ಮಳೆಗಾಲದಲ್ಲಿ ಜೇನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..!

ಮಳೆಗಾಲದಲ್ಲಿ ಜೇನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..!

LK   ¦    Jul 26, 2020 08:05:18 PM (IST)
ಮಳೆಗಾಲದಲ್ಲಿ ಜೇನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..!

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿಯಲ್ಲಿಯೇ ಔಷಧವಿದ್ದು ಅದು ಜೇನು ಎಂಬುದು ಹೆಚ್ಚಿನವರಿಗೆ ಗೊತ್ತೇ ಇಲ್ಲದಾಗಿದೆ. ಮಲೆನಾಡಿನ ಹೆಚ್ಚಿನ ಮನೆಗಳಲ್ಲಿ ಜೇನು ಇದ್ದೇ ಇರುತ್ತದೆ.

ಮಳೆಗಾಲದಲ್ಲಿ ಜೇನಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹಿಂದಿನ ಕಾಲದವರು ಅದನ್ನು ತಿನಿಸಾಗಿಯೂ ಔಷಧಿಯಾಗಿಯೂ ಬಳಸಿಕೊಳ್ಳುತ್ತಿದ್ದರು. ನೆಗಡಿ, ಕೆಮ್ಮು ಆದರೆ ಕರಿಮೆಣಸಿನ ಪುಡಿಯೊಂದಿಗೆ ಬೆರಸಿ ಸೇವಿಸಿ ವಾಸಿ ಮಾಡಿಕೊಳ್ಳುತ್ತಿದ್ದರು.

 

ಹಿಂದಿನ ಕಾಲದವರು ತಮ್ಮ ಸುತ್ತಮುತ್ತ ಬೆಳೆಯುವ ಸಸ್ಯಗಳಿಂದ, ಪ್ರಕೃತಿಯಿಂದ ದೊರೆಯುವ ಉತ್ಪನ್ನಗಳನ್ನೇ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಬಂದಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಆಧುನಿಕತೆಯ ಭರದಲ್ಲಿ ನಮ್ಮ ಸುತ್ತಮುತ್ತ ಸಿಗುವ ಸಸ್ಯಗಳ ಉಪಯೋಗಗಳನ್ನು ನಾವು ಮರೆತಿದ್ದೇವೆ. ಅವು ಮನೆಯ ಹಿತ್ತಲಲ್ಲಿಯೇ ಇದ್ದರೂ ಅವುಗಳ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದೇವೆ.

 

ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರ ಸೇರಿದಂತೆ ಹಲವು ರೀತಿಯ ಕಾಯಿಲೆಗಳು ಬಾಧಿಸುವುದು ಸಾಮಾನ್ಯವಾಗಿರುತ್ತದೆ. ಅದರಲ್ಲಿಯೂ ಮಲೆನಾಡಿನಲ್ಲಿ ಸದಾ ಮಳೆ ಸುರಿಯುವುದರಿಂದ ಇಡೀ ವಾತಾವರಣ ಶೀತದಿಂದ ಕೂಡಿರುತ್ತದೆ. ಇಂತಹ ಸಮಯಗಳಲ್ಲಿ ದೇಹವನ್ನು ಬಿಸಿಯಾಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲ್ ಆಗಿದೆ.

 

ಮಲೆನಾಡಿನಲ್ಲಿ ಮಳೆಗಾಲದಲ್ಲಿ ಆರೋಗ್ಯ ಕಾಪಾಡುವ ಸಲುವಾಗಿ ಪರಿಸರದಲ್ಲಿ ದೊರೆಯುವ ಜೇನು, ಕರಿಮೆಣಸು, ಶುಂಠಿ, ಏಲಕ್ಕಿ ಹಾಗೂ ಕೆಲವೊಂದು ಸೊಪ್ಪುಗಳನ್ನು ಆಹಾರವಾಗಿ ಬಳಸುವ ಮೂಲಕ ದೇಹಕ್ಕೆ ಅಗತ್ಯ ಪೋಷಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

 

ಮೊದಲೆಲ್ಲ ಕೊಡಗಿನ ಕಾಡುಗಳಲ್ಲಿ ಎಲ್ಲೆಂದರಲ್ಲಿ ಜೇನು ದೊರೆಯುತ್ತಿತ್ತು. ಅದನ್ನು ಬೇಸಿಗೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಮಳೆಗಾಲದಲ್ಲಿ ಅದನ್ನು ಉಪಯೋಗಿಸುತ್ತಿದ್ದರು. ಹಾಗೆನೋಡಿದರೆ ಜೇನು ಎಲ್ಲ ಕಾಲದಲ್ಲಿಯೂ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿದ್ದು, ಅದರ ಉಪಯೋಗವನ್ನರಿತು ಬಳಸಿದರೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

 

ಹಾಗಾದರೆ ಜೇನಿನ ಉಪಯೋಗವೇನು ಎಂಬುದನ್ನು ನೋಡುವುದಾದರೆ ಇದರ ಸೇವನೆಯಿಂದ ಜೀರ್ಣ ಶಕ್ತಿಯನ್ನು ಪಡೆಯಬಹುದಾಗಿದೆ. ಇನ್ನು ಮಳೆಗಾಲದಲ್ಲಿ ಕಾಫಿ, ಟೀ ಹಾಗೂ ಹಾಲಿಗೆ ಜೇನನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ. ಅಲ್ಲದೆ ದೇಹವನ್ನು ಬಿಸಿಯಾಗಿಡಲು ಸಹಾಯ ಮಾಡುತ್ತದೆ.

 

ರಾತ್ರಿ ಹೊತ್ತು ಬಿಸಿ ಹಾಲಿಗೆ ಜೇನು ಬೆರಸಿ ಕುಡಿದರೆ ನಿದ್ದೆ ಚೆನ್ನಾಗಿ ಬರುತ್ತದೆ. ಕಣ್ಣಿನ್ನು ತಂಪಾಗಿಡಲು ಕೂಡ ಸಹಾಯ ಮಾಡುತ್ತದೆ. ತೂಕವನ್ನು ಇಳಿಸಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕೂಡ ಜೇನು ಸಹಕಾರಿಯಾಗಿದೆ. ಸುಟ್ಟಗಾಯಗಳಿಗೆ ಜೇನನ್ನು ಸವರುವುದರಿಂದ ಬೊಬ್ಬೆಗಳು ಏಳದೆ ಬೇಗ ವಾಸಿಯಾಗುತ್ತದೆ.

 

ಇನ್ನು ಚರ್ಮದ ಹೊಳಪಿಗೆ ಮತ್ತು ನುಣುಪಾಗಿಸಲು, ಮುಖದ ಕಾಂತಿಯನ್ನು ಹೆಚ್ಚಿಸಲು ಜೇನು ಸಹಕಾರಿಯಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಜೇನು ನಿಸರ್ಗದಲ್ಲಿ ದೊರೆಯುವ ಔಷಧಿಯಾಗಿದ್ದು ಅದರ ಮಹತ್ವವನ್ನು ಅರಿತು ದಿನ ನಿತ್ಯ ಜೀವನದಲ್ಲಿ ಉಪಯೋಗಿಸಿದ್ದೇ ಆದರೆ ಆರೋಗ್ಯವಾಗಿರಲು ಸಾಧ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ.