ಪ್ರತಿಯೊಬ್ಬರಿಗೂ ಇರಲಿ ಹೃದಯದತ್ತ ಕಾಳಜಿ...!

ಪ್ರತಿಯೊಬ್ಬರಿಗೂ ಇರಲಿ ಹೃದಯದತ್ತ ಕಾಳಜಿ...!

LK   ¦    Aug 08, 2018 01:39:32 PM (IST)
ಪ್ರತಿಯೊಬ್ಬರಿಗೂ ಇರಲಿ ಹೃದಯದತ್ತ ಕಾಳಜಿ...!

ಬದಲಾದ ಜೀವನ ಶೈಲಿ, ಒತ್ತಡ, ವ್ಯಾಯಾಮ ಕೊರತೆ, ವಾಯು ಮಾಲಿನ್ಯ ಇತರೆ ಕಾರಣಗಳಿಂದ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳು ಕೇಳಿ ಬರುತ್ತಿವೆ.

ಹೃದಯಾಘಾತದಿಂದ ಸಾವನ್ನಪ್ಪುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಹೃದಯರೋಗದಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ನಾವು ನಮ್ಮ ಆರೋಗ್ಯದ ಬಗ್ಗೆಯೂ ಒಂದಿಷ್ಟು ಕಾಳಜಿ ವಹಿಸುವುದು ಅಗತ್ಯ. ಇಷ್ಟಕ್ಕೂ ಹೃದಯರೋಗಗಳು ಹೇಗೆ ಬರುತ್ತವೆ ಎಂಬುವುದನ್ನು ನೋಡಿದರೆ ಅದಕ್ಕೆ ವೈದ್ಯರು ಒಂದಷ್ಟು ಕಾರಣವನ್ನು ನೀಡುತ್ತಾರೆ. ಬದಲಾದ ಜೀವನ ಶೈಲಿ, ಒತ್ತಡದ ಬದುಕು, ಆಹಾರ ಸೇವನೆಯಲ್ಲಿ ಕಾಳಜಿ ವಹಿಸದಿರುವುದು ಹೀಗೆ ದೊಡ್ಡದಾದ ಪಟ್ಟಿಯನ್ನೇ ನೀಡುತ್ತಾರೆ. ಇದೆಲ್ಲವನ್ನು ನೋಡಿದರೆ ಮುಖ್ಯವಾಗಿ ಹೃದಯದ ಕಾಯಿಲೆಗಳಿಗೆ ನಾವು ಸೇವಿಸುವ ಆಹಾರಗಳೇ ಕಾರಣ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಹೃದಯದ ತೊಂದರೆಗೆ ದೇಹ ಮತ್ತು ರಕ್ತದಲ್ಲಿ ಶೇಖರಣೆಯಾಗುವ ಕೊಬ್ಬು, ಕೊಲೆಸ್ಟ್ರಾಲ್, ಅತಿರಕ್ತದೊತ್ತಡ, ಅತಿತೂಕವೂ ಮಾರಕವಾಗಿದ್ದು, ಬಾಯಿ ರುಚಿಗಾಗಿ ತಿನ್ನುವ ಹಲವು ಪದಾರ್ಥಗಳು ಹೃದಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವೈದ್ಯರು ಹೇಳುವಂತೆ ಜಿಡ್ಡು ಕೊಬ್ಬಿನಂಶ, ಎಣ್ಣೆಯಲ್ಲಿ ಕರಿದ ತಿಂಡಿಗಳು ಬಾಯಿಗೆ ರುಚಿಯಾಗಿದ್ದರೂ ಅವು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹೀಗಾಗಿ ಶೇ. 15ರಿಂದ 20ರಷ್ಟು ಮಾತ್ರ ಕೊಬ್ಬು ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು ಇದನ್ನು ಪಾಲಿಸಿದರೆ ಮಾತ್ರ ಹೃದಯದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂಬ ಮಾತನ್ನು ಹೇಳುತ್ತಾರೆ.

ಇತ್ತೀಚೆಗೆ ಚಿಕ್ಕ ವಯಸ್ಸಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವುದು ಆತಂಕದ ವಿಷಯವಾಗಿದೆ. ಹೀಗಾಗಿ ನಾವು ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕಾದರೆ ಒಂದಷ್ಟು ಎಚ್ಚರಿಕೆಯ ಕ್ರಮಗಳನ್ನು ಮತ್ತು ನಾವು ಸೇವಿಸುವ ಆಹಾರದಲ್ಲಿ ಏನಿರಬೇಕು ಏನಿರಬಾರದು ಎಂಬುದರ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಯಾವ ಆಹಾರ ಒಳ್ಳೆಯದು ಯಾವುದು ಕೆಟ್ಟದು ಎಂಬುದನ್ನು ನೋಡುವುದಾದರೆ ತುಪ್ಪ, ವನಸ್ಪತಿ, ಕೊಬ್ಬರಿ ಎಣ್ಣೆ, ಬೆಣ್ಣೆ, ಹಾಲಿನ ಉತ್ಪನ್ನಗಳಾದ ಖೋವಾ, ಪನ್ನೀರು, ಐಸ್‍ಕ್ರೀಮ್, ಗಿಣ್ಣು, ಮೊಟ್ಟೆಯ ಹಳದಿ ಭಾಗ, ಚರ್ಬಿ ಮಾಂಸ, ಕೋಳಿಯ ಚರ್ಮ, ಹಂದಿ ಮಾಂಸ, ದನಮಾಂಸ ಒಳ್ಳೆಯದಲ್ಲ. ಉಪ್ಪನ್ನು ಆದಷ್ಟು ಕಡಿಮೆ ಮಾಡಬೇಕು. ಚಿಪ್ಸ್, ಸಾಸ್, ಉಪ್ಪಿನಕಾಯಿ ಉಪ್ಪು ಮಿಶ್ರಿತ ಬಿಸ್ಕೆಟ್, ಸಂಡಿಗೆಯನ್ನು ದೂರವಿಡಬೇಕು. ಕಾಫಿ, ಟೀ ಸೇರಿದಂತೆ ಕೆಲವು ಪಾನೀಯಗಳನ್ನು ಹೆಚ್ಚು ಸೇವಿಸಬಾರದು. ಧೂಮಪಾನ, ಮದ್ಯಪಾನಕ್ಕೆ ಬ್ರೇಕ್ ಹಾಕಬೇಕು. ನಿತ್ಯ ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು.

ಇನ್ನು ನಾರಿನ ಅಂಶದ ಆಹಾರಗಳು, ಕಾಳುಗಳು, ಮೊಳಕೆಕಾಳುಗಳು, ಸೊಪ್ಪು, ಹಣ್ಣು ಹಂಪಲುಗಳು, ರಾಗಿ, ಗೋಧಿ, ಜೋಳ, ಅಕ್ಕಿಯನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಬೀಜ ಮತ್ತು ಒಣ ಹಣ್ಣುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ವಿಟಮಿನ್ ಸಿ ಯುಕ್ತ ಹಣ್ಣುಗಳಾದ ದ್ರಾಕ್ಷಿ, ಸೀಬೆ, ಕಿತ್ತಲೆ, ಮೋಸಂಬಿ, ನೆಲ್ಲಿಕಾಯಿ ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಬೆಳ್ಳುಳ್ಳಿ ಹಸಿ ಈರುಳ್ಳಿ ಸೇವನೆಗೆ ಆದ್ಯತೆ ನೀಡಬೇಕು.

40 ವರ್ಷ ಮೀರಿದ ಬಳಿಕ ಗಂಡಸರು 45 ವರ್ಷ ಮೀರಿದ ಬಳಿಕ ಮಹಿಳೆಯರು ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ ಪರೀಕ್ಷೆ, ಥ್ರೆಡ್‍ಮಿಲ್ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ, ಪ್ರತಿ ಬಾರಿ ಸಾಮಾನ್ಯ ಸ್ಥಿತಿಯಲ್ಲಿದ್ದರೆ 2ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಹೃದಯಘಾತವಾದಾಗ ಸಾಮಾನ್ಯವಾಗಿ ಎದೆಯ ಎಡಭಾಗ, ಮಧ್ಯಭಾಗದಲ್ಲಿ ನೋವು, ಉರಿ ಕಾಣಿಸಿಕೊಳುತ್ತದೆ. ಶೇ.30ರಿಂದ 40ರಷ್ಟು ಮಂದಿಗೆ ಹೃದಯಘಾತವಾದಾಗ ಎದೆಭಾಗದಲ್ಲಿ ನೋವು ಕಾಣಿಸಿಕೊಳುವುದಿಲ್ಲ. ಬದಲಿಗೆ ಗಂಟಲು, ದವಡೆ ನೋವು ಕಾಣಿಸಿಕೊಳ್ಳಬಹುದು, ಬೆನ್ನಿನ ಮೇಲ್ಭಾಗ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿಯಾಗಬಹುದು, ಅತಿಯಾಗಿ ಬೆವರು ಬರಬಹುದು, ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಸಾವಿನ ಅಪಾಯವಿರುತ್ತದೆ. ಆದ್ದರಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವುದು ಉತ್ತಮ. ಅದು ಏನೇ ಇರಲಿ ಹೃದಯರೋಗದತ್ತ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಲೇ ಬೇಕು ಎಂಬುದನ್ನು ಮಾತ್ರ ಮರೆಯಬಾರದು.