟೆನ್ಷನ್ ನಿಯಂತ್ರಣಕ್ಕೊಂದಿಷ್ಟು ಸಲಹೆ...!

LK   ¦    Feb 24, 2021 11:54:03 AM (IST)
ಹೈಪರ್ ಟೆನ್ಷನ್ ನಿಯಂತ್ರಣಕ್ಕೊಂದಿಷ್ಟು ಸಲಹೆ...!

ನಮ್ಮನ್ನು ಕಾಡುವ ಕಾಯಿಲೆಯಲ್ಲಿ ಅಧಿಕ ರಕ್ತದೊತ್ತಡವೂ ಒಂದು. ಇದನ್ನು ಹೈಪರ್ ಟೆನ್ಷನ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಿಸ್ಪೊಲಿಕ್ ಬ್ಲಡ್‍ಪ್ರೆಷರ್ 140mm hgಗಿಂತ ಹಾಗೂ ಡಯಾಸ್ಪೊಲಿಕ್ ಬ್ಲಡ್ ಪ್ರೆಷರ್ 90140mm hg ಗಿಂತ ಜಾಸ್ತಿಯಾಗಿದ್ದರೆ ಅದನ್ನು ಅತೀ ರಕ್ತದೊತ್ತಡ(ಹೈಪರ್ ಟೆನ್ಷನ್) ಎನ್ನಲಾಗುತ್ತದೆ.

ಇದಕ್ಕೆ ದೇಹ ತೂಕ, ಅತಿಯಾದ ಉಪ್ಪು ಸೇವನೆ, ಅನುವಂಶೀಯತೆ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ, ದೈಹಿಕ ವ್ಯಾಯಾಮದ ಕೊರತೆಗಳು ಕಾರಣ ಎಂದು ವೈದ್ಯರು ಹೇಳುತ್ತಾರೆ.

ಒಂದು ವೇಳೆ ಅತೀ ರಕ್ತದೊತ್ತಡದ ಸಮಸ್ಯೆಯಿದ್ದು ಅದನ್ನು ಕಡೆಗಣಿಸಿದ್ದೇ ಆದರೆ ಹೃದಯದ ಕಾಯಿಲೆಗೆ ಕಾರಣವಾಗಿ ಬಿಡುತ್ತದೆ. ಇದರಿಂದ ಹೃದಯವು ರಕ್ತವನ್ನು ಪಂಪ್ ಮಾಡುವ ಕ್ರಿಯೆಗೆ ಅಡಚಣೆಯಾಗುತ್ತದೆ. ಇದು ಹೀಗೇ ಮುಂದುವರೆದಲ್ಲಿ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಅತಿರಕ್ತದೊತ್ತಡದಿಂದ ಹೃದಯಾಘಾತ, ಹೃದಯದ ಕಾಯಿಲೆ ಮತ್ತು ಮೂತ್ರಜನಕಾಂಗದ ಕಾಯಿಲೆಗಳು ಬರುವ ಸಂಭವ ಹೆಚ್ಚಿರುತ್ತದೆ. ಅತೀ ರಕ್ತದೊತ್ತಡಕ್ಕೆ ಅತಿಯಾದ ಉಪ್ಪು ಸೇವನೆ ಮುಖ್ಯ ಕಾರಣವಂತೆ. ಉಪ್ಪಿನಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ 10ಗ್ರಾಂ ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಜಾಸ್ತಿ ಸೇವನೆ ಹಾನಿಕಾರಕವಾಗಿದ್ದು ಅತೀ ರಕ್ತದೊತ್ತಡಕ್ಕೆ ಕಾರಣವಾಗುವ ಸಂಭವ ಹೆಚ್ಚಿರುತ್ತದೆ.

ಅತೀ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ ಏನು ಮಾಡಬೇಕು? ದಿನನಿತ್ಯ ಯಾವ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ  ವೈದ್ಯರು ಒಂದಷ್ಟು ಸಲಹೆಗಳನ್ನು ನೀಡುತ್ತಾರೆ.

ಅತಿಯಾದ ದೇಹದ ತೂಕ ಹೊಂದಿರುವವರನ್ನು ಅತೀ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಆದ್ದರಿಂದ ಮೊದಲನೆಯದಾಗಿ ದೇಹದ ತೂಕವನ್ನು ನಿಯಂತ್ರಿಸಬೇಕು. ಉಪ್ಪು ಸೇವನೆ ಕಡಿಮೆ ಮಾಡಬೇಕು. ದಿನಕ್ಕೆ ಕನಿಷ್ಟ ಉಪ್ಪಿನ ಸೋಡಿಯಂ 6ಗ್ರಾಂ ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಮದ್ಯಪಾನ, ಧೂಮಪಾನ ನಿಲ್ಲಿಸಬೇಕು. ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿರುವ ತರಕಾರಿ, ಹಣ್ಣು ಹಾಗೂ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

ಕೊಬ್ಬಿನ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸದೆ ಆದಷ್ಟು ಕಡಿಮೆ ಮಾಡಬೇಕು. ಪ್ರತಿ ದಿನ ಮುಂಜಾನೆ ವಾಕಿಂಗ್ ಸೇರಿದಂತೆ ದೈಹಿಕ ವ್ಯಾಯಾಮ ಮಾಡುವುದು ಒಳ್ಳೆಯದು.

ವೈದ್ಯರು ನೀಡುವ ಒಂದಷ್ಟು ಸಲಹೆಗಳನ್ನು ಪಾಲಿಸುವುದರೊಂದಿಗೆ ಶಿಸ್ತುಬದ್ಧ ಜೀವನ ನಡೆಸಿದ್ದೇ ಆದರೆ ಅತೀ ರಕ್ತದೊತ್ತಡವನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ಒತ್ತಡಗಳಿಂದ ಮುಕ್ತರಾಗಬೇಕು. ನಮ್ಮ ಹಲವು ಕಾಯಿಲೆಗಳಿಗೆ ಮಾನಸಿಕ ಒತ್ತಡವೇ ಕಾರಣವಾಗಿರುತ್ತದೆ. ಆದುದರಿಂದ ಸಾಧ್ಯವಾದಷ್ಟು ಮನಸ್ಸನ್ನು ಹಗುರವಾಗಿರುವಂತೆ ನೋಡಿಕೊಳ್ಳುವುದರೊಂದಿಗೆ ಅಯ್ಯೋ ನನಗೆ ಅಧಿಕ ರಕ್ತದೊತ್ತಡವಿದೆ ಏನು ಮಾಡೋದಪ್ಪಾ ಎಂಬ ಚಿಂತೆಯನ್ನು ಬಿಟ್ಟು ಬಿಡಿ. ನನಗೇನು ಆಗಿಲ್ಲ ಚೆನ್ನಾಗಿದ್ದೇನೆ ಎಂಬ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ.