ಸ್ವಚ್ಛತೆ ಕಾಪಾಡುವುದರೊಂದಿಗೆ ಡೆಂಗ್ಯೂ ತಡೆಗಟ್ಟೋಣ!

ಸ್ವಚ್ಛತೆ ಕಾಪಾಡುವುದರೊಂದಿಗೆ ಡೆಂಗ್ಯೂ ತಡೆಗಟ್ಟೋಣ!

LK   ¦    May 20, 2020 09:29:52 AM (IST)
ಸ್ವಚ್ಛತೆ ಕಾಪಾಡುವುದರೊಂದಿಗೆ ಡೆಂಗ್ಯೂ ತಡೆಗಟ್ಟೋಣ!

ಈಗಾಗಲೇ ಮಳೆ ಸುರಿಯುತ್ತಿದ್ದು, ನಗರಗಳು ಸೇರಿದಂತೆ ಗ್ರಾಮೀಣ ಪ್ರದೇಶಗಲ್ಲಿ ಸರಿಯಾಗಿ ನೀರು ಹರಿದು ಹೋಗದೆ ಅಲ್ಲಲ್ಲಿ ನಿಲ್ಲುವುದರಿಂದ ಸೊಳ್ಳೆಗಳು ಹೆಚ್ಚುತ್ತಿದ್ದು, ಇವುಗಳಿಂದ ಡೆಂಗ್ಯೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಡೆಂಗ್ಯೂ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಈ ಬಾರಿ ಕೊರೊನಾದ ಗುಂಗಿನಲ್ಲಿರುವ ಜನ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಜತೆಗೆ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದಿಟ್ಟುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.

ಮಳೆ ರಭಸದಿಂದ ಬಂದರೆ ಕೆಲವೊಮ್ಮೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಚರಂಡಿಯಲ್ಲಿ ಕೊಳಚೆ ತ್ಯಾಜ್ಯಗಳು ಕೊಚ್ಚಿ ಹೋಗಿ ಪರಿಸರ ಶುದ್ಧವಾದರೆ ಸಾಂಕ್ರಾಮಿಕ ರೋಗದ ಭಯವಿರುವುದಿಲ್ಲ. ಆದರೆ ಸಮರ್ಪಕವಾಗಿ ಮಳೆಯಾಗದೆ ಚರಂಡಿಗಳಲ್ಲಿ ನೀರು ಹರಿದು ಹೋಗದೆ ಅಲ್ಲಲ್ಲಿ ನೀರು ನಿಂತುಕೊಂಡಿದ್ದರೆ ಅಂತಹ  ಅನೈರ್ಮಲ್ಯದ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದೀಗ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗ ನಾವು ಸೇವಿಸುವ ಆಹಾರದಿಂದ ಶುರುವಾಗಿ ವಾಸಿಸುವ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ನಿಗಾವಹಿಸುವುದು ಅನಿವಾರ್ಯವಾಗಿದೆ. ನಮ್ಮ ಸುತ್ತಮುತ್ತ ಕಸದ ರಾಶಿಗಳಿದ್ದರೆ ಅವುಗಳನ್ನು ತೆರವುಗೊಳಿಸುವುದು, ಜತೆಗೆ ಚರಂಡಿಗಳಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳುವುದು ಬಹು ಮುಖ್ಯವಾಗಿದೆ.

ಏಕೆಂದರೆ ಕೊಳಚೆ ಪ್ರದೇಶದಲ್ಲಿ ಈಡಿಸ್ ಈಜಿಪ್ಟೆ ಸೊಳ್ಳೆಗಳು ತಮ್ಮ ಸಂತಾನೋತ್ಪತ್ತಿ ಮಾಡಲಿದ್ದು, ಸೊಳ್ಳೆ ಕಚ್ಚಿದ ಮೂರರಿಂದ ಹದಿನಾಲ್ಕು ದಿನಗಳ ನಂತರ ವ್ಯಕ್ತಿಯಲ್ಲಿ ರೋಗ ಉಲ್ಭಣವಾಗಿ ರೋಗದ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುತ್ತದೆ. ಹೆಣ್ಣು ಸೊಳ್ಳೆಯು ಸೋಂಕಿಗೆ ತುತ್ತಾಗದ ವ್ಯಕ್ತಿಯನ್ನು ಕಚ್ಚಿದಲ್ಲಿ, ಆ ಸೊಳ್ಳೆಯ ಜೊಲ್ಲಿನ ಮೂಲಕ ವೈರಸ್ ವ್ಯಕ್ತಿಯ ದೇಹವನ್ನು ಪ್ರವೇಶಿಸಿ  ದೇಹದಲ್ಲಿನ ಬಿಳಿ ರಕ್ತಕಣದೊಂದಿಗೆ ಸೇರಿಕೊಂಡು, ಬಿಳಿ ರಕ್ತ ಕಣಗಳಲ್ಲಿ ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ಈ ದ್ವಿಗುಣಗೊಳ್ಳುವಿಕೆಯು ಡೆಂಗ್ಯೂ ರೋಗದ ರೋಗ ಲಕ್ಷಣವಾಗಿರುತ್ತದೆ. ಒಮ್ಮೆ ಈ ವೈರಸ್‍ಗಳ ಸಂಖ್ಯೆ ಬಿಳಿ ರಕ್ತಕಣಗಳಲ್ಲಿ ಹೆಚ್ಚಾದರೇ, ಲಿವರ್ (ಯಕೃತ್ತ್) ಮತ್ತು ಮೂಳೆಯ ಮಜ್ಜೆ (ಬೋನ್ ಮ್ಯಾರೋ) ಮುಂತಾದ ಅಂಗಾಂಶಗಳ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕೊನೆಗೆ ಇದು ದೇಹದಲ್ಲಿರುವ ಕಿರುತಟ್ಟೆಗಳ ಅಥವಾ ಕಿರುಬಿಲ್ಲೆಗಳ (ಪ್ಲೇಟ್‍ಲೆಟ್) ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಆಗ ಕಾಯಿಲೆ ಉಲ್ಭಣವಾಗುತ್ತಾ ಹೋಗುತ್ತದೆ.

ಈ ವೇಳೆ ಕೀಲು ನೋವು, ಸ್ನಾಯು ನೋವು, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಅಥವಾ ಮಲದಲ್ಲಿ ರಕ್ತ, ತ್ವಚೆಯ ಮೇಲೆ ಸಣ್ಣ ಕೆಂಪು ಚುಕ್ಕೆಗಳು ಕಾಣಿಸಿಕೊಂಡು ವ್ಯಕ್ತಿಯು ಸಂಪೂರ್ಣ ಕುಸಿದು ಬಿಡುತ್ತಾನೆ. ಪದೇ ಪದೇ ಜ್ವರ ಮರುಕಳಿಸುವುದು, ಜ್ವರದ ತಾಪಮಾನವು 104ಡಿಗ್ರಿ ವರೆಗೆ ಏರುವುದು, ಮೈ-ಕೈ ನೋವು ಮತ್ತು ಸ್ನಾಯುಗಳ ಸೆಳೆತ ಎಲ್ಲವೂ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯನ್ನು ಬಾಧಿಸಿರುವುದು ಡೆಂಗ್ಯೂ ಎಂಬುದು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಲಾಗುತ್ತದೆ. ಕ್ಷಣಕ್ಷಣಕ್ಕೂ ಪ್ಲೇಟ್‍ಲೆಟ್‍ಗಳು ಕಡಿಮೆಯಾಗುತ್ತದೆ.

ಇದೀಗ ಡೆಂಗ್ಯೂ ಬರದಂತೆ ನೋಡಿಕೊಳ್ಳುವ ಅಗತ್ಯತೆಯಿದೆ ಹಾಗಾಗಿ ಮನೆಯ ಸುತ್ತ ಚರಂಡಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ, ಬಕೆಟ್, ಟಯರ್, ಎಳನೀರು ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಇರುವ ಪ್ರದೇಶಗಳಲ್ಲಿ ಫಾಗಿಂಗ್ ಮಾಡುವುದು ಅಗತ್ಯವಾಗಿದೆ.