ಕೊರೋನಾ ನಡುವೆ ಜನರ ನಿದ್ದೆಗೆಡಿಸುತ್ತಿರುವ ಹಕ್ಕಿಜ್ವರ

ಕೊರೋನಾ ನಡುವೆ ಜನರ ನಿದ್ದೆಗೆಡಿಸುತ್ತಿರುವ ಹಕ್ಕಿಜ್ವರ

LK   ¦    Feb 03, 2021 11:14:17 AM (IST)
ಕೊರೋನಾ ನಡುವೆ ಜನರ ನಿದ್ದೆಗೆಡಿಸುತ್ತಿರುವ ಹಕ್ಕಿಜ್ವರ

ಕೊರೋನಾದೊಂದಿಗೆ ಹೋರಾಡುತ್ತಾ ವರ್ಷ ಕಳೆದಿದ್ದೇವೆ. ಹತ್ತು ಹಲವು ಸಂಕಷ್ಟವನ್ನು ಅನುಭವಿಸಿದ್ದೇವೆ. ಇನ್ನೂ ಕೂಡ ಅದರ ಭಯ ನಮ್ಮಿಂದ ದೂರವಾಗಿಲ್ಲ. ಹೀಗಿರುವಾಗಲೇ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಮತ್ತಷ್ಟು ನಮ್ಮನ್ನು ಆತಂಕಕ್ಕೆ ತಳ್ಳಿದೆ.

ಕೇರಳದಲ್ಲಿ ಶೀಘ್ರಗತಿಯಲ್ಲಿ ಹರಡುತ್ತಿರುವ ಹಕ್ಕಿಜ್ವರ ಕರ್ನಾಟಕದತ್ತ ಮುಖಮಾಡುವ ಭಯದಿಂದಾಗಿ ಈಗಾಗಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅಲ್ಲಲ್ಲಿ ಹಕ್ಕಿಗಳು ಸಾಯುತ್ತಿರುವುದು ಜನರನ್ನು ಭಯಗ್ರಸ್ತರನ್ನಾಗಿಸಿದೆ. ಹಕ್ಕಿಜ್ವರವನ್ನು ವೈಜ್ಞಾನಿಕವಾಗಿ ಇನ್‍ಫ್ಲೂಯೆನ್ ಜ ಅಥವಾ ಬರ್ಡ್ ಫ್ಲೂ ಎಂದು ಕರೆಯಲಾಗುತ್ತಿದೆ. ಎಚ್5ಎನ್1 ಎಂಬ ವೈರಸ್‍ನಿಂದ ಕಾಯಿಲೆ ಹರಡುತ್ತದೆ. 1997ರಲ್ಲಿ ಹಾಂಕಾಂಗ್‍ನಲ್ಲಿ ಕಾಣಿಸಿಕೊಂಡ ವೈರಸ್ ಮನುಷ್ಯನನ್ನು ಬಲಿತೆಗೆದು ಕೊಂಡಿತು.

ಹಕ್ಕಿಜ್ವರ ಹೆಸರೇ ಹೇಳುವಂತೆ ಹಕ್ಕಿಯಿಂದಲೇ ಬರುತ್ತಿದ್ದು ವೈರಸ್‍ಗೀಡಾದ ಹಕ್ಕಿಯ ಮಲ, ಮೂತ್ರ, ಸಿಂಬಳ ಮತ್ತು ಉಸಿರು ವೈರಸ್ ನಿಂದ ಕೂಡಿರುತ್ತದೆ ಹೀಗಾಗಿ ಸೋಂಕು ಪೀಡಿತ ಹಕ್ಕಿಗಳು ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ ಎಲ್ಲವೂ ವೈರಸ್ ಹರಡಲು ಕಾರಣವಾಗುತ್ತವೆ. ಇದು ಕೋಳಿ ಫಾರಂ, ಮಾಂಸದಂಗಡಿ ಹೀಗೆ ಕೋಳಿಯ ಸಂಪರ್ಕದಲ್ಲಿರುವವರಿಗೆ ಬಹುಬೇಗ ತಗಲುತ್ತದೆ. ವೈರಸ್‍ಗಳು ಗಾಳಿಯೊಂದಿಗೆ ಮಾನವನ ದೇಹವನ್ನು ಸೇರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುವ ಸಾಧ್ಯತೆಯಿರುತ್ತದೆ. ಆದರೆ ಇದು ಹಕ್ಕಿಗಳಿಂದ ಮನುಷ್ಯನಿಗೆ ಹರಡಿದ ನಿದರ್ಶನಗಳು ಕಡಿಮೆ ಎನ್ನಲಾಗುತ್ತದೆ. ಇದು ಕೋಳಿಗಳಿಂದ ಹರಡಿದರೂ ಮಾಂಸವನ್ನು ಬೇಯಿಸಿ ತಿನ್ನುವುದರಿಂದ ತೊಂದರೆಯಿಲ್ಲ ಎಂದು ಹೇಳಲಾಗಿದೆ.

ಇನ್ನು ಹಕ್ಕಿಜ್ವರ ಯಾವುದರಿಂದ ಬರುವುದಿಲ್ಲ ಎಂಬುದನ್ನು ನೋಡುವುದಾದರೆ ಕೋಳಿ ಮಾಂಸ ಹಾಗೂ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಮನುಷ್ಯರಿಗೆ ತಗಲುವುದಿಲ್ಲ. ಆದರೆ ಸೋಂಕು ತಗುಲಿದ ಕೋಳಿಯ ಮಾಂಸ ಚೆನ್ನಾಗಿ ಬೇಯಿಸದೆ ಹಾಗೂ ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿರುತ್ತವೆ ಎಂದು ವೈದ್ಯರು ಹೇಳಿದ್ದು, ಆದರೆ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‍ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರ ಸೇವಿಸುವುದು ಅಗತ್ಯವಾಗಿದೆ.

ಇದರ ತಡೆಗೆ ಏನು ಮಾಡಬಹುದು ಎಂಬುದನ್ನು ನೋಡುವುದಾದರೆ, ಯಾವುದೇ ಹಕ್ಕಿಗೆ ಜ್ವರ ಕಂಡರೆ ತಕ್ಷಣ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ (ಕೋಳಿ) ಹತ್ಯೆ ಮಾಡಬೇಕು, ಹಕ್ಕಿ ಜ್ವರವಿರುವ ವ್ಯಾಪ್ತಿಯಲ್ಲಿ ವಾಸಿಸುವವರು ಹಕ್ಕಿಜ್ವರ ಬಾರದಂತೆ ತಡೆಯಲು ದಿನಕ್ಕೊಂದರಂತೆ ಒಂದು ವಆರ `ಟ್ಯಾಮಿಫ್ಲೂ’ ಎಂಬ ಮಾತ್ರೆಯನ್ನು ಸೇವಿಸಬೇಕು.  ಕೋಳಿ ಫಾರಂಗಳಿದ್ದರೆ ಆ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸತ್ತ ಕೋಳಿಯನ್ನು ಐದಾರು ಪದರ ಸುಣ್ಣ ಹಾಗೂ ಮಣ್ಣು ಹಾಕಿ ಹೂಳಬೇಕು ಅಥವಾ ಸುಟ್ಟುಹಾಕಬೇಕುವುದು ಒಳ್ಳೆಯದು.

ಹಕ್ಕಿ ಜ್ವರ ಕಾಣಿಸಿಕೊಂಡ ಪ್ರದೇಶದಲ್ಲಿ ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ ನಿರ್ಲಕ್ಷ್ಯ ವಹಿಸದೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಹಕ್ಕಿ ಜ್ವರ ವೈರಸ್ ತಗುಲಿದ ವ್ಯಕ್ತಿಗಳಲ್ಲಿ ಎರಡರಿಂದ ಮೂರು ದಿನದಲ್ಲಿ ರೋಗ ಲಕ್ಷಣಗಳು ಕಾಣಿಸಲು ಆರಂಭಿಸುತ್ತದೆ. ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು ಹಕ್ಕಿಜ್ವರದ ಲಕ್ಷಣವಾಗಿದ್ದು, ರೋಗ ಪೀಡಿತ ವ್ಯಕ್ತಿಗಳ ಎಕ್ಸ್‍ರೇ ಪರೀಕ್ಷೆ ಮಾಡಿಸಿದಾಗ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ. ಹಕ್ಕಿ ಜ್ವರದಿಂದ ಸಾವುಂಟಾಗುವುದು ಉಸಿರಾಟ ನಿಲ್ಲುವುದರಿಂದ. ರೋಗಿಯ ಮೂಗು ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ರೋಗ ಅಂಟಿರುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ.

ರೋಗ ಲಕ್ಷಣ ಕಂಡು ಬಂದ ಎರಡು ದಿನದೊಳಗೆ ಚಿಕಿತ್ಸೆ ಪಡೆಯಲು ಆರಂಭಿಸಿ  ಔಷಧಿ ಸೇವನೆ ಆರಂಭಿಸಿದರೆ ರೋಗದ ತೀವ್ರತೆ ಬಹಳಷ್ಟು ಕಡಿಮೆಯಾಗುತ್ತದೆ. ಟ್ಯಾಮಿಫ್ಲೂ ಹಾಗೂ ರಿಲಿಂಜ್ ಮಾತ್ರೆಗಳು ಇದಕ್ಕೆ ರಾಮಬಾಣವಾಗಿದೆ. ಜ್ವರ ಬಂದ ಕೂಡಲೇ ಹಕ್ಕಿ ಜ್ವರ ಎಂದು ಭಯ ಬೀಳಬೇಕಾಗಿಲ್ಲ. ಹಾಗೆಯೇ ನಿರ್ಲಕ್ಷ್ಯ ವಹಿಸುವಂತೆಯೂ ಇಲ್ಲ. ಯಾವುದಕ್ಕೂ ವೈದ್ಯರನ್ನು ಭೇಟಿ ಮಾಡಿ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡು ಹಕ್ಕಿಜ್ವರನಾ ಎಂಬುದು ಮನದಟ್ಟಾದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಅನಗತ್ಯ ಭಯಪಡದೆ ಒಂದಷ್ಟು ಎಚ್ಚರಿಕೆ ವಹಿಸುವ ಮೂಲಕ ರೋಗದಿಂದ ದೂರವಿರುವಂತೆ ನೋಡಿಕೊಳ್ಳಬೇಕಾಗಿದೆ.