ಮಾನಸಿಕ-ದೈಹಿಕ ತಲೆನೋವಿಗೆ ಪರಿಹಾರವೇನು?

ಮಾನಸಿಕ-ದೈಹಿಕ ತಲೆನೋವಿಗೆ ಪರಿಹಾರವೇನು?

LK   ¦    Jul 13, 2020 03:46:17 PM (IST)
ಮಾನಸಿಕ-ದೈಹಿಕ ತಲೆನೋವಿಗೆ ಪರಿಹಾರವೇನು?

ಇವತ್ತಿನ ಪರಿಸ್ಥಿತಿಯಲ್ಲಿ ನಾವು ಯಾರು ಕೂಡ ಒತ್ತಡದಿಂದ ಮುಕ್ತವಾಗಿಲ್ಲ. ಏನಾದರೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡು ಸದಾ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಇನ್ನೊಂದೆಡೆ ಪೈಪೋಟಿಯ ಜೀವನವೂ ನಮ್ಮನ್ನು ಸುಖವಾಗಿಟ್ಟಿಲ್ಲ. ಒಟ್ಟಾರೆ ಒತ್ತಡದಿಂದಲೇ ಕಾಲ ಕಳೆಯುತ್ತಿರುವುದರಿಂದ ಮಾನಸಿಕ ಮತ್ತು ದೈಹಿಕ ತಲೆನೋವು ನಮ್ಮೆಲ್ಲರನ್ನು ಕಾಡುತ್ತಲೇ ಇದೆ.

ತಲೆನೋವು ಎಂದಾಕ್ಷಣ ನಮ್ಮೆಲ್ಲರನ್ನು ಬಾಧಿಸುವ ತಲೆನೋವೇ ಆಗಿರಬೇಕೆಂದಿಲ್ಲ. ದೈಹಿಕವಾಗಿ ಕಾಣಿಸಿಕೊಳ್ಳುವ ತಲೆನೋವಿಗೆ ಯಾವುದಾದರೂ ನೋವು ನಿವಾರಕ ಮಾತ್ರೆ ತೆಗೆದುಕೊಂಡರೆ ವಾಸಿಯಾಗಿಬಿಡಬಹುದು. ಆದರೆ ಸಮಸ್ಯೆಗಳಿಂದ ಉಂಟಾಗುವ ತಲೆನೋವಿಗೆ ಮದ್ದೇ ಇಲ್ಲದಾಗಿದೆ. ಇದೊಂದು ರೀತಿಯ ಮಾನಸಿಕ ತಲೆನೋವಾಗಿದ್ದು, ಅದಕ್ಕೆ ಪರಿಹಾರ ಸಿಗಬೇಕಾದರೆ ನಮ್ಮ ಲೈಫ್ ಸ್ಟೈಲ್‍ನಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ನೋಡಿದ್ದೆಲ್ಲ ಬೇಕೆನ್ನುವ ಮನೋಭಾವ, ಹಣ, ಆಸ್ತಿ, ಕಾರು, ಬಂಗಲೆ ಕಡಿಮೆ ಅವಧಿಯಲ್ಲಿ ಮಾಡಬೇಕೆನ್ನುವ ಬಯಕೆ ಮತ್ತು ಅದಕ್ಕಾಗಿ ಅಡ್ಡಮಾರ್ಗ ಹಿಡಿಯುವುದು, ತಮಗೆ ಗೊತ್ತೇ ಇಲ್ಲದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೇನೆ ಎಂದು ಹೊರಡುವುದು, ಸದಾ ಕನಸಿನ ಗೋಪುರ ಕಟ್ಟಿಕೊಂಡು ತಿರುಗಾಡುವುದು, ತಮ್ಮ ಬಗ್ಗೆಯೇ ಕೀಳರಿಮೆ ಮಾಡಿಕೊಳ್ಳುವುದು ಕೂಡ ಮಾನಸಿಕ ತಲೆ ನೋವಿಗೆ ಕಾರಣವಾಗಿ ಬಿಡುತ್ತದೆ.

ಇವತ್ತು ನಮ್ಮನ್ನು ಒಂದಲ್ಲ ಒಂದು ರೀತಿಯ ಕಾಯಿಲೆಗಳು ಕಾಡಲು ಜೀವನಶೈಲಿಯಲ್ಲಿನ ಬದಲಾವಣೆಗಳೇ ಕಾರಣವಾಗಿವೆ. ಇರುವುದರಲ್ಲಿ ತೃಪ್ತಿಯಾಗಿ ಜೀವನ ಸಾಗಿಸಲು ನಾವುಗಳು ತಯಾರಿಲ್ಲ. ನಮಗೆಲ್ಲರಿಗೂ ಹಣವೇ ಮುಖ್ಯವಾಗಿದ್ದು ಅದರ ಹಿಂದೆ ಬಿದ್ದು ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಜತೆಗೆ ಒತ್ತಡದ ನಡುವೆ ಬದುಕುತ್ತಿದ್ದೇವೆ.

ಹೀಗಿರುವಾಗ ಜೀವನಶೈಲಿ ಬದಲಾಗದ ಹೊರತು ಕೆಲವು ಕಾಯಿಲೆಗಳನ್ನು ನಿಯಂತ್ರಿಸಲು ನಾವು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.  ಅದರಲ್ಲಿಯೂ ಮಾನಸಿಕ ತಲೆನೋವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಎಲ್ಲ ಒತ್ತಡವನ್ನು ಬದಿಗೆ ಸರಿಸಿ ಸರಳ ಜೀವನ ಸಾಗಿಸುವತ್ತ ಮನಸ್ಸು ಮಾಡಬೇಕು. ಅದು ಕಷ್ಟವಾಗಬಹುದು ಆದರೆ ಚಿಂತೆಯಿಲ್ಲದ ಬದುಕು ಸಾಧ್ಯವಾಗುತ್ತದೆ. ಮನಸ್ಸಿಗೆ ಚಿಂತೆ, ಒತ್ತಡ ಇಲ್ಲವಾದರೆ ಅದಕ್ಕಿಂತ ಸುಖ ಮತ್ತೊಂದಿಲ್ಲ. ಆರೋಗ್ಯದ ದೃಷ್ಠಿಯಿಂದ ಇಂತಹ ಬದಲಾವಣೆಗೆ ನಾವು ಒಳಪಡಿಸುವುದು ಅಗತ್ಯವೂ ಹೌದು.

ಕೆಲವೊಮ್ಮೆ ನಮ್ಮ ಜೀವನ ಶೈಲಿ, ನಾವು ಮಾಡುತ್ತಿರುವ ಕೆಲಸಗಳು, ಸುತ್ತಲಿನ ವಾತಾವರಣ ಎಲ್ಲದರಿಂದ ನಿಜವಾದ ತಲೆ ನೋವು ಬಂದರೂ ಅಚ್ಚರಿಪಡಬೇಕಾಗಿಲ್ಲ.

ಆದ್ದರಿಂದ ನಿಯಮಿತ ವ್ಯಾಯಾಮ, ಆಹಾರ ಸೇವನೆ, ಸಾಕಷ್ಟು ನಿದ್ದೆಮಾಡುವುದು, ಪ್ರಕಾಶಮಾನ ಬೆಳಕು ಹಾಗೂ ದಟ್ಟವಾದ ಸುವಾಸನೆಯಿಂದ ದೂರವಿರುವುದು, ಧೂಮಪಾನ ತ್ಯಜಿಸುವುದು, ಆದಷ್ಟು ಮಾನಸಿಕ ಒತ್ತಡವಾಗದಂತೆ ಎಚ್ಚರವಹಿಸುವುದು. ಒಂದು ವೇಳೆ ತಲೆನೋವೆಂದು ವೈದ್ಯರ ಬಳಿ ತೆರಳಿದ್ದರೆ ಅವರು ಹೇಳಿದ ಕ್ರಮವನ್ನು ಅನುಸರಿಸುವುದು ಕೂಡ ಅಗತ್ಯವೇ.. ತೀವ್ರ ತಲೆನೋವು ಕಾಣಿಸಿಕೊಂಡಾಗ ಕೋಲ್ಡ್ ಪ್ಯಾಕ್ ಅಥವಾ ಐಸ್ ಚೀಲವನ್ನು ಸುತ್ತಿ  ಅದನ್ನು ಹತ್ತು ನಿಮಿಷಗಳ ಕಾಲ ನೋವು ಇರುವ ಜಾಗದ ಮೇಲೆ ಅಥವಾ ಕತ್ತಿನ ಹಿಂಭಾಗ ಇರಿಸುವುದರಿಂದ, ಕಣ್ಣನ್ನು ನೇರ ಬೆಳಕಿಗೆ ಒಡ್ಡದೆ, ಕತ್ತಲೆ ಕೋಣೆ, ಶಾಂತವಾದ ಸ್ಥಳದಲ್ಲಿ ಮಲಗಬೇಕು. ದ್ರವ ಪದಾರ್ಥವನ್ನು ಹೆಚ್ಚು ಸೇವಿಸಬೇಕು.

ಒಟ್ಟಾರೆ ಹೇಳಬೇಕೆಂದರೆ ಅನಗತ್ಯ ಒತ್ತಡಗಳನ್ನು ನಾವೇ ಕಡಿಮೆ ಮಾಡಿಕೊಳ್ಳುವುದು ಜಾಣತನ. ಬೇರೆಯವರ ನಡುವೆ ನಾನು ಚೆನ್ನಾಗಿ ಬದುಕಬೇಕು, ಅವನಿಗಿಂತ ಜಾಸ್ತಿ ಆಸ್ತಿಗಳಿಸಬೇಕು, ಇನ್ನೇನೆನೋ ಮಾಡಬೇಕೆಂಬ ಭ್ರಮೆಯಿಂದ ಹೊರಬಂದು ಆರೋಗ್ಯಯುತ ಜೀವನ ನಡೆಸುವುದಕ್ಕೆ ಒತ್ತುಕೊಟ್ಟರೆ ಒಂದೊಳ್ಳೆಯ ಜೀವನ ನಮ್ಮದಾಗುತ್ತದೆ. ಆಗ ನಮ್ಮನ್ನು ಬಾಧಿಸುವ ದೈಹಿಕ ಮತ್ತು ಮಾನಸಿಕ ತಲೆನೋವು ಕೂಡ ಕಡಿಮೆಯಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.