ಕಣ್ಣಿನ ಆರೋಗ್ಯಕ್ಕೆ ಕಣ್ತುಂಬ ನಿದ್ದೆ ಅವಶ್ಯಕ..!

ಕಣ್ಣಿನ ಆರೋಗ್ಯಕ್ಕೆ ಕಣ್ತುಂಬ ನಿದ್ದೆ ಅವಶ್ಯಕ..!

LK   ¦    Sep 26, 2019 01:05:54 PM (IST)
ಕಣ್ಣಿನ ಆರೋಗ್ಯಕ್ಕೆ ಕಣ್ತುಂಬ ನಿದ್ದೆ ಅವಶ್ಯಕ..!

ಇದೇನಪ್ಪಾ ನಿದ್ದೆಗೂ ಕಣ್ಣಿನ ಆರೋಗ್ಯಕ್ಕೂ ಏನು ಸಂಬಂಧ? ಅಂಥದೊಂದು ಪ್ರಶ್ನೆ ಹುಟ್ಟಿಕೊಳ್ಳಬಹುದು. ಇದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ನಿದ್ದೆ ಮಾಡದವರನ್ನು ಅವರ ಕಣ್ಣೇ ಹೇಳಿ ಬಿಡುತ್ತದೆ. ಜತೆಗೆ ನಿದ್ದೆ ಮಾಡಬೇಕೆಂದರೆ ಕಣ್ಣು ಮುಚ್ಚಲೇ ಬೇಕು. ಕಣ್ಣು ಮುಚ್ಚಿದ್ದಾರೆ ಎಂದರೆ ಅವರು ನಿದ್ದೆ ಮಾಡುತ್ತಿದ್ದಾರೆ ಎಂದರ್ಥ. ಹೀಗಿರುವಾಗ ಪ್ರತಿಯೊಬ್ಬರು ಅಗತ್ಯ ನಿದ್ದೆಯನ್ನು ಮಾಡಲೇ ಬೇಕಾಗುತ್ತದೆ. ಅಗತ್ಯ ನಿದ್ದೆ ಮಾಡದೆ ಹೋದರೆ ಮಾರನೆಯ ದಿನ ಹೆಚ್ಚಿನ ಬಳಲಿಕೆ ಕಾಣಿಸುವುದೇ ಕಣ್ಣಿನಲ್ಲಿ ಎಂದರೆ ತಪ್ಪಾಗಲಾರದು.

ಹಾಗೆ ನೋಡಿದರೆ ಮನುಷ್ಯನ ಅಂಗಗಳಲ್ಲಿ ಕಣ್ಣು ಬಹುಮುಖ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಏಕೆಂದರೆ ಇದೊಂದು ಸೂಕ್ಷ್ಮ ಮತ್ತು ದೇಹದ ಅವಿಭಾಜ್ಯ ಅಂಗ. ಇದನ್ನು ಕಳೆದು ಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆಯೇ. ಆದ್ದರಿಂದ ದೇವರು ಕೊಟ್ಟ ಈ ಕಣ್ಣನ್ನು ರಕ್ಷಣೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ದಿನ ನಿತ್ಯದ ನಮ್ಮ ಕಾರ್ಯ ಚಟುವಟಿಕೆಯ ನಡುವೆಯೂ ಒಂದಷ್ಟು ಜಾಗ್ರತೆ ಹಾಗೂ ಮತ್ತೊಂದಷ್ಟು ಕ್ರಮಗಳನ್ನು ಅನುಸರಿಸಿದರೆ ಕಣ್ಣನ್ನು ನಾವು ಯಾವುದೇ ತೊಂದರೆಯಾಗದಂತೆ ರಕ್ಷಿಸಿಕೊಳ್ಳಬಹುದಲ್ಲದೆ, ಕಣ್ಣನ್ನು ಬಾಧಿಸುವ ಕೆಲವು ತೊಂದರೆಗಳಿಂದಲೂ ಮುಕ್ತರಾಗಬಹುದಾಗಿದೆ.

ಇಷ್ಟಕ್ಕೂ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಏನು ಮಾಡಬಹುದು ಎಂದರೆ ಮೊದಲಿಗೆ ಕಣ್ತುಂಬ ನಿದ್ದೆ ಮಾಡಬೇಕು. ಏಕೆಂದರೆ ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಮಾಡುವುದರಿಂದ ಕಣ್ಣಿನ ಕೆಳಗೆ ಚರ್ಮದಲ್ಲಿನ ಕಣಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಅದು ಬಿಟ್ಟು ಅನಾವಶ್ಯಕವಾಗಿ ತಡ ರಾತ್ರಿವರೆಗೂ ಮೊಬೈಲ್, ಟಿವಿ ನೋಡಿ ಕಣ್ಣಿಗೆ ಒತ್ತಡ ನೀಡಬಾರದು.

ಇನ್ನು ಕಣ್ಣಿನ ಆರೋಗ್ಯ ನೀಡುವ ತರಕಾರಿ ಕ್ಯಾರೆಟ್ ಹೆಚ್ಚು ತಿನ್ನುವುದರಿಂದ ಕಣ್ಣಿನ ನೋಟ ಚುರುಕುಗೊಳ್ಳುತ್ತದೆ. ಕ್ಯಾರೆಟ್‍ನಲ್ಲಿ ಕಣ್ಣಿಗೆ ಅಗತ್ಯವಾದ ವಿಟಮಿನ್ ‘ಎ’ ಇರುತ್ತದೆ. ವಿಟಮಿನ್ ‘ಬಿ’ ಇರುವ ಸೊಪ್ಪು ತರಕಾರಿಗಳು, ಮಾವಿನಕಾಯಿ, ಕೋಳಿಮೊಟ್ಟೆ ಸಹ ಒಳ್ಳೆಯದು. ಕಣ್ಣಿನ ಸುತ್ತ ಇರುವ ಅತಿ ಸೂಕ್ಷ್ಮವಾದ ಚರ್ಮ ಒತ್ತಡಕ್ಕೆ ವಾತಾವರಣದಲ್ಲಿನ ಮಾಲಿನ್ಯದ ಪ್ರಭಾವ ಕಣ್ಣಿನ ಮೇಲುಂಟಾಗಿ ತೊಂದರೆಗಳಾಗುತ್ತವೆ ಯಾದರೂ ವ್ಯಾಯಾಮ, ಒಳ್ಳೆಯ ಆಹಾರವನ್ನು ಸೇವಿಸುವುದು ಅಷ್ಟೇ ಮುಖ್ಯ.

ಸಾಮಾನ್ಯವಾಗಿ ಕಣ್ಣಿನ ಸುತ್ತಲಿನ ಪ್ರದೇಶ ಸ್ವಲ್ಪ ಲಿಂಫಾಟಿಕ್ ದ್ರವದಿಂದ ಉಬ್ಬುತ್ತದೆ. ಇದಕ್ಕೆ ತಲೆಯ ಕೆಳಗೆ ಸರಿಯಾಗಿ ದಿಂಬುಗಳನ್ನಿಟ್ಟುಕೊಂಡು ಮಲಗುವುದು ಒಳ್ಳೆಯದು. ವಯಸ್ಸಾದಂತೆ ಕಣ್ಣಿನ ಕೆಳಗೆ ಮೂಡುವ ಕೊಬ್ಬಿನಿಂದಾಗಿ ಈ ಚೀಲಗಳು ಬೆಳೆಯುತ್ತವೆ. ಇದನ್ನು ಮೇಕಪ್‍ನಿಂದ ಕನ್‍ಸೀಲರ್ ಬಳಸಿ ಮುಚ್ಚಿ ಹಾಕಬಹುದಾಗಿದೆ.

ಬಹಳಷ್ಟು ಮಂದಿಗೆ ಪಿಗ್ಮೆಂಟ್ಸ್‍ನಿಂದಾಗಿ ಸಹ ಕಣ್ಣಿನ ಕೆಳಗೆ ವಲಯಗಳೇರ್ಪಡುತ್ತವೆ. ಮೆಲಾನಿನ್ ಪಿಗ್ಮೆಂಟ್ಸ್ ಈ ಪ್ರದೇಶದಲ್ಲಿ ಸೇರಿಕೊಳ್ಳುವುದರಿಂದಲೇ ಹೀಗಾಗುತ್ತದೆ. ಕಣ್ಣಿನ ಕೆಳಗೆ ಸೌತೆಕಾಯಿ ಬಳಸುವುದರಿಂದಲೂ ಒಳ್ಳೆಯದಾಗುತ್ತದೆ.

ಕೆಲವರ ಕಣ್ಣುಗಳಲ್ಲಿ ಕೆಂಪು ಗೆರೆಗಳು ಇರುತ್ತವೆ. ಇದಕ್ಕೂ ಸಹ ಸೌತೆಕಾಯಿಯೇ ದಿವ್ಯ ಔಷಧಿ. ಸೌತೆಕಾಯಿ ರಕ್ತನಾಳಗಳನ್ನು ತಂಪಾಗಿಡುತ್ತದೆ. ಜತೆಗೆ ಹೆಚ್ಚು ಉಪ್ಪು ಇರುವ ಆಹಾರ ಸೇವಿಸಬೇಕು. ಆಲ್ಕೋ ಹಾಲ್ ಸೇವನೆ ಕಡಿಮೆ ಮಾಡಬೇಕು. ಇದರಿಂದ ಕಣ್ಣಿನ ಕೆಳಗೆ ದ್ರವಗಳು ಸಂಗ್ರಹವಾಗುವುದಿಲ್ಲ.

ಕಣ್ಣಿನ ರಕ್ಷಣೆಗೆ ಕೆಲವು ಜಾಗ್ರತೆಗಳನ್ನು ನಾವು ವಹಿಸಿಕೊಳ್ಳವುದು ಒಳ್ಳೆಯದು. ಓದುವಾಗ ಅಗತ್ಯ ಬೆಳಕಿರುವಂತೆ ನೋಡಿಕೊಳ್ಳಬೇಕು. ಮಂದ ಬೆಳಕಿನಲ್ಲಿ ಓದುವ ಸಾಹಸ ಮಾಡಬಾರದು. ಅಗತ್ಯ ಬಿದ್ದಾಗಲೆಲ್ಲಾ ಕನ್ನಡಕ ಬಳಸುವುದು ಒಳ್ಳೆಯದು. ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವದರಿಂದ ಕಣ್ಣಿಗೆ ಹಾನಿಯಾಗುವುದಿಲ್ಲ ಆದರೆ ಹೆಚ್ಚು ಹೊತ್ತು ಬೆಳಕು ಬೀರುವ ಸ್ಕ್ರೀನ್ ಕಡೆ ನೋಡುವುದರಿಂದ ಕಣ್ಣುಗಳು ಬೇಗ ಆಯಾಸಗೊಳ್ಳುತ್ತವೆ. ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕೆಲಸಮಾಡುವಾಗ ಮಧ್ಯೆ ಮಧ್ಯೆ ಕಣ್ಣಿಗೆ ವಿಶ್ರಾಂತಿ ನೀಡುವುದು, ಆಗಾಗ ಅತ್ತ ಇತ್ತ ನೋಡುವುದು ಒಳ್ಳೆಯದು. ಕಣ್ಣಿನ ಸಮಸ್ಯೆ ಉಂಟಾದಾಗ ಉದಾಸೀನ ತೋರದೆ, ಸ್ವಯಂ ಔಷಧಿ ಮಾಡಿಕೊಳ್ಳದೆ ಕೂಡಲೇ ಕಣ್ಣಿನ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ಕಣ್ಣಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬಹು ಮುಖ್ಯವಾದ ಸಲಹೆ ಎಂದರೆ ಕಣ್ಣಿನತ್ತ ನಿಗಾವಹಿಸಿ ಕಾಪಾಡುವುದಾಗಿದೆ.