ನಗುವಿನಲ್ಲಿರುವ ಆರೋಗ್ಯದ ಗುಟ್ಟು ಗೊತ್ತಾ?

ನಗುವಿನಲ್ಲಿರುವ ಆರೋಗ್ಯದ ಗುಟ್ಟು ಗೊತ್ತಾ?

LK   ¦    May 03, 2020 03:42:17 PM (IST)
ನಗುವಿನಲ್ಲಿರುವ ಆರೋಗ್ಯದ ಗುಟ್ಟು ಗೊತ್ತಾ?

ಈಗ ನಾವು ಬದುಕನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಲಾಭ-ನಷ್ಟದ ಲೆಕ್ಕಚಾರದಲ್ಲಿ ಜೀವನವನ್ನು ಸಾಗಿಸುತ್ತಿದ್ದೇವೆ. ಹಣ ಮಾಡಬೇಕು ಐಷಾರಾಮಿ ಬದುಕನ್ನು ಕಟ್ಟಿಕೊಳ್ಳಬೇಕೆಂಬುದಷ್ಟೆ ನಮ್ಮ ಗುರಿಯಾಗುತ್ತಿದೆ.

ನಿಜವಾಗಿ ಹೇಳಬೇಕೆಂದರೆ ನಮ್ಮ ಬದುಕಿಗೆ ಮುಖ್ಯವಾಗಿ ಬೇಕಾಗಿರುವುದನ್ನೇ ನಾವು ಮಾಡುತ್ತಿಲ್ಲ. ನಮ್ಮ ಸುತ್ತ ಎಲ್ಲ ಐಷಾರಾಮಿ ವಸ್ತುಗಳಿದ್ದರೇನಂತೆ ಸಂತೋಷವಾಗಿದ್ದೇವೆಯಾ, ನಗುತ್ತಿದ್ದೇವೆಯಾ, ಎಂಬ ಪ್ರಶ್ನೆಗಳಿಗೆ ಬಹುತೇಕರಲ್ಲಿ ಉತ್ತರವಿಲ್ಲ. ಕಾರಣ ನಾವು ಎಲ್ಲವನ್ನು ಹಣದಿಂದ ಅಳೆಯುವ ಕೆಟ್ಟ ಸಂಪ್ರದಾಯಕ್ಕೆ ಬಂದಿರುವುದರಿಂದ ಮತ್ತು ದುಡಿಮೆ ಮತ್ತು ಹಣ ಸಂಪಾದನೆಗೆ ಹೆಚ್ಚಿನ ಸಮಯಕೊಡುತ್ತಿರುವುದರಿಂದ ನಮಗೆ ಗೊತ್ತಿಲ್ಲದಂತೆ ನಮ್ಮ ನಗು ನಮ್ಮಿಂದ ದೂರವಾಗಿದೆ. ಒಂದು ವೇಳೆ ನಾವು ನಕ್ಕರೂ ಒಂದೊಳ್ಳೆಯ ಮನಸ್ಸಿನಿಂದ ನಗುತ್ತಿಲ್ಲ ಹಾಗಾಗಿ ಅದು ನಾಟಕೀಯ ಎಂಬಂತೆ ಭಾಸವಾಗುತ್ತಿದೆ.

ನಿಜವಾಗಿ ಹೇಳಬೇಕೆಂದರೆ ಖುಷಿಯಾಗಿ ನಗುನಗುತ್ತಾ ಇದ್ದು ನೋಡಿ ಮನಸ್ಸು ಹಗುರವಾಗುತ್ತದೆ. ಜತೆಗೆ ಹುಮ್ಮಸ್ಸಿರುತ್ತದೆ. ಅದರ ಬದಲಿಗೆ ನಾವು ಮುಖ ಗಂಟಿಕ್ಕಿಕೊಂಡು ಆಕಾಶ ಕಳಚಿ ತಲೆ ಮೇಲೆ ಬಿದ್ದಂತೆ ಇದ್ದರೆ ನಾವು ಖುಷಿಯಾಗಿ ನೆಮ್ಮದಿಯಾಗಿ ಇರಲು ಸಾಧ್ಯವೇ ಇಲ್ಲ.

ಹಾಗೆನೋಡಿದರೆ ನಗು ಎಂಬುದು ಹಣ ನೀಡಿ ಪಡೆಯುವಂತಹದ್ದಲ್ಲ. ಅದನ್ನು ನಾವು ನಮ್ಮಿಂದಲೇ ಪಡೆಯುವಂತಹದ್ದು. ಇವತ್ತು ನಗುವನ್ನು ಬಲತ್ಕಾರವಾಗಿ ಪಡೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಅದಕ್ಕಾಗಿಯೇ ನಗರ ಪ್ರದೇಶಗಳಲ್ಲಿ ಕ್ಲಬ್ ಹುಟ್ಟಿಕೊಂಡಿವೆ. ಸದಾ ದುಡಿಮೆಯಲ್ಲಿಯೇ ಇರುವವರು ಕ್ಲಬ್‍ಗೆ ಹೋಗಿ ನಕ್ಕು ಬರುವಂತಹ ಪರಿಸ್ಥಿತಿ ಬಂದೊದಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.

ಇವತ್ತಿನ ಯಾಂತ್ರಿಕ ಬದುಕು ದೈವದತ್ತವಾಗಿ ಬಂದ ನಗುವನ್ನು ನುಂಗಿ ಹಾಕುತ್ತಿದೆ. ಹಣದ ವ್ಯಾಮೋಹದಲ್ಲಿ ತೊಡಗಿರುವ ಮಂದಿ ಒತ್ತಡದಲ್ಲಿರುವ ಕಾರಣ ನಗುವುದಕ್ಕೂ ಸಮಯ ಇಲ್ಲದಾಗಿದೆ. ಸದಾ ಒತ್ತಡ, ಆತಂಕ, ಕಳವಳ, ಪೈಪೋಟಿಗಳ ನಡುವೆ ನಗು ತನ್ನಿಂದ ತಾನೇ ದೂರ ಸರಿದು ಬಿಟ್ಟಿದೆ. ನಕ್ಕು ಮಾತನಾಡಿಸುವ ಸಂಪ್ರದಾಯ ದೂರವಾಗಿದ್ದು, ನಗು ಸಹ ವ್ಯವಹಾರಿಕ ಎಂಬಂತೆ ಭಾಸವಾಗ ತೊಡಗಿದೆ.

ನಗುವಿನಿಂದ ನಮಗಿರುವ ಉಪಯೋಗದ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿಲ್ಲ. ಹೀಗಾಗಿ ಅವರು ಒಂದಲ್ಲಾ ಒಂದು ರೀತಿಯಲ್ಲಿ ಸೋಲುತ್ತಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ತೊಡಗಿರುವವರಿಗೆ ‘ನಗುವೂ’ ಒಂದು ಬಂಡವಾಳವೇ.

ಉದಾಹರಣೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿದ್ದೀರಿ ಅಂದುಕೊಳ್ಳಿ. ನಿಮ್ಮಲ್ಲಿಗೆ ಬರುವ ಗ್ರಾಹಕರೊಂದಿಗೆ ನಗು ಮುಖದಿಂದ ವರ್ತಿಸದೇ ಹೋದರೆ ಗ್ರಾಹಕರು ಖಂಡಿತಾ ಮತ್ತೊಮ್ಮೆ ನಿಮ್ಮ ಬಳಿಗೆ ಬರಲಾರರು.

ನಗು ನಮ್ಮ ಆರೋಗ್ಯದಲ್ಲಿಯೂ ಸಾಕಷ್ಟು ಉಪಯೋಗಕ್ಕೆ ಕಾರಣವಾಗಿದೆ. ಶರೀರದಲ್ಲಿರುವ ಎಂಡಾರ್ಫಿನ್ಸ್ ಎಂಬ ರಾಸಾಯನಿಕ ಕಣಗಳು ನಗುವುದರಿಂದ ಅಧಿಕವಾಗಿ ಬಿಡುಗಡೆ ಹೊಂದುತ್ತದೆ. ಈ ರಾಸಾಯನಿಕ ಶರೀರದಲ್ಲಿರುವ ನೋವುಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಎಂಡಾರ್ಫಿನ್ಸ್ ರಾಸಾಯನಿಕಕ್ಕೆ ಮಾಂಸ ಖಂಡಗಳ, ಕೀಲು, ತಲೆ ನೋವನ್ನು ಕಡಿಮೆ ಮಾಡುವ ಶಕ್ತಿಯಿದೆ.

ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆಗೆ ಮಾರು ಹೋಗದೆ, ನಗುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇ ಆದರೆ ನಿದ್ದೆ ತನ್ನಿಂದ ತಾನಾಗಿಯೇ ಬರುತ್ತದೆ. ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಒತ್ತಡದಿಂದ ಬರುತ್ತವೆ. ನಗುವುದರಿಂದ ದೇಹದಲ್ಲಿನ ರಕ್ತನಾಳಗಳಲ್ಲಿ ರಕ್ತ ಸಂಚಾರ ಅಧಿಕವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಖಿನ್ನತೆ, ಒತ್ತಡ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತದೆಂದು ‘ಸೈಕೋನ್ಯೂರೋ ಇಮ್ಯೂನಾಲಜಿಸ್ಟ್’ಗಳ ಪರಿಶೋಧನೆಗಳಲ್ಲಿ ಬೆಳಕಿಗೆ ಬಂದಿದ್ದು, ನಗುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ನಮ್ಮ ಶರೀರದೊಳಗೆ ಪ್ರವೇಶಿಸಿ ರೋಗ ಹರಡುವ ಬ್ಯಾಕ್ಟಿರಿಯಾಗಳನ್ನು ಸಮರ್ಥವಾಗಿ ನಾಶಮಾಡುತ್ತದೆ.

ನಗು ನಮ್ಮ ಅಂತರ್ಗತ ಅವಯವಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸಿ ಸಾಮಥ್ರ್ಯ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಅಸ್ತಮಾ, ಬ್ರಾಂಕೈಟಿಸ್ ರೋಗಿಗಳಿಗೆ ಒಳ್ಳೆಯ ವ್ಯಾಯಾಮವಾಗಿದ್ದು, ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ನಗು ಹೆಚ್ಚಿಸುತ್ತದೆ. ಜ್ಞಾಪಕ ಶಕ್ತಿ ವೃದ್ದಿಸುವಲ್ಲಿಯೂ ಸಹಕಾರಿ. ನಗು ಮುಖಕ್ಕೊಂದು ವ್ಯಾಯಾಮವೂ ಹೌದು.

ಇವತ್ತಿನ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಬೆಂಬಿಡದೆ ಕಾಡುತ್ತಾ ಮನುಕುಲಕ್ಕೆ ವೈರಿಯಾಗಿ ಕಾಡುತ್ತಿದೆ ಹೀಗಿರುವಾಗ ನಕ್ಕು ನೋವನ್ನು ಮರೆಯೋಣ ಮತ್ತು ಅದನ್ನು ನಗುತ್ತಾ ಹೋಗಲಾಡಿಸಲು ಪಣ ತೊಡೋಣ