ಮಾನಸಿಕ ಆರೋಗ್ಯ ಕಾಪಾಡಲು ಈಗೇನು ಮಾಡಬೇಕು?

ಮಾನಸಿಕ ಆರೋಗ್ಯ ಕಾಪಾಡಲು ಈಗೇನು ಮಾಡಬೇಕು?

LK   ¦    Apr 14, 2020 04:23:52 PM (IST)
ಮಾನಸಿಕ ಆರೋಗ್ಯ ಕಾಪಾಡಲು ಈಗೇನು ಮಾಡಬೇಕು?

ಕೊರೋನಾ ಇನ್ನಿಲ್ಲದಂತೆ ಬಡವ, ಬಲ್ಲಿದ ಯಾರನ್ನು ಬಿಡದೆ ಕಾಡುತ್ತಿದೆ. ಲಾಕ್ ಡೌನ್ ನಿಂದಾಗಿ ಜನ ಕುಗ್ಗಿ ಹೋಗಿದ್ದಾರೆ. ದುಡಿಮೆ ಇಲ್ಲ, ಕೈ ಖಾಲಿಯಾಗಿದೆ. ಜತೆಗೆ ನಾಳೆ ಹೇಗೆ ಎಂಬ ಚಿಂತೆ ಹೆಚ್ಚಿನವರನ್ನು ಕಾಡುತ್ತಿದೆ.

ಬದುಕು ಹೀಗೆಯೇ ಇರುತ್ತದೆ ಎಂಬ ನಂಬಿಕೆಯಿಂದ ತಮ್ಮ ಸಂಪಾದನೆಗೆ ತಕ್ಕಂತೆ ಮಾಡಿಕೊಂಡ ಕಮಿಟ್ ಮೆಂಟ್ ಈಗ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿದೆ. ಮನೆಯಲ್ಲಿಯೇ ಕುಳಿತಾಗ ಚಿಂತೆಗಳು ನಮ್ಮನ್ನು ಕಾಡಬಹುದು ಅದರಿಂದ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ನೆಮ್ಮದಿ ಹಾಳಾಗಬಹುದು. ಇದೆಲ್ಲವನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಲಹಾ ಮನೋವೈದ್ಯ ಡಾ. ರಾಜಗೋಪಾಲ್  ಅವರು ತಮ್ಮದೇ ಆದ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ ಅದು ಹೀಗಿದೆ..

ಮನೆಗಳಲ್ಲಿ ಸುರಕ್ಷಿತವಾಗಿರ ಬಹುದಾದ ಈ ಸಮಯವನ್ನು ಆರಾಮವಾಗಿರಲು ಮತ್ತು ತಮ್ಮ ದಿನನಿತ್ಯದ ಒತ್ತಡ ಮತ್ತು ಸುಸ್ತಿನ ಮನಸ್ಥಿತಿಯಿಂದ ಹೊರಬರಲು ಬಳಸಿಕೊಳ್ಳಬಹುದು. ಇಂತಹ ಅಪಾಯಕಾರಿ ಸಮಯದಲ್ಲಿ ಇದನ್ನು ಒಂದು ಆಶಾಕಿರಣ ಎಂದುಕೊಳ್ಳೋಣ, ಒಂದು ಹೆಜ್ಜೆ ಹಿಂದೆ ಬಂದು, ನಮ್ಮ ಕುಟುಂಬ, ಆರೋಗ್ಯ ಹೀಗೆ ಎಲ್ಲವನ್ನೂ ರೂಪಿಸುವ ಬದುಕಿನ ವಿಶಾಲ ಚಿತ್ರಣವನ್ನು ಕಂಡುಕೊಂಡು ಅದನ್ನು ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ.

ಈಗಿನ ಪರಿಸ್ಥಿತಿಯನ್ನು ನೋಡಿಕೊಂಡು,  ಹಿಂದಿನ ದಿನಗಳ ಜಂಜಾಟ ತುಂಬಿಕೊಂಡಿದ್ದ ಆ ಅವಸರದ ಮುಂಜಾನೆಯ ಹೊತ್ತನ್ನು ಮಿಸ್ ಮಾಡಿಕೊಳ್ಳುವುದಕ್ಕಿಂತ, ನಿಮ್ಮ ಮಾನಸಿಕ ಆರೋಗ್ಯವನ್ನು ಪ್ರೀತಿಸುವುದು ಮತ್ತು ಹಲವು ವರ್ಷಗಳ ಒತ್ತಡದಿಂದ ಮುಕ್ತಿ ಹೊಂದುವುದೇ ಜಾಣತನವಾಗಿದೆ.

ಕೊವಿಡ್-19 ನಮಗೆ ಮತ್ತು ಇತರರಿಗೂ ಅಪಾಯವನ್ನು ತಂದೊಡ್ಡಿರುವ ಒಂದು ಆರೋಗ್ಯ ಸಮಸ್ಯೆ. ಇಲ್ಲಿ ಜನರು ತಮ್ಮನ್ನು ತಾವು ಏಕಾಂಗಿಯಾಗಿಸಿಕೊಳ್ಳುವುದರ ಜೊತೆಗೆ ಇತರರಿಂದಲೂ ಪ್ರತ್ಯೇಕವಾಗುತ್ತಾರೆ. ಈ ಲಾಕ್ ಡೌನ್ ಸಮಯದಲ್ಲಿ ತಮ್ಮನ್ನು ಸುಧಾರಿಸಿಕೊಳ್ಳಲು ಸಾಧ್ಯ. ಇದನ್ನು ಸಾಧಿಸುವುದು ಹೇಗೆ? ಈ ಕೆಳಗೆ ಕೊಟ್ಟಿರುವ ಕೆಲವು ಸಲಹೆಗಳು ಸಮತೋಲಿತ ಮತ್ತು ಬಲಶಾಲಿ ಮಾನಸಿಕ ಆರೋಗ್ಯ ಪಡೆದುಕೊಳ್ಳಲು ಸಹಾಯಕವಾಗಬಲ್ಲವು ಎಂಬುದರಲ್ಲಿ ಎರಡು ಮಾತಿಲ್ಲ.

ಕುಟುಂಬದೊಂದಿಗೆ ಕಾಲ ಕಳೆಯಿರಿ, ಈ ಪರಿಸ್ಥಿತಿಯನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡಿ. ನಮ್ಮಲ್ಲಿ ಹಲವರಿಗೆ ಪ್ರತಿದಿನ ನಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಸಮಯವಿಲ್ಲ. ಈ ಸಮಯವನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಿ. ಮಕ್ಕಳೊಂದಿಗೆ ಆಟವಾಡಿ, ಈ ಗುಣಮಟ್ಟದ ಸಮಯವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಿರಿ, ಮನೆಯನ್ನು ಸ್ವಚ್ಛಗೊಳಿಸಿ ಅಥವಾ ಮತ್ತೊಮ್ಮೆ ಸಿಂಗರಿಸಿ, ಹೆತ್ತವರೊಂದಿಗೆ ಮಾತನಾಡಿ. ನಮ್ಮನ್ನು ಕುಟುಂಬದ ಜೊತೆಗಿನ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ಮತ್ತು ಆತಂಕದ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. ನಿಮ್ಮ ಸಂಬಂಧಿಕರು ದೂರದಲ್ಲಿದ್ದರೆ ಅವರನ್ನು ವೀಡಿಯೋ ಕಾಲ್  ಮುಖಾಂತರ ಸಂಪರ್ಕಿಸಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆದುಹೋದ ಆಪ್ತತೆಯನ್ನು ಮರುಸ್ಥಾಪಿಸಿ.

ನಿಮ್ಮನ್ನು ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಪುಸ್ತಕ ಓದುವುದು, ಕಳೆದುಹೋದ ಹವ್ಯಾಸಗಳಾದ ಡ್ರಾಯಿಂಗ್, ಪೈಂಟಿಂಗ್, ನಿಮ್ಮ ಹೂದೋಟವನ್ನು ಮತ್ತೊಮ್ಮೆ ಜೋಡಿಸುವುದು, ನೀರುಣಿಸುವುದು, ಅಡುಗೆ ಅಥವಾ ಹೊಸ ರುಚಿಯ ಪ್ರಯೋಗ, ಹೊಸದೊಂದು ಹವ್ಯಾಸವನ್ನು ರೂಢಿಸಿಕೊಳ್ಳಿ.

ನಿಯಮಿತ ವ್ಯಾಯಾಮ, ಫಿಟ್ನೆಸ್ ಒಬ್ಬ ವ್ಯಕ್ತಿ ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಮಾಡಬಹುದಾದ ಅತ್ಯುತ್ತಮ ಚಟುವಟಿಕೆಗಳಲ್ಲಿ ಒಂದು ಸಾಬೀತಾಗಿದೆ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದ ಒಟ್ಟಾರೆ ರಕ್ತಪರಿಚಲನೆ, ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮನಸ್ಸಿನ ಸಾಮಥ್ರ್ಯ ವೃದ್ಧಿಸುತ್ತದೆ, ಮತ್ತಷ್ಟು ಕ್ರಿಯಾಶೀಲವಾಗಿಸುತ್ತದೆ.

ದಿನಚರಿಯನ್ನು ರೂಢಿಸಿಕೊಳ್ಳಿ, ಮನೆಯಿಂದ ಕೆಲಸ ಮಾಡುವವರು, ನಿಮ್ಮ ಯಾವತ್ತಿನ ಕೆಲಸದ ನಮಯವನ್ನೇ ಪಾಲಿಸಿ ಮತ್ತು ಹೆಚ್ಚಿನ ಸಮಯವನ್ನು ಫಲದಾಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮತೋಲನ ಕಾಪಾಡಿಕೊಳ್ಳಿ.

ಸುದ್ದಿಗಳಿಗೆ ಅಂಟಿಕೊಂಡಿರಬೇಡಿ. ಈಗಿನ ಪರಿಸ್ಥಿತಿ ಭಯಾನಕವಾದರೂ ಕೂಡ, ನೀವು ಮನೆಯಲ್ಲಿರುವವರೆಗೂ ನೀವು ಸುರಕ್ಷಿತವಾಗಿರುತ್ತೀರಿ ಎಂಬುದನ್ನು ನೆನಪಿಡಿ. ಸುದ್ದಿಯನ್ನು ನೋಡಿ ಗಾಬರಿಯಾಗಬೇಡಿ, ಅದರಿಂದ  ಆದಷ್ಟು ದೂರವಿರಿ. ಕ್ವಾರಂಟೈನ್ ಯಾರ ನಿಯಂತ್ರಣದಲ್ಲೂ ಇಲ್ಲದಿರುವುದರಿಂದ, ಅದರ ಕುರಿತು ಮಿತಿಮೀರಿ ತಿಳಿದುಕೊಳ್ಳುವ ಆತುರ ಬೇಡ, ಅದರ ಬದಲು ಚಲನಚಿತ್ರ ಅಥವಾ ಇತರ ಶೋಗಳ ಕಡೆ ಗಮನಹರಿಸಿ.

ಹಿರಿಯರು ಮತ್ತು ಮಕ್ಕಳ ಸುರಕ್ಷತೆಯೆಡೆಗೆ ಗಮನಹರಿಸಿ. ಇತರ ಸಾಮಾನ್ಯ ವಯಸ್ಸಿನ ಜನರಿಗಿಂತ ಅವರು ಎರಡು ಪಟ್ಟು ಗಾಬರಿಯಾಗಿರಬಹುದು ಅಥವಾ ಬೇಸರಗೊಂಡಿರಬಹುದು ಎಂದು ನೆನಪಿಟ್ಟುಕೊಳ್ಳಿ. ಅವರ ಜೊತೆ ಮಾತನಾಡುತ್ತಿರಿ, ಅವರನ್ನು ತೊಡಗಿಸಿಕೊಳ್ಳಿ. ಅವರ ಮನಸ್ಸಲ್ಲಿ ಯಾತನೆ ಮೂಡಿಸಬಹುದಾದ ಯಾವುದೇ ವಿಷಯದಿಂದ ಅವರನ್ನು ದೂರವಿಡಿ.

ಸಾಂಕ್ರಾಮಿಕತೆಯ ಭಾವನೆ ಅದರ ಕುರಿತು ಯೋಚಿಸಿದರೆ ಮಾತ್ರ ಬರಲು ಸಾಧ್ಯ. ಹಾಗಾಗಿ ಇದನ್ನು ಲಾಕ್ ಡೌನ್ ಎಂದು ಭಾವಿಸುವುದು ಬೇಡ. ಇದು ನಮ್ಮ ಕುಟುಂಬದ ಜೊತೆ ಕಳೆಯಲು ದೊರೆತ ಸಮಯವೆಂದಿರಲಿ. ಈ ಲಾಕ್ ಡೌನ್ ಅನ್ನು ಕ್ರಿಯಾಶೀಲವಾಗಿಸೋಣ ಮತ್ತು ಇದು ಮೋಜಿನಿಂದ ಕೂಡಿರಲಿ. ಈ ಸಮಯದ ಸದುಪಯೋಗ ಮಾಡಿಕೊಳ್ಳಿ, ಕ್ರಿಯಾಶೀಲರಾಗಿರಿ. ಬಲಶಾಲಿಗಳಾಗಿ ಎನ್ನುವ ಮೂಲಕ ಜನರಲ್ಲಿ ಧೈರ್ಯ ತುಂಬ ಬಹುದಾದ ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಪಾಲಿಸೋಣ ಮನೆಯಲ್ಲಿಯೇ ಇದ್ದು ಕೊರೋನಾವನ್ನು ತಡೆಯೋಣ...