ಮುಂಜಾನೆಯ ವಾಕಿಂಗ್ ಆರೋಗ್ಯಕ್ಕೆ ಹಿತಕರ!

ಮುಂಜಾನೆಯ ವಾಕಿಂಗ್ ಆರೋಗ್ಯಕ್ಕೆ ಹಿತಕರ!

LK   ¦    Jul 22, 2018 05:44:24 PM (IST)
ಮುಂಜಾನೆಯ ವಾಕಿಂಗ್ ಆರೋಗ್ಯಕ್ಕೆ ಹಿತಕರ!

ಇವತ್ತಿನ ದಿನಗಳಲ್ಲಿ ಹೆಚ್ಚಿನವರು ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರ್ಥಿಕವಾಗಿ ಎಲ್ಲವೂ ಇದ್ದರೂ ಆರೋಗ್ಯವೇ ಸರಿಯಿಲ್ಲದೆ ಪರದಾಡುವ ಸ್ಥಿತಿ ಹೆಚ್ಚಿನವರದ್ದಾಗಿದೆ.

ಇದಕ್ಕೆ ಕಾರಣವೇನು ಎಂಬುದನ್ನು ನೋಡಿದರೆ ಮೊದಲಿಗೆ ರಾಸಾಯನಿಕಯುಕ್ತ ಆಹಾರ ಪದಾರ್ಥಗಳು ಮತ್ತು ಆಹಾರ ಸೇವನೆಯಲ್ಲಿನ ಅಶಿಸ್ತು, ದೈಹಿಕ ಶ್ರಮವಿಲ್ಲದ ಕೆಲಸಗಳು, ಮಾನಸಿಕ ಒತ್ತಡ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಾ ಹೋಗುತ್ತದೆ.

ನಮಗೆ ಹಣವನ್ನು ಸಂಪಾದಿಸಿಕೊಳ್ಳಲು ಬೇಕಾದಷ್ಟು ದಾರಿಗಳು ಕಂಡು ಬರುತ್ತಿವೆಯಾದರೂ ಅದರ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವ ದಾರಿಗಳು ಒಂದೊಂದಾಗಿ ಮುಚ್ಚುತ್ತಿವೆ. ಇದರಿಂದ ನಮಗರಿವಿಲ್ಲದೆ ನಮ್ಮ ಆರೋಗ್ಯ ಹದಗೆಡುತ್ತಿದೆ. ಪರಿಣಾಮ ನಾವು ಮಾಡಿದ ಸಂಪಾದನೆ ಚಿಕಿತ್ಸೆಗೆ ಸರಿಯಾಗುತ್ತಿದೆ. ಜತೆಗೆ ಕಷ್ಟಪಟ್ಟರೂ ನಾವು ಇಷ್ಟಪಟ್ಟಿದನ್ನು ತಿನ್ನಲಾಗದ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಇದಕ್ಕೆಲ್ಲ ಕಾರಣ ನಮ್ಮಲ್ಲಿ ಬದಲಾದ ಜೀವನ ಶೈಲಿ ಎಂದರೆ ತಪ್ಪಾಗಲಾರದು. ಮುಂಜಾನೆ ಇಷ್ಟೇ ಸಮಯಕ್ಕೆ ಏಳಬೇಕು.. ಹೀಗೆಯೇ ಕೆಲಸ ಆರಂಭಿಸಬೇಕೆನ್ನುವ ಹಿಂದಿನ ಸಂಪ್ರದಾಯದಂತೆ ನಾವ್ಯಾರು ಬದುಕುತ್ತಿಲ್ಲ.

ಮೊದಲು ಪ್ರತಿಯೊಬ್ಬರೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕಾರ್ಯ ಪ್ರಾರಂಭಿಸಿದರೆ ಶುಭದಾಯಕವಾಗಿರುತ್ತದೆ ಎಂಬ ಮಾತಿತ್ತು. ಬ್ರಾಹ್ಮಿ ಕಾಲದಲ್ಲೆದ್ದು ಒಂದಷ್ಟು ಹೊತ್ತು ನಡೆದಾಡಿ ಬಂದರೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ಏಕೆಂದರೆ, ಇವತ್ತಿನ ದಿನಗಳಲ್ಲಿ ಜನಜಂಗುಳಿ, ವಾಹನ ಸಂಚಾರವಿಲ್ಲದೆ ನೀರವ ವಾತಾವರಣ ಬ್ರಾಹ್ಮಿಮುಹೂರ್ತದಲ್ಲಿ ಮಾತ್ರ ಸಾಧ್ಯವಾಗಿದ್ದು ಅದರಲ್ಲೂ ಅರಳಿ, ಅತ್ತಿ ಮರದ ಬಳಿ ಒಂದಷ್ಟು ಸಮಯ ಕಳೆಯುವುದು ಇನ್ನು ಒಳ್ಳೆಯದು.

ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡಿಯೋ ಅಥವಾ ಸಿನಿಮಾ, ಟಿವಿ ನೋಡಿಯೋ ಮಲಗಿದವರು ಬೆಳಿಗ್ಗೆ ಬೇಗ ಏಳ ಬೇಕೆಂದರೆ ಹೇಗೆ? ಹೀಗಾಗಿ ಸೂರ್ಯ ನೆತ್ತಿಗೆ ಬಂದರೂ ಕೆಲವರು ಹಾಸಿಗೆ ಬಿಟ್ಟು ಏಳುವುದೇ ಇಲ್ಲ.

ಆದರೆ ಪ್ರಾತಃಕಾಲದ ಒಂದಷ್ಟು ವಿಧಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ದೈಹಿಕವಾಗಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು ಎಂಬುದು ಆಧ್ಯಾತ್ಮಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಕೆಲವರು ಬೆಳಿಗ್ಗೆ ಎದ್ದಕೂಡಲೇ ಬೆಡ್ ಕಾಫಿ, ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಆರೋಗ್ಯಕರ ಅಭ್ಯಾಸವಲ್ಲ. ಬೆಳಿಗ್ಗೆ ಬೇಗನೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಉತ್ತಮ. ಇದರಿಂದ ಆಹಾರ ಜೀರ್ಣಗೊಂಡು ಅಳಿದುಳಿದ ತ್ಯಾಜ್ಯಗಳ ವಿಸರ್ಜನೆಗೆ ಅನುಕೂಲವಾಗುತ್ತದೆ. ಪ್ರಾತಃಕಾಲ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು, ಮಲ ಮೂತ್ರಾದಿಗಳನ್ನು ವಿಸರ್ಜಿಸಿ, ಹಲ್ಲುಜ್ಜಿ ಮುಖ ತೊಳೆದು ಮುಂದಿನ ಕೆಲಸಕ್ಕೆ ತೊಡಗಿಸಿಕೊಳ್ಳಬೇಕು. ಈ ರೀತಿಯ ಪದ್ಧತಿಯ ರೂಢಿಸಿಕೊಂಡರೆ ಜೀವನಕ್ಕೊಂದು ಶಿಸ್ತು ಪಡೆಯಲು ಸಾಧ್ಯವಾಗುತ್ತದೆ.

ಪ್ರಾತಃಕಾಲದ ವಾಯು ಸೇವನೆಯೂ ಆರೋಗ್ಯಕ್ಕೆ ಸಹಕಾರಿಯಾಗಿದೆ. ವಾಯು ಮಾಲಿನ್ಯದ ಸೋಂಕಿಲ್ಲದೆ ನಿರ್ಮಲ ವಾತಾವರಣವಿರುವ ಈ ವೇಳೆಯಲ್ಲಿ ನಡೆದಾಡುವುದು, ಓಡುವುದು, ವ್ಯಾಯಾಮ, ಯೋಗಾಸನ, ಪ್ರಾಣಾಯಾಮಗಳನ್ನು ಮಾಡುವುದು ಆರೋಗ್ಯ ವರ್ಧನೆಗೆ ಉತ್ತಮ ಹಾದಿಯಾಗಿದೆ. ಇನ್ನು ವಿದ್ಯಾರ್ಥಿಗಳು ಪ್ರಾತಃಕಾಲ ಕ್ರೀಡೆಗಳನ್ನು ಆಡುವುದು ಮತ್ತು ಓದುವುದನ್ನು ಮಾಡಿದರೆ ಒಳ್ಳೆಯದು.

ವಿದ್ಯಾರ್ಥಿಗಳು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಓದುವ ಪರಿಪಾಠ ಬೆಳೆಸಿಕೊಂಡರೆ ಉತ್ತಮ. ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಪ್ರಾತಃಕಾಲ ಬಹು ಮುಖ್ಯ ಪಾತ್ರ ವಹಿಸುವುದರಿಂದಲೇ ಪ್ರತಿಯೊಬ್ಬರೂ ಪ್ರಾತಃಕಾಲದ ಸದ್ಭಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ.

ನಮ್ಮ ದಿನ ನಿತ್ಯದ ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಆಶಿಸಿದ್ದರೆ ಮೊದಲಿಗೆ ಪ್ರಾತಃಕಾಲ(ಬ್ರಾಹ್ಮಿಮುಹೂರ್ತ)ದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಳಿಕ ಒಂದಷ್ಟು ಹೊತ್ತು ನಡೆದಾಡಿ ಬನ್ನಿ ಆಗ ಅದರ ಮಹತ್ವ ಅರಿವಾಗುತ್ತದೆ.

ನಮ್ಮ ಒತ್ತಡದ ಬದುಕಿನಲ್ಲಿಯೂ ಒಂದಷ್ಟು ರಿಲ್ಯಾಕ್ಸ್ ಬೇಕೆಂದರೆ ಅದು ಮುಂಜಾನೆ ಸಮಯದಲ್ಲಿ ಮಾತ್ರ ಎಂಬುದನ್ನು ಮರೆಯದಿರಿ.