ಮಾನಸಿಕ ಆರೋಗ್ಯಕ್ಕೆ ಮನಶಾಂತಿ ಬೇಕು!

ಮಾನಸಿಕ ಆರೋಗ್ಯಕ್ಕೆ ಮನಶಾಂತಿ ಬೇಕು!

LK   ¦    Jul 04, 2018 12:08:46 PM (IST)
ಮಾನಸಿಕ ಆರೋಗ್ಯಕ್ಕೆ ಮನಶಾಂತಿ ಬೇಕು!

ನಾವು ಮಾತ್ರವಲ್ಲ ಇಡೀ ಜಗತ್ತು ಒಂದಲ್ಲ ಒಂದು ಕಾರಣಕ್ಕೆ ಶಾಂತಿಯನ್ನು ಕಳೆದುಕೊಂಡು ಪರಿತಪಿಸುತ್ತಿದೆ. ನಾವು ಕೂಡ ಕಾರಣವಲ್ಲದ ಕಾರಣಕ್ಕೆ ಮನಸ್ಸಿನ ಶಾಂತಿಯನ್ನು ಕೆಡಿಸಿಕೊಂಡು ಮಾನಸಿಕ ರೋಗಿಗಳಂತೆ ನರಳುತ್ತಿದ್ದೇವೆ. ಮನಸ್ಸಿನಲ್ಲಿ ಏನೂ ಇಲ್ಲದ ಶಾಂತಿಯುತ ಬದುಕು ಕೂಡ ಅಸಾಧ್ಯವೇ. ಅದು ಸಾಧ್ಯವಾಗಬೇಕಾದರೆ ನಮ್ಮಿಂದ ಮಾತ್ರ ಸಾಧ್ಯ. ನಾವು ನಮ್ಮ ಮನಸ್ಸನ್ನು ಶಾಂತಿಯಿಂದ ಇರಲು ಬಿಡುತ್ತಿಲ್ಲ. ಏನಾದರೊಂದು ವಿಚಾರಗಳನ್ನು ಮೈಮೇಲೆ ಎಳೆದುಕೊಂಡು ಅಶಾಂತಿಯ ಬದುಕನ್ನು ಸಾಗಿಸುತ್ತಿದ್ದೇವೆ.

ಒಬ್ಬ ಮನುಷ್ಯನಿಗೆ ಎಲ್ಲ ರೀತಿಯ ಸಿರಿ ಸಂಪತ್ತು ಇದ್ದರೂ ಆತನಿಗೆ ಶಾಂತಿ ಇಲ್ಲದೆ ಹೋದರೆ ಅದು ಖಂಡಿತಾ ಬದುಕಾಗಲು ಸಾಧ್ಯವಿಲ್ಲ. ನಾವೆಲ್ಲರೂ ಶಾಂತಿ ಬೇಕೆಂದು ಹೇಳುತ್ತಲೇ ಇರುತ್ತೇವೆ. ಹಾಗೆ ಹೇಳುತ್ತಲೇ ಕೆಲವೊಮ್ಮೆ ಶಾಂತಿಯನ್ನು ಕಳೆದುಕೊಳ್ಳುತ್ತಲೇ ಇರುತ್ತೇವೆ.

ನಿಜ ಹೇಳಬೇಕೆಂದರೆ ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ, ಮನೆಯಲ್ಲೆ ಶಾಂತಿಯಿಲ್ಲದೆ ಅಶಾಂತಿ ತುಂಬಿಕೊಂಡು ಬದುಕುತ್ತಿರುತ್ತೇವೆ. ಬಹಳಷ್ಟು ಜನ ಅಯ್ಯೋ ಮನಸ್ಸಿಗೆ ಶಾಂತಿಯೇ ಇಲ್ಲ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಇಷ್ಟಕ್ಕೂ ಶಾಂತಿ ಎಲ್ಲಿರುತ್ತದೆ. ಅದು ಬೇರೆಯವರಿಂದ ಎರವಲು ಪಡೆಯುವಂತಹದ್ದಾ? ಎಂಬಿತ್ಯಾದಿ ಪ್ರಶ್ನೆಗಳು ಕೂಡ ನಮ್ಮನ್ನು ಕೆಲವೊಮ್ಮೆ ಕಾಡುತ್ತಲೇ ಇರುತ್ತದೆ. ಬಹಳಷ್ಟು ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಯಾಗಿ ಅಶಾಂತಿ ಉಂಟಾದಾಗ ಧಾರ್ಮಿಕ ಸ್ಥಳಗಳಿಗೆ ಅಥವಾ ದೂರದ ಊರುಗಳಿಗೆ ಭೇಟಿ ನೀಡಿ ಬರುವುದನ್ನು ರೂಢಿಸಿಕೊಂಡಿರುತ್ತಾರೆ. ಇದೊಂದು ರೀತಿಯಲ್ಲಿ ಒಳ್ಳೆಯ ಅಭ್ಯಾಸವಾದರೂ ಎಲ್ಲರಿಗೂ ಹೀಗೆ ಮಾಡಲು ಸಾಧ್ಯವಿಲ್ಲ.

ಸಂಸಾರದಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ ಹೀಗೆ ಒಂದಲ್ಲ ಒಂದು ಸ್ಥಳದಲ್ಲಿ, ಒಂದಲ್ಲೊಂದು ಕಾರಣಕ್ಕೆ ಗೊಂದಲ, ತಳಮಳ. ರಗಳೆಗಳು ನಮ್ಮ ಮನಸ್ಸನ್ನು ಕೆಡಿಸಿ ಶಾಂತಿಯನ್ನು ದೂರತಳ್ಳಿ ಅಶಾಂತಿಯನ್ನು ಸೃಷ್ಟಿಸಿ ಬಿಡಬಹುದು. ಈ ಸಂದರ್ಭ ತಾಳ್ಮೆಗೆಡದೆ ಶಾಂತಿಯನ್ನು ನಮ್ಮಲ್ಲಿ ಪ್ರತಿಷ್ಠಾಪಿಸುವ ಕೆಲಸವಾಗಬೇಕು. ಇದು ಬೇರೆ ಯಾರಿಂದಲೋ ಸಾಧ್ಯವಿಲ್ಲ ನಮ್ಮಿಂದಲೇ ಸಾಧ್ಯವಾಗಬೇಕು.

ಇದಕ್ಕೊಂದು ದೃಷ್ಟಾಂತ ಕಥೆಯನ್ನು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ. ಅಜ್ಜಿಯೊಬ್ಬಳು ಮನೆ ಮುಂದಿನ ಅಂಗಳದಲ್ಲಿ ಏನನ್ನೋ ಹುಡುಕುತ್ತಿದ್ದಳು. ಅಲ್ಲಿಗೆ ಬಂದ ಸಾಧುವೊಬ್ಬರು ಅಜ್ಜಿಯನ್ನು ಕುರಿತು ಏನು ಹುಡುಕುತ್ತಿದ್ದೀಯಾ ಎಂದು ಕೇಳಿದರು. ಅದಕ್ಕೆ ಅಜ್ಜಿ ಸೂಜಿಯನ್ನು ಹುಡುಕುತ್ತಿದ್ದೇನೆ ಎಂದಳು. ಸಾಧು ಮತ್ತೆ ಕೇಳಿದರು ಇಲ್ಲೇ ಸೂಜಿಯನ್ನು ಕಳೆದುಕೊಂಡಿದ್ದಾ? ಅದಕ್ಕೆ ಅಜ್ಜಿ ಇಲ್ಲ ಮನೆ ಒಳಗೆ ಬಿದ್ದು ಹೋಯಿತು ಎಂದಳು. ಆಗ ಸಾಧು ನಗುತ್ತಾ ಬಿದ್ದಲ್ಲೇ ಹುಡುಕುವುದು ಬಿಟ್ಟು ಇಲ್ಲೇಕೆ ಹುಡುಕುತ್ತಿದ್ದೀಯಾ ಎಂದು ಅಜ್ಜಿಯನ್ನು ಪ್ರಶ್ನಿಸಿದರು. ಅದಕ್ಕೆ ಅಜ್ಜಿ ಅಲ್ಲಿ ಕತ್ತಲೆಯಿದೆ. ಅದಕ್ಕೆ ಬೆಳಕಿನಲ್ಲಿ ಹುಡುಕುತ್ತೇನೆ ಎಂದಳು. ಅಜ್ಜಿ ಮಾತನ್ನು ಕೇಳಿದ ಸಾಧು ನಗುತ್ತಾ ಅಯ್ಯೋ ಅಜ್ಜಿ ಅಲ್ಲಿ ಕತ್ತಲೆ ಇರಬಹುದು. ಆದರೆ ಸೂಜಿ ಬಿದ್ದಿರುವುದು ಅಲ್ಲಿಯೇ ಹಾಗಾಗಿ ಅಲ್ಲೇ ಹುಡಕುಬೇಕು. ಸೂಜಿಯ ಸುತ್ತ ಆವರಿಸಿರುವ ಕತ್ತಲೆ ಅದನ್ನು ಕಾಣದಂತೆ ಮಾಡಿದೆ. ಈಗ ನೋಡು ಎನ್ನುತ್ತಾ ತಮ್ಮ ಬಳಿಯಿದ್ದ ಬೆಂಕಿಪೊಟ್ಟಣದಿಂದ ಕಡ್ಡಿಯನ್ನು ತೆಗೆದು ಗೀರಿ ಬೆಂಕಿಯನ್ನು ಹೊತ್ತಿಸಿದರು. ಆ ಬೆಳಕಿನಲ್ಲಿ ಸೂಜಿ ಕಂಡಿತು.

ನಾವು ಕೂಡ ಅಷ್ಟೆ ನಮ್ಮಲ್ಲೇ ಇರುವ ಶಾಂತಿಯನ್ನು ಕಳೆದುಕೊಂಡು ಮತ್ತೆಲ್ಲೋ ಶಾಂತಿಯಿರಬಹುದೆಂದು ಹುಡುಕುತ್ತಿರುತ್ತೇವೆ. ಮೊದಲಿಗೆ ಯಾವುದು ಶಾಂತಿಯನ್ನು ಕೆಡಿಸುತ್ತದೆಯೋ ಅದರಿಂದ ದೂರವಿರುವುದನ್ನು ಕಲಿತರೆ ಶಾಂತಿ ತನ್ನಿಂದ ತಾನೆ ನೆಲೆಯೂರುತ್ತದೆ. ಮನಸ್ಸಿನಲ್ಲಿ ಶಾಂತಿ ನೆಲೆಯೂರಿದರೆ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಮೊದಲಿಗೆ ಮಾನಸಿಕ ಆರೋಗ್ಯವನ್ನು ನಾವು ಗಟ್ಟಿ ಮಾಡಿಕೊಂಡರೆ ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯವಿದೆ. ಆದ್ದರಿಂದ ನಾವು ಮೊದಲಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವುದು ಬಹಳ ಮುಖ್ಯವಾಗಿದೆ.